ಮಾರ್ಚ್ 2ಕ್ಕೆ ಭಾರತ Vs ನ್ಯೂಜಿಲೆಂಡ್ – ಟೀಂ ಇಂಡಿಯಾಗಿದ್ಯಾ ಚಾಂಪಿಯನ್ ಚಾನ್ಸ್?

ಭಾನುವಾರ ದುಬೈನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಪಾಕಿಸ್ತಾನ ಅಲ್ಲೇ ಆಲ್ಮೋಸ್ಟ್ ಟೂರ್ನಿಯಿಂದ ಹೊರಬಿದ್ದಿತ್ತು. ಬಟ್ ಸೋಮವಾರ ನಡೆದ ನ್ಯೂಜಿಲೆಂಡ್ ಮತ್ತು ಬಾಂಗ್ಲಾ ನಡುವಿನ ಪಂದ್ಯದ ಬಳಿಕ ಈ ಗೇಟ್ಪಾಸ್ ಕನ್ಫರ್ಮ್ ಆಗಿದೆ. ಪಾಕ್ ಪಾಲಿಗೆ ಇನ್ನೊಂದು ಲೀಗ್ ಹಂತದ ಪಂದ್ಯ ಬಾಕಿ ಉಳಿದಿದ್ದು ಈ ಮ್ಯಾಚ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಡ್ಬೇಕು ಅಷ್ಟೇ.
ಇದನ್ನೂ ಓದಿ : ಹಾರ್ದಿಕ್ ಹೊಸ ಗರ್ಲ್‌ಫ್ರೆಂಡ್ ಕಿಸ್.. ಪಾಂಡ್ಯಗೆ ಫಾರಿನ್ ಹುಡ್ಗಿನೇ ಯಾಕೆ?
ಐಸಿಸಿ ಚಾಂಪಿಯನ್ಸ್ ಟ್ರೋಫಿಯ 8 ಟೀಮ್ಗಳ ಪೈಕಿ ನ್ಯೂಜಿಲೆಂಡ್ ಕೂಡ ಬಲಿಷ್ಠವಾಗಿದೆ. ಸೋಮವಾರ ಟೂರ್ನಿಯ ಆರನೇ ಪಂದ್ಯವು ರಾವಲ್ಪಿಂಡಿಯಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯಿತು. ಈ ಮ್ಯಾಚ್ನಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಬಗ್ಗು ಬಡಿದ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾದೊಂದಿಗೆ ಸೆಮಿಫೈನಲ್ಗೇರಿದೆ. ಇತ್ತ ಸತತ ಎರಡು ಪಂದ್ಯಗಳನ್ನ ಸೋತ ಬಾಂಗ್ಲಾದೇಶ ತನ್ನೊಂದಿಗೆ ಆತಿಥೇಯ ಪಾಕಿಸ್ತಾನವನ್ನು ಟೂರ್ನಿಯಿಂದ ಹೊರಗೆ ಕರೆದುಕೊಂಡು ಹೋಗಿದೆ. 2025 ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಸ್ಪರ್ಧೆಯಲ್ಲಿ ಜೀವಂತವಾಗಿ ಪಾಕ್ ಉಳೀಬೇಕಿದ್ರೆ ಬಾಂಗ್ಲಾದೇಶ ಗೆಲ್ಲಬೇಕಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಪಾಕಿಸ್ತಾನದ ಆಸೆಯನ್ನೂ ಕಮರುವಂತೆ ಮಾಡಿತು. ರಚಿನ್ ರವೀಂದ್ರ ಅವರ ಅದ್ಭುತ ಬ್ಯಾಟಿಂಗ್ ಮತ್ತು ಶತಕದಿಂದ ನ್ಯೂಜಿಲೆಂಡ್ ಬಾಂಗ್ಲಾವನ್ನ ಮಣಿಸಿತು.
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದರೆ, ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿತು. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ಮೊದಲು ಭಾರತದ ವಿರುದ್ಧ ನಂತ್ರ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಸೋತಿದೆ. ಈಗ ಈ ಎರಡೂ ತಂಡಗಳು ಗುಂಪು ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಪರಸ್ಪರ ವಿರುದ್ಧ ಆಡಲಿವೆ. ಈ ಪಂದ್ಯ ಫೆಬ್ರವರಿ 27ರಂದು ನಡೆಯಲಿದ್ದು, ಇದು ಪಾಯಿಂಟ್ ಟೇಬಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ 2ಕ್ಕೆ ಎರಡನ್ನೂ ಗೆದ್ದು ಗ್ರೂಪ್ ಎ ಅಂಕಪಟ್ಟಿಯಲ್ಲಿ ಟಾಪ್ 2 ನಲ್ಲಿರೋ ರೋಹಿತ್ ಪಡೆ, ಐಸಿಸಿ ಟೂರ್ನಿಗಳಲ್ಲಿ ಪದೆಪದೇ ಕಂಟಕವಾಗುವ ಕಿವೀಸ್ ತಂಡದ ವಿರುದ್ಧ ಮಾರ್ಚ್ 2ರಂದು ಸೆಣಸಲಿದೆ. ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೇ ಪಂದ್ಯ. ಸತತ ಎರಡು ಗೆಲುವುಗಳೊಂದಿಗೆ ಸೆಮಿಫೈನಲ್ ಗೆ ಏರಿರುವ ಭಾರತ ಈ ಪಂದ್ಯವನ್ನೂ ಗೆದ್ದು ಟೇಬಲ್ ಟಾಪರ್ ಆಗಿ ನಾಕೌಟ್ಗೇರಲು ಪ್ಲ್ಯಾನ್ ಮಾಡಿದೆ. ಅತ್ತ ನ್ಯೂಜಿಲೆಂಡ್ ಕೂಡ ತನ್ನ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಭಾರತವತ್ತೂ ಸೋಲಿಸೋ ಲೆಕ್ಕಾಚಾರದಲ್ಲಿದೆ. ಬಟ್ ಇದೇ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಎರಡೂ ಸೆಮಿಫೈನಲ್‌ನಿಂದ ಅಧಿಕೃತವಾಗಿ ಹೊರಬಿದ್ದಿವೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಲೀಗ್ ಹಂತದ ಕೊನೇ ಪಂದ್ಯ ಮಾರ್ಚ್ 2ರಂದು ಮಧ್ಯಾಹ್ನ 2.30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳಲ್ಲಿ ಯಾರೇ ಗೆದ್ದರೂ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಕ್ವಾಲಿಫೈ ಆಗ್ತಾರೆ. ಸೋಲುವ ತಂಡವು ಎರಡನೇ ಸ್ಥಾನ ಪಡೆದು ನಾಲ್ಕರ ಘಟ್ಟಕ್ಕೇರಲಿದೆ. ಉಭಯ ತಂಡಗಳ ನಡುವಿನ ಒಡಿಐ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಈವರೆಗೂ 118 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 60 ರಲ್ಲಿ ಗೆದ್ದು ಬೀಗಿದೆ. ಕಿವೀಸ್ 50 ಪಂದ್ಯಗಳಲ್ಲಿ ಜಯ ಕಂಡಿದೆ. 7 ಪಂದ್ಯಗಳಲ್ಲಿ ಯಾವುದೇ ರಿಸಲ್ಟ್ ಬಂದಿಲ್ಲ. ಒಂದು ಪಂದ್ಯ ಟೈ ಆಗಿದೆ. ಬಟ್ 2024ರ ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದಲ್ಲೇ ಟೆಸ್ಟ್ ಸರಣಿಯಲ್ಲಿ ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಭಾರತವನ್ನು ಸೋಲಿಸಿತ್ತು.