ಬಂಗಾರದ ಬೆಡಗಿ ರನ್ಯಾ ಫ್ಲಾಟ್ ಮೇಲೆ ದಾಳಿ – 2.06 ಕೋಟಿ ರೂ. ಮೌಲ್ಯದ ಚಿನ್ನ- 2.67 ಕೋಟಿ ರೂ. ನಗದು ವಶ

ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರ ಬೆಂಗಳೂರಿನ ನಿವಾಸದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ಬುಧವಾರ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದೆ. ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ತಪಾಸಣೆ ಮಾಡಿದಾಗ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ಬಳಿಕ ನಟಿಯನ್ನು ಬಂಧಿಸಲಾಗಿತ್ತು.
ರನ್ಯಾ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ಐಷಾರಾಮಿ ಫ್ಲಾಟ್‌ನಿಂದ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.67 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಫ್ಲಾಟ್‌ಗೆ ನಟಿ 4.5 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎಂದು ಎಂದು ವರದಿಯಾಗಿದೆ. 32 ವರ್ಷದ ರನ್ಯಾ ರಾವ್ ಅವರು ಪೊಲೀಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಅವರ ಪುತ್ರಿ. ಆದರೆ, ನಾಲ್ಕು ತಿಂಗಳ ಹಿಂದೆ ನಟಿ ಮದುವೆಯಾದಾಗಿನಿಂದ ಅವರಿಬ್ಬರೂ ಸಂಪರ್ಕದಲ್ಲಿಲ್ಲ ಎನ್ನಲಾಗಿದೆ.
ದುಬೈನ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಕನ್ನಡದ ನಟಿಯೊಬ್ಬರು ಸಕ್ರಿಯರಾಗಿರುವ ಬಗ್ಗೆ ಡಿಆರ್ ಐ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದಷ್ಟೇ ಮಾಹಿತಿ ದೊರೆತಿತ್ತು. ಪದೇ ಪದೆ ದುಬೈಗೆ ಹೋಗಿ ಬರುತ್ತಿದ್ದ ರನ್ಯಾ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಕಳೆದ 15 ದಿನಗಳಲ್ಲಿ ರನ್ಯಾ ರಾವ್ ಅವರು ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದರು.