ಕಾಂಗ್ರೆಸ್, ಬಿಜೆಪಿಯ ‘ಬಿ’ ಟೀಮ್ – ರಾಹುಲ್ ಗಾಂಧಿಗೆ ಮಾಯವತಿ ತಿರುಗೇಟು

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯ ‘ಬಿ’ ಟೀಮ್ ಆಗಿ ಸ್ಪರ್ಧಿಸಿತ್ತು ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ತಮ್ಮ ಪಕ್ಷದ ಪ್ರಸ್ತುತ ರಾಜಕೀಯ ವಿಧಾನವನ್ನು ಪ್ರಶ್ನಿಸಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿದ್ದಾರೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಸೇರದಿರುವುದರಿಂದ ನಿರಾಶೆಗೊಂಡಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಾಯಾವತಿ, “ಈ ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ ಆಗಿ ಹೋರಾಡಿತು, ಇದರಿಂದಾಗಿ ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬಂದಿತು ಎಂಬುದು ಸಾಮಾನ್ಯ ಚರ್ಚೆಯಾಗಿದೆ” ಎಂದು ಟೀಕಿಸಿದ್ದಾರೆ.
“ಇಲ್ಲದಿದ್ದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಹೆಚ್ಚಿನ ಅಭ್ಯರ್ಥಿಗಳು ಠೇವಣಿಯನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗದಂತಹ ಕೆಟ್ಟ ಸ್ಥಿತಿಯಲ್ಲಿರುತ್ತಿರಲಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ.
ಇತರರ ಕಡೆಗೆ ಬೆರಳು ತೋರಿಸುವ ಮೊದಲು, ಅವರು ಖಂಡಿತವಾಗಿಯೂ ತಮ್ಮದೇ ಆದ ವ್ಯವಹಾರಗಳನ್ನು ನೋಡಿಕೊಳ್ಳಬೇಕು ಎಂದು ಮಾಯಾವತಿ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ. ದೆಹಲಿಯಲ್ಲಿರುವ ಹೊಸ ಬಿಜೆಪಿ ಸರ್ಕಾರಕ್ಕೆ ಚುನಾವಣೆ ವೇಳೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ಸವಾಲು ಇದೆ ಎಂದು ಮಾಯಾವತಿ ಹೇಳಿದ್ದಾರೆ.