2023ರ ಸೇಡು ತೀರಿಸುತ್ತಾ ಭಾರತ? – ಆಸಿಸ್ ನ ಈ ಮೂವರೇ ಡೇಂಜರಸ್

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲೇ ಕಾಣದೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಟೀಂ ಇಂಡಿಯಾ, ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಹಾಗೆಯೇ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್, ಬಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇಷ್ಟು ದಿನದ್ದೇ ಒಂದು ಲೆಕ್ಕ. ಇನ್ಮುಂದಿನದ್ದೇ ಒಂದು ಲೆಕ್ಕ. ಸೋಲೇ ಕಾಣದೇ ಮುನ್ನುಗ್ತಿರೋ ಭಾರತ ಒಂದ್ಕಡೆ. ಮೂರು ಮ್ಯಾಚ್ಗಳ ಪೈಕಿ ಒಂದನ್ನ ಗೆದ್ದು ಎರಡು ಪಂದ್ಯ ರದ್ದಾದ್ರೂ ನಾಕೌಟ್ಗೆ ಕಾಲಿಟ್ಟಿರೋ ಕಾಂಗರೂಪಡೆ ಮತ್ತೊಂದ್ಕಡೆ. ಕ್ರಿಕೆಟ್ ಸಾಮ್ರಾಜ್ಯದಲ್ಲಿ ರಾಜ, ಮಹಾರಾಜರಂತೆ ಮೆರೀತಿರೋ ಈ ಮದಗಜಗಳ ಕಾದಾಟಕ್ಕೆ ಐಸಿಸಿ ಟೂರ್ನಿ ಮತ್ತೊಮ್ಮೆ ಸಾಕ್ಷಿಯಾಗ್ತಿದೆ. ಮಂಗಳವಾರ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಲಿದ್ದು, ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅಲ್ದೇ ಭಾರತಕ್ಕೆ 2023ರ ಐಸಿಸಿ ಏಕದಿನ ವಿಶ್ವಕಪ್ ಸೋಲಿನ ಲೆಕ್ಕ ಚುಕ್ತಾ ಮಾಡೋಕೆ ಭಾರತಕ್ಕೆ ಒಂದೊಳ್ಳೆ ಚಾನ್ಸ್ ಸಿಕ್ಕಿದೆ.
ಇದನ್ನೂ ಓದಿ : ICCಯ 10 ಟ್ರೋಫಿ ಗೆದ್ದ ಆಸಿಸ್ – ಭಾರತಕ್ಕೆ 2ನೇ ಸ್ಥಾನ.. ಉಳಿದವರೆಷ್ಟು?
ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಭಾರತ 44 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಇದರೊಂದಿಗೆ ಸತತ ಮೂರನೇ ಜಯ ದಾಖಲಿಸಿ ‘ಎ’ ಗ್ರೂಪ್ನ ಟಾಪರ್ ಆಗಿ ಸೆಮೀಸ್ಗೆ ಕಾಲಿಟ್ಟಿದೆ. ಸೋ ಇಲ್ಲಿ ಬಿ ಗುಂಪಿನಲ್ಲಿ 2ನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ತಂಡವನ್ನ ಎದುರಿಸಲಿದೆ. ಮಾರ್ಚ್ 4ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯದ ಮೂಲಕ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳೋ ಅವಕಾಶ ಸಿಕ್ಕಿದೆ. 2023ರ ನವೆಂಬರ್ 19ರ ನಂತರ ಭಾರತ-ಆಸ್ಪ್ರೇಲಿಯಾ ಏಕದಿನ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಎದುರಾಗುತ್ತಿವೆ.
2023.. ನವೆಂಬರ್ 19. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮರೆಯಲಾಗದ ನೋವು ನೀಡಿತ್ತು. 2023ರ ಏಕದಿನ ವಿಶ್ವಕಪ್ಗೆ ಭಾರತ ಆತಿಥ್ಯ ವಹಿಸಿತ್ತು. ಐಸಿಸಿಯ ಮಹತ್ವದ ಟೂರ್ನಿಯಲ್ಲಿ ಭಾರತ ಅಜೇಯವಾಗಿ ಫಿನಾಲೆಗೆ ಲಗ್ಗೆ ಇಟ್ಟಿತ್ತು. ಆದ್ರೆ ಫೈನಲ್ನಲ್ಲಿ ಎದುರಾಗಿದ್ದ ಆಸ್ಟ್ರೇಲಿಯಾ 140 ಕೋಟಿ ಭಾರತೀಯರಿಗೆ ಆಘಾತ ನೀಡಿತ್ತು. ಪ್ಯಾಟ್ ಕಮಿನ್ಸ್ ನೇತೃತ್ವದ ಆಸಿಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 240 ರನ್ ಗಳಿಸಲಷ್ಟೇ ಶಕ್ತವಾಯ್ತು. ಈ ಸುಲಭ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 47 ರನ್ ಗಳಿಸುವಷ್ಟರಲ್ಲಿ ತನ್ನ 3 ವಿಕೆಟ್ ಕಳೆದುಕೊಂಡಿತ್ತು. ಸೋ ಭಾರತ ಗೆಲ್ಲಬಹುದು ಅನ್ನೋ ಹೋಪ್ಸ್ ಶುರುವಾಗಿತ್ತು. ಬಟ್ ಭಾರತಕ್ಕೆ ಹೆಡ್ ಸ್ಟ್ರೋಕ್ ಕೊಟ್ಟಿದ್ದು ಆಸಿಸ್ನ ಟ್ರಾವಿಸ್ ಹೆಡ್. ಅಂಡರ್ ಪ್ರೆಶರ್ನಲ್ಲಿ ಆಸಿಸ್ ಪರ ಕ್ರೀಸ್‌ಗಿಳಿದ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 137 ರನ್ ಸಿಡಿಸಿದ್ರು. ಟ್ರಾವಿಸ್ ಹೆಡ್ ಶತಕದ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಭಾರತ ತವರಿನಲ್ಲೇ ಮುಖಭಂಗ ಅನುಭವಿಸಿತ್ತು. ಸೋ ಈಗ ಈ ಸೋಲಿನ ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಿದೆ.
ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದ ಹೊಸ್ತಿಲಲ್ಲೇ ಆಸ್ಟ್ರೇಲಿಯಾ ತಂಡದ ಆಟಗಾರ ಮ್ಯಾಥ್ಯೂ ಶಾರ್ಟ್ ಗಾಯಗೊಂಡಿದ್ದಾರೆ. ಇವ್ರ ಬದಲಿಗೆ ಆಲ್‌ರೌಂಡರ್ ಕೂಪರ್ ಕೊನೊಲಿ ತಂಡ ಸೇರ್ಪಡೆಗೊಂಡಿದ್ದಾರೆ. ಫೆಬ್ರವರಿ 28 ರಂದು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಲೆಗ್ ಇಂಜುರಿಗೆ ತುತ್ತಾಗಿದ್ದ ಮ್ಯಾಥ್ಯೂ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ತಂಡದ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಕೂಪರ್ ಕೊನೊಲಿ ಅಧಿಕೃತವಾಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. 24 ವರ್ಷದ ಆಲ್‌ರೌಂಡರ್ ಕೊನೊಲಿ ಆಸ್ಟ್ರೇಲಿಯಾ ಪರ ಮೂರು ಏಕದಿನ ಪಂದ್ಯಗಳು ಸೇರಿ ಒಟ್ಟು ಆರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಎದುರು ಬದುರಾದಾಗಲೆಲ್ಲಾ ಹೈವೋಲ್ಟೇಜ್ ಮ್ಯಾಚ್ ಇದ್ದೇ ಇರುತ್ತೆ. ಇದೀಗ ಮತ್ತೊಮ್ಮೆ ಅಖಾಡ ಸಜ್ಜಾಗಿದೆ. ಬಟ್ ಒನ್ ಡೇ ಇಂಟರ್ನ್ಯಾಷನಲ್ ಕ್ರಿಕೆಟ್ನ ಇತಿಹಾಸ ಕೆದಕಿ ನೋಡಿದ್ರೆ ಭಾರತದ ವಿರುದ್ಧ ಆಸ್ಟ್ರೇಲಿಯಾವೇ ಮೇಲುಗೈ ಸಾಧಿಸಿದೆ. ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಈವರೆಗೆ ಕ್ರಿಕೆಟ್ ಅಂಗಳದಲ್ಲಿ 151 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ಪೈಕಿ ಭಾರತ 57 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ ಆಸ್ಟ್ರೇಲಿಯಾ 84 ಪಂದ್ಯಗಳನ್ನು ಗೆದ್ದು ಬೀಗಿದೆ. 10 ಪಂದ್ಯಗಳು ರಿಸಲ್ಟ್ ಕಂಡಿಲ್ಲ. ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ಎರಡೂ ತಂಡಗಳು ರೆಡಿಯಾಗಿದ್ದು ಗೆದ್ದವರು ಫಿನಾಲೆಗೆ ಲಗ್ಗೆ ಇಡಲಿದ್ದಾರೆ.