ಬೇಟೆಯಾಡಿದ ಕನ್ನಡದ ಹುಲಿ – ಕರುಣ್‌ ಗೆ ಕಾಡಿದ್ಯಾಕೆ ರನ್ ಹಸಿವು?
ಈಗ್ಲಾದ್ರೂ ಕಣ್ತೆರೆಯುತ್ತಾ ಬಿಸಿಸಿಐ?

 ಬೇಟೆಯಾಡಿದ ಕನ್ನಡದ ಹುಲಿ – ಕರುಣ್‌ ಗೆ ಕಾಡಿದ್ಯಾಕೆ ರನ್ ಹಸಿವು?ಈಗ್ಲಾದ್ರೂ ಕಣ್ತೆರೆಯುತ್ತಾ ಬಿಸಿಸಿಐ?

ಡಿಯರ್ ಕ್ರಿಕೆಟ್ ಮತ್ತೊಂದು ಅವಕಾಶ ಕೊಡು.. ಈ ಮಾತು ನಿಮಗೆಲ್ಲಾ ನೆನಪಿದ್ಯಾ ಸ್ನೇಹಿತರೇ.. ಕ್ರಿಕೆಟ್‌ನಲ್ಲಿ ಕಳೆದುಹೋಗುತ್ತಿರೋ ಟೆನ್ಷನ್‌ನಲ್ಲಿದ್ದ ನಮ್ಮ ಕನ್ನಡಿಗ ಕ್ರಿಕೆಟರ್ ಕರುಣ್ ನಾಯರ್ ಅವರು ಭಾವುಕರಾಗಿ ಮಾಡಿದ್ದ ಪೋಸ್ಟ್ ಇದು. ಆವತ್ತು ಅಂದರೆ, 2022ರಲ್ಲಿ  ಕರುಣ್ ನಾಯರ್ ಮಾಡಿರೋ ಈ ಪೋಸ್ಟ್ ನೋಡಿ ಕನ್ನಡಿಗರು ಕೂಡಾ ಕ್ರಿಕೆಟ್ ನಿನ್ನ ಕೈಬಿಡಲ್ಲ ಅನ್ನೋ ರೀತಿ ಧೈರ್ಯ ತುಂಬಿದ್ದರು. ಇದೇ ಕರುಣ್ ನಾಯರ್ ಈಗ ಮುಂಬೈ ವಿರುದ್ಧ ಹಸಿದ ಹೆಬ್ಬುಲಿಯಂತೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡ್ತಿದ್ದಾಗ ಇಡೀ ಕರುನಾಡೇ ಮನೆಮಗನ ಆಟಕ್ಕೆ ಶಹಬ್ಬಾಸ್ ಹೇಳಿದೆ. ಸ್ನೇಹಿತರೇ ನೀವು ಗಮನಿಸಿದ್ರಾ. ನಿನ್ನೆ ಕರುಣ್ ನಾಯರ್ ಆಟದಲ್ಲಿ ಛಲವಿತ್ತು. ತನ್ನನ್ನ ಕಡೆಗಣಿಸಿದವರಿಗೆ ಬ್ಯಾಟಲ್ಲೇ ಉತ್ತರ ಕೊಡೋ ಹಠವಿತ್ತು.

ಇದನ್ನೂ ಓದಿ : SRH ಆರಂಭ ಶೂರತ್ವ ಏನಾಯ್ತು? ಟಾಪ್ ಬ್ಯಾಟರ್ಸ್ ಅಟ್ಟರ್ ಫ್ಲಾಪ್

ಅವಕಾಶ ಮತ್ತು ಅದೃಷ್ಟ ಒಲಿದಾಗ ಕೈತುಂಬಾ ಬಾಚಿಕೊಳ್ಳಬೇಕು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕನ್ನಡಿಗ ಕರುಣ್ ನಾಯರ್.. ಕ್ರಿಕೆಟ್‌ನಲ್ಲಿ ಸ್ಟ್ರಗಲ್ ಅನ್ನೋದು ಇದ್ದೇ ಇರುತ್ತದೆ. ಇದು ಯಾವ ಕ್ರಿಕೆಟರ್‌ಗೂ ತಪ್ಪಿದ್ದಲ್ಲ. ಆದ್ರೆ, ನಮ್ಮ ಕರುಣ್ ನಾಯರ್‌ಗೆ ಕ್ರಿಕೆಟ್ ಅನ್ನೋದು ಒಂಥರಾ ಇನ್.. ಔಟ್.. ಗೆಟ್ ಔಟ್ ಅನ್ನೋ ಥರಾ. ಕ್ರಿಕೆಟ್‌ಗಾಗಿ ಸುರಿಸಿದ ಕಣ್ಣೀರು, ತೋಳಲ್ಲಿ ಬಲ, ಮನಸಲ್ಲಿ ಛಲವಿದ್ದರೂ ಸಿಗದ ಅವಕಾಶ.. ಈ ರೋಶ, ನೋವಿನ ಜ್ವಾಲೆ.. ನಿನ್ನೆ ಮುಂಬೈ ವಿರುದ್ಧ ಹೊರಬಿದ್ದಿತ್ತು.

ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಇದ್ದರೂ ಕರುಣ್​ ನಾಯರ್​ ಮೊದಲ 4 ಪಂದ್ಯಗಳಲ್ಲಿ ಬೆಂಚ್ ಕಾಯ್ತಿದ್ರು. ಆದರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ​ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಮುಖೇಶ್ ಕುಮಾರ್​ ಬದಲಿಗೆ ಸ್ಥಾನ ಪಡೆದಿದ್ದರು. ಕೊಟ್ಟ ಅವಕಾಶವನ್ನು ಬಳಸಿಕೊಂಡು ಕರುಣ್ ನಾಯರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತೋರಿಸಿದರು. ಅರ್ಧಶತಕದ ನಂತರವೂ ಭರ್ಜರಿ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ 40 ಎಸೆತದಲ್ಲಿ 12 ಫೋರ್, 5 ಸಿಕ್ಸರ್​ನಿಂದ 89 ರನ್​ಗಳಿಸಿದ್ದರು. ವಿಶ್ವದ ಶ್ರೇಷ್ಠ ಬೌಲರ್ ಎನಿಸಿಕೊಂಡಿರೋ ಜಸ್ಪ್ರೀತ್ ಬೂಮ್ರಾಗೂ ಸಿಕ್ಸರ್​ ಸಿಡಿಸಿದರು. ಕೊನೆಗೆ ಸ್ಯಾಂಟ್ನರ್​ ಬೌಲಿಂಗ್​ನಲ್ಲಿ ಬೋಲ್ಡ್​ ಆಗಿ ಕೇವಲ 11 ರನ್​ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡರು. ಸೆೆಂಚೂರಿ ಮಿಸ್ ಆಯ್ತು ಅನ್ನೋ ಬೇಜಾರ್ ಬಿಟ್ರೆ, ಕರುಣ್ ನಾಯರ್ ಬರೋಬ್ಬರಿ 7 ವರ್ಷದ ಬಳಿಕ ಐಪಿಎಲ್​ನಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಅವಮಾನದಿಂದ ಹೊತ್ತಿಕೊಂಡ ಕಿಚ್ಚು ಸುಡದೇ ಬಿಡುವುದಿಲ್ಲ ಅಂತಾ ತೋರಿಸಿಕೊಟ್ಟಿದ್ದಾರೆ.

ಈ ಹಿಂದೆ ಕರುಣ್ ನಾಯರ್ 2018ರಲ್ಲಿ ಚೆನ್ನೈ ತಂಡದ ವಿರುದ್ಧ 8 ಬೌಂಡರಿ, 2 ಸಿಕ್ಸರ್​ನಿಂದ 54 ರನ್​ ಗಳಿಸಿದ್ದರು. 2022ರಲ್ಲಿ ರಾಜಸ್ಥಾನ್​ ತಂಡದಲ್ಲಿದ್ದಾಗ ಕೊನೆಯದಾಗಿ ಕೆಕೆಆರ್ ವಿರುದ್ಧ ಬ್ಯಾಟ್​ ಬೀಸಿದ್ದರು. ಇದೀಗ 2025ರ ಡೆಲ್ಲಿ ಪರವಾಗಿ ಮುಂಬೈ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ದೇಶಿಯ ಪಂದ್ಯಗಳಲ್ಲಿ ಅಬ್ಬರಿಸಿದ್ದರಿಂದ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಫ್ರಾಂಚೈಸಿ ಸೇರಿಸಿಕೊಂಡಿತ್ತು. ಅದು ಕೂಡಾ ಕೇವಲ 50 ಲಕ್ಷ ರೂಪಾಯಿಗಳಿಗೆ ಕರುಣ್​ ನಾಯರ್ ಡಿಸಿ ತೆಕ್ಕೆ ಸೇರಿದ್ದರು. ಅಂತೂ ಈಗ ಬರೋಬ್ಬರಿ 2,519 ದಿನಗಳ ಬಳಿಕ ಐಪಿಎಲ್ ಅಂಗಳದಲ್ಲಿ ಮಿಂಚಿದ್ದಾರೆ.

ಕರುಣ್ ನಾಯರ್ ಈ ಅದ್ಭುತ ಇನ್ನಿಂಗ್ಸ್ ಮೂಲಕವೇ ಬಿಸಿಸಿಐಗೆ ಖಡಕ್ ಸಂದೇಶ ರವಾನಿಸಿದ್ದಾರೆ. 8 ವರ್ಷಗಳ ಹಿಂದೆ, ಕರುಣ್ ನಾಯರ್ ತ್ರಿಶತಕ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದರು. ಆದ್ರೆ, ಬಿಸಿಸಿಐ ನಂತರ ಕರುಣ್ ಮೇಲೆ ಕರುಣೆ ತೋರಲೇ ಇಲ್ಲ. ಅಷ್ಟೇ ಯಾಕೆ, ಕರ್ನಾಟಕ ರಣಜಿ ತಂಡದಲ್ಲೂ ಕರುಣ್ ಗೆ ಜಾಗವಿರಲಿಲ್ಲ. ಕರುಣ್ ಆಡಿದ್ದು ವಿದರ್ಭ ತಂಡಕ್ಕೆ. ವಿದರ್ಭ ತಂಡ ಸೇರಿಕೊಂಡ ಕರುಣ್ ಆಡಿದ ಎಲ್ಲಾ ಟೂರ್ನಿಯಲ್ಲೂ ಚರಿತ್ರೆ ಸೃಷ್ಟಿಸಿದ್ದರು. ಕೇರಳ ವಿರುದ್ಧದ ರಣಜಿ ಫೈನಲ್‌ನಲ್ಲಿ ಶತಕ ಭಾರಿಸಿ ಟ್ರೋಫಿ ಗೆದ್ದು ತೋರಿಸಿದ್ರು. ಅಷ್ಟೇ ಯಾಕೆ, ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 8 ಇನ್ನಿಂಗ್ಸ್‌ಗಳಲ್ಲಿ ಆರು ಬಾರಿ ಔಟೇ ಆಗದೇ ಐದು ಶತಕ ದಾಖಲಿಸಿ ಬಿಗ್ ಮ್ಯಾಚ್ ಪ್ಲೇಯರ್ ಅಂತಾ ಅನಿಸಿಕೊಂಡಿದ್ದರು ಕರುಣ್ ನಾಯರ್.  ಇವರ ಫರ್ಫಾಮೆನ್ಸ್ ನೋಡಿದ ಕನ್ನಡಿಗರು ಈ ಸಲ ಐಪಿಎಲ್‌ಗೆ ಸೆಲೆಕ್ಟ್ ಆಗೇ ಆಗ್ತಾನೇ ಅನ್ನೋ ನಿರೀಕ್ಷೆಯಲ್ಲಿದ್ದರು. ಯಾರಿಗೂ ಬೇಡವಾದ ಕರುಣ್ ಡೆಲ್ಲಿ ತಂಡಕ್ಕೆ ಕೇವಲ 50 ಲಕ್ಷಕ್ಕೆ ಬಿಕರಿಯಾದ್ರು. ಮೊದಲ ನಾಲ್ಕು ಮ್ಯಾಚ್‌ಗಳಲ್ಲಿ ಕರುಣ್ ಕಣ್ಮರೆಯಾಗಿದ್ದರು. ಕೊನೆಗೂ ಸಿಕ್ಕ ಅವಕಾಶದಲ್ಲೇ ಮುಂಬೈ ವಿರುದ್ಧ ರನ್ ಮಳೆ ಸುರಿಸಿದ್ರು. ಉಗಿದವರ ಬಾಯಲ್ಲಿ ಉಘೇ ಅಂತಾ ಅನಿಸಿಕೊಂಡಿದ್ದಾರೆ ಕರುಣ್ ನಾಯರ್.  ಕ್ರಿಕೆಟ್‌ನಲ್ಲಿ ಆಟಕ್ಕಷ್ಟೇ ಬೆಲೆ ಅನ್ನೋದಾದ್ರೆ ಕನ್ನಡಿಗ ಕ್ರಿಕೆಟರ್ ಕರುಣ್ ನಾಯರ್‌ಗೆ ಟೀಮ್ ಇಂಡಿಯಾದಲ್ಲೂ ಚಾನ್ಸ್ ಸಿಗಬೇಕು. ಈಗಾಗ್ಲೇ 33 ವರ್ಷ ದಾಟಿರುವ ಕರುಣ್ ಒಮ್ಮೆಯಾದರೂ ಟೀಮ್ ಇಂಡಿಯಾದಲ್ಲಿ ಮುಗಿಲೆತ್ತರಕ್ಕೆ ಮಿಂಚಬೇಕು.

Shantha Kumari

Leave a Reply

Your email address will not be published. Required fields are marked *