ಕಸದ ತೊಟ್ಟಿಯಲ್ಲಿ ಸಿಕ್ಕವಳು ಫೇಮಸ್ ಕ್ರಿಕೆಟರ್.. ಹುಟ್ಟು ಭಾರತದಲ್ಲಿ.. ಸ್ಟಾರ್ ಆಗಿದ್ದು ಆಸ್ಟ್ರೇಲಿಯಾದಲ್ಲಿ
ವಿಶ್ವ ಕ್ರಿಕೆಟ್ ಮೆಚ್ಚಿದ ಲಿಸಾ

ಕಸದ ತೊಟ್ಟಿಯಲ್ಲಿ ಸಿಕ್ಕವಳು ಫೇಮಸ್ ಕ್ರಿಕೆಟರ್.. ಹುಟ್ಟು ಭಾರತದಲ್ಲಿ.. ಸ್ಟಾರ್ ಆಗಿದ್ದು ಆಸ್ಟ್ರೇಲಿಯಾದಲ್ಲಿವಿಶ್ವ ಕ್ರಿಕೆಟ್ ಮೆಚ್ಚಿದ ಲಿಸಾ

ಇಲ್ಲೊಬ್ಬರು ಫೇಮಸ್ ಕ್ರಿಕೆಟರ್ ಇದ್ದಾರೆ. ಇವರ ವಿಚಾರದಲ್ಲಿ ಇದೇ ಲಕ್ ವಿಶ್ವಪ್ರಸಿದ್ಧಿಯಾಗುವಂತೆ ಮಾಡಿದೆ. ಹೌದು.. ಅದೃಷ್ಟ ಜೊತೆಗಿದ್ದರೆ ವಿಶ್ವಮಟ್ಟದಲ್ಲಿಯೂ ಮಿಂಚಬಹುದು, ಅದೃಷ್ಟ ಕೈಕೊಟ್ಟರೆ ಬೀದಿಪಾಲೂ ಆಗಬಹುದು ಅನ್ನೋದಕ್ಕೆ ಇದೇ ಫೇಮಸ್ ಕ್ರಿಕೆಟರ್ ಸಾಕ್ಷಿ. ಈಕೆ ಕಸದ ತೊಟ್ಟಿಯಲ್ಲಿ ಬಿದ್ದಿದ್ದರು. ಈಕೆಗೆ ಪುನರ್ಜನ್ಮ ಸಿಕ್ಕಿದ್ದು ಹೇಗೆ? ಈ ಸ್ಟಾರ್‌ ಕ್ರಿಕೆಟರ್‌ ಯಾರು? ಈ ಕ್ರಿಕೆಟರ್ ರೋಚಕ ಜರ್ನಿ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:7 ವರ್ಷ.. 6 ಟೂರ್ನಿ.. 1 ಕಪ್ – ಫೈನಲ್ ನಲ್ಲೇ ಭಾರತ ಎಡವಿದ್ದೆಷ್ಟು?

ಅದು 1979ರ ಕಾಲ. ಪುಣೆಯಲ್ಲಿ ಹೆಣ್ಣು ಕೂಸೊಂದು ಕಸದ ತೊಟ್ಟಿಯಲ್ಲಿ ಚೀರಾಡುತ್ತಿತ್ತು. ತಾಯಿಯ ಎದೆಹಾಲು ಸಿಗದೆ, ಹಸಿವಿನಲ್ಲಿ ನರಳಾಡುತ್ತಿತ್ತು. ತಾಯಿ-ತಂದೆಗೆ ಅದ್ಯಾವ ಕಷ್ಟವಿತ್ತೋ. ಹೆತ್ತ ಕರುಳಿಗೆ ಈ ಮುದ್ದು ಕಂದಮ್ಮ ಯಾಕೆ ಬೇಡವಾಯ್ತೋ.. ಇಲ್ಲ ಹೆಣ್ಣು ಹುಟ್ಟಿದೆ ಎಂಬ ಕಾರಣಕ್ಕೋ.. ಕಸದ ತೊಟ್ಟಿಯಲ್ಲಿ ಬಿಸಾಡಿ ಹೋಗಿದ್ದರು. ಮಗುವಿನ ಅದೃಷ್ಟವೋ ಏನೋ.. ಬೀದಿನಾಯಿಗಳ ಬಾಯಿಗೆ ಸಿಗುವ ಮೊದಲೇ ಪುಟಾಣಿಯನ್ನ ದಾರಿಹೋಕರು ರಕ್ಷಣೆ ಮಾಡಿದ್ರು. ಅನಾಥಾಶ್ರಮಕ್ಕೆ ಕರೆದುಕೊಂಡು ಬಂದ್ರು. ಅಲ್ಲಿಂದಲೇ ಶುರುವಾಯ್ತು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯ ರೋಚಕ ಜರ್ನಿ. ಆಸ್ಟ್ರೇಲಿಯಾದ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಆಗಿದ್ದವಳ ಜೀವನದ ಕಥೆ..  ಈಕೆಯೇ ಲಿಸಾ ಸ್ಥಾಲೇಕರ್.

ಈ ಪುಟ್ಟ ಕಂದಮ್ಮ ಇರೋ ಅನಾಥಾಶ್ರಮಕ್ಕೆ ಆಸ್ಟ್ರೇಲಿಯಾದ ಹರೇನ್ ಮತ್ತು ಸೂ ಸ್ಥಾಲೇಕರ್ ದಂಪತಿ ಬಂದಿದ್ದರು. ಈ ದಂಪತಿಗೆ ಭಾರತದ ಭಾರತದ ಮಗುವನ್ನ ದತ್ತು ಪಡೆಯಬೇಕೆಂಬ ಆಸೆಯಿತ್ತು. ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದವರ ಕಣ್ಣಿಗೆ ಬಿದ್ದದ್ದು ತೊಟ್ಟಿಯಲ್ಲಿ ಸಿಕ್ಕ ಇದೇ ಬಾಲೆ. ಆಕೆಯನ್ನು ದತ್ತು ಪಡೆದು ಲಿಸಾ ಎಂದು ನಾಮಕರಣ ಮಾಡಿದ್ರು. ಲಿಸಾಳ ದತ್ತು ತಂದೆಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ತಮ್ಮ  ಮಗಳು ಕ್ರಿಕೆಟರ್ ಆಗಬೇಕು ಅನ್ನೋ ಆಸೆಯಿತ್ತಂತೆ. ಇದಕ್ಕಾಗಿಯೇ ಕ್ರಿಕೆಟ್ ತರಭೇತಿ ಕೊಡಿಸಿದ್ರು. ಲಿಸಾ ಕೂಡ ಸಾಕಷ್ಟು ಶ್ರಮ ವಹಿಸಿ ಕ್ರಿಕೆಟ್ ಅಭ್ಯಾಸ ಮಾಡಿದರು. ನಂತರ ಅವರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕೆ ಸೆಲೆಕ್ಟ್ ಆದ್ರು. ಅಲ್ಲಿಂದ ಲಿಸಾ ಹಿಂತಿರುಗಿ ನೋಡಲೇ ಇಲ್ಲ.

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್​ ಆದರು.  187 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ರು. 2010 ರ T 20 ವಿಶ್ವಕಪ್ ಫೈನಲ್‌ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2007 ಮತ್ತು 2008 ರಲ್ಲಿ ಆಸ್ಟ್ರೇಲಿಯಾದ ಅತ್ಯುತ್ತಮ ಮಹಿಳಾ ಅಂತರರಾಷ್ಟ್ರೀಯ ಆಟಗಾರ್ತಿಗೆ ನೀಡಲಾಗುವ ಪ್ರತಿಷ್ಠಿತ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ರು. ತಮ್ಮ ವೃತ್ತಿಜೀವನದಲ್ಲಿ ಲಿಸಾ ಆಸ್ಟ್ರೇಲಿಯಾ ಪರ 4 ವಿಶ್ವಕಪ್‌ಗಳನ್ನು ಗೆದ್ದಿದ್ದಾರೆ. ಮತ್ತು ಟಿ 20ಯಲ್ಲಿ ನಂಬರ್ ಒನ್​ ಆಲ್ ರೌಂಡರ್ ಮತ್ತು ಬೌಲರ್ ಅಂತಾನೇ ಕರೆಸಿಕೊಂಡಿದ್ದರು.

2022ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ನಯಾನ್‌ನಲ್ಲಿ ನಡೆದ ಎಫ್‌ಐಸಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷೆಯನ್ನಾಗಿ ಘೋಷಿಸಿದಾಗ ಲಿಸಾ ನಿಜಕ್ಕೂ ಅಚ್ಚರಿ ಪಟ್ರು. ಈ ಸ್ಥಾನಕ್ಕೆ ಏರುವುದು ಅಷ್ಟೊಂದು ಸುಲಭವಲ್ಲ. ಈ ಸ್ಥಾನ ಮಾನ ಎಲ್ಲರಿಗೂ ಸಿಗುವುದೂ ಇಲ್ಲ. ಇದು ಸಿಕ್ಕಿದ್ದು ಅಂದು ಕಸದ ತೊಟ್ಟಿಯಲ್ಲಿ ಸಿಕ್ಕ ಮಗು ಈ ಲಿಸಾಳಿಗೆ ಅನ್ನೋದೇ ಅಚ್ಚರಿ. ಇದೀಗ ಲಿಸಾಗೆ 45 ವರ್ಷ ವಯಸ್ಸು. FICA ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಲಿಸಾಳದ್ದು. ಇದೀಗ ಲಿಸಾ wpl ಲೀಗ್‌ನಲ್ಲೂ ಸಖತ್ ಶೈನ್ ಆಗ್ತಿದ್ದಾರೆ. ಯುಪಿ ವಾರಿಯರ್ಸ್ ಟೀಮ್‌ನ ಮೆಂಟರ್ ಆಗಿ ಕಾರ್ಯನಿರ್ವಹಿಸ್ತಿದ್ದಾರೆ ಲಿಸಾ. ನೋಡಿದ್ರಲ್ಲಾ ಸ್ನೇಹಿತರೇ, ಕಸದ ತೊಟ್ಟಿಯಲ್ಲಿ ಸಿಕ್ಕ ಹಸುಗೂಸು ವಿಶ್ವಕ್ರಿಕೆಟ್‌ನಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಿದ್ದಾಳೆ. ಈಕೆ ನಿಜವಾಗಿಯೂ ಕೋಟಿ ಕೋಟಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿ.

Shwetha M

Leave a Reply

Your email address will not be published. Required fields are marked *