RCB ಹ್ಯಾಟ್ರಿಕ್ ಗೆ MI ಕೊಳ್ಳಿ.. ಲೇಡಿ ABD ಪೆರ್ರಿ ಅಬ್ಬರ ವ್ಯರ್ಥ – ತಪ್ಪು ಮಾಡಿದ್ದೆಲ್ಲಿ ಮಂದಾನ?

ಲಾಸ್ಟ್ ಓವರ್.. ಲಾಸ್ಟ್ ಬಾಲ್ವರೆಗೂ ಟೆನ್ಷನ್.. ಒಂದ್ಸಲ ಅವ್ರು ಗೆಲ್ತಾರೆ ಅನ್ಸೋದು. ಮತ್ತೊಂದ್ಸಲ ನಮಗಿನ್ನೂ ಚಾನ್ಸ್ ಇದೆ ಅನ್ನೋ ಸಣ್ಣ ಭರವಸೆ. ಆದ್ರೆ ಕೊನೆಗೆ ಬ್ಯಾಡ್ಲಕ್. ಬೆಂಗಳೂರಲ್ಲೇ ನಮ್ಮ ಆರ್ಸಿಬಿ ಗರ್ಲ್ಸ್ ಸೋಲಬೇಕಾಯ್ತು. ಮೊದಲ ಎರಡು ಪಂದ್ಯಗಳನ್ನ ಗೆದ್ದು ಮೂರನೇ ಮ್ಯಾಚ್ನಲ್ಲಿ ಹ್ಯಾಟ್ರಿಕ್ ಬಾರಿಸೋ ನಿರೀಕ್ಷೆಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ್ತಿಯರು ತವರಲ್ಲೇ ವೀರೋಚಿತ ಸೋಲು ಕಂಡಿದ್ದಾರೆ. ಆರ್ಸಿಬಿ ಸೋಲಿಗೆ ಕಾರಣಗಳು ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: FBI ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ಆಯ್ಕೆ- ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ವಚನ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮ್ಯಾಚ್ ಇದೆ ಅಂದ್ರೆ ಮುಗೀತು. ಅದ್ರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲೇ ಇರುತ್ತೆ. ಅದು ಬಾಯ್ಸ್ ಮ್ಯಾಚೇ ಇರ್ಲಿ ಅಥವಾ ಗರ್ಲ್ಸ್ ಮ್ಯಾಚೇ ಆಗ್ಲಿ. ಶುಕ್ರವಾರ ಆಗಿದ್ದೂ ಅದೇ. ಸ್ಮೃತಿ ಮಂದಾನ ನಾಯಕತ್ವದ ಬೆಂಗಳೂರು ತಂಡದ ಹ್ಯಾಟ್ರಿಕ್ ಗೆಲುವನ್ನ ನೋಡ್ಬೇಕು ಅಂತಾ ಸಾವಿರಾರು ಫ್ಯಾನ್ಸ್ ಬಂದಿದ್ರು. ಮ್ಯಾಚ್ ಶುರುವಿನಿಂದ ಹಿಡ್ದು ಮುಗ್ಯೋವರೆಗೂ ಚಿಯರ್ಅಪ್ ಮಾಡ್ತಾನೇ ಇದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ ಪಾಪ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಕಿವಿ ಮುಚ್ಚಿಕೊಳ್ಳೋ ಲೆವೆಲ್ಗೆ. ಬಟ್ ಕೊನೇ ಮೂಮೆಂಟ್ನಲ್ಲಿ ಆರ್ಸಿಬಿ ಸಣ್ಣ ಮಿಸ್ಟೇಕ್ನಿಂದ ಸೋಲಬೇಕಾಯ್ತು.
ಟಾಸ್ ಗೆದ್ದ ಮುಂಬೈ.. ಎಲ್ಲಿಸ್ ಪೆರ್ರಿ ಹೊಡಿಬಡಿ ಬ್ಯಾಟಿಂಗ್!
ಶುಕ್ರವಾರದ ಪಂದ್ಯದಲ್ಲಿ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರ್ನಾಟಕದ ಆಟಗಾರ್ತಿಯರು ಚೆನ್ನಾಗೇ ಬ್ಯಾಟ್ ಬೀಸಿದ್ರು. ನಾಯಕಿ ಸ್ಮೃತಿ ಮಂದಾನ ವ್ಯಾಟ್ ಹಾಡ್ಜ್ ಬ್ಯಾಟಿಂಗ್ಗೆ ಇಳಿದಾಗ 29 ರನ್ಗೆ ಒಂದು ವಿಕೆಟ್ ಕಳೆದುಕೊಂಡಿತು. ಬಟ್ ಆಮೇಲೆ ಬಂದ್ರು ನೋಡಿ ಲೇಡಿ ಎಬಿಡಿ ಎಲ್ಲಿಸ್ ಪೆರ್ರಿ. ಆರ್ಸಿಬಿ ಅಭಿಮಾನಿಗಳ ಕ್ರಶ್ ಆಗಿರೋ ಚೆರ್ರಿ ಚೆರ್ರಿ ಲೇಡಿ ಎಲ್ಲಿಸ್ ಪೆರ್ರಿ ಮುಂಬೈ ಬೌಲರ್ಗಳನ್ನ ಬೆಂಡೆತ್ತಿದ್ರು. 43 ಬಾಲ್ ಎದುರಿಸಿದ ಪೆರಿಽ 11 ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ಮೂಲಕ 81 ರನ್ಗಳಿಸಿದರು. ಇನ್ನು ರಿಚಾ ಘೋಷ್ 28 ರನ್ ಗಳಿಸಿದ್ರು. ಬಟ್ ಉಳಿದವರ್ಯಾರೂ ಒಂದಂಕಿ ಮೊತ್ತವನ್ನ ದಾಟಲಿಲ್ಲ. ಪರಿಣಾಮ ಬೆಂಗಳೂರು ಟೀಂ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ಗಳನ್ನ ಕಲೆ ಹಾಕಿತು.
6 ಬಾಲ್.. 6 ರನ್.. ಕೊನೇ ಓವರ್ ನಲ್ಲಿ ಗೆದ್ದ ಮುಂಬೈ!
168 ರನ್ಗಳ ಟಾರ್ಗೆಟ್ ಬೆನ್ನತ್ತಿದ ಮುಂಬೈ ಆರಂಭದಲ್ಲಿಯೇ ಆಘಾತಕ್ಕೆ ಬಿತ್ತು. ತಂಡದ ಮೊತ್ತ 9 ರನ್ ಇದ್ದಾಗ ಗಾರ್ತ್ ಬೌಲ್ಗೆ ಎಲ್ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ ಯಾಸ್ತಿಕ್ ಭಾಟಿಯಾ ಪೆವಿಲಿಯನ್ ಸೇರಿದ್ರು. ನಂತರ ಬಂದ ನ್ಯಾಟ್ ಸಿವಿರ್ ಬಂಟ್ ಹಾಗೂ ಹೈಲೇ ಮ್ಯಾಥೋವ್ಸ್ 66 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 50 ರನ್ಗಳನ್ನು ಹೊಡೆಯುವ ಮೂಲಕ ಗಮನ ಸೆಳೆದರು. ಬಟ್ ಲಾಸ್ಟ್ ಓವರ್ವರೆಗೂ ಸಾಗಿದ ಮ್ಯಾಚ್ ತುಂಬಾನೇ ಇಂಟ್ರೆಸ್ಟಿಂಗ್ ಆಗಿತ್ತು. ನೆಕ್ ಟು ನೆಕ್ ಫೈಟ್ ಏರ್ಪಟ್ಟಿತ್ತು. 19 ಓವರ್ನಲ್ಲಿ ಬಿಟ್ಟುಕೊಟ್ಟ ರನ್ ಆರ್ಸಿಬಿ ಸೋಲಿಗೆ ಕಾರಣವಾಯ್ತು. ಯಾಕಂದ್ರೆ 19ನೇ ಓವರ್ನಲ್ಲಿ ಮುಂಬೈ ತಂಡಕ್ಕೆ ಆರ್ಸಿಬಿ 16 ರನ್ ರನ್ ಬಿಟ್ಟುಕೊಟ್ಟಿತ್ತು. ಸೋ ಲಾಸ್ಟ್ ಓವರ್ನಲ್ಲಿ 6 ಬಾಲ್ಗೆ 6 ರನ್ ಬೇಕಿತ್ತು. ಇನ್ನೊಂದು ಬಾಲ್ ಬಾಕಿ ಇರುವಂತೆಯೇ ಮುಂಬೈ ತಂಡ ಟಾರ್ಗೆಟ್ ರೀಚ್ ಆಗೋ ಮೂಲಕ ಗೆದ್ದು ಬೀಗಿತು.
ಪೆರ್ರಿ ಆರ್ಭಟ.. ಆರ್ ಸಿಬಿ ಫ್ಯಾನ್ಸ್ ಅಬ್ಬರ.. ಕಿವಿ ಮುಚ್ಚಿಕೊಂಡ ಕೌರ್!
ತವರಿನಲ್ಲಿ ಆರ್ಸಿಬಿ ಗರ್ಲ್ಸ್ ಆಟ ನೋಡೋಕೆ ಕಾಯ್ತಿದ್ದ ಫ್ಯಾನ್ಸ್ ಸ್ಟೇಡಿಯಮ್ಗೆ ಜಮಾಯಿಸಿದ್ರು. ಮೊದಲ ಓವರ್ ನಿಂದಲೇ ಆರ್ಸಿಬಿ ಆರ್ಸಿಬಿ ಅಂತಾ ಘೋಷನೆಗಳನ್ನ ಕೂಗಿದ್ರು. ಇದರ ನಡುವೆ ಎಲ್ಲಿಸ್ ಪೆರ್ರಿ ಅವರ ಆರ್ಭಟವೂ ಜೋರಾಗಿತ್ತು. ಇತ್ತ ಪೆರ್ರಿ ಆರ್ಭಟಿಸುತ್ತಿದ್ದಂತೆ ಅತ್ತ ಆರ್ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಇದರಿಂದ ಕಂಗೆಟ್ಟಿದ್ದು ಮುಂಬೈ ಇಂಡಿಯನ್ಸ್ ಫೀಲ್ಡರ್ಗಳು. ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅಂತೂ ಕಿವಿ ಮುಚ್ಚಿಕೊಂಡಿದ್ರು. ಆರ್ಸಿಬಿ ಅಭಿಮಾನಿಗಳ ಸೌಂಡ್ ಎಫೆಕ್ಟ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಬ್ಲ್ಯೂಪಿಎಲ್ ನಲ್ಲಿ 700+ ರನ್ ಪೂರೈಸಿದ ಪೆರ್ರಿ!
ಹೊಡಿಬಡಿ ಆಟದ ಮೂಲಕ ಎಲ್ಲಿಸ್ ಪೆರ್ರಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 700+ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಆರ್ಸಿಬಿ ತಂಡದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 700+ ರನ್ಸ್ ಹಾಗೂ 10+ ವಿಕೆಟ್ ಪಡೆದ ಏಕೈಕ ಆಟಗಾರ್ತಿ ಎನಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಈವರೆಗೆ 20 ಪಂದ್ಯಗಳನ್ನಾಡಿರುವ ಎಲ್ಲಿಸ್ ಪೆರ್ರಿ 6 ಅರ್ಧಶತಕಗಳೊಂದಿಗೆ ಒಟ್ಟು 745 ರನ್ ಬಾರಿಸಿದ್ದಾರೆ. 15 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಪೆರ್ರಿ ಒಟ್ಟು 11 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ WPL ಇತಿಹಾಸದಲ್ಲೇ 700+ ರನ್ಸ್ ಹಾಗೂ 10+ ವಿಕೆಟ್ ಪಡೆದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಎಲ್ಲಿಸ್ ಪೆರ್ರಿ ತಮ್ಮದಾಗಿಸಿಕೊಂಡಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹೆಸರಿನಲ್ಲಿದೆ. ಡೆಲ್ಲಿ ಪರ 21 ಇನಿಂಗ್ಸ್ ಆಡಿರುವ ಲ್ಯಾನಿಂಗ್ 7 ಅರ್ಧಶತಕಗಳೊಂದಿಗೆ ಈವರೆಗೆ 777 ರನ್ ಕಲೆಹಾಕಿದ್ದಾರೆ. ಇದೀಗ 745 ರನ್ ಗಳೊಂದಿಗೆ ಎಲ್ಲಿಸ್ ಪೆರ್ರಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಒಟ್ನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸೋಲು ಅನುಭವಿಸಿದೆ. ಫೆಬ್ರವರಿ 24 ಅಂದ್ರೆ ಸೋಮವಾರ ಯುಪಿ ವಾರಿಯರ್ಸ್ ವಿರುದ್ಧ ನಾಲ್ಕನೇ ಪಂದ್ಯ ನಡೆಯಲಿದ್ದು ಈ ಪಂದ್ಯದ ಮೂಲಕ ಕಮ್ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ.