ಕುಂದಾಪುರದ ಯುವಕರ ಮೇಲೆ ಪುಡಿರೌಡಿಗಳಿಂದ ಹಲ್ಲೆ – ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಗೃಹಸಚಿವರ ಸೂಚನೆ
ಬೆಂಗಳೂರಲ್ಲಿ ಕುಂದಾಪುರ ಮೂಲದ ಯುವಕರ ಮೇಲೆ ಪುಡಿರೌಡಿಗಳ ಅಟ್ಟಹಾಸ
ಬೆಂಗಳೂರು : ಬೆಂಗಳೂರಿನಲ್ಲಿ ಅಮಾಯಕ ಯುವಕರ ಮೇಲೆ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಗುರುವಾರ ರಾತ್ರಿ ಬೇಕರಿಯೊಂದರ ಬಳಿ ಬಂದ ಪುಡಿ ರೌಡಿಗಳು ಸಿಗರೇಟು ಕೇಳಿದ್ದಾರೆ. ಕೊಟ್ಟ ಸಿಗರೇಟಿಗೆ ದುಡ್ಡು ಕೇಳಿದಾಗ ಹಿಗ್ಗಾಮುಗ್ಗಾ ಏಟು ನೀಡಿದ್ದಾರೆ. ಅಮಾಯಕ ಯುವಕರನ್ನು ಒಂದೇ ಸಮ ಥಳಿಸಲು ಶುರುಮಾಡಿದ ದುಷ್ಟರು ನಂತರ ಹೆಲ್ಮೆಟ್ ಸೇರಿದಂತೆ ಸಿಕ್ಕಿದನ್ನ ಕೈಯಲ್ಲಿ ಹಿಡಿದು ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ : ಹಿಮಾಚಲದ ಹೊಸ ಸಿಎಂ ಯಾರು?-ರೇಸ್ನಲ್ಲಿ ನಾಲ್ವರು ನಾಯಕರು
ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಯಲ್ಲಿ ಕುಂದಾಪುರ ಮೂಲದ ಇಬ್ಬರು ಯುವಕರಿದ್ದ ವೇಳೆ ಪುಡಿ ರೌಡಿಗಳು ಆಗಮಿಸಿದ್ದಾರೆ. ನಾಲ್ಕು ಜನರಿದ್ದ ತಂಡದಲ್ಲಿ ಒಬ್ಬ ಸಿಗರೇಟು ಕೇಳಿದ್ದಾನೆ. ಕೊಟ್ಟ ಸಿಗರೇಟಿಗೆ ದುಡ್ಡು ಕೇಳಿದಾಗ ಏಯ್ ಅನ್ನುತ್ತಾ ಸೀದಾ ಬೇಕರಿಯೊಳಗೆ ಒಬ್ಬ ನುಗ್ಗಿದ್ದಾನೆ. ಗೂಳಿಯಂತೆ ಬಂದವನೇ ಹಲ್ಲೆ ಮಾಡಲು ಶುರುಮಾಡಿದ್ದಾನೆ. ಹೊರಗೆ ನಿಂತವನು ಮೊದಲು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಾ ನಂತರ ಅವನೂ ಹಲ್ಲೆ ಮಾಡಲು ಬೇಕರಿಯೊಳಗೆ ನುಗ್ಗಿದ್ದಾನೆ. ಕೊಬ್ಬಿದ ಗೂಳಿಗಳಂತೆ ಅಮಾಯಕ ಹುಡುಗರ ಮೇಲೆ ನಾಲ್ವರು ಎರಗಿದ್ದಾರೆ. ಪಾಪದ ಹುಡುಗರು ಪುಡಿರೌಡಿಗಳ ಅಟ್ಟಹಾಸಕ್ಕೆ ನಲುಗಿಹೋಗಿದ್ದಾರೆ.
ಬೇಕರಿಯಲ್ಲಿ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದ ಅಮಾಯಕರ ಮೇಲೆ ಈ ರೀತಿ ಅಟ್ಟಹಾಸ ಮೆರೆಯುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಮಾತು ಬಲವಾಗಿಯೇ ಕೇಳಿಬರುತ್ತಿದೆ. ಸದ್ಯ ಹಲ್ಲೆಗೊಳಗಾದ ಅಮಾಯಕ ಯುವಕರು ಹೆಚ್ ಎ ಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನು ಅಮಾಯಕ ಯುವಕರ ಮೇಲೆ ನಡೆದ ಹಲ್ಲೆ ಖಂಡಿಸಿ ದಕ್ಷಿಣ ಕನ್ನಡ ಮೂಲದ ವ್ಯಾಪಾರಿಗಳು, ಉದ್ಯಮಿಗಳು, ಹೆಚ್ ಎ ಎಲ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಯುವಕರ ಮೇಲಾದ ಹಲ್ಲೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನ ಆಗ್ರಹಿಸಿದರು. ನಂತರ ಠಾಣೆ ಬಳಿ ಆಗಮಿಸಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೂಡಾ ಪೊಲೀಸರೊಂದಿಗೆ ಚರ್ಚೆ ನಡೆಸಿದ್ರು.
ಗುರುವಾರ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಷ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚಿಸಿದ್ದಾರೆ. ಘಟನೆಯ ಬಗ್ಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಶಾಂತಿಯುತವಾಗಿ ಜೀವನ ನಿರ್ವಹಣೆ ಮಾಡಿ ಕೊಂಡು, ಬದುಕನ್ನು ಕಟ್ಟಿಕೊಂಡಿರುವ ಶ್ರಮಜೀವಿಗಳಿಗೆ, ಯಾವುದೇ ರೀತಿಯ ಕಿರುಕುಳ ಆಗದಂತೆ ರಕ್ಷಣೆ ನೀಡಬೇಕೆಂದು ಗೃಹಸಚಿವರು ಪೊಲೀಸರಿಗೆ ಸೂಚಿಸಿದ್ದಾರೆ.