ಹಿಂದೂ ಟ್ರಸ್ಟ್‌ನಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲು ಸಿದ್ಧರಿದ್ದೀರಾ? – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಹಿಂದೂ ಟ್ರಸ್ಟ್‌ನಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲು ಸಿದ್ಧರಿದ್ದೀರಾ? – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಮುಸ್ಲಿಮರನ್ನು ಹಿಂದೂ ಧಾರ್ಮಿಕ ಟ್ರಸ್ಟ್‌ಗಳ ಭಾಗವಾಗಲು ಅನುಮತಿ ನೀಡಲಾಗುತ್ತದೆಯೇ? ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ವಕ್ಫ್ ಮಸೂದೆ ವಿರುದ್ಧದ ಅರ್ಜಿಗಳ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ನೂತನ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ವಿವಿಧ ನಿಯಮಗಳು, ವಿಶೇಷವಾಗಿ ಬಳಕೆದಾರರ ಆಸ್ತಿಯನ್ನು ಬಳಸಿಕೊಳ್ಳುವ ವಕ್ಫ್‌ಗೆ ರೂಪಿಸಲಾಗಿರುವ ನಿಯಮಗಳ ಕುರಿತು ಪ್ರಶ್ನಿಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕಕ್ಕೆ ಅವಕಾಶ ನೀಡಿರುವುದು ಸಂವಿಧಾನದ 26ನೇ ವಿಧಿಯ ಉಲ್ಲಂಘನೆ”ಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳಲ್ಲಿ ಮುಸ್ಲಿಮರ ನೇಮಕಕ್ಕೆ ಅವಕಾಶ ನೀಡುತ್ತದೆಯೆ?” ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಇನ್ನು ಮುಂದೆ ಮುಸ್ಲಿಮರನ್ನು ಹಿಂದೂ ದತ್ತಿ ಮಂಡಳಿಗಳ ಭಾಗವಾಗಲು ನೀವು ಅನುಮತಿಸುತ್ತೀರಾ? ಅನುಮತಿ ನೀಡುವುದಾದರೆ ಅದನ್ನು ಬಹಿರಂಗವಾಗಿ ಹೇಳಿ” ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.

100 ಅಥವಾ 200 ವರ್ಷಗಳ ಹಿಂದೆ ಸಾರ್ವಜನಿಕ ಟ್ರಸ್ಟ್ ಅನ್ನು ವಕ್ಫ್ ಎಂದು ಘೋಷಿಸಿದಾಗ, ಅದನ್ನು ವಕ್ಫ್ ಮಂಡಳಿಯು ಇದ್ದಕ್ಕಿದ್ದಂತೆ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾದ ಆಸ್ತಿಗಳನ್ನು ಡಿ-ನೋಟಿಫೈ ಮಾಡಲಾಗುವುದಿಲ್ಲ ಎಂದು ಆದೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್ ಪ್ರಸ್ತಾಪ ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ಸಲಹೆಯನ್ನು ವಿರೋಧಿಸಿತು ಮತ್ತು ಅಂತಹ ನಿರ್ದೇಶನದ ನೀಡುವ ಮೊದಲು ವಿಚಾರಣೆ ನಡೆಸುವಂತೆ ಕೋರಿತು.

ವಕ್ಫ್ ಕಾಯ್ದೆಯ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ನಿನ್ನೆ ಯಾವುದೇ ಮಧ್ಯಂತರ ಆದೇಶ ನೀಡದೆ ವಿಚಾರಣೆಯನ್ನು ಇಂದಿಗೆ ಮುಂದೂಡಿದೆ.

 

 

Kishor KV

Leave a Reply

Your email address will not be published. Required fields are marked *