ಪಾಕ್ ಫ್ಯಾನ್ಸ್ ಗೆ ಸಿಕ್ಕಿದ್ದೇ 1 ಮ್ಯಾಚ್ – ಬಾಂಗ್ಲಾಗಿಂತ ಕಡೆಯಾದ ಪಾಕ್ ಜರ್ನಿ!

ಪಾಕ್ ಫ್ಯಾನ್ಸ್ ಗೆ ಸಿಕ್ಕಿದ್ದೇ 1 ಮ್ಯಾಚ್ – ಬಾಂಗ್ಲಾಗಿಂತ ಕಡೆಯಾದ ಪಾಕ್ ಜರ್ನಿ!

2023ರ ಏಕದಿನ ವಿಶ್ವಕಪ್​ನಲ್ಲೂ ಹೀನಾಯ ಸೋಲು.. 2024ರ ಟಿ-20 ವಿಶ್ವಕಪ್​ನಲ್ಲೂ ಲೀಗ್ ಹಂತದಲ್ಲೇ ಗೇಟ್​ಪಾಸ್. ಹೋಗ್ಲಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಾದ್ರೂ ಬೆಟರ್ ಪರ್ಫಾಮೆನ್ಸ್ ಕೊಡ್ಬೇಕು ಅನ್ಕೊಂಡಿದ್ದ ಪಾಕಿಸ್ತಾನಕ್ಕೆ ಮಳೆರಾಯನೇ ಶಾಕ್ ಕೊಟ್ಟಿದ್ದಾನೆ. ಅತ್ತ ಕ್ರಿಕೆಟ್​ನಲ್ಲಿ ಇದ್ದೂ ಇಲ್ಲದಂತಿರೋ ಬಾಂಗ್ಲಾದೇಶ ಕೂಡ ಬಂದ ದಾರಿಗೆ ಸುಂಕ ಇಲ್ಲ ಅಂತಾ ತವರಿನ ದಾರಿ ಹಿಡಿದಿದ್ದಾರೆ.

ಇದನ್ನೂ ಓದಿ : ಮಾರ್ಚ್ 2ಕ್ಕೆ ಭಾರತ Vs ನ್ಯೂಜಿಲೆಂಡ್ –  ಟೀಂ ಇಂಡಿಯಾಗಿದ್ಯಾ ಚಾಂಪಿಯನ್ ಚಾನ್ಸ್?

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಗುರುವಾರ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ಧಾಗಿದೆ. ಪಂದ್ಯಕ್ಕೂ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದ ದಾಯಾದಿ ರಾಷ್ಟ್ರಗಳು ಕೇವಲ ಗೌರವಕ್ಕಾಗಿ ಮಾತ್ರ ಈ ಪಂದ್ಯ ಆಡಬೇಕಿತ್ತು. ಟೂರ್ನಿಯಲ್ಲಿ ಕನಿಷ್ಠ ಒಂದಾದರೂ ಗೆಲುವು ಪಡೆದ್ವಿ ಅನ್ನೋ ತೃಪ್ತಿಗೋಸ್ಕರ ಕಾಯ್ತಿದ್ರು. ಆದ್ರೆ ಎರಡೂ ತಂಡಕ್ಕೆ ಮಳೆರಾಯ ಅವಕಾಶ ನೀಡಲಿಲ್ಲ. ಪಾಕ್ ಮತ್ತು ಬಾಂಗ್ಲಾದೇಶ ತಂಡಗಳಿಗೆ ತಲಾ 1 ಅಂಕ ನೀಡಲಾಗಿದ್ದು, ಇದು ಪಾಕಿಸ್ತಾನಿ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ..

30 ವರ್ಷ.. ಬರೋಬ್ಬರಿ 30 ವರ್ಷಗಳ ಕಾಲ ಪಾಕಿಸ್ತಾನಕ್ಕೆ ಐಸಿಸಿ ಟೂರ್ನಿ ಆಯೋಜನೆ ಮಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಸಿಕ್ಕಿರೋ ಅವಕಾಶವನ್ನೂ ಬಳಸಿಕೊಳ್ಳೋಕೆ ಆಗ್ಲಿಲ್ಲ. ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕರಾಚಿಯ ನ್ಯಾಷನಲ್ ಸ್ಟೇಡಿಯಮ್​ನಲ್ಲಿ ಪಾಕಿಸ್ತಾನ ಮೊದಲ ಪಂದ್ಯ ಆಡಿತ್ತು. ಆದ್ರೆ ಆ ಮ್ಯಾಚ್ ಗೆಲ್ಲೋಕೆ ಆಗಿರಲಿಲ್ಲ. ಇನ್ನು ಫೆಬ್ರವರಿ 23ರಂದು ಭಾರತದ ವಿರುದ್ಧದ ಪಂದ್ಯಕ್ಕಾಗಿ ದುಬೈಗೆ ಹಾರಿತ್ತು. ಸೋ ಅಲ್ಲೂ ಭಾರತದ ವಿರುದ್ಧ ಸೋತು ಸೆಮೀಸ್ ಅವಕಾಶ ಕಳೆದುಕೊಂಡಿತ್ತು. ಇದೀಗ ಮೂರನೇ ಪಂದ್ಯದಲ್ಲಾದ್ರೂ ಬಾಂಗ್ಳಾದೇಶದ ವಿರುದ್ಧ ತವರಿನಲ್ಲಿ ಪಂದ್ಯ ಆಡ್ಬೋದು ಅನ್ಕೊಂಡಿದ್ದ ಪಾಕ್​ಗೆ ಮಳೆ ಕೊಟ್ಟ ಶಾಕ್​ಗೆ ಪಂದ್ಯವೇ ಕ್ಯಾನ್ಸನ್ ಆಗಿದೆ. ಈ ಮೂಲಕ ಇಡೀ ಟೂರ್ನಿ ಹೋಸ್ಟ್ ಮಾಡಿದ್ರೂ ಪಾಕ್​ಗೆ ತವರಲ್ಲಿ ಆಡೋಕೆ ಸಿಕ್ಕಿದ್ದು ಒಂದೇ ಪಂದ್ಯ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ಅಂತ್ಯಗೊಂಡಿದೆ. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ ಒಂದು ಅಂಕ ಪಡೆದುಕೊಂಡು ಟೂರ್ನಿಗೆ ವಿದಾಯ ಹೇಳಿವೆ. ಬಾಂಗ್ಲಾದೇಶ ತಂಡ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಡ್ರಾದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರೆ, ಇತ್ತ ಪಾಕಿಸ್ತಾನ -1.87 ನೆಟ್​ ರನ್​ರೇಟ್​ನೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಇನ್ನು ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟರ್‌ಗಳಾದ ಬಾಬರ್ ಅಜಮ್ ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ ಈ ಬಾರಿಯ ಟೂರ್ನಿಯಲ್ಲಿ ಅಬ್ಬರಿಸಲಿಲ್ಲ. ಇಬ್ಬರು ನಿಧನಗತಿ ಬ್ಯಾಟಿಂಗ್ ಮೂಲಕ ರನ್ ಗಳಿಸಿದ್ದು, ತಂಡದ ಸೋಲಿಗೆ ಇದು ಒಂದು ಕಾರಣವಾಗಿದೆ. ಬಾಂಗ್ಲಾದೇಶ ತಂಡದಲ್ಲಿಯೂ ಸಂಘಟಿತ ಪ್ರದರ್ಶನ ಕಾಣಿಸಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡ ಸತತ ಎರಡು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಇನ್ನು ಉಭಯ ತಂಡಗಳ ನಡುವೆ 39 ಏಕದಿನ ಪಂದ್ಯಗಳು ನಡೆದಿದ್ದು, ಪಾಕಿಸ್ತಾನ 34 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ಕೇವಲ ಐದು ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿದೆ. 2015 ರ ದ್ವಿಪಕ್ಷೀಯ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ ಕೊನೆ ಬಾರಿಗೆ ಏಕದಿನ ಸರಣಿ ಗೆಲುವು ಸಾಧಿಸಿದೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿ ಆಗೋ ಮುನ್ನವೇ ಪಂದ್ಯ ರದ್ದಾಗಿದೆ.

Shantha Kumari