ರಾಹುಲ್ ಮೇಲೆ ಯಾಕಿಷ್ಟು ಪ್ರಯೋಗ? – ಚಾಪೆಲ್ ಆಗ್ತಿದ್ದಾರಾ ಗಂಭೀರ್?
![ರಾಹುಲ್ ಮೇಲೆ ಯಾಕಿಷ್ಟು ಪ್ರಯೋಗ? – ಚಾಪೆಲ್ ಆಗ್ತಿದ್ದಾರಾ ಗಂಭೀರ್?](https://suddiyaana.com/wp-content/uploads/2025/02/afp__20240802__368y6pv__v1__highres__cricketsriindodi-fotor-2024112522252-2024-11-dbff5593ec8f864482aca96f4405b3fc-16x9-1.webp)
ಕೆಎಲ್ ರಾಹುಲ್. ಟೀಂ ಇಂಡಿಯಾದ ಕ್ಲಾಸಿಕ್ & ಸ್ಟಾರ್ ಬ್ಯಾಟ್ಸ್ಮನ್. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಎಲ್ ರಾಹುಲ್ ಬ್ಯಾಟ್ ಸದ್ದು ಮಾಡಿದ್ದಕ್ಕಿಂತ ಅವ್ರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೇ ಹೆಚ್ಚು ಚರ್ಚೆಯಾಗ್ತಿದೆ. ಅದ್ರಲ್ಲೂ ಗೌತಮ್ ಗಂಭೀರ್ ಹೆಡ್ ಕೋಚ್ ಆದ್ಮೇಲೆ ರಾಹುಲ್ ಒಂಥರಾ ಎಕ್ಸ್ಪೆರಿಮೆಂಟ್ ಮೆಟೀರಿಯಲ್ ಆಗಿದ್ದಾರೆ ಅಂದ್ರೂ ತಪ್ಪಿಲ್ಲ. ಕ್ರಿಕೆಟ್ ಅನ್ನೋದು ಟೀಂ ಗೇಮ್ ಆಗಿದ್ರೂ ಪ್ರತಿಯೊಬ್ಬ ಆಟಗಾರನಿಗೂ ಅವ್ರದ್ದೇ ಆದ ರೆಸ್ಪಾನ್ಸಿಬಿಲಿಟೀಸ್ ಇರುತ್ತೆ. ಆಯಾ ಕ್ರಮಾಂಕದ ಜವಾಬ್ದಾರಿ ಇರುತ್ತೆ. ಆದ್ರೆ ಈಗಿನ ಬ್ಯಾಟಿಂಗ್ ಲೈನಪ್ ನೋಡಿದ್ರೆ ಇವ್ರೇನ್ ಗೆಲ್ಲೋಕೆ ತಂಡ ಕಟ್ಟುತ್ತಿದ್ದಾರೋ ಅಥವಾ ಪ್ರಯೋಗ ಮಾಡಿ ಹಾಳು ಮಾಡ್ತಿದ್ದಾರೋ ಅನ್ನುಸ್ತಿದೆ. ಗೌತಮ್ ಗಂಭೀರ್ ರೂಲ್ಸ್ಗಳು ಗ್ರೆಗ್ ಚಾಪೆಲ್ ಅವ್ರ ಕಾಲಘಟ್ಟವನ್ನ ನೆನಪಿಸ್ತಾ ಇದೆ.
ಇದನ್ನೂ ಓದಿ : ಸೂಪರ್ ಸ್ಟ್ರಾಂಗ್ SRH.. ಅಭಿ & ಹೆಡ್ ಡೆಡ್ಲಿ ಓಪನರ್ಸ್ – IPL ಟ್ರೋಫಿಗಾಗಿ ಕಾವ್ಯಾ ರಣತಂತ್ರ
ಕೆಎಲ್ ರಾಹುಲ್ ಅಂದ್ರೆ ಟೀಂ ಇಂಡಿಯಾದ ನಂಬಿಕಸ್ಥ ಪ್ಲೇಯರ್. ಮಿಡಲ್ ಆರ್ಡರ್ ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸೋ ಕೆಪಾಸಿಟಿ ಇರೋ ಪ್ಲೇಯರ್. ಬಟ್ ಇತ್ತೀಚೆಗೆ ರಾಹುಲ್ ಬ್ಯಾಟ್ನಿಂದ ಹೇಳಿಕೊಳ್ಳುವಂಥ ಇನ್ನಿಂಗ್ಸ್ ಬಂದಿಲ್ಲ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಎರಡು ಏಕದಿನ ಪಂದ್ಯಗಳಲ್ಲೂ ಇದೇ ಸಾಬೀತಾಗಿದೆ. ಮೊದಲ ಪಂದ್ಯದಲ್ಲಿ 2 ರನ್ಗಳಿಗೆ ಔಟಾಗಿದ್ದ ರಾಹುಲ್ ಎರಡನೇ ಪಂದ್ಯದಲ್ಲಿ 10 ರನ್ಗೆ ವಿಕೆಟ್ ಒಪ್ಪಿಸಿದ್ರು. ಅಂದ್ರೆ ಎರಡೂ ಪಂದ್ಯಗಳಿಂದ ಕಲೆ ಹಾಕಿದ್ದು 12 ರನ್ಗಳನ್ನ ಮಾತ್ರ. ಅಲ್ದೇ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಮ್ಯಾಚ್ನಲ್ಲೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಟ್ಟಿರಲಿಲ್ಲ. ಹೀಗಾಗಿ ರಾಹುಲ್ಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಬಗ್ಗೆ ಅನುಮಾನ ಮೂಡಿದೆ. ಆದ್ರೆ ಇದಕ್ಕೆಲ್ಲಾ ಕಾರಣ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್.
ಭಾರತ ತಂಡದ ಹೆಡ್ ಕೋಚ್ ಆಗಿರುವ ಗೌತಮ್ ಗಂಭೀರ್ ತಂತ್ರಗಾರಿಕೆಯಿಂದಾಗಿಯೇ ಕೆಎಲ್ ರಾಹುಲ್ ಫೇಲ್ಯೂರ್ ಆಗ್ತಿದ್ದಾರೆ. ಅವ್ರ ಕ್ರಿಕೆಟ್ ಕರಿಯರ್ ಡೇಂಜರ್ ಜೋನ್ನಲ್ಲಿದೆ ಅಂತಾ ಫ್ಯಾನ್ಸ್ ಕೂಡ ಅಸಮಾಧಾನ ವ್ಯಕ್ತಪಡಿಸ್ತಾ ಇದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಕೂಡ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನೇ ಹೊಣೆ ಮಾಡಿದ್ದಾರೆ. ಮುಖ್ಯ ತರಬೇತುದಾರರ ಬುದ್ಧಿಹೀನ ಪ್ರಯೋಗದಿಂದಾಗಿ ಕೆಎಲ್ ರಾಹುಲ್ ವಿಫಲರಾಗುತ್ತಿದ್ದು ಅವರು ಸಂಪೂರ್ಣವಾಗಿ ಬ್ಯಾಟಿಂಗ್ ಲಯ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡೂ ಏಕದಿನ ಪಂದ್ಯಗಳಲ್ಲೂ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಿರುವುದು ಶ್ರೀಕಾಂತ್ ಅವ್ರ ಸಿಟ್ಟಿಗೆ ಕಾರಣ ಆಗಿದೆ. ಈ ಬಗ್ಗೆ ಮಾತ್ನಾಡಿರೋ ಅವ್ರು, ಕೆಎಲ್ ರಾಹುಲ್ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕ್ಷರ್ ಪಟೇಲ್ ಚೆನ್ನಾಗಿ ಆಡ್ತಿದ್ದಾರೆ ಅದು ಒಳ್ಳೇ ವಿಚಾರನೇ. ಆದರೆ ರಾಹುಲ್ ವಿಚಾರದಲ್ಲಿ ಗಂಭೀರ್ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಐದನೇ ಕ್ರಮಾಂಕದಲ್ಲಿ ರಾಹುಲ್ ಅವರ ದಾಖಲೆಯನ್ನು ನೋಡಿ, ಈ ಕ್ರಮಾಂಕದಲ್ಲಿ ಅವರ ಅಂಕಿಅಂಶಗಳು ಬೇರೆ ಬೇರೆ ಪ್ಳೇಯರ್ಸ್ಗಿಂತ ಬೆಸ್ಟ್ ಆಗಿದೆ. ಆದ್ರೆ ಐದನೇ ಸ್ಥಾನದಲ್ಲಿ ಅವಕಾಶ ನೀಡುವ ಬದಲು, ಆರನೇ ಸ್ಥಾನದಲ್ಲಿ ಆಡಿಸಲಾಗುತ್ತಿದೆ. ಗಂಭೀರ್ ಮಾಡುತ್ತಿರುವುದು ಸಂಪೂರ್ಣವಾಗಿ ಸರಿಯಲ್ಲ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೆ ಅದು ತಂಡಕ್ಕೇ ನಷ್ಟ ಎಂದಿದ್ದಾರೆ. ಹಾಗೇ ಟಾಪ್ 4 ರಲ್ಲಿ ನಿಮಗೆ ಲೆಫ್ಟ್ ಹ್ಯಾಂಡ್, ರೈಟ್ ಹ್ಯಾಂಡ್ ಕಂಪೋಸಿಷನ್ ಬೇಕು. ಆದ್ರೆ ನಂತರದಲ್ಲಿ ಎಡಬಲ ಸಂಯೋಜನೆಯ ತಂತ್ರ ತಪ್ಪಾಗಿದೆ. ಇದೇ ತಂತ್ರವನ್ನೇ ನೀವು ಮುಂದುವರೆಸೋದಾದ್ರೆ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟು ರಿಷಭ್ ಪಂತ್‌ಗೆ ಅವಕಾಶ ನೀಡಬೇಕು. ಹೀಗಾಗಿ ರಾಹುಲ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ರಾಹುಲ್ ಬ್ಯಾಟಿಂಗ್ ಆರ್ಡರ್ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ, ಕನ್ನಡಿಗ ದೊಡ್ಡ ಗಣೇಶ್ ಕೂಡ ಪ್ರಶ್ನೆ ಮಾಡಿದ್ದಾರೆ. ಎಕ್ಸ್ಪೀರಿಯನ್ಸ್ಡ್ ಬ್ಯಾಟರ್ ಆಗಿರುವಂಥ ಕೆಎಲ್ ರಾಹುಲ್ ಗಿಂತ ಮೊದಲೇ ಅಕ್ಷರ್ ಪಟೇಲ್ ಅನ್ನು ಕ್ರೀಸಿಗೆ ಕಳಿಸುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಅವ್ರು ಎರಡೂ ಏಕದಿನ ಪಂದ್ಯಗಳಲ್ಲಿ 5ನೇ ಕ್ರಮಾಂಕದಲ್ಲಿ ಆಡ್ಬೇಕಿತ್ತು. ಆದ್ರೆ ಆಡಿದ್ದು ಬೌಲಿಂಗ್ ಆಲ್ ರೌಂಡರ್ ಅಕ್ಷರ್ ಪಟೇಲ್. ತಜ್ಞ ಬ್ಯಾಟರ್ ಆಗಿರುವ ಕೆಎಲ್ ರಾಹುಲ್ ಅವರನ್ನು 6ನೇ ಕ್ರಮಾಂಕದಲ್ಲಿ ಕಳುಹಿಸುವುದು ಪ್ರಜ್ಞಾವಂತಿಕೆಯ ಲಕ್ಷಣವೇ? ಒಂದು ವೇಳೆ ಕಠಿಣ ಪಿಚ್ ನಲ್ಲಿ ಭಾರತ ತಂಡ 5 ರನ್ನಿಗೆ 3 ವಿಕೆಟ್ ಕಳೆದುಕೊಂಡಿದ್ದಾಗಲೂ ಅಕ್ಷರ್ ಪಟೇಲ್ ಅನ್ನು ಮುಂಚಿತವಾಗಿ ಕಳಿಸುವ ಧೈರ್ಯ ನಿಮಗಿದೆಯೇ? ಒಂದು ವೇಳೆ ಇಲ್ಲವಾದಲ್ಲಿ ಈ ಪ್ರಯೋಗ ಯಾಕೆ ಮಾಡಿದಿರಿ. ನಿಜಕ್ಕೂ ತಲೆಯಿಲ್ಲದವರು ಮಾಡುವ ಕೆಲಸವಿದು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.