ಬೆಂಗಳೂರಿಗೆ ತಟ್ಟಿದ ‘ಮ್ಯಾಂಡಸ್’ ಎಫೆಕ್ಟ್ – ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ

ಬೆಂಗಳೂರಿಗೆ ತಟ್ಟಿದ ‘ಮ್ಯಾಂಡಸ್’ ಎಫೆಕ್ಟ್ – ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ

ಬೆಂಗಳೂರು : ತಮಿಳುನಾಡಿಗೆ ಅಪ್ಪಳಿಸಿರುವ ಮ್ಯಾಂಡಸ್ ಚಂಡಮಾರುತದ ಎಫೆಕ್ಟ್ ಬೆಂಗಳೂರಿಗೂ ತಟ್ಟಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲೂ ಡಿಸೆಂಬರ್ 12ರವರೆಗೆ ಮಳೆ ಸುರಿಯಲಿದೆ. ಡಿಸೆಂಬರ್ 8ರಿಂದಲೇ ಸಿಲಿಕಾನ್ ಸಿಟಿಯಲ್ಲಿ ತುಂತುರು ಮಳೆ ಶುರುವಾಗಲಿದ್ದು, ವಿಪರೀತ ಚಳಿಯೂ ಶುರುವಾಗಿದೆ.

ಇದನ್ನೂ ಓದಿ :  ಗುಜರಾತ್ ಮುಖ್ಯಮಂತ್ರಿಯಾಗಿ ಡಿಸೆಂಬರ್ 12ರಂದು ಭೂಪೇಂದ್ರ ಪಟೇಲ್ ಪ್ರಮಾಣವಚನ

ಬೆಂಗಳೂರಿನ ತಾಪಮಾನದ ಮೇಲೆ ಮ್ಯಾಂಡಸ್ ಚಂಡಮಾರುತ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಗುರುವಾರ ಬೆಳಿಗ್ಗೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ಈ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಬೆಂಗಳೂರಲ್ಲಿ ಗುರುವಾರ ಬೆಳಗ್ಗೆಯಿಂದಲೇ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣ ಇತ್ತು. ಇನ್ನೂ ನಾಲ್ಕು ದಿನ ಬೆಂಗಳೂರಿನಲ್ಲಿ ಇದೇ ವಾತಾವರಣ ಮುಂದುವರೆಯಲಿದೆ. ಮ್ಯಾಂಡಸ್ ಚಂಡಮಾರುತದ ಹಿನ್ನೆಲೆಯಲ್ಲಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ‘ಹಳದಿ’ ಅಲರ್ಟ್ ನೀಡಲಾಗಿದೆ. ಇನ್ನು ಬೆಂಗಳೂರು ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 12ರವರೆಗೆ ಗುಡುಗು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯೂ ಇದೆ ಎನ್ನಲಾಗ್ತಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಡಿಸೆಂಬರ್ 11 ಮತ್ತು 12ರಂದು ಗುಡುಗು ಮತ್ತು ಮಿಂಚು ಸಹಿತ ಮಳೆ ಸುರಿಯಲಿದೆ. ಬೆಂಗಳೂರು ಹೊರತುಪಡಿಸಿ, ರಾಜ್ಯದ ಕರಾವಳಿ ಜಿಲ್ಲೆಗಳು, ಮಲೆನಾಡು ಪ್ರದೇಶಗಳಲ್ಲೂ ಮಳೆ ಬೀಳುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮ್ಯಾಂಡಸ್ ಚಂಡಮಾರುತದಿಂದ ಉಂಟಾಗಿರುವ ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 10 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ವಿವಿಧ ಸ್ಥಳಗಳಿಗೆ ಆಗಮಿಸುವ ಮತ್ತು ಹೊರಡುವ ಒಟ್ಟು 13 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಇಂದು ವಿವಿಧೆಡೆ ಪ್ರಯಾಣಿಸುವವರು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರುವಂತೆ ಸಲಹೆ ನೀಡಿದ್ದಾರೆ.

“ಪ್ರತಿಕೂಲ ಹವಾಮಾನದ ಕಾರಣದಿಂದ 09.12.2022 ರಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ರದ್ದತಿಯನ್ನು ದಯವಿಟ್ಟು ಗಮನಿಸಿ. ಹೆಚ್ಚಿನ ವಿವರಣೆಗಾಗಿ ಪ್ರಯಾಣಿಕರು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ಜೊತೆ ಪರಿಶೀಲಿಸಲು ವಿನಂತಿಸಲಾಗಿದೆ” ಎಂದು ಚೆನ್ನೈ ವಿಮಾನ ನಿಲ್ದಾಣದ ಅಧೀಕೃತ ಟ್ವಿಟ್ಟರ್‌ ಖಾತೆಯಿಂದ ವಿಷಯವನ್ನು ಹಂಚಿಕೊಳ್ಳಲಾಗಿದೆ.

suddiyaana