CSKಗೆ ಬೇಬಿ ಎಬಿಡಿ ಎಂಟ್ರಿ – ಚೆನ್ನೈ ಲಕ್ ಬದಲಿಸ್ತಾರಾ ಡೆವಾಲ್ಡ್?
ಧೋನಿ ಪಡೆಗೆ ಸಿಕ್ಕಿದ್ದಾನೆ ಸ್ಫೋಟಕ ಹಿಟ್ಟರ್

ಐಪಿಎಲ್ 2025ರ ನಡುವಲ್ಲಿ ಎಂಎಸ್ ಧೋನಿ ಹೊಸ ಅಸ್ತ್ರವನ್ನು ಪಡೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಪಂದ್ಯಗಳಿಗೆ ಗಾಯಗೊಂಡಿರುವ ಗುರ್ಜಪಾನಿ ಸಿಂಗ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಜೂನಿಯರ್ ಎಬಿ ಡಿವಿಲಿಯರ್ಸ್ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಚೆನ್ನೈ ತಂಡಕ್ಕೆ ಸೇರಿಕೊಂಡಿದ್ದಾರೆ.
ಡೆವಾಲ್ಡ್ ಬ್ರೆವಿಸ್ ಆಗಮನವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆನೆ ಬಲಬಂತಾಗಿದೆ. ಟಿ20 ಕ್ರಿಕೆಟ್‌ಗೆ ಡೆವಾಲ್ಡ್ ಬ್ರೆವಿಸ್ ಹೇಳಿ ಮಾಡಿಸಿದಂತಹ ಬ್ಯಾಟರ್. ಡೆವಾಲ್ಡ್ ಬ್ರೆವಿಸ್ 81 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 1787 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 162 ಆಗಿದೆ. ಅವರು 2023 ರಲ್ಲಿ ದಕ್ಷಿಣ ಆಫ್ರಿಕಾ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಇಲ್ಲಿಯವರೆಗೆ 2 ಪಂದ್ಯಗಳನ್ನು ಆಡಿದ್ದಾರೆ. ಡೆವಾಲ್ಡ್ ಬ್ರೆವಿಸ್ ಐಪಿಎಲ್ ಕೂಡ ಆಡಿದ್ದಾರೆ. ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಅಲ್ಲಿ ಅವರು 10 ಪಂದ್ಯಗಳನ್ನು ಆಡಿದ್ದರು. ಆದರೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರಲಿಲ್ಲ. ಈಗ ಸಿಎಸ್‌ಕೆ ಬ್ರೆವಿಸ್ ಅವರನ್ನು 2.2 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
21 ವರ್ಷದ ಡೆವಾಲ್ಡ್ ಬ್ರೆವಿಸ್ ಬಿಗ್ ಸಿಕ್ಸರ್‌ಗಳನ್ನು ಹೊಡೆಯುವುದರಲ್ಲಿ ಪರಿಣಿತ ಬ್ಯಾಟರ್. ಅವರು ಐಪಿಎಲ್ ಮತ್ತು ಇತರ ಟಿ20 ಲೀಗ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸಿದ್ದಾರೆ. ಬ್ರೆವಿಸ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಮೊದಲ ಸೀಸನ್‌ನಲ್ಲಿಯೇ ಅವರು 7 ಪಂದ್ಯಗಳಲ್ಲಿ 142 ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಗಳಿಸಿದರು. ಆದಾಗ್ಯೂ, 2023 ರಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. 2024 ರಲ್ಲಿ 3 ಪಂದ್ಯಗಳನ್ನಾಡಿದ್ದ ಅವರು ಕೇವಲ 69 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಆ ಬಳಿಕ ಮುಂಬೈ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಬ್ರೆವಿಸ್‌ಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಿನ ಅನುಭವವಿಲ್ಲದಿದ್ದರೂ, ಮುಂಬರುವ ಐಪಿಎಲ್ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕರೆ, ಅವರು ಸಿಎಸ್‌ಕೆ ತಂಡದ ದಿಕ್ಕನ್ನೇ ಬದಲಾಯಿಸುವ ಆಟಗಾರರಾಗಬಹುದು.
ವೆಸ್ಟ್ ಇಂಡೀಸ್‌ನಲ್ಲಿ ನಡೆದ 2022 ರ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬ್ರೆವಿಸ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಇದಾದ ನಂತರ ಅವರು ಕ್ರಿಕೆಟ್‌ನಲ್ಲಿ ಸದ್ದು ಮಾಡಿದರು. ಅವರು ಆಡಿದ 6 ಇನ್ನಿಂಗ್ಸ್‌ಗಳಲ್ಲಿ 506 ರನ್ ಗಳಿಸಿದರು. ಇದರಲ್ಲಿ ಎರಡು ಶತಕಗಳು ಸೇರಿವೆ. ಅಲ್ಲದೆ, ಐರ್ಲೆಂಡ್ ವಿರುದ್ಧ 96 ಮತ್ತು ಫೈನಲ್‌ನಲ್ಲಿ ರನ್ನರ್ ಅಪ್ ಆದ ಇಂಗ್ಲೆಂಡ್ ವಿರುದ್ಧ 97 ರನ್‌ಗಳನ್ನು ಬಾರಿಸಿದ್ದರು. ಅವರನ್ನು ದಕ್ಷಿಣ ಆಫ್ರಿಕಾ ತಂಡದ ಮಾಜಿ ದಿಗ್ಗಜ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರಿಗೆ ಹೋಲಿಸಲಾಗುತ್ತದೆ. ಅವರ ಬ್ಯಾಟಿಂಗ್ ಶೈಲಿಯಿಂದಾಗಿ ಅವರನ್ನು “ಬೇಬಿ ಎಬಿ’ ಎಂದೂ ಕರೆಯುತ್ತಾರೆ. ಸಿಎಸ್‌ಕೆ ತಂಡದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿ ಕಾಣುತ್ತಿದೆ. ಈ ಕಾರಣದಿಂದಾಗಿ ವೇಗದ ಬೌಲರ್ ಬದಲಿಗೆ ಬ್ಯಾಟ್ಸ್‌ಮನ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನಾದ್ರೂ ಸಿಎಸ್‌ಕೆ ತಂಡದ ಲಕ್ ಬದಲಾಗುತ್ತಾ, ಮುಂದಿನ ಪಂದ್ಯಗಳಲ್ಲಿ ಕಂ ಬ್ಯಾಕ್ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.