ಗೋಬಿ ಮಂಚೂರಿ, ಬಾಂಬೆ ಮಿಠಾಯಿ ಆಯ್ತು.. ಈಗ ಕರಿದ ಹಸಿರು ಬಟಾಣಿ ಮೇಲೆ ಆಹಾರ ಇಲಾಖೆ ಕಣ್ಣು – ಬ್ಯಾನ್ ಆಗುತ್ತಾ?

ಇತ್ತೀಚೆಗೆ ಗೋಬಿ ಮಂಚೂರಿ, ಬಾಂಬೆ ಮಿಠಾಯಿ ರಾಜ್ಯದಲ್ಲಿ ಬ್ಯಾನ್ ಆಗಿತ್ತು. ಈ ತಿಂಡಿಗಳಿಗೆ ಬಳಸುತ್ತಿದ್ದ ಬಣ್ಣ ಬದುಕನ್ನೇ ಮುಗಿಸಿಬಿಡುತ್ತೆ ಅನ್ನೋ ಭಯಾನಕ ವರದಿ ಬಂದಿತ್ತು. ಆ ವರದಿ ಕೈ ಸೇರಿದ್ದೇ ತಡ ಸರ್ಕಾರ ಇವೆರಡು ತಿಂಡಿಗಳನ್ನ ರಾಜ್ಯದಲ್ಲಿ ಬ್ಯಾನ್ ಮಾಡಿತ್ತು. ಒಂದು ವೇಳೆ ಕಲರ್ ತಿಂಡಿಗಳನ್ನ ಮಾರಾಟ ಮಾಡಿದರೆ, 10 ಲಕ್ಷ ರೂಪಾಯಿ ದಂಡ ಜತೆಗೆ 7 ವರ್ಷ ಮೀರದಂತೆ ಜೈಲು ಶಿಕ್ಷೆ ಅಂತಾ ಆರೋಗ್ಯ ಸಚಿವರು ಕಠಿಣ ಎಚ್ಚರಿಕೆ ಕೂಡ ನೀಡಿದ್ದರು. ಇದೀಗ ಮತ್ತೊಂದು ತಿನಿಸು ಮೇಲೆ ಆಹಾರ ಇಲಾಖೆ ಕಣ್ಣಿಟ್ಟಿದೆ. ಇದೀಗ ಕರಿದ ಹಸಿರು ಬಟಾಣಿ ಮಾರಾಟ ಮಾಡುವವರ ಕ್ರಮಕೈಗೊಳ್ಳಲು ಮುಂದಾಗಿದೆ.
ಇದನ್ನೂ ಓದಿ: ಬಾಂಗ್ಲಾ ಎದುರೇ ತಿಣುಕಾಡಿ ಗೆದ್ದ ಭಾರತ – ಪಾಕಿಸ್ತಾನದ ಎದುರು ಪಿಚ್ ಕೈ ಕೊಡುತ್ತಾ?
ಕರಿದ ಹಸಿರು ಬಟಾಣಿಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಸುತ್ತಿರುವ ವಿಡಿಯೋವೊಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಆಹಾರ ಸುರಕ್ಷತೆಯ ಬಗ್ಗೆ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಕರ್ನಾಟಕದಾದ್ಯಂತ ಮಾರಾಟ ಮಾಡಲಾಗುತ್ತಿರುವ ಹಸಿರು ಬಟಾಣಿಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ವಿಶ್ಲೇಷಣೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ (ರಾಜ್ಯ ಮತ್ತು ವಿಭಾಗೀಯ ಆಹಾರ ಪ್ರಯೋಗಾಲಯ) ಕಳುಹಿಸಲು ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕರಿದ ಬಟಾಣಿಗೆ ಕೃತಕ ಬಣ್ಣ ಹಾಕಿ ಮಾರಾಟ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕರಿದ ಬಟಾಣಿಗಳ ಸ್ಯಾಂಪಲ್ಗಳನ್ನ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲ ವಲಯದಲ್ಲಿ ಸ್ಯಾಂಪಲ್ ಸಂಗ್ರಹಿಸಿ ಕ್ರಮಕೈಗೊಳ್ಳಲಾಗಿದ್ದು, ಲ್ಯಾಬ್ ವರದಿ ಬಂದ ಬಳಿಕ ಕಲರ್ ಅಳವಡಿಕೆ ನಿಷೇಧಿಸುವ ಆದೇಶ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಇದುವರೆಗೆ 70 ಹಸಿರು ಬಟಾಣಿಗಳ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಪ್ರಯೋಗಾಲಯದ ವಿಶ್ಲೇಷಣಾ ವರದಿಗಳ ಆಧಾರದಲ್ಲಿ ಮುಂದಿನ ಕಾನೂನಾತ್ಮಕ ಜರುಗಿಸಲಾಗುತ್ತದೆ.