ಮಾಸ್ಟರ್ಸ್ ಲೀಗ್ ಚಾಂಪಿಯನ್ ಇಂಡಿಯಾ – ಅತೀ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್ಸ್

ಬ್ಯಾಟ್, ಬಾಲ್ ಬಿಟ್ಟು ಮೈದಾನದಿಂದ ಹೊರನಡೆದು ವರ್ಷಗಳೇ ಕಳೆದ ಬಳಿಕ ಲೆಜೆಂಡರಿ ಪ್ಲೇಯರ್ಸ್ ಎಲ್ರೂ ಸೇರಿ ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಟೂರ್ನಿ ಕಟ್ಟಿದ್ರು. ಒಟ್ಟು ಆರು ತಂಡಗಳ ನಡುವೆ ಪೈಪೋಟಿ ನಡೆದಿದ್ದು, ದಾಖಲೆವೀರರೆಲ್ಲಾ ಮತ್ತೊಮ್ಮೆ ಅಬ್ಬರಿಸಿದ್ರು. ಫೈನಲ್ ಪಂದ್ಯ ಭಾನುವಾರ ಇಂಡಿಯಾ ಮಾಸ್ಟರ್ಸ್ ಮತ್ತು ವೆಸ್ಟ್ ಇಂಡೀಸ್ ಮಾಸ್ಟರ್ಸ್ ನಡುವೆ ನಡೆದ್ದು, ಲಾರಾ ಬಳಗವನ್ನ ಸೋಲಿಸೋ ಮೂಲಕ ಸಚಿನ್ ಟೀಂ ಟ್ರೋಫಿ ಎತ್ತಿ ಹಿಡಿದಿದೆ.
ಇದನ್ನೂ ಓದಿ : ರೋಹಿತ್ ಗೆ BCCI ಹೊಸ ಟಾಸ್ಕ್ – ಇಂಗ್ಲೆಂಡ್ ಟೆಸ್ಟ್ ಸರಣಿ ಟಾರ್ಗೆಟ್
ರಾಯ್‌ಪುರದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತ ಮಾಸ್ಟರ್ಸ್ ತಂಡವು ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಮಾಸ್ಟರ್ಸ್ ಪರ ಲೆಂಡ್ಲ್ ಸಿಮನ್ಸ್ ಅತಿ ಹೆಚ್ಚು ರನ್ ಗಳಿಸಿದರು. ಸಿಮನ್ಸ್ 41 ಎಸೆತಗಳಲ್ಲಿ 139.02 ಸ್ಟ್ರೈಕ್ ರೇಟ್‌ನಲ್ಲಿ 57 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಸಿಮನ್ಸ್ 1 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಹಾಗೇ ಆರಂಭಿಕ ಆಟಗಾರ ಡ್ವೇನ್ ಸ್ಮಿತ್ 2 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 45 ರನ್ ಗಳಿಸಿದರು. ವಿಕೆಟ್ ಕೀಪರ್ ದಿನೇಶ್ ರಾಮ್ದಿನ್ ಅಜೇಯ 12 ರನ್ ಗಳಿಸಿದರು. ಆದ್ರೆ ಈ ಮೂವರನ್ನು ಹೊರತುಪಡಿಸಿ, ಯಾರೂ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ನಾಯಕ ಬ್ರಿಯಾನ್ ಲಾರಾ, ವಿಲಿಯಂ ಪರ್ಕಿನ್ಸ್ ಮತ್ತು ಚಾಡ್ವಿಕ್ ವಾಲ್ಟನ್ ತಲಾ 6 ರನ್ ಗಳಿಸಿದರೆ, ರವಿ ರಾಂಪಾಲ್ 2 ರನ್ ಕೊಡುಗೆ ನೀಡಿದರು. ಆಶ್ಲೇ ನರ್ಸ್ 1 ರನ್ ಗಳಿಸಿದರು. ಈ ಮೂಲಕ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.
148 ರನ್ಗಳ ಗುರಿ ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ ಪರ ಅಂಬಾಟಿ ರಾಯುಡು ಸ್ಫೋಟಕ ಇನ್ನಿಂಗ್ಸ್ ಆಡಿದ್ರು. ರಾಯುಡು 50 ಎಸೆತಗಳಲ್ಲಿ 148 ಸ್ಟ್ರೈಕ್ ರೇಟ್‌ನಲ್ಲಿ 74 ರನ್ ಗಳಿಸಿದರು. ರಾಯುಡು ಅವರ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳು ಸೇರಿದ್ದವು. ರಾಯುಡು ಹೊರತುಪಡಿಸಿದ್ರೆ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್ 18 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 25 ರನ್ ಗಳಿಸಿದರು. ಇನ್ನು ಮಿಡಲ್ ಆರ್ಡರ್ ನಲ್ಲಿ ಗುರುಕಿರತ್ ಸಿಂಗ್ ಮಾನ್ 14 ರನ್ಗಳ ಕಾಣಿಕೆ ನೀಡಿದರೆ, ಯೂಸುಫ್ ಪಠಾಣ್‌ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಯುವರಾಜ್ ಸಿಂಗ್ (13 ರನ್) ಮತ್ತು ಸ್ಟುವರ್ಟ್ ಬಿನ್ನಿ (16 ರನ್) ಗಳಿಸೋ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ರು. ಅಂತಿಮವಾಗಿ ಭಾರತ 17.1 ಓವರ್‌ನಲ್ಲಿ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು.
ವಿಂಡೀಸ್ ಪಡೆಯನ್ನ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಭಾರತ ತಂಡದ ಬೌಲಿಂಗ್ ಅಟ್ಯಾಕ್ ಮೆಚ್ಚಲೇಬೇಕು. ಇಂಡಿಯಾ ಮಾಸ್ಟರ್ಸ್ ಪರ ಒಟ್ಟು 6 ಆಟಗಾರರು ಬೌಲಿಂಗ್ ಮಾಡಿದರು. ಅದ್ರಲ್ಲೂ ಕನ್ನಡಿಗ ವಿನಯ್ ಕುಮಾರ್ ಬೌಲಿಂಗ್ಗೆ ವಿಂಡೀಸ್ ಪ್ಲೇಯರ್ಸ್ ರನ್ ಗಳಿಸೋಕೆ ಒದ್ದಾಡಿದ್ರು. 4 ಓವರ್ ಬೌಲಿಂಗ್ ಮಾಡಿದ ವಿನಯ್ ಕೇವಲ 26 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ವಿನಯ್ ಕುಮಾರ್ 3 ವಿಕೆಟ್ ಪಡೆದರೆ, ಶಾದಾಬ್ ನದೀಮ್ 2 ವಿಕೆಟ್ ಪಡೆದರೆ, ಪವನ್ ನೇಗಿ ಮತ್ತು ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಪಡೆದರು. ಬಟ್ ಇರ್ಫಾನ್ ಪಠಾಣ್ ಮತ್ತು ಧವಲ್ ಕುಲಕರ್ಣಿ ಯಾವುದೇ ವಿಕೆಟ್ ಪಡೀಲಿಲ್ಲ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಇದೆ. ಏನಪ್ಪಾ ಅಂದ್ರೆ ಭಾರತ ತಂಡ ಚಾಂಪಿಯನ್ ಆಗಿದೆ ನಿಜ. ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಈ ವರ್ಷದ ಐಎಂಎಲ್ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಈ ವರ್ಷದ ಐಎಂಎಲ್ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್‌ಗಳಲ್ಲಿ ಯಾವುದೇ ಭಾರತೀಯ ಬ್ಯಾಟರ್ ಸ್ಥಾನ ಪಡೆದಿಲ್ಲ.
ಟಾಪ್ 5 ರನ್ ಸ್ಕೋರ್!
ಆಟಗಾರ ರನ್
ಶೇನ್ ವ್ಯಾಟ್ಸನ್ 361
ಲೆಂಡ್ಸ್ ಸಿಮನ್ಸ್ 351
ಸ್ಪೇನ್ ಸ್ಮಿತ್ 264
ಬೆನ್ ಡಂಕ್ 258
ಅಸೆಲಾ ಗುಣರತ್ನ 252
ವೆಸ್ಟ್ ಇಂಡೀಸ್ ತಂಡದ ಆಶ್ವೇ ನರ್ಸ್, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 7 ಪಂದ್ಯಗಳಲ್ಲಿ ಇವರು 10 ವಿಕೆಟ್ ಕಿತ್ತಿದ್ದಾರೆ. ಆಸ್ಟ್ರೇಲಿಯಾದ ಡೊಹರ್ಟಿ 10 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಭಾರತದ ಪವನ್ ನೇಗಿ 9 ವಿಕೆಟ್ ಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ವಿಂಡೀಸ್‌ನ ರವಿ ರಾಂಪೌಲ್ ಕೂಡಾ 9 ವಿಕೆಟ್ ಪಡೆದಿದ್ದಾರೆ. ಕನ್ನಡಿಗ ವಿನಯ್ ಕುಮಾರ್ 8 ವಿಕೆಟ್ ಪಡೆಯೋ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.