ಫ್ರಾನ್ಸ್ನಲ್ಲಿ ನರೇಂದ್ರ ಮೋದಿ – ಭಾರತೀಯರಿಂದ ಅದ್ಧೂರಿ ಸ್ವಾಗತ
![ಫ್ರಾನ್ಸ್ನಲ್ಲಿ ನರೇಂದ್ರ ಮೋದಿ – ಭಾರತೀಯರಿಂದ ಅದ್ಧೂರಿ ಸ್ವಾಗತ](https://suddiyaana.com/wp-content/uploads/2025/02/PTI02_10_2025_000487A.jpg)
ಫ್ರಾನ್ಸ್ನಲ್ಲಿ ಇಂದು ನಡೆಯಲಿರುವ ಎಐ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ. ಅವರು ಫ್ರಾನ್ಸ್ಗೆ ಬಂದಿಳಿಯುತ್ತಿದ್ದಂತೆ ಭಾರತೀಯ ಮೂಲದವರು ಅವರನ್ನು ವಿಶಿಷ್ಟವಾಗಿ ಬರಮಾಡಿಕೊಂಡರು. ಹಿಂದಿನ ದಿನ ರಾತ್ರಿಯ ಔತಣಕೂಟದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಆಲಿಂಗಿಸಿ ಸ್ವಾಗತಿಸಿದರು.
ಪ್ಯಾರೀಸ್ ನಲ್ಲಿ ಆತ್ಮೀಯ ಸ್ನೇಹಿತ, ಅಧ್ಯಕ್ಷ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿರುವುದು ಅತೀವ ಆನಂದ ತಂದಿದೆ ಎಂದು ಮೋದಿ ಹೇಳಿದ್ದಾರೆ. ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಮೋದಿ ಪ್ಯಾರಿಸ್ಗೆ ಆಗಮಿಸಿದ್ದು, ಫ್ರಾನ್ಸ್ ಭೇಟಿಯ ಬಳಿಕ ಮೋದಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಮೂರು ದಿನಗಳ ಫ್ರಾನ್ಸ್ ಭೇಟಿಯ ವೇಳೆ ಎಐ ಆ್ಯಕ್ಷನ್ ಸಮಿಟ್ ನ ಸಹ ಅಧ್ಯಕ್ಷತೆಯನ್ನು ಮ್ಯಾಕ್ರೋನ್ ಜತೆ ವಹಿಸಲಿದ್ದಾರೆ. ಜತೆಗೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸುವರು ಹಾಗೂ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನು ಕಳೆದ ನವೆಂಬರ್‌ನಲ್ಲಿ ಭರ್ಜರಿ ಗೆಲುವಿನ ನಂತರ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಪ್ರಧಾನಿ ಮೋದಿ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದು, ಅಮೆರಿಕದ 47 ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಒಂದು ತಿಂಗಳೊಳಗೆ ಯುಎಸ್ ಅಧ್ಯಕ್ಷರೊಂದಿಗೆ ತಮ್ಮ ಮೊದಲ ಅಧಿಕೃತ ಸಭೆಯನ್ನು ನಡೆಸಲಿದ್ದಾರೆ.