ಅಪ್ಪನ ಸಾವು.. ಅಣ್ಣನ ತ್ಯಾಗ.. ಕ್ರಿಕೆಟ್ ಗಾಗಿ ಮನೆಬಿಟ್ಟ ರೇಣುಕಾ! – RCB ಆಟಗಾರ್ತಿ ರಿಯಲ್ ಸ್ಟೋರಿ!

WPL ಹಬ್ಬ ಈಗಾಗ್ಲೇ ಶುರುವಾಗಿದೆ. ನಮ್ಮ ಆರ್ಸಿಬಿ ಸಿಂಹಿಣಿಯರು ಹೊಡಿ ಬಡಿ ಆಟ ಆಡ್ತಿದ್ದಾರೆ. ಈಗಾಗ್ಲೇ ಎರಡು ಪಂದ್ಯ ಗೆದ್ದಾಗಿದೆ.. ಈ ಸಲವೂ ಕಪ್ ನಮ್ದೇ ಅನ್ನೋ ಘೋಷವಾಕ್ಯ ಮೊಳಗ್ತಿದೆ.. ಇದೀಗ ಆರ್ಸಿಬಿ ಆಟಗಾರ್ತಿಯರು ತಮ್ಮ ಆಟದ ಜೊತೆಗೆ ಬ್ಯೂಟಿಯಿಂದಲೂ ಸಖತ್ ಸದ್ದು ಮಾಡ್ತಿದ್ದಾರೆ.. ಸ್ಮೃತಿ ಮಂದಾನ ಹೇಗಿದ್ದರೂ ಆಟದಲ್ಲು ಸೂಪರ್.. ಸೌಂದರ್ಯದಲ್ಲೂ ಕ್ವೀನ್ ಅನ್ನೋದು ಗೊತ್ತಿರೋ ಸಂಗತಿ.. ಮಂದಾನ ಜೊತೆ ಗಮನ ಸೆಳೆಯುತ್ತಿರುವ ಇನ್ನೋರ್ವ ಪ್ಲೇಯರ್ ಅಂದ್ರೆ ರೇಣುಕಾ ಸಿಂಗ್ ಠಾಕೂರ್.. ರೇಣುಕಾ ಮೊದಲ ಪಂದ್ಯದಲ್ಲಿ ಎರಡು ವಿಕೆಟ್, ಎರಡನೇ ಮ್ಯಾಚ್‌ನಲ್ಲಿ 3 ವಿಕೆಟ್ ಕಬಳಿಸುತ್ತಿದ್ದಂತೆ ಈ ಪ್ಲೇಯರ್ ಯಾರು? ಆಕೆಯ ಹಿನ್ನೆಲೆ ಏನು ಅಂತಾ ಕ್ರಿಕೆಟ್ ಅಭಿಮಾನಿಗಳು ಹುಡುಕ್ತಿದ್ದಾರೆ. ರೇಣುಕಾ ಲೈಫ್ ಜರ್ನಿ ನಿಜಕ್ಕೂ ರೋಚಕವಾಗಿದೆ.. ಕಷ್ಟದ ಹಾದಿಯಲ್ಲಿ ಬೆಳೆದು ಬಂದ ರೇಣುಕಾ ಸಾಕಷ್ಟು ಸವಾಲುಗಳನ್ನ ಫೇಸ್ ಮಾಡಿದ್ದಾರೆ. ಅವರ ಲೈಫ್ ಸ್ಟೋರಿ ಜೊತೆ ಕ್ರಿಕೆಟ್ ಜರ್ನಿ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಹ್ಯಾಟ್ರಿಕ್ ಗೆ MI ಕೊಳ್ಳಿ.. ಲೇಡಿ ABD ಪೆರ್ರಿ ಅಬ್ಬರ ವ್ಯರ್ಥ – ತಪ್ಪು ಮಾಡಿದ್ದೆಲ್ಲಿ ಮಂದಾನ?
ಅದು 1996.. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಒಂದು ಪುಟ್ಟ ಮಗು ಜನಿಸುತ್ತೆ. ಆ ಮಗುವಿಗೆ ರೇಣುಕಾ ಸಿಂಗ್ ಠಾಕೂರ್ ಅಂತಾ ಹೆಸ್ರಿಡ್ತಾರೆ.. ತಂದೆ ಕೆಹರ್ ಸಿಂಗ್ ಠಾಕೂರ್.. ತಾಯಿ ಸುನಿತಾ ಠಾಕೂರ್.. ಸಹೋದರ ವಿನೋದ್ ಠಾಕೂರ್.. ರೇಣುಕಾ ತಂದೆ ಹಿಮಾಚಲ ಪ್ರದೇಶದ ನೀರಾವರಿ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿತ್ತು.. ಅಮ್ಮ ಅಮ್ಮ ಮಕ್ಕಳು.. ಕ್ಯೂಟ್ ಫ್ಯಾಮಿಲಿ.. ಆದ್ರೆ ಆ ಸುಂದರ ಕುಟುಂಬದ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.. ರೇಣುಕಾಗೆ ಮೂರು ವರ್ಷ ಇರುವಾಗ್ಲೇ ಅಂದ್ರೆ 1999 ರಲ್ಲಿ ಫ್ಯಾಮಿಲಿಯ ಆಧಾರ ಸ್ಥಂಭವಾಗಿದ್ದ ಅವರ ಅಪ್ಪ ತೀರಿಕೊಳ್ತಾರೆ.. ಅವಾಗ್ಲೇ ಶುರುವಾಯ್ತು ನೋಡಿ ಒಂದೊಂದೇ ಕಷ್ಟ.. ತಂದೆ ತೀರ್ಕೊಳ್ತಿದ್ದಂತೆ ತಾಯಿಗೆ ಸಾಲು ಸಾಲು ಸವಾಲು ಶುರುವಾಯ್ತು.. ಮಕ್ಕಳ ಓದಿನ ಜೊತೆಗೆ ಮನೆ ನಡೆಸೋ ಜವಬ್ದಾರಿ ಸುನಿತಾ ಮೇಲೆ ಬಿತ್ತು.. ಹೀಗಾಗಿ ಕೆಲಸಕ್ಕೆ ಸೇರೋ ಅನಿವಾರ್ಯತೆ ಶುರುವಾಯ್ತು.. ಕೆಹರ್ ಠಾಕೂರ್ ಅವರದ್ದು ಸರ್ಕಾರಿ ಹುದ್ದೆ ಆಗಿದ್ರಿಂದ ಅನುಕಂಪದ ಆಧಾರದ ಮೇಲೆ ಅವ್ರ ಡಿಪಾರ್ಟ್ಮೆಂಟ್ನಲ್ಲೇ ಕೆಲಸ ತಾಯಿಗೆ ಕೆಲ್ಸ ಸಿಕ್ತು.. ಇದ್ರಿಂದಾಗಿ ಜೀವನಕ್ಕೆ ಒಂದು ದಾರಿಯೇನೋ ಸಿಕ್ಕಿತ್ತು… ಮುಂದೆ ರೇಣುಕಾ ಕ್ರಿಕೆಟ್ ಜರ್ನಿಯ ಒಂದು ರೋಚಕ ಸ್ಟೋರಿ ಇದೆ.. ಅದನ್ನೂ ಹೇಳ್ತೀನಿ..
ರೇಣುಕಾ ತಂದೆಗೆ ಕ್ರಿಕೆಟ್ ಅಂದ್ರೆ ಪಂಚ ಪ್ರಾಣ.. ಅವ್ರು ಕ್ರಿಕೆಟ್ ನ ದೊಡ್ಡ ಅಭಿಮಾನಿ.. ಎಷ್ಟರ ಮಟ್ಟಿಗೆ ಅಂದ್ರೆ ಕೆಹರ್ ಅವ್ರು ತಮ್ಮ ಹಿರಿಯ ಮಗನಿಗೆ ವಿನೋದ್ ಕಾಂಬ್ಳಿಯ ಹೆಸರನ್ನೇ ಇಟ್ರು.. ಯಾಕಂದ್ರೆ ಆ ಕಾಲದಲ್ಲಿ ಕಾಂಬ್ಳಿ ಸಖತ್ ಸೌಂಡ್ ಮಾಡ್ತಿದ್ದ ಸ್ಟೈಲಿಷ್ ಆಟಗಾರ ಆಗಿದ್ರು. ಇದ್ರಿಂದಾಗೇ ಮಕ್ಕಳಿಗೂ ಕ್ರಿಕೆಟ್ ಮೇಲೆ ಸಹಜವಾಗೇ ಆಸಕ್ತಿ ಮೂಡಿತ್ತು. ಅಕ್ಕ ಪಕ್ಕದ ಮಕ್ಕಳೊಂದಿಗೆ ಕ್ರಿಕೆಟ್ ಆಡ್ತಿದ್ದ ರೇಣುಕಾ ಬಳಿಕ ಯುವಕರೊಂದಿಗೂ ಆಡಲು ಶುರು ಮಾಡಿದ್ರು.. ಸ್ಕೂಲ್ ನಲ್ಲಿ ಎಲ್ಲಾ ಗೇಮ್ಸ್ ಗಳಲ್ಲಿ ಭಾಗವಹಿಸ್ತಿದ್ದ ರೇಣುಕಾಗೆ ಕ್ರಿಕೆಟ್ ಮೇಲೆ ಎಲ್ಲಿಲ್ಲದ ಆಸಕ್ತಿ ಬೆಳೆದಿತ್ತು.. ಎಷ್ಟರ ಮಟ್ಟಿಗೆ ಅಂದ್ರೆ ಸ್ನೇಹಿತರೊಂದಿಗೆ ಆಡುವಾಗ ಬ್ಯಾಟಿಂಗ್ ಬೌಲಿಂಗ್ ಸಿಕ್ಕಿಲ್ಲ ಅಂದ್ರೆ ಅಳ್ತಾನೇ ಮನೆಗೆ ಬರ್ತಿದ್ರು.. ಅವರ ಕ್ರಿಕೆಟ್ ಆಸಕ್ತಿ ನೋಡಿದ ತಾಯಿ ರೇಣುಕಾ ಹಾಗೂ ವಿನೋದ್ ಇಬ್ರನ್ನೂ ಕ್ರಿಕೆಟ್ ಕೋಚಿಂಗ್ ಗೆ ಸೇರಿಸಿದ್ದರು.. ಆದ್ರೆ ಬರುಬರುತ್ತಾ ರೇಣುಕಾ ತಾಯಿಗೆ ಇಬ್ಬರು ಮಕ್ಕಳ ಫೀಸ್ ಕಟ್ಟೋಕೆ ಕಷ್ಟ ಆಗಿತ್ತು.. ಹೀಗಾಗಿ ಮಗಳ ಬದಲು ಮಗ ವಿನೋದ್ ನ್ನು ಕ್ರಿಕೆಟ್ ಟ್ರೈನಿಂಗ್ ನಿಂದ ಬಿಡಿಸಿದ್ರು. ಯಾಕಂದ್ರೆ ಅಷ್ಟೊತ್ತಿಗಾಗಲೇ ರೇಣುಕಾ ಕ್ರಿಕೆಟ್ ನಲ್ಲಿ ಪಳಗ್ತಾ ಬಂದ್ರು.. ಹಳ್ಳಿಯಲ್ಲಿ, ಅಕ್ಕ ಪಕ್ಕದ ಊರುಗಳಲ್ಲಿ ಕ್ರಿಕೆಟ್ ಟೂರ್ನಿ ನಡೆದ್ರೆ ರೇಣುಕಾ ಟ್ರೋಫಿ ಗೆದ್ದುಕೊಂಡೇ ಮನೆಗೆ ಬರ್ತಿದ್ರು.. ರೇಣುಕಾಳ ಕ್ರಿಕೆಟ್ ಮೇಲಿನ ಪ್ರೀತಿ ನೋಡಿ 2009 ರಲ್ಲಿ ಅವ್ರ ಚಿಕ್ಕಪ್ಪ ಭೂಪಿಂದರ್ ಸಿಂಗ್ ಠಾಕೂರ್ ಆಕೆಯನ್ನ ಧರ್ಮಶಾಲಾಗೆ ಕಳಿಸಲು ನಿರ್ಧರಿದ್ರು.. ರೇಣುಕಾ ತಾಯಿಯ ಮನವೊಲಿಸಿ ಧರ್ಮಶಾಲಾ ಹಾಗೂ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ನ ಮಹಿಳಾ ವಸತಿ ಅಕಾಡೆಮಿಗೆ ಸೇರಿಸ್ತಾರೆ. ಆಗ ರೇಣುಕಾಗೆ ಕೇವಲ 13 ವರ್ಷ.. ಅಷ್ಟು ಸಣ್ಣ ವಯಸ್ಸಿನಲ್ಲಿ ಮನೆಯವರನ್ನ ಬಿಟ್ಟಿರೋದು ಕಷ್ಟ… ಆದ್ರೆ ರೇಣುಕಾ ತಮ್ಮ ಭಾವನೆಗಳನ್ನ ಬದಿಗಿಟ್ಟು ಕ್ರಿಕೆಟ್ ಕಡೆಗೆ ಹೆಚ್ಚು ಗಮನಕೊಡ್ತಾರೆ.. ಅದು ಆಕೆಯ ಲೈಫ್ ನ ಬಹುದೊಡ್ಡ ಟರ್ನಿಂಗ್ ಪಾಯಿಂಟ್.
ರೇಣುಕಾ ಹಳ್ಳಿಯಲ್ಲಿ ಬೆಳೆದು ಬಂದಿದ್ದರಿಂದ ಅವರು ಫಿಸಿಕಲಿ ಫಿಟ್ ಆಗಿದ್ರು.. ಇದು ಆಕೆಗೆ ಪ್ಲಸ್ ಆಗಿತ್ತು.. ಬಳಿಕ ಅಕಾಡೆಮಿಯಲ್ಲಿ, ಕೋಚ್ ಪವನ್ ಸೇನ್ ಹಾಗೂ ಕೋಚ್ ವೀಣಾ ಪಾಂಡೆ ಅವರಿಂದ ಟ್ರೈನಿಂಗ್ ಪಡ್ಕೊಳ್ತಾರೆ. ಅಕಾಡೆಮಿಯಲ್ಲಿದ್ದಾಗ ರೇಣುಕಾ ತನ್ನ ಲೈನ್ ಮತ್ತು ಲೆಂತ್ ಜೊತೆಗೆ ವೇಗದಲ್ಲೂ ನಿಯಂತ್ರಣ ಗಳಿಸಿಕೊಂಡರು. ಇನ್-ಸ್ವಿಂಗ್ ಮತ್ತು ಯಾರ್ಕರ್ ಗಳ ಜೊತೆಗೆ, ಲೆಗ್-ಕಟರ್ ಗಳನ್ನು ಕರಗತ ಮಾಡಿಕೊಂಡರು. ನೋಡನೋಡುತ್ತಿದ್ದಂತೆ ರೇಣುಕಾ ಒಳ್ಳೆಯ ವೇಗದ ಬೌಲರ್ ಆಗಿ ರೂಪುಗೊಂಡರು.
2016 ರಲ್ಲಿ ಕರ್ನಾಟಕ ವಿರುದ್ಧದ ಅಂಡರ್ -19 ಪಂದ್ಯದಲ್ಲಿ ರೇಣುಕಾ ಸಿಂಗ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ನಂತರ 2019 ರಲ್ಲಿ ಬಿಸಿಸಿಐ ಮಹಿಳಾ ಏಕದಿನ ಪಂದ್ಯಾವಳಿಯಲ್ಲಿ 23 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ಕ್ರಿಕೆಟ್ ನಲ್ಲಿ ಮಿಂಚಲು ಶುರುಮಾಡಿದ ರೇಣುಕಾಗೆ ರೈಲ್ವೇಸ್ ನಲ್ಲೂ ಕೆಲಸ ಸಿಕ್ಕಿತು.. ಬಳಿಕ 2021 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸೀನಿಯರ್ ಏಕದಿನ ಟ್ರೋಫಿಯಲ್ಲಿ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದರು.. ಇದು ಅವರಿಗೆ T20 ಟೀಂನಲ್ಲೂ ಅವಕಾಶ ಕೊಡಿಸಿತು. ಮುಂದೆ 2023 ರಲ್ಲಿ ರೇಣುಕಾಗೆ WPL ನಲ್ಲಿ ಚಾನ್ಸ್ ಸಿಗುತ್ತೆ..
WPL ಆಕ್ಷನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1.5 ಕೋಟಿ ರೂಪಾಯಿಗಳಿಗೆ ರೇಣುಕಾರನ್ನು ಖರೀದಿಸುತ್ತೆ.. ಅತೀ ಹೆಚ್ಚು ಬೆಲೆಗೆ ಸೋಲ್ಡ್ ಆದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ರೇಣುಕಾ. ಆರ್ ಸಿಬಿ ಟೀಮ್ ತನ್ನ ಮೇಲೆ ಇಟ್ಟ ನಂಬಿಕೆಯನ್ನ ಉಳಿಸಿಕೊಂಡಿರುವ ರೇಣುಕಾ ಮೈದಾನದಲ್ಲಿ ಅದ್ಬುತ ಪ್ರದರ್ಶನ ನೀಡಿದ್ರು.. 2024 ರ WPL ಪ್ರಶಸ್ತಿಯನ್ನು RCB ಗೆದ್ದಾಗ ರೇಣುಕಾ ತಂಡದ ಭಾಗವಾಗಿದ್ದರು. ಇದ್ರಿಂದಾಗಿ ಆರ್ ಸಿಬಿ ಜೊತೆಗಿನ ರೇಣುಕಾ ಪ್ರಯಾಣ ಮುಂದುವರೆದಿದೆ.. ಮೊದಲೆರಡು ಪಂದ್ಯಗಳಲ್ಲಿ ಬೌಲಿಂಗ್ ಪಡೆಯನ್ನು ಲೀಡ್ ಮಾಡಿರುವ ರೇಣುಕಾ ಸಿಂಗ್ 5 ವಿಕೆಟ್ ಕಬಳಿಸಿದ್ದಾರೆ.. ಕ್ರಿಕೆಟ್ ನಲ್ಲಿ ಸಾಧನೆ ಮಾಡ್ತಿರೋ ರೇಣುಕಾ ಸಿಂಗ್ ತನ್ನ ತಂದೆಯ ನೆನಪಿಗಾಗಿ ಕೈನಲ್ಲಿ ಟ್ಯಾಟು ಹಾಕಿಸಿದ್ದಾರೆ.. ತಂದೆಯ ಡೇಟ್ ಆಫ್ ಬರ್ತ್ ಹಾಗೂ ಡೆತ್ ಡೇಟ್ ಅನ್ನ ಬರೆಸಿಕೊಂಡಿದ್ದಾರೆ. ಜೊತೆಗೆ ಪುಟ್ಟ ಮಗುವನ್ನ ತಂದೆ ಎತ್ತಿಕೊಂಡಿರುವ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಂದೆಯ ಕ್ರಿಕೆಟ್ ಪ್ರೀತಿ ಈಗ ಮಗಳನ್ನ ಇಡೀ ಕ್ರಿಕೆಟ್ ಲೋಕವೇ ತಿರುಗಿ ನೋಡುವಂತೆ ಮಾಡಿದೆ. ತಾಯಿ, ಅಣ್ಣನ ತ್ಯಾಗಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಆರ್ ಸಿಬಿಯ ಈ ಸಿಂಹಿಣಿ ಇದೇ ರೀತಿ ವಿಕೆಟ್ ಗಳ ಬೇಟೆಯಾಡ್ತಿದ್ರೆ ಈ ಸಲನೂ ಕಪ್ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ.