IND Vs PAK.. ಅದೆಷ್ಟು ವಿವಾದ – ಹೈಬ್ರಿಡ್.. ಜೆರ್ಸಿ.. ಧ್ವಜ.. ಗೆದ್ದಿದ್ಯಾರು?
ಹೇಗಿತ್ತು ಚಾಂಪಿಯನ್ಸ್ ಟ್ರೋಫಿ ಜರ್ನಿ?

ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಾಕಿಸ್ತಾನಕ್ಕೆ ಸಿಕ್ಕಿದ್ದೇ ಸಿಕ್ಕಿದ್ದು. ಅಲ್ಲಿಂದಲೇ ಶುರುವಾಗಿತ್ತು ಒಂದಿಲ್ಲೊಂದು ತಗಾದೆ. ಮೊದ್ಲಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವೊಂದು ವಿಚಾರದಲ್ಲೂ ತಾಳಮೇಳ ಸರಿಯಾಗಲ್ಲ. ಅದ್ರಲ್ಲೂ ಕ್ರಿಕೆಟ್ ಅಂತಾ ಬಂದ್ರೆ ಅದು ಇನ್ನೂ ಒಂದು ಕೈ ಜಾಸ್ತಿನೇ ಇರುತ್ತೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಗಿದ್ದೂ ಅದೇ. ಕಳೆದ ಐದಾರು ತಿಂಗಳಿಂದಲೂ ಒಂದಿಲ್ಲೊಂದು ವಿಚಾರವಾಗಿ ಎರಡೂ ರಾಷ್ಟ್ರಗಳು ಸುದ್ದಿಯಾಗ್ತಾನೇ ಇವೆ. ಐಸಿಸಿ ಟೂರ್ನಿ ವಿಚಾರವಾಗಿ ಎರಡೂ ರಾಷ್ಟ್ರಗಳ ನಡುವೆ ಏನೆಲ್ಲಾ ವಿವಾದಗಳು ನಡೆದಿವೆ.
ಇದನ್ನೂ ಓದಿ : ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನ – ತವರಲ್ಲೇ ಮಂಧನಾ ಪಡೆಗೆ ವೀರೋಚಿತ ಸೋಲು
ಯೆಸ್.. 2024 ಜೂನ್ನಿಂದ ಹಿಡ್ದು ಡಿಸೆಂಬರ್ವರೆಗೂ ಕ್ರಿಕೆಟ್ ಲೋಕದಲ್ಲಿ ಮೋಸ್ಟ್ ಆಫ್ ದಿ ಟೈಂ ಚರ್ಚೆಯಾಗಿದ್ದು ಇದೇ ಟಾಪಿಕ್. 1996 ರ ನಂತ್ರ ಫಸ್ಟ್ ಟೈಂ ಐಸಿಸಿ ಟೂರ್ನಿ ಆಯೋಜನೆ ಮಾಡ್ತಿದ್ದೇವೆ. ಸೋ ಟೀಂ ಇಂಡಿಯಾ ಪ್ಲೇಯರ್ಸ್ ಕೂಡ ಪಾಕಿಸ್ತಾನಕ್ಕೇ ಬಂದು ಆಡ್ಬೇಕು ಅನ್ನೋದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಡಿಮ್ಯಾಂಡ್ ಆಗಿತ್ತು. ಬಟ್ 2008ರ ಬಳಿಕ ಭಾರತ ಈವರೆಗೂ ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಲು ಕಾಲಿಟ್ಟಿಲ್ಲ. ಇದಕ್ಕೆ ಮೇನ್ ರೀಸನ್ ಭದ್ರತೆ. ದಿನಬೆಳಗಾದ್ರೆ ಪಾಕ್ ಜನರಿಗೇ ಭದ್ರತೆ ಇಲ್ಲ. ಸೋ ಅಂಥಾ ರಿಸ್ಕಿ ದೇಶಕ್ಕೆ ನಮ್ಮ ಆಟಗಾರರನ್ನ ಕಳಿಸೋಕೆ ಭಾರತ ಸರ್ಕಾರವೂ ಸಿದ್ಧವಿಲ್ಲ. ಹೀಗಾಗೇ ಹೈಬ್ರಿಡ್ ಮಾದರಿಯಲ್ಲಿ ಭಾರತ ಟೂರ್ನಿ ಆಯೋಜನೆಗೆ ಪಟ್ಟು ಹಿಡಿದಿತ್ತು. ಇದಕ್ಕೆ ಸುತಾರಾಂ ಒಪ್ಪದ ಪಿಸಿಬಿ ಐಸಿಸಿವರೆಗೂ ಇದನ್ನ ತೆಗೆದುಕೊಂಡು ಹೋಗಿತ್ತು. ಬಟ್ ಅಂತಿಮವಾಗಿ ಭಾರತವೇ ಮೇಲುಗೈ ಸಾಧಿಸಿತ್ತು. ಭಾರತದ ಪಂದ್ಯಗಳನ್ನ ದುಬೈನಲ್ಲಿ ಆಡಿಸೋಕೆ ಒಪ್ಪಿಗೆ ನೀಡಲಾಯ್ತು. ಇದೇ ಕಾರಣಕ್ಕೆ ಟೂರ್ನಿ ಆಯೋಜನೆ ಮಾಡಿರೋದು ಪಾಕಿಸ್ತಾನವೇ ಆದ್ರೂ ಭಾರತದ ವಿರುದ್ಧ ಪಂದ್ಯಗಳನ್ನ ಆಡೋಕೆ ತಾನೂ ದುಬೈಗೆ ಹಾರಬೇಕಾಯ್ತು.
ಭಾರತದ ಆಟಗಾರರ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರನ್ನು ಹಾಕಿಸೋ ವಿಚಾರ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ನಾರ್ಮಲಿ ಐಸಿಸಿ ಟೂರ್ನಿಗಳಲ್ಲಿ ಯಾವುದೇ ಅತಿಥೇಯ ರಾಷ್ಟ್ರದ ಹೆಸರನ್ನ ಆ ಟೂರ್ನಿಯಲ್ಲಿ ಭಾಗವಹಿಸೋ ಎಲ್ಲಾ ರಾಷ್ಟ್ರಗಳ ಆಟಗಾರರ ಜೆರ್ಸಿಗಳ ಮೇಲೆ ಹಾಕಿಸಲಾಗುತ್ತೆ. ಆದ್ರೆ ಪಾಕ್ ಹೆಸರನ್ನ ಹಾಕಿಸೋಕೆ ಭಾರತ ಸಿದ್ಧವಿರಲಿಲ್ಲ. ಯಾಕಂದ್ರೆ ಟೂರ್ನಿಗೆ ಪಾಕಿಸ್ತಾನವೇ ಆತಿಥ್ಯ ವಹಿಸಿದ್ರೂ ಕೂಡ ಭಾರತ ತಂಡ ಪಾಕ್‌ಗೆ ತೆರಳುವುದಿಲ್ಲ, ಬದಲಾಗಿ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಹೀಗಾಗಿ ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಇರುವವುದಿಲ್ಲ ಎಂದು ಸುದ್ದಿಯಾಗಿತ್ತು. ಆದ್ರೆ ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡ ಬಿಸಿಸಿಐಗೆ ಇದನ್ನೇ ಹೇಳಿತ್ತು. ಅದ್ರಂತೆ ಅಂತಿಮವಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜೊತೆ ಪಾಕ್ ಹೆಸರು ಸಹ ಭಾರತದ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.
ಯಾವುದೇ ಐಸಿಸಿ ಟೂರ್ನಿ ನಡೆದ್ರೂ ಯಾವ ರಾಷ್ಟ್ರದಲ್ಲಿ ಆಯೋಜನೆಯಾಗಿರುತ್ತೋ ಆ ರಾಷ್ಟ್ರದಲ್ಲಿ ಪಂದ್ಯ ನಡೆಯುವ ಕ್ರೀಡಾಂಗಣಗಳಲ್ಲಿ ಎಲ್ಲಾ ದೇಶಗಳ ರಾಷ್ಟ್ರಧ್ವಜವನ್ನ ಹಾರಿಸೋದು ನಿಯಮ. ಆದ್ರೆ ಪಾಕಿಸ್ತಾನ ಈ ರೂಲ್ಸ್ನ ಬ್ರೇಕ್ ಮಾಡಿತ್ತು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 8 ರಾಷ್ಟ್ರಗಳು ಭಾಗವಹಿಸಿದ್ರೂ ಕೂಡ ಭಾರತ ಹೊರತುಪಡಿಸಿ ಉಳಿದ ಏಳು ರಾಷ್ಟ್ರಗಳ ಧ್ವಜವನ್ನ ಪಾಕ್ನ ಗಡ್ಡಾಫಿ ಮತ್ತು ಕರಾಚಿ ಮೈದಾನಗಳಲ್ಲಿ ಹಾರಿಸಲಾಗಿತ್ತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತು. ಇದೇ ವಿಚಾರವಾಗಿ ಹಲವಾರು ಕ್ರಿಕೆಟರ್ಸ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ದೇ ಟೀಂ ಇಂಡಿಯಾ ಫ್ಯಾನ್ಸ್ ಪಾಕ್ನಲ್ಲಿ ನಮ್ಮ ಧ್ವಜ ಹಾರಿಸಲ್ಲ ಎಂದ ಮೇಲೆ ನಮ್ಮ ಆಟಗಾರರ ಜೆರ್ಸಿ ಮೇಲೆಯೂ ಅವ್ರ ರಾಷ್ಟ್ರದ ಹೆಸರು ಬೇಡ. ತೆಗೆದು ಹಾಕಿ ಎಂದು ಟ್ವೀಟ್ಗಳನ್ನ ಮಾಡಿದ್ರು. ಇಷ್ಟೆಲ್ಲಾ ಆದ ಮೇಲೆ ಕೊನೆಗೂ ಎಚ್ಚೆತ್ತ ಪಾಕಿಸ್ತಾನ ಭಾರತದ ಧ್ವಜವನ್ನೂ ಹಾರಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಂಟ್ರವರ್ಸಿಗಳಲ್ಲಿ ಇದೂ ಒಂದು. ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಹೋಗಲ್ಲ ಅನ್ನೋದು ಕನ್ಫರ್ಮ್ ಆದ್ರೂ ಕೂಡ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತ್ರ ಒಂದು ದಿನ ಪಾಕಿಸ್ತಾನಕ್ಕೆ ಹೋಗ್ತಾರೆ ಎನ್ನಲಾಗಿತ್ತು. ಅದೂ ಕೂಡ ಉದ್ಘಾಟನಾ ಪಂದ್ಯ ಮತ್ತು ಫೋಟೋಶೂಟ್ಗಾಗಿ. ಪಂದ್ಯಾವಳಿಯ ಪ್ರೀ ಫೋಟೋಶೂಟ್ ಮತ್ತು ಎಲ್ಲಾ ತಂಡಗಳ ನಾಯಕರನ್ನು ಒಳಗೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ರೋಹಿತ್ ಶರ್ಮಾ ಪಾಕ್‌ಗೆ ಹೋಗ್ತಾರೆ ಎನ್ನಲಾಗಿತ್ತು. ಇದಕ್ಕೆ ಪರವಿರೋಧಗಳೂ ವ್ಯಕ್ತವಾಗಿತ್ತು. ಆದ್ರೆ ಅಂತಿಮವಾಗಿ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಹೋಗಲಿಲ್ಲ.
ಭದ್ರತೆಯ ಕಾರಣಕ್ಕೋಸ್ಕರ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಇಡೀ ಟೂರ್ನಿಯೇ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲ ಐಸಿಸಿ ಪ್ಯಾನಲ್ ನಲ್ಲಿರುವ ರೆಫ್ರಿ ಜಾವಗಲ್ ಶ್ರೀನಾಥ್ ಮತ್ತು ಅಂಪಾಯರ್ ಗಳ ಪ್ಯಾನಲ್ ನಲ್ಲಿರುವ ನಿತಿನ್ ಮೆನನ್ ಕೂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದಾರೆ. ಹೀಗಾಗಿ ಮಹತ್ವದ ಟೂರ್ನಿಯೊಂದು ಭಾರತದ ರೆಫ್ರಿ ಮತ್ತು ಅಂಪಾಯರ್ ಗಳಿಲ್ಲದೆ ನಡೀತಾ ಇದೆ. ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಟೂರ್ನಿಗೆ 12 ಅಂಪೈರ್ಗಳು ಮತ್ತು ಮೂವರು ಮ್ಯಾಚ್ ರೆಫರಿಗಳ ನೇಮಕ ಮಾಡಲಾಗಿದೆ. ಪಾಕಿಸ್ತಾನ ವಿರುದ್ಧದ ಭಾರತದ ಪಂದ್ಯಕ್ಕೆ ದುಬೈ ಆನ್‌ಫೀಲ್ಡ್ ಅಂಪೈರ್‌ಗಳಾಗಿ ಪಾಲ್ ರೀಫೆಲ್ ಮತ್ತು ರಿಚರ್ಡ್ ಇಲ್ಲಿಂಗ್ ವರ್ತ್ ನೇಮಕವಾಗಿದ್ದಾರೆ. ಟಿವಿ ಅಂಪೈರ್ ಆಗಿ ಮೈಕೆಲ್ ಗೌಫ್, ನಾಲ್ಕನೇ ಅಂಪೈರ್ ಆಗಿ ಆಡ್ರಿಯನ್ ಹೋಲ್ಡ್ ಸ್ಟಾಕ್ ಮತ್ತು ಮ್ಯಾಚ್ ರೆಫರಿಯಾಗಿ ಡೇವಿಡ್ ಬೂನ್ ಸೆಲೆಕ್ಟ್ ಆಗಿದ್ದಾರೆ.