ಕಲಾಪದ ವೇಳೆ ಫೇಸ್ ಬುಕ್ ಲೈವ್ – ಶಾಸಕನನ್ನು ಅಮಾನತುಗೊಳಿಸಿದ ಸ್ಪೀಕರ್

ಕಲಾಪದ ವೇಳೆ ಫೇಸ್ ಬುಕ್ ಲೈವ್ – ಶಾಸಕನನ್ನು ಅಮಾನತುಗೊಳಿಸಿದ ಸ್ಪೀಕರ್

ಲಕ್ನೋ: ವಿಧಾನ ಸಭೆಯ ಕಲಾಪ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಾಸಕನನ್ನು ಸ್ಪೀಕರ್ ತಕ್ಷಣವೇ ಅಮಾನತುಗೊಳಿಸಿದ್ದಾರೆ.

ಮಂಗಳವಾರ ವಿಧಾನ ಸಭೆಯ ಕಲಾಪ ನಡೆಯುತ್ತಿತ್ತು. ಈ ವೇಳೆ  ಸರ್ಧಾನ್‌ನ (ಮೀರತ್) ಎಸ್‌ಪಿ ಶಾಸಕ ಅತುಲ್ ಪ್ರಧಾನ್ ತಮ್ಮ ಫೇಸ್‌ಬುಕ್ ಲೈವ್ ಮಾಡಿದ್ದಾರೆ. ವಿಧಾನಸೌಧದ ಒಳಗಡೆ ಸುಮಾರು 2.22 ನಿಮಿಷದವರೆಗೆ ಲೈವ್ ನಡೆಸಿದ್ದಾರೆ. ಲೈವ್ ನಡೆಸುತ್ತಿದ್ದ ಸಂದರ್ಭ ಫೋನ್ ಯಾರಿಗೂ ಕಾಣಿಸದಂತೆ ಸೊಂಟದಲ್ಲಿ ಹಿಡಿದುಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಸ್ಪೀಕರ್ ಸತೀಶ್ ಮಹಾನ್ ವಿಧಾನಸೌಧದಿಂದ ಹೊರನಡೆಯುವಂತೆ ಆದೇಶಿಸಿದ್ದಾರೆ. ಸ್ಪೀಕರ್ ಆದೇಶದಂತೆ ಅತುಲ್ ಅಲ್ಲಿಂದ ಹೊರನಡೆದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ ‘ಹಳ್ಳಿ ಹಕ್ಕಿ’ ವಿಶ್ವನಾಥ್ – ಹಳೇ ಶತ್ರುಗಳ ನಡುವೆ ಸಂಧಾನ ನಡೆಯಿತಾ?

ವರದಿಗಳ ಪ್ರಕಾರ ಕಲಾಪ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಸದಸ್ಯರು ರಾಮ್‌ಪುರ ಉಪಚುನಾಣೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ನಡವಳಿಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪ್ರಧಾನ್ ಫೇಸ್‌ಬುಕ್ ಲೈವ್ ನಡೆಸಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಈ ವಿಚಾರ ಸ್ಪೀಕರ್ ಗಮನಕ್ಕೆ ಬರುತ್ತಿದ್ದಂತೆಯೇ ಪ್ರಧಾನ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಬಳಿಕ ತಾವು ಹೊಸ ಸದಸ್ಯರಾಗಿದ್ದು, ವಿಧಾನಸಭೆಯ ನಿಯಮಾವಳಿಗಳ ಬಗ್ಗೆ ಹೆಚ್ಚಿನ ಅರಿವಿಲ್ಲವೆಂದೂ ತಿಳಿಸಿದ್ದಾರೆ. ಸ್ಪೀಕರ್ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕೆಂದು ಅತುಲ್ ಕೇಳಿಕೊಂಡಿದ್ದು, ಇದಾದ ಒಂದು ಗಂಟೆಯ ಬಳಿಕ ಅತುಲ್ ಅವರಿಗೆ ಸದನಕ್ಕೆ ಹಾಜರಾಗಲು ಸ್ಪೀಕರ್ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

suddiyaana