PAK ಜರ್ನಿ ಮುಗಿಸುತ್ತಾ ಭಾರತ? – ಸೆಮೀಸ್ ಕ್ವಾಲಿಫೈಗೆ ಇರೋ ದಾರಿ ಏನು?

1996ರ ಬಳಿಕ ಪಾಕಿಸ್ತಾನ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜನೆ ಹೊಣೆ ಹೊತ್ತಿದೆ. ಆದ್ರೆ ಉದ್ಘಾಟನಾ ಪಂದ್ಯದಲ್ಲೇ ಸೋಲಿನೊಂದಿಗೆ ತನ್ನ ಜರ್ನಿ ಆರಂಭಿಸಿದೆ. ಫೆಬ್ರವರಿ 29ರಂದು ನ್ಯೂಜಿಲೆಂಡ್ ವಿರುದ್ಧ ಸೋತು ಆಘಾತ ಅನುಭವಿಸಿದೆ. ಇದೀಗ ಪಾಕಿಸ್ತಾನ ಸ್ಪರ್ಧೆಯಲ್ಲಿ ಉಳೀಬೇಕು ಅಂದ್ರೆ ಭಾರತದ ವಿರುದ್ಧದ ಪಂದ್ಯವೇ ನಿರ್ಣಾಯವಾಗಿದೆ. ಫೆಬ್ರವರಿ 23 ರಂದು ಭಾರತದ ವಿರುದ್ಧ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಟೂರ್ನಿಯಿಂದಲೇ ಹೊರಬೀಳುವುದು ಗ್ಯಾರಂಟಿ. ಆದ್ರೆ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಬಿಗ್ ಶಾಕ್ ಎದುರಾಗಿದೆ.
ಇದನ್ನೂ ಓದಿ : ಬಾಂಗ್ಲಾ ಎದುರೇ ತಿಣುಕಾಡಿ ಗೆದ್ದ ಭಾರತ – ಪಾಕಿಸ್ತಾನದ ಎದುರು ಪಿಚ್ ಕೈ ಕೊಡುತ್ತಾ?
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ತಂಡದ ಬ್ಯಾಟರ್ ಫಖಾರ್ ಜಮಾನ್ ಇದೀಗ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಚಾರವನ್ನು ಖಚಿತಪಡಿಸಿದ್ದು ಇಮಾಮ್-ಉಲ್-ಹಕ್ರನ್ನು ಬದಲೀ ಆಟಗಾರನಾಗಿ ತಂಡಕ್ಕೆ ಸೇರ್ಪಡೆ ಮಾಡಿದೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದ ಫಖಾರ್ ಜಮಾನ್ ಪಾಕಿಸ್ತಾನ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 34 ವರ್ಷದ ಜಮಾನ್, ನ್ಯೂಜಿಲೆಂಡ್ ಇನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಮೊದಲ ಓವರ್ನಲ್ಲಿ ಬೌಂಡರಿಯತ್ತ ಹೋಗುತ್ತಿದ್ದ ಚೆಂಡನ್ನು ಚೇಸ್ ಮಾಡುವಾಗ ಇಂಜುರಿಗೆ ತುತ್ತಾಗಿದ್ರು. ಸದ್ಯ ಉತ್ತಮ ಫಾರ್ಮ್ನಲ್ಲಿದ್ದ ಜಮಾನ್ ಅವರು ತಂಡದಿಂದಲೇ ಹೊರ ಬಿದ್ದಿರೋದು ಪಾಕ್ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. 2023 ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ನಲ್ಲಿ ಕೊನೆಯದಾಗಿ ಆಡಿದ ನಂತರ ಜಮಾನ್ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ತಂಡಕ್ಕೆ ಮರಳಿದ್ದರು. ಈ ಸಲ ಕೂಡ ಭಾರತದ ವಿರುದ್ಧ ಮಿಂಚುವ ಕಾನ್ಫಿಡೆನ್ಸ್ನಲ್ಲಿದ್ರು. ಆದ್ರೀಗ ಇಂಜುರಿಯಿಂದಾಗಿ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನವೇ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಫೆಬ್ರವರಿ 23ರಂದು ದುಬೈನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯ ಸೋತಿರುವ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಪಂದ್ಯ ನಿರ್ಣಾಯಕವಾಗಿದೆ. ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಪಾಕಿಸ್ತಾನ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಆದರೆ ಬಲಿಷ್ಠವಾಗಿರುವ ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲೋದು ಅಷ್ಟು ಸುಲಭವಾಗಿಲ್ಲ. ಈಗಾಗ್ಲೇ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿದ್ದು ಇನ್ನೊಂದು ಪಂದ್ಯ ಗೆದ್ರೂ ಸೆಮೀಸ್ಗೆ ಕಾಲಿಡಲಿದೆ. ಭಾರತ ತಂಡದ ಆಟಗಾರರ ಫಾರ್ಮ್ ನೋಡ್ತಿದ್ರೆ ಪಾಕಿಸ್ತಾನಕ್ಕೂ ಸೋಲಿನ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಭಾರತದ ವಿರುದ್ಧ ಸೋತರೆ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ. ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 60 ರನ್ಗಳ ಭಾರಿ ಅಂತರದಿಂದ ಸೋಲು ಅನುಭವಿಸಿದೆ. ಇದೀಗ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಸೋಲಿಸಲು ಸಾಧ್ಯನಾ ಎನ್ನುವಂತ ಟೆನ್ಷನ್ ನಲ್ಲಿದ್ದಾರೆ. ಅಷ್ಟೇ ಯಾಕೆ ಭಾರತವನ್ನು ಸೋಲಿಸುವುದು ತುಂಬಾ ಕಷ್ಟ ಎಂದು ಖುದ್ದು ಪಾಕಿಸ್ತಾದ ಸ್ಟಾರ್ ಆಟಗಾರನೇ ಹೇಳಿಕೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಪಾಕ್ ಆಟಗಾರರ ಕಳಪೆ ಮತ್ತು ನಿಧಾನಗತಿಯ ಬ್ಯಾಟಿಂಗೇ ಕಾರಣ ಅಂತಾ ಪಾಕ್ನ ಮಾಜಿ ಕ್ರಿಕೆಟರ್ಸ್ ಈಗಾಗ್ಲೇ ಸಿಟ್ಟಾಗಿದ್ರು. ಅದ್ರಲ್ಲೂ ಪಾಕಿಸ್ತಾನದ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ಹಾಗೇ ಪಾಕಿಸ್ತಾನ ತಂಡದ ಇತರೆ ಆಟಗಾರರು ಆಕ್ರಮಣಕಾರಿಯಾಗಿ ಆಡ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. ಹೀಗೇ ಆದ್ರೆ ಭಾರತ ತಂಡವನ್ನು ಸೋಲಿಸುವುದು ಕಷ್ಟ ಅನ್ನುಸ್ತಿದೆ. ಭಾರತ ತಂಡ ತುಂಬಾ ಸ್ಟ್ರಾಂಗ್. ಹಾಗಾಗಿ ಟೀಂ ಇಂಡಿಯಾವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಪಾಕಿಸ್ತಾನ ಆಕ್ರಮಣಕಾರಿ ಆಟ ಆಡಲೇಬೇಕು ಎಂದಿದ್ದಾರೆ. ಇನ್ನೊಂದು ಪಾಕ್ ಟೀಮ್ನ ಬ್ಲಂಡರ್ ಅಂದ್ರೆ ಕೇವಲ ನಾಲ್ವರು ಬೌಲರ್ಗಳಿದ್ದಾರೆ. ಬಟ್ ಬೇರೆ ಬೇರೆ ಟೀಮ್ಗಳಲ್ಲಿ ಪ್ರತಿ ತಂಡದಲ್ಲೂ ಕನಿಷ್ಠ 5-6-7 ಬೌಲರ್ಗಳಿದ್ದಾರೆ ಎಂದು ತಮ್ಮ ತಂಡದಲ್ಲಿರುವ ಕೊರತೆಗಳ ಬಗ್ಗೆಯೂ ಮಾತನಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಎರಡು ಗುಂಪುಗಳಾಗಿ ಡಿವೈಡ್ ಮಾಡ್ಲಾಗಿತ್ತು. ಸೋ ಒಂದೊಂದು ತಂಡಕ್ಕೆ ಲೀಗ್ ಸ್ಟೇಜ್ನಲ್ಲಿ ಮೂರು ಪಂದ್ಯಗಳಿವೆ. ವಿಷ್ಯ ಏನಪ್ಪಾ ಅಂದ್ರೆ ಈಗಾಗ್ಲೇ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಸೋತಿರೋದ್ರಿಂದ ಮುಂದಿನ ಎರಡು ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಂತ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಇನ್ನೂ ಕೂಡ ಕಂಪ್ಲೀಟ್ ಆಗಿ ಹಿರಬಿದ್ದಿಲ್ಲ. ಪಾಕ್ ಪಾಲಿಗೆ ಇನ್ನೂ ಎರಡು ಪಂದ್ಯಗಳಿವೆ. ಒಂದು ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಮತ್ತು ಇನ್ನೊಂದು ಬಾಂಗ್ಲಾದೇಶ ವಿರುದ್ಧ. ಭಾನುವಾರ ನಡೆಯಲಿರುವ ಭಾರತದ ವಿರುದ್ಧದ ಪಂದ್ಯಕ್ಕೆ ಈಗಾಗ್ಲೇ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕ್ ತಂಡ ದುಬೈಗೆ ಹಾರಿದೆ. ಮೆನ್ ಇನ್ ಗ್ರೀನ್ ತಂಡಕ್ಕೆ ಸಂಡೇ ಮ್ಯಾಚ್ ಡು ಆರ್ ಡೈ ಆಗಿದೆ. ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಅವರು ಆ ಪಂದ್ಯವನ್ನು ಸೋತರೆ ಪಂದ್ಯಾವಳಿಯಿಂದ ಹೊರ ಬೀಳೋದು ಕನ್ಫರ್ಮ್ ಆಗಲಿದೆ.