5 ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್‌ಕೆಗೆ ಕೊನೆಗೂ ಜಯ – ಹಳೆಯ ಖದರ್‌ನಲ್ಲಿ ಧೋನಿ ಬ್ಯಾಟಿಂಗ್

ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಜಯದ ಹಳಿಗೆ ಮರಳಿದೆ. ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 167 ರನ್‌ಗಳ ಗುರಿಯನ್ನು ಸಿಎಸ್‌ಕೆ ಐದು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ. ಈ ಪಂದ್ಯವನ್ನು ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಕಾಣುತ್ತಿದ್ದ ಎಲ್‌ಎಸ್‌ಜಿ ಆಸೆ ಮಣ್ಣುಪಾಲಾಗಿದೆ. ಸಿಎಸ್‌ಕೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್‌ಕೆ ಇನ್ನು ಮೂರು ಎಸೆತ ಬಾಕಿ ಇರುವಂತೆ ಐದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ತಮ್ಮ 43ನೇ ವಯಸ್ಸಿನಲ್ಲಿ ಧೋನಿ ತಮ್ಮ ಹಳೆಯ ಖದರ್‌ನಲ್ಲಿ ಬ್ಯಾಟಿಂಗ್ ಮಾಡಿ ಅಜೇಯ 26 ರನ್ ಬಾರಿಸಿದರೆ, ಶಿವಂ ದುಬೆ ಅಜೇಯ 43 ರನ್ ಸಿಡಿಸಿದರು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಲ್‌ಎಸ್‌ಜಿ ಸೋಲು ಕಂಡರೂ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ.
167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರ್ ಅಶ್ವಿನ್ ಬದಲಿಗೆ ಸ್ಥಾನ ಪಡೆದ ಶೇಕ್ ರಶೀದ್ ಹಾಗೂ ರಚಿನ್ ರವೀಂದ್ರ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 4.5 ಓವರ್‌ಗಳಲ್ಲಿ 52 ರನ್ ಸೇರಿಸಿದರು. ಶೇಕ್ ರಶೀದ್ 6 ಉತ್ತಮ ಬೌಂಡರಿಗಳ ನೆರವಿನಿಂದ 27 ರನ್ ಬಾರಿಸಿ ಔಟ್ ಆದರು. 37 ರನ್ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ರಚಿನ್ ರವೀಂದ್ರ ಅವರಿಗೆ ಮಾರ್ಕ್ರಮ್ ಪೆವಿಲಿಯನ್ ಹಾದಿ ತೋರಿಸಿದರು. ರಾಹುಲ್ ತ್ರಿಪಾಠಿ ಸಹ 10 ಎಸೆತಗಳಲ್ಲಿ 9 ರನ್ ಬಾರಿಸಿದರೆ, ರವೀಂದ್ರ ಜಡೇಜಾ 11 ಎಸೆತಗಳಲ್ಲಿ 7 ರನ್ ಬಾರಿಸಿ ಇಬ್ಬರೂ ರವಿ ಬಿಷ್ಣೋಯಿ ತೋಡಿದ ಖೆಡ್ಡಾಗೆ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್ ನಿರಾಸೆ ಮೂಡಿಸಿದರು.
111 ರನ್‌ಗಳಿಗೆ 5 ವಿಕೆಟ್‌ಗೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಧೋನಿ ಬ್ಯಾಟಿಂಗ್ ಮಾಡಲು ಬಂದರು. ಇವರು ಮಧ್ಯಮ ಕ್ರಮಾಂಕದ ಶಿವಂ ದುಬೆ ಅವರೊಂದಿಗೆ ಸೇರಿಕೊಂಡ ಧೋನಿ 28 ಎಸೆತಗಳಲ್ಲಿ ಅಜೇಯ 57 ರನ್‌ಗಳನ್ನು ಸೇರಿಸಿ ತಂಡಕ್ಕೆ ಆಧಾರವಾಯಿತು. ಧೋನಿ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 26 ರನ್ ಸಿಡಿಸಿ ಮಿಂಚಿದರು. ಇವರ ಸಂಘಟಿತ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. 2175 ದಿನಗಳ ಬಳಿಕ ಮಹೇಂದ್ರ ಸಿಂಗ್ ಧೋನಿ ಮ್ಯಾನ್ ಅಫ್ ದಿ ಮ್ಯಾಚ್ ಪಡೆದರು.