ಮನೆ ಮಾಲೀಕನ ಮೇಲೆ ದುಷ್ಕರ್ಮಿಗಳಿಂದ ದಾಳಿ – ಸಾಕು ನಾಯಿಯಿಂದ ಉಳಿಯಿತು ಜೀವ!

ನಾಯಿ ನಿಯತ್ತಿನ ಪ್ರಾಣಿ. ಅಷ್ಟೇ ಅಲ್ಲ, ತನ್ನನ್ನು ಸಾಕಿದವರ ಜೀವ ಕೂಡಾ ಕಾಪಾಡುವ ಪ್ರಾಣಿ. ಸಾಕು ನಾಯಿ ಮನೆ ಮಾಲೀಕನ ಜೀವ ಕಾಪಾಡಿರುವ ಅದೆಷ್ಟೋ ಉದಾಹರಣೆಗಳು ಕಣ್ಣ ಮುಂದಿವೆ. ಇದೀಗ ಇಲ್ಲೊಂದು ನಾಯಿ ದುಷ್ಕರ್ಮಿಗಳಿಂದ ಮನೆ ಮಾಲೀಕನ ಜೀವ ಉಳಿಸಿದೆ.
ಇದನ್ನೂ ಓದಿ: CSKಗೆ ಬೇಬಿ ಎಬಿಡಿ ಎಂಟ್ರಿ – ಚೆನ್ನೈ ಲಕ್ ಬದಲಿಸ್ತಾರಾ ಡೆವಾಲ್ಡ್?
ಈ ಘಟನೆ ಗುಜರಾತ್‌ನ ಮೋರ್ಬಿ ಜಿಲ್ಲೆಯ ಟಂಕಾರ ತಹಸಿಲ್ ವ್ಯಾಪ್ತಿಯ ಮಿತಾನಾ ಗ್ರಾಮದಲ್ಲಿ ನಡೆದಿದೆ. ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕನನ್ನು ಮೂವರು ಹಲ್ಲೆಗಾರರ ದಾಳಿಯಿಂದ ಕಾಪಾಡಿದೆ. ಬೆಳಗಿನ ಜಾವ ನಡೆದ ಸಂಪೂರ್ಣ ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ದಾಳಿಕೋರರ ಮೇಲೆ ದಾಳಿ ಮಾಡಿ ಅವರು ಓಡಿಹೋಗುವಂತೆ ಮಾಡಿದೆ.
ಅಮಿತ್ ಥೀಬಾ ಎಂಬ ರೈತ ತಮ್ಮ ಮನೆಯಲ್ಲಿ ಸಾಕಿದ್ದ ನಾಯಿಯಿಂದಾಗಿ ಜೀವ ಉಳಿಸಿಕೊಂಡಿದ್ದಾರೆ. ಮೂವರು ಅಪರಿಚಿತ ದಾಳಿಕೋರರು ಅಮಿತ್ ಅವರ ತೋಟದ ಮನೆಗೆ ನುಗ್ಗಿ ಅವರನ್ನು ಸುತ್ತುವರೆದರು. ಅವರಲ್ಲಿ ಒಬ್ಬರು ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಉಳಿದವರು ಕಾವಲು ಕಾಯುತ್ತಿದ್ದರು. ಗದ್ದಲ ಕೇಳಿ ತನ್ನ ಮಾಲೀಕನ ಮೇಲೆ ದಾಳಿ ಮಾಡುವುದನ್ನು ನೋಡಿ, ಜಾನಿ ಎಂಬ ಸಾಕು ನಾಯಿ ತೀವ್ರವಾಗಿ ಬೊಗಳಲು ಪ್ರಾರಂಭಿಸಿತು. ಆ ವೇಳೆ ನಾಯಿಯನ್ನು ಬೋನಿನಲ್ಲಿ ಕೂಡಲಾಗಿತ್ತು. ಆದರೂ ಬಿಡದ ನಾಯಿ ಬೋನಿನಿಂದ ಹೊರಗೆ ಹಾರಿ ಬಂದು ನಿರ್ಭಯವಾಗಿ ದಾಳಿಕೋರರ ಮೇಲೆ ದಾಳಿ ಮಾಡಿದೆ. ಇದರಿಂದ ಹೆದರಿದ ದರೋಡೆಕೋರರು ಆ ಸ್ಥಳದಿಂದ ಓಡಿಹೋಗಿದ್ದಾರೆ.