ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ದುಬೈಗೆ ಶಿಫ್ಟ್ – ಸೋಲಿನ ಬೆನ್ನಲ್ಲೇ ಪಾಕ್ ಟೀಮ್ ನಲ್ಲಿ ಸರ್ಜರಿ!

ಮೊದ್ಲು ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿತ್ತು. ಈಗ ಇಡೀ ಟೂರ್ನಿಯೇ ಪಾಕಿಸ್ತಾನದಿಂದ ಹೊರಬಿದ್ದಿದೆ. ಹಾಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನಕ್ಕೆ ಬರೋಬ್ಬರಿ 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆ ಮಾಡೋಕೆ ಅವಕಾಶ ಕೊಟ್ಟಿತ್ತು. ಆದ್ರೆ ಟೂರ್ನಿ ಶುರುವಾದ ನಾಲ್ಕೇ ದಿನಕ್ಕೆ ಪಾಕಿಸ್ತಾನ ಟೀಂ ಟೂರ್ನಿಯಿಂದಲೇ ಹೊರ ಬಿದ್ದಿತ್ತು. ಅದೂ ಕೂಡ ಒಂದೂ ಪಂದ್ಯವನ್ನೂ ಗೆಲ್ಲದೆ. ಲೀಗ್ ಹಂತದ ಪಂದ್ಯಗಳು ಮುಗಿಯೋವರೆಗೂ ಕೂಡ ರೇಸ್ನಲ್ಲಿ ಇರ್ಲಿಲ್ಲ. ಇದು ಒಂದ್ಕಡೆಯಾದ್ರೆ ಮೊದಲ ಸೆಮಿಫೈನಲ್ ಮ್ಯಾಚ್ ನ ರಿಸಲ್ಟ್ ಹೊರಬಿದ್ದ ಬೆನ್ನಲ್ಲೇ ಇಡೀ ಟೂರ್ನಿಯೇ ಪಾಕಿಸ್ತಾನದಿಂದ ಹೊರ ಬಿದ್ದಿದೆ. ಫೈನಲ್ ಪಂದ್ಯವನ್ನಾದ್ರೂ ನಮ್ಮದೇ ನೆಲದಲ್ಲಿ ನೋಡೋಣ ಅಂತಾ ಕಾಯ್ತಿದ್ದ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಸ್ಟಾರ್ಸ್ ಮರ್ಮಾಘಾತ ನೀಡಿದ್ದಾರೆ. ಈ ಟೂರ್ನಿ ಮೂಲಕ ಪಾಕ್ ಕ್ರಿಕೆಟ್ನಲ್ಲಿ ಬಿರುಗಾಳಿಯೇ ಎದ್ದಿದೆ.
ಇದನ್ನೂ ಓದಿ : ಪಾಕ್ನಲ್ಲಿ ಉ*ಗ್ರರ ಅಟ್ಟಹಾಸ! ಸ್ಫೋಟಕ ತುಂಬಿದ ಕಾರಿನಿಂದ ಬ್ಲಾಸ್ಟ್!!
ಚಾಂಪಿಯನ್ಸ್ ಟ್ರೋಫಿ ಟೂರ್ನಿ ವಿಚಾರವಾಗಿ ಕಳೆದ ಆರು ತಿಂಗಳಿಂದ್ಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದಿಲ್ಲೊಂದು ಕಾಂಟ್ರವರ್ಸಿ ನಡೀತಾನೇ ಇತ್ತು. ಕೊನೆಗೆ ಭಾರತ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನ ಆಡೋಕೆ ಒಪ್ಪಿಕೊಳ್ತು. ಆದ್ರೆ ಟೂರ್ನಿ ಆರಂಭವಾದ ದಿನದಿಂದ ಹಿಡಿದು ಈವರೆಗೂ ಪಾಕ್ಗೆ ಬರೀ ಮುಖಭಂಗವೇ ಆಗಿದೆ. ನ್ಯೂಜಿಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ತವರಿನಲ್ಲೂ ಗೆಲ್ಲಲಿಲ್ಲ. ಅಲ್ಲಿಂದ ದುಬೈ ಹಾರಿ ಭಾರತದ ವಿರುದ್ಧ ಸೋತು ವಾಪಸ್ ಆಗಿದ್ರು. ಸೋ 2 ಮ್ಯಾಚ್ ವೇಳೆಗಾಗ್ಲೇ ಸೋತು ಟೂರ್ನಿಯಿಂದ ಹೊರ ಬಿದ್ದಿದ್ರು. ಹೋಗ್ಲಿ ಕೊನೇ ಮ್ಯಾಚಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಅಲ್ಪಸ್ವಲ್ಪ ಮರ್ಯಾದೆ ಉಳಿಸಿಕೊಳ್ಳೋಣ ಅಂದ್ರೆ ಮಳೆ ಅದಕ್ಕೂ ಅವಕಾಶ ಕೊಡ್ಲಿಲ್ಲ. ಮ್ಯಾಚ್ ಕೂಡ ರದ್ದಾಯ್ತು. ಹೋಗ್ಲಿ ಫೈನಲ್ ಪಂದ್ಯವನ್ನಾದ್ರೂ ನಮ್ಮ ದೇಶದಲ್ಲೇ ಆಡ್ಸಿ ಒಂಚೂರು ಕಾಸು ಮಾಡಿಕೊಳ್ಳೋಣ ಅಂತಿದ್ದ ಪಾಕ್ಗೆ ಭಾರತದ ಗೆಲುವು ನುಂಗಲಾರದ ತುತ್ತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತ ಗೆಲ್ಲೋ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿದೆ. ಸೋ ಅದ್ರಂತೆ ಫೈನಲ್ ಪಂದ್ಯವೂ ಕೂಡ ದುಬೈನಲ್ಲೇ ನಡೆಯಲಿದೆ. ಬುಧವಾರ ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯನೇ ಪಾಕಿಸ್ತಾನದ ಪಾಲಿಗೆ ಕೊನೇ ಪಂದ್ಯ. ಸೋ ಅಲ್ಲಿಗೆ ಇಡೀ ಟೂರ್ನಿಯೇ ಪಾಕ್ ಪಾಲಿಗೆ ಮುಗಿದಂತಾಗಿದೆ. ಅವ್ರ ಟೀಮ್ ಕೂಡ ಆಡ್ತಿಲ್ಲ. ಪಾಕ್ನಲ್ಲೂ ಪಂದ್ಯ ನಡೀತಿಲ್ಲ.
ಪಾಕಿಸ್ತಾನ ಟೀಮ್ನಲ್ಲಿ ಟೈಂ ಟು ಟೈಂ ಏನಾಗುತ್ತೋ ಬಿಡುತ್ತೋ.. ಸರ್ಜರಿ ಮಾತ್ರ ಇದ್ದೇ ಇರುತ್ತೆ. ಮ್ಯಾಚ್ ಸೋತ್ರಂತೂ ಯಾರಿಗೆ ಗೇಟ್ಪಾಸ್ ಕೊಡೋಣ ಅಂತಾ ಸರ್ಜರಿ ಮಾಡೋಕೆ ಕಾಯ್ತಾ ಇರ್ತಾರೆ. ಇದೀಗ ಚಾಂಪಿಯನ್ಸ್ ಟ್ರೋಫಿಯ ಹೀನಾಯ ಸೋಲಿನ ಬೆನ್ನಲ್ಲೇ ಮುಂಬರುವ ಟಿ20 ಸರಣಿಗೆ ಮೇಜರ್ ಬದಲಾವಣೆಗಳನ್ನ ಮಾಡ್ಲಾಗಿದೆ. ಸ್ಟಾರ್ ಆಟಗಾರರನ್ನೇ ಕೈಬಿಟ್ಟಿದೆ. ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗಾಗಿ ಪಾಕಿಸ್ತಾನ ತಂಡದಿಂದ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅವರನ್ನು ಕೈಬಿಡಲಾಗಿದೆ. ರಿಜ್ವಾನ್ ಬದಲಿಗೆ ಸಲ್ಮಾನ್ ಅಲಿ ಅಘಾ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಅವ್ರೇ ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್ ರೌಂಡರ್ ಶಾದಾಬ್ ಖಾನ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ. ಮೊಹಮ್ಮದ್ ರಿಜ್ವಾನ್ ಅವರನ್ನು ಏಕದಿನ ತಂಡದ ನಾಯಕನಾಗಿ ಉಳಿಸಿಕೊಳ್ಳಲಾಗಿದೆ. ಬಾಬರ್ ಅಜಂ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ, ಬ್ಯಾಟರ್ಗಳಾದ ಸೌದ್ ಶಕೀಲ್ ಮತ್ತು ಕಮ್ರಾನ್ ಗುಲಾಮ್ ಅವರನ್ನು ಕೈಬಿಡಲಾಗಿದೆ. ಏಕದಿನ ತಂಡದಿಂದ ವೇಗದ ಬೌಲರ್ಗಳಾದ ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರನ್ನು ಕೂಡ ಹೊರ ಬಿದ್ದಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಹೊಣೆ ಹೊತ್ತಿದ್ದ ಪಾಕಿಸ್ತಾನಕ್ಕೆ ದೊಡ್ಡ ಹೊಡೆತವೇ ಅದಕ್ಕೆ ಮಾಡಿದ್ದ ಖರ್ಚು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಚಾಂಪಿಯನ್ಸ್ ಟ್ರೋಫಿ 2025 ಆಯೋಜಿಸೋಕೆ ಹಗಲುರಾತ್ರಿ ಕೆಲಸ ಮಾಡಿದ್ರು. ಚಾಂಪಿಯನ್ಸ್ ಟ್ರೋಫಿಯ ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬರೋಬ್ಬರಿ 1,800 ಕೋಟಿ ಪಾಕಿಸ್ತಾನಿ ರೂಪಾಯಿ ಖರ್ಚು ಮಾಡಿ ಮೂರು ಸ್ಟೇಡಿಯಂಗಳನ್ನು ಸಿದ್ಧಪಡಿಸಿತ್ತು. ಪಾಕಿಸ್ತಾನ ಈ ಮೂರು ಸ್ಟೇಡಿಯಂ ಸಿದ್ಧತೆಗಾಗಿ 117 ದಿನ ತೆಗೆದುಕೊಂಡಿತ್ತು. ಮೂರರಲ್ಲಿ ಲಾಹೋರ್ನ ಗಡಾಫಿ ಸ್ಟೇಡಿಯಂಗಾಗಿ ಪಿಸಿಬಿ ಹೆಚ್ಚು ಖರ್ಚು ಮಾಡಿತ್ತು. 1,800 ಕೋಟಿ ಪಾಕಿಸ್ತಾನಿ ರೂಪಾಯಿ ಹಣದಲ್ಲಿ ಲಾಹೋರ್ ಗಡಾಫಿ ಸ್ಟೇಡಿಯಂಗಾಗಿಯೇ 1,000 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಯಾಕಂದ್ರೆ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯವನ್ನೇ ಇಲ್ಲೇ ಆಯೋಜನೆ ಮಾಡಲಾಗಿತ್ತು. ದಶಕಗಳ ಬಳಿಕ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಪಡೆದಿದ್ದ ಪಾಕಿಸ್ತಾನ, ಅದ್ದೂರಿ ಫೈನಲ್ ಆಯೋಜನೆ ಮಾಡುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡುವ ಕನಸು ಕಂಡಿತ್ತು. ಆದರೆ ಭಾರತ ತಂಡವು ಫೈನಲ್ಗೆ ಏರುವ ಮೂಲಕ, ಪಾಕಿಸ್ತಾನದ ಈ ಕನಸನ್ನು ನುಚ್ಚುನೂರು ಮಾಡಿದೆ. ಫೈನಲ್ ಮ್ಯಾಚ್ ದುಬೈಗೆ ಶಿಫ್ಟ್ ಆಗಿದೆ.
2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನ ಸೋಲಿಸಿ ಚಾಂಪಿಯನ್ ಆಗಿ ಮೆರೆದಾಡಿತ್ತು. ಆದ್ರೀಗ ಆ ಸೋಲಿನ ಸೇಡಿಗೆ ಟೀಂ ಇಂಡಿಯಾ ತಿರುಗೇಟು ಕೊಟ್ಟಿದೆ. ಪಾಕ್ ತಂಡವನ್ನ ಮನೆಗೆ ಕಳಿಸೋದ್ರ ಜೊತೆಗೆ ಇಡೀ ಟೂರ್ನಿಯೇ ಅಲ್ಲಿಂದ ಹೊರ ಬೀಳುವಂತೆ ಮಾಡಿದೆ. ದುಬೈನಲ್ಲಿ ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದ್ದು ಈ ಬಾರಿಯ ಚಾಂಪಿಯನ್ ಯಾರಾಗ್ತಾರೆ ಅನ್ನೋ ಕುತೂಹಲವೂ ಮೂಡಿದೆ. ಒಟ್ನಲ್ಲಿ ಪಾಕಿಸ್ತಾನ ಬಹುಶಃ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹೊಣೆಯನ್ನ ಹೊತ್ತುಕೊಳ್ಳದೆ ಬೇರೆ ದೇಶಕ್ಕೆ ಹೋಗಿ ಮ್ಯಾಚ್ ಆಡಿದ್ರೂ ಈ ಮಟ್ಟಿಗೆ ಮುಖಭಂಗ ಆಗ್ತಿರಲಿಲ್ಲ. ಹತ್ತಾರು ಗೊಂದಲಗಳ ನಡುವೆ ತವರಿನಲ್ಲೇ ಟೂರ್ನಿ ಆಯೋಜಿಸಿ ಸಾಲು ಸಾಲು ಅವಮಾನ ಅನುಭವಿಸಿದೆ. ಒಂದೂ ಪಂದ್ಯ ಗೆಲ್ಲಲಿಲ್ಲ. ಫೈನಲ್ ಮ್ಯಾಚೂ ನಡೀತಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿದ್ದಕ್ಕೆ ಲಾಭವೂ ಆಗ್ಲಿಲ್ಲ. ಐಸಿಸಿ ಕೊಟ್ಟ ಹಣ ಬಿಟ್ರೆ ಪಾಕ್ಗೆ ಗಳಿಸಿಕೊಳ್ಳೋಕೆ ಅವಕಾಶವೇ ಸಿಗ್ಲಿಲ್ಲ.