CTಯಲ್ಲಿ ಕನ್ನಡಿಗ ರಚಿನ್ ರಣಾರ್ಭಟ- ರಕ್ತ ಬಿದ್ದ ನೆಲದಲ್ಲೇ ಸುನಾಮಿ ಸೆಂಚುರಿ
ರಾಹುಲ್ + ಸಚಿನ್ = ರಚಿನ್ ಆಗಿದ್ದೇಗೆ?

ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ನ್ಯೂಝಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. 237 ರನ್ಗಳ ಗುರಿ ಸುಲಭ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಈ ವೇಳೆ ಅಖಾಡಕ್ಕೆ ಇಳಿದಿದ ರಚಿನ್ ರವೀಂದ್ರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಇನಿಂಗ್ಸ್ನಲ್ಲಿ 105 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ 1 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 112 ರನ್ ಬಾರಿಸಿದರು. ಈ ಶತಕದೊಂದಿಗೆ ಯುವ ಎಡಗೈ ದಾಂಡಿಗ ಹಲವು ದಾಖಲೆಗಳನ್ನು ಬರೆದರು. ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಸಹ ಮುರಿದರು. ಹೌದು, ಐಸಿಸಿ ಟೂರ್ನಿಯಲ್ಲಿ ಇದು ರಚಿನ್ ರವೀಂದ್ರ ಅವರ 4ನೇ ಶತಕ. ಇದರೊಂದಿಗೆ 25 ವಯಸ್ಸಿನೊಳಗೆ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ಶತಕ ಸಿಡಿಸಿದ ದಾಖಲೆ ರಚಿನ್ ರವೀಂದ್ರ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 25 ವಯಸ್ಸಿನೊಳಗೆ ಐಸಿಸಿ ಟೂರ್ನಿಯಲ್ಲಿ ಒಟ್ಟು 3 ಶತಕ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಮಾಸ್ಟರ್ ಬ್ಲಾಸ್ಟರ್ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಮುರಿದು ರಚಿನ್ ರವೀಂದ್ರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗೆಯೇ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯ ಹಾಗೂ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರಚಿನ್ ರವೀಂದ್ರ ಪಾತ್ರರಾಗಿದ್ದಾರೆ. ಇದರ ಜೊತೆಗೆ ಐಸಿಸಿ ಟೂರ್ನಿಯಲ್ಲಿ ನ್ಯೂಝಿಲೆಂಡ್ ಪರ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಚಿನ್ ತಂದೆ ಬೆಂಗಳೂರಿನವರು
ರಚಿನ್ ರವೀಂದ್ರ ಜನಿಸಿದ್ದು, ವೆಲ್ಲಿಂಗ್ಟನ್‌ನಲ್ಲಿ. ಆದರೆ ಅವರ ತಂದೆ ಬೆಂಗಳೂರಿನವರು. ಸಾಫ್ಟ್‌ವೇರ್ ಇಂಜಿನಿಯರ್ ಆದ ರಚಿನ್ ತಂದೆ ರವಿ ಕೃಷ್ಣಮೂರ್ತಿ, 1990ರಲ್ಲಿ ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದರು. ನ್ಯೂಜಿಲೆಂಡ್‌ನಲ್ಲಿ ಹಟ್ ಹಾಕ್ಸ್ ಕ್ಲಬ್ ಸಂಸ್ಥೆಯ ಸಂಸ್ಥಾಪಕರು ಎಂಬುದು ವಿಶೇಷ. ನ್ಯೂಜಿಲೆಂಡ್ ನಾಡಿಗೆ ತೆರಳುವ ಮುನ್ನ ರವಿ ಕೃಷ್ಣಮೂರ್ತಿ ಅವರು ಬೆಂಗಳೂರಿನಲ್ಲಿ ಕ್ರಿಕೆಟಿಗನಾಗಿದ್ದರು. ಅವರಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ ಆಗಿದ್ದ ಕಾರಣ ಮಗನನ್ನೂ ಕ್ರಿಕೆಟರ್ ಮಾಡಿಸಿದ್ದಾರೆ. ತಾಯಿ ದೀಪಾ ಕೃಷ್ಣಮೂರ್ತಿ. ಅವರು ಸಾಫ್ಟ್‌ವೇರ್ ಇಂಜಿನಿಯರ್ ಎಂಬುದು ವಿಶೇಷ.
ಸಚಿನ್-ದ್ರಾವಿಡ್ ಹೆಸರು ಸೇರಿದ್ರೆ ರಚಿನ್
ರಚಿನ್ ಹೆಸರಿನಲ್ಲಿ ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರ ಹೆಸರು ಕಾಣಿಸಿಕೊಳ್ಳುತ್ತದೆ. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ಸೇರಿಸಿ ರಚಿನ್ ಎಂದು ಹೆಸರಿಟ್ಟಿದ್ದರು. ರಾಹುಲ್ ದ್ರಾವಿಡ್ ಹೆಸರಿನಿಂದ ‘ರ’ ಮತ್ತು ಸಚಿನ್ ತೆಂಡೂಲ್ಕರ್ ಹೆಸರಿನಿಂದ ‘ಚಿನ್’ ಅಕ್ಷರಗಳನ್ನು ಪಡೆದು ರವಿ ಕೃಷ್ಣಮೂರ್ತಿ ಅವರು ತಮ್ಮ ಮಗನಿಗೆ ರಚಿನ್ ಎಂದು ಹೆಸರಿಟ್ಟಿದ್ದರು. ಹೀಗೆ ಹೆಸರಿಡಲು ಕಾರಣ ದ್ರಾವಿಡ್ ಮತ್ತು ಸಚಿನ್‌ಗೆ ದೊಡ್ಡ ಅಭಿಯಾನಿಯಾಗಿದ್ದರು. ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಅಬ್ಬರಿಸಿದ ರಚಿನ್, ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಸ್ವತಃ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ನನ್ನ ಬ್ಯಾಟಿಂಗ್ ಆರಾಧ್ಯ ದೈವ. ಬಾಲ್ಯದಿಂದಲೂ ಸಚಿನ್ ಅವರ ಬ್ಯಾಟಿಂಗ್ ನೋಡುತ್ತಲೇ ನನ್ನ ಆಟವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದೇನೆ. ಬಂದಿದ್ದೇನೆ ಎಂದು 2016ರಲ್ಲಿ ಅಂಡರ್-19 ವಿಶ್ವಕಪ್ ಟೂರ್ನಿ ವೇಳೆ ರಚಿನ್ ಹೇಳಿಕೊಂಡಿದ್ದರು.
ಅಂಡರ್-19 ವಿಶ್ವಕಪ್ ಆಡಿದ್ದ ರಚಿನ್
ನ್ಯೂಜಿಲೆಂಡ್ ತಂಡದ ಪರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ರಚಿನ್ ಆಡಿದ್ದಾರೆ. 2016 ಮತ್ತು 2018ರ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಕಿವೀಸ್ ದೇಶೀ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು. 2021ರಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಕಿವೀಸ್ ಪರ ಪದಾರ್ಪಣೆ ಮಾಡಿದರು. ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಬ್ಯಾಟಿಂಗ್ ಮೂಲಕ ಸಖತ್ ಸೌಂಡ್ ಮಾಡುತ್ತಿದ್ದಾರೆ.