ಮೋದಿಯವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ- ದೇಶವನ್ನೇ ಮಾರಿ ಬಿಡುತ್ತಾರೆಂದು ಕಿಡಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಆರ್ಥಿಕತೆಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಹೊಡೆತ ಬಿದ್ದಿದೆ. ಉದ್ಯೋಗ ಒದಗಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಹೀಗಾಗಿ ಸಾರ್ವಜನಿಕ ವಲಯವನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಅವರ ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಮೋದಿಯವರು ಈ ದೇಶವನ್ನೇ ಮಾರಿ ಬಿಡುತ್ತಾರೆಂದು ಕಿಡಿಕಾರಿದರು.
ಪಂಡಿತ್ ಜವಾಹರಲಾಲ್ ನೆಹರು ನಿರ್ಮಿಸಿದ ಸಾರ್ವಜನಿಕ ವಲಯದ ಕಾರ್ಖಾನೆಗಳನ್ನು ಮೋದಿ ಮುಗಿಸುತ್ತಿದ್ದಾರೆ. ಈ ದೇಶದ ಭವಿಷ್ಯದ ಪೀಳಿಗೆಗೆ ನಾವೇನನ್ನು ನೀಡುತ್ತಿದ್ದೇವೆ? ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಅನ್ನು ನಿಂದಿಸುವುದನ್ನು ಬಿಟ್ಟರೆ ಮೋದಿಯವರ ಬಳಿ ಯಾವುದಕ್ಕೂ ಉತ್ತವಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದೆ. ಎಲ್ಲೆಡೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸುತ್ತಿದೆ. ಇಂದು, ಚುನಾವಣಾ ಸಂಸ್ಥೆಗಳು ಕೂಡ ಅವರ ನಿಯಂತ್ರಣದಲ್ಲಿವೆ. ಚುನಾವಣೆಗಳಲ್ಲಿ ಅಕ್ರಮ-ಹಗರಣಗಳು ನಡೆಯುತ್ತಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇವಿಎಂ ತ್ಯಜಿಸಿ ಬ್ಯಾಲೆಟ್ ಪೇಪರ್ ಗಳತ್ತ ಸಾಗುತ್ತಿದ್ದರೆ, ನಮ್ಮ ಸರ್ಕಾರ ಇವಿಎಂನ್ನು ಮುಂದುವರೆಸುತ್ತಿದೆ. ಇವಿಎಂಗಳು ಜಗತ್ತಿನಲ್ಲಿ ಎಲ್ಲಿಯೂ ಲಭ್ಯವಿಲ್ಲ. ಆದರೆ, ನಮ್ಮ ದೇಶದಲ್ಲಿದೆ. 140 ಕೋಟಿ ಜನರು ಪ್ರಜಾಪ್ರಭುತ್ವವನ್ನು ನಂಬುತ್ತಾರೆ… ಇದಲ್ಲದಿದ್ದರೂ ಮುಂದೊಂದು ದೀನ ಈ ದೇಶದ ಯುವಕರು ಎದ್ದು ನಿಂತು ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕೆನ್ನುವ ಕಾಲ ಬರಲಿದೆ ಎಂದು ತಿಳಿಸಿದರು.
ಅಮೆರಿಕಾ ಸುಂದ ವಿಚಾರ ಕುರಿತು ಮಾತನಾಡಿ, ಅಮೆರಿಕಾ ಭಾರತಕ್ಕೆ ಶೇ.26ರಷ್ಟು ಸುಂಕವನ್ನು ವಿಧಿಸಿದೆ. ಆದರೆ, ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಲಿಲ್ಲ. ಸುಂಕ ಹೆಚ್ಚಿದ ದಿನದ ಮಧ್ಯಾಹ್ನವೇ ನಾವು ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದೆವು. ಆದರೆ, ಚರ್ಚೆ ಅವಕಾಶ ನೀಡಲಿಲ್ಲ. ದೇಶದ ಆರ್ಥಿಕತೆಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಕ್ಷುಲ್ಲಕ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳುತ್ತಿದೆ. ನೈಜ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಎಂದು ಆರೋಪಿಸಿದರು.