ಗುಜರಾತ್ ನಲ್ಲಿ ಗೆಲುವು ಸಾಧಿಸಿದ “ಸೆಲೆಬ್ರಿಟಿಗಳು’ ಇವರೇ…

ಗುಜರಾತ್ ನಲ್ಲಿ ಗೆಲುವು ಸಾಧಿಸಿದ “ಸೆಲೆಬ್ರಿಟಿಗಳು’ ಇವರೇ…

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಈ ಭಾರಿ ಸೆಲೆಬ್ರಿಟಿ ರಂಗು ಕೂಡ ಪಡೆದಿತ್ತು. ಅಖಾಡಕ್ಕಿಳಿದ ಸ್ಟಾರ್ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಗಿದಿದೆ. ಭಾರಿ ಕುತೂಹಲ ಮೂಡಿಸಿದ್ದ ಗುಜರಾತ್ ನ ಜಾಮ್ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದೆ. ಮೊದಲ ಬಾರಿ ಕಣಕ್ಕಿಳಿದಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಾಮ್‍ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ, ಆಪ್‍ನ ಕರ್ಶನ್‍ಭಾಯ್ ಕರ್ಮೂರ್ ಅವರ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:ಗುಜರಾತ್ ಮುಖ್ಯಮಂತ್ರಿಯಾಗಿ ಡಿಸೆಂಬರ್ 12ರಂದು ಭೂಪೇಂದ್ರ ಪಟೇಲ್ ಪ್ರಮಾಣವಚನ

ಗೆಲುವು ಖಚಿತವಾದ ಬಳಿಕ ಮಾತನಾಡಿದ ರಿವಾಬಾ ಜಡೇಜಾ, ‘ಇದು ನನಗೆ ಮಾತ್ರವಲ್ಲ, ನಮ್ಮೆಲ್ಲರ ಗೆಲುವು. ನನ್ನನ್ನು  ಅಭ್ಯರ್ಥಿಯಾಗಿ ಸಂತೋಷದಿಂದ ಸ್ವೀಕರಿಸಿದ, ನನಗಾಗಿ ಕೆಲಸ ಮಾಡಿದವರೆಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.

ಜನರ ರಕ್ಷಣೆಗೆ ನದಿಗೆ ಹಾರಿದ್ದ ಬಿಜೆಪಿ ಅಭ್ಯರ್ಥಿ ಗೆಲುವು

ಇತ್ತೀಚೆಗೆ ಗುಜರಾತಿನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ್ದರು. ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂತಿಲಾಲ್ 62 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.

19,000 ಕ್ಕೂ ಹೆಚ್ಚು ಅಂತರದಿಂದ ಹಾರ್ದಿಕ್ ಪಟೇಲ್ ಗೆಲುವು

ವಿರಾಮ್ ಗಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ 19,000ಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹಾರ್ದಿಕ್ ಪಟೇಲ್,  ಒಬಿಸಿ ಅಭ್ಯರ್ಥಿ ಮತ್ತು ವಿರಾಮಗಾಮ್‌ನಿಂದ ಎರಡು ಅವಧಿಗೆ ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಲಖಾ ಭಾರವಾಡ್ ಮತ್ತು ವಿರಾಮ್‌ಗಮ್‌ನ ಅತ್ಯಂತ ಪ್ರಬಲ ಸಮುದಾಯದಿಂದ ಬಂದ ಆಪ್ ಅಭ್ಯರ್ಥಿ ಅಮರಸಿಂಹ ಠಾಕೋರ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಜಿಗ್ನೇಶ್ ಮೇವಾನಿಗೆ ರೋಚಕ ಗೆಲುವು

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಆದರೆ, ಗುಜರಾತ್ ವಡ್ಗಾಮ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ದಲಿತ ನಾಯಕ ಜಿಗ್ನೇಶ್ ಮೇವಾನಿ ಮತ್ತೆ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಮೇವಾನಿ, ಕೊನೆಯ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಲಾಲ್ ವಘೇಲಾ ಅವರನ್ನು 2 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ವಿಜಯದ ನಗೆ ಬೀರಿದ್ದಾರೆ. ದಲಿತ ಹಕ್ಕುಗಳ ಹೋರಾಟಗಾರ ಮತ್ತು ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಆಗಿರುವ ಜಿಗ್ನೇಶ್ ಮೇವಾನಿ ಅವರು ತಮ್ಮ ವಡ್ಗಾಮ್ ಸ್ಥಾನವನ್ನು ಮತ್ತೆ ಉಳಿಸಿಕೊಂಡಿದ್ದಾರೆ.

suddiyaana