ದೆಹಲಿ ಅಂಗಳದಲ್ಲಿ ಕಮಲ ಕಿಲಕಿಲ – ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬರುತ್ತಾ ಬಿಜೆಪಿ?
![ದೆಹಲಿ ಅಂಗಳದಲ್ಲಿ ಕಮಲ ಕಿಲಕಿಲ – ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬರುತ್ತಾ ಬಿಜೆಪಿ?](https://suddiyaana.com/wp-content/uploads/2025/02/67a6bbaa89823-delhi-election-results-live-bjp-eyes-comeback-after-26-years-080425170-16x9-1.webp)
ದೆಹಲಿ ವಿಧಾನಸಭೆ ಚುನಾವಣೆ 2025ರ ಮತ ಎಣಿಕೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 42 ಸೀಟುಗಳಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ. ರಾಜ್ಯದ ಆಡಳಿತ ಪಕ್ಷ ಎಎಪಿ 31 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 39
ದೆಹಲಿಯ 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಶನಿವಾರ ಬೆಳಗ್ಗೆ ಆರಂಭವಾಗಿದೆ. ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಎಎಪಿಯ ಪ್ರಮುಖ ನಾಯಕರು ಹಿನ್ನಡೆ ಅನುಭವಿಸಿದ್ದಾರೆ.
ಚುನಾವಣೆಯಲ್ಲಿ ಕಲ್ಕಾಜಿ ಕ್ಷೇತ್ರದಲ್ಲಿ ದೆಹಲಿ ಮುಖ್ಯಮಂತ್ರಿ, ಎಎಪಿ ಅಭ್ಯರ್ಥಿ ಅತಿಶಿ ಮರ್ಲೆನಾ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ರಮೇಶ್ ಬಿಧುರಿ ಮುನ್ನಡೆಯಲ್ಲಿದ್ದಾರೆ.
ದಕ್ಷಿಣ ದೆಹಲಿ ಕ್ಷೇತ್ರದ ಮಾಜಿ ಸಂಸದ, ಬಿಜೆಪಿ ನಾಯಕ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿದ್ದರು. ಚುನಾವಣಾ ಪ್ರಚಾರದ ಆರಂಭದಲ್ಲಿಯೇ ಅವರು ದೆಹಲಿಯಲ್ಲಿ “ಪ್ರಿಯಾಂಕಾ ವಾದ್ರಾ ಕೆನ್ನೆಯಂತಹ ರಸ್ತೆ” ನಿರ್ಮಾಣ ಮಾಡುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದರು.
ರಮೇಶ್ ಬಿಧುರಿ ಹೇಳಿಕೆಗೆ ಎಎಪಿ, ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಅವರು ತಮ್ಮ ಹೇಳಿಕೆ ವಾಪಸ್ ಪಡೆದಿದ್ದರು. ಎಎಪಿ ರಮೇಶ್ ಬಿಧುರಿ ಅವರನ್ನು ದೆಹಲಿಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ಸವಾಲು ಹಾಕಿತ್ತು. ಎಎಪಿಯಲ್ಲಿ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಅತಿಶಿ ಮೂವರು ನಾಯಕರು ಹಿನ್ನಡೆಯಲ್ಲಿದ್ದಾರೆ. ನವದೆಹಲಿ ಕ್ಷೇತ್ರದಲ್ಲಿ ಅರವಿಂದ ಕೇಜ್ರಿವಾಲ್ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಅತಿಶಿ ಮಾತನಾಡಿ, “ಈ ಬಾರಿ ನಡೆಯುತ್ತಿರುವುದು ಸಾಮಾನ್ಯ ಚುನಾವಣೆಯಲ್ಲ. ದೆಹಲಿಯ ಜನರು ಎಎಪಿ, ಅರವಿಂದ ಕೇಜ್ರಿವಾಲ್ ಬೆಂಬಲಿಸಲಿದ್ದಾರೆ. ಕೇಜ್ರಿವಾಲ್ 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಆದ್ರೆ ಜನ ಬಿಜೆಪಿ ಕಡೆ ವಾಲಿದ್ದಾರೆ.