ವೈಟ್ ಬಾಲ್ ನಲ್ಲೂ HITಮ್ಯಾನ್ ಠುಸ್ – ಹೀರೋ & ವಿಲನ್ ಹರ್ಷಿತ್ ರಾಣಾ
![ವೈಟ್ ಬಾಲ್ ನಲ್ಲೂ HITಮ್ಯಾನ್ ಠುಸ್ – ಹೀರೋ & ವಿಲನ್ ಹರ್ಷಿತ್ ರಾಣಾ](https://suddiyaana.com/wp-content/uploads/2025/02/0002.jpg)
ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆಂಗ್ಲಪಡೆ ಆರಂಭದಲ್ಲಿ ಅಬ್ಬರಿಸಿದ್ರೂ ಆ ನಂತ್ರ ಚೇರಿಸಿಸಿಕೊಳ್ಳೋಕೆ ಆಗ್ಲೇ ಇಲ್ಲ. 248 ರನ್ ಗಳಿಸುವಷ್ಟ್ರಲ್ಲೇ ಆಲೌಟ್ ಆಗಿತ್ತು. 249 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಇನ್ನೂ 68 ಬಾಲ್ಗಳು ಇರುವಂತೆಯೇ ಪಂದ್ಯವನ್ನ ಗೆದ್ದು ಬೀಗಿತು. 38.4 ಓವರ್‌ಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಕಳೆದುಕೊಂಡು ಟಾರ್ಗೆಟ್ ರೀಚ್ ಆಯ್ತು. ಈ ಮೂಲಕ ಭಾರತ ತಂಡ ಬರೋಬ್ಬರಿ 414 ದಿನಗಳ ನಂತರ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಅಂದ್ರೆ 2024ರಲ್ಲಿ ಆಡಿದ್ದ ಮೂರು ಏಕದಿನ ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ.
ಇದನ್ನೂ ಓದಿ : ಜಸ್ಪ್ರೀತ್ ಬುಮ್ರಾ ಆಡದಿದ್ರೆ CUP ಗೆಲ್ಲಲ್ಲ – ಚಾಂಪಿಯನ್ಸ್ ಟ್ರೋಫಿ ಆಸೆ ಕಮರಿತಾ?
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಹರ್ಷಿತ್ ಹೀರೋ ಮತ್ತು ವಿಲನ್ ಎರಡೂ ರೋಲ್ ಮಾಡಿದ್ದಾರೆ. ರಾಣಾ ಈ ಪಂದ್ಯದಲ್ಲಿ 3 ವಿಕೆಟ್ ಪಡೆದು ತಮ್ಮ ಮೊದಲ ಪಂದ್ಯದಲ್ಲೇ ಮ್ಯಾಜಿಕ್ ಮಾಡಿದ್ರು. ಆದರೆ ಇದೇ ಹರ್ಷಿತ್ ರಾಣ ಇದೇ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಬರೊಬ್ಬರಿ 26ರನ್ ನೀಡಿ ಮೊದಲು ವಿಲನ್ ಆಗಿದ್ದರು. ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಕೇವಲ 11 ರನ್‌ಗಳನ್ನು ನೀಡಿದ್ದ ರಾಣಾ ಒಂದು ಮೇಡನ್ ಕೂಡ ಪಡೆದಿದ್ದರು. ಆದರೆ ಅವರ ಮೂರನೇ ಓವರ್ ನಲ್ಲಿ 26 ರನ್ ಹೊಡೆಸಿಕೊಂಡು ಭಾರತ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾದರು. ಇದು ODIಗಳಲ್ಲಿ ಭಾರತಕ್ಕೆ ನಾಲ್ಕನೇ ಅತ್ಯಂತ ದುಬಾರಿ ಮತ್ತು ಚೊಚ್ಚಲ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ದುಬಾರಿ ರನ್ ಹೊಡೆಸಿಕೊಂಡ ನಾಲ್ಕನೇ ಆಟಗಾರ ಎನಿಸಿಕೊಂಡರು. ಆ ಬಳಿಕ ಲಯಕ್ಕೆ ಮರಳಿದ ರಾಣಾ ಮೂರು ವಿಕೆಟ್ ಕಿತ್ತು ಸೈ ಎನಿಸಿಕೊಂಡ್ರು.
ಟೀಮ್ ಇಂಡಿಯಾ ಸ್ಟಾರ್ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಇಂಗ್ಲೆಂಡ್ನ ಮಾಜಿ ನಾಯಕ ಜೋ ರೂಟ್, ಜಾಕೋಬ್ ಬೆಥೆಲ್ ಹಾಗೂ ಆದಿಲ್ ರಶೀದ್ ವಿಕೆಟ್ ಪಡೆದರು. 9 ಓವರ್ ಬೌಲಿಂಗ್ ಮಾಡಿದ 1 ಮೇಡನ್ ಸಹಿತ 26 ರನ್ ನೀಡಿ 3 ವಿಕೆಟ್ ಪಡೆದರು. ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ 198 ಪಂದ್ಯಗಳನ್ನಾಡಿರುವುದ ಜಡೇಜಾ 223 ವಿಕೆಟ್ ಪಡೆದಿದ್ದಾರೆ. ಹಾಗೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪಡೆದ 5 ನೇ ಭಾರತೀಯ ಬೌಲರ್ ಮತ್ತು 4 ನೇ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೀಗೆ ಬೌಲಿಂಗ್ ನಲ್ಲಿ ಆಂಗ್ಲರನ್ನ ಕಾಡಿದ ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್ನಲ್ಲೂ ಬಿರುಗಾಳಿ ಎಬ್ಬಿಸಿದ್ರು.
ಇಂಗ್ಲೆಂಡ್ ನೀಡಿದ್ದ ಗುರಿ ಬೆನ್ನಟ್ಟಿ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ರು. ಏಕದಿನ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಡೆಬ್ಯೂ ಮಾಡಿದ್ದ ಯಶಸ್ವಿ ಜೈಸ್ವಾಲ್ 15 ರನ್ ಗಳಿಸಿ ಔಟಾದ್ರು. ಇನ್ನೂ ರೋಹಿತ್ ಅಂತೂ 2 ರನ್ ಗಳಿಸುವಷ್ಟರಲ್ಲೇ ಸುಸ್ತಾದ್ರು. ಆದ್ರೆ ಆ ನಂತ್ರ ಕ್ರೀಸ್ಗೆ ಬಂದ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದ್ರು. ಶುಭ್ಮನ್ ಗಿಲ್ ಕೇವಲ 96 ಎಸೆತಗಳಲ್ಲಿ 87 ರನ್ಗಳಿಸುವ ಮೂಲಕ ಇಂಗ್ಲೆಂಡ್ ಬೌಲರ್ಗಳನ್ನ ಬೆಂಡೆತ್ತಿದ್ರು. ಗಿಲ್ ಈ ಪಂದ್ಯದಲ್ಲಿ 14 ಬೌಂಡರಿಗಳನ್ನು ಬಾರಿಸಿದ್ರು. ಗಿಲ್ ಜೊತೆ ಉತ್ತಮ ಸಾಥ್ ಕೊಟ್ಟ ಶ್ರೇಯಸ್ ಅಯ್ಯರ್ ಹೊಡಿಬಡಿ ಆಟವಾಡಿದ್ರು. 36 ಎಸೆತಗಳಲ್ಲೇ 59 ರನ್ ಬಾರಿಸಿದ್ರು. ಹಾಗೇ ಅಕ್ಷರ್ ಪಟೇಲ್ ಕೂಡ 52 ರನ್ ಬಾರಿಸಿದ್ರು. ಆದ್ರೆ ಕನ್ನಡಿಗ ಕೆಎಲ್ ರಾಹುಲ್ ಕೇವಲ ಸಿಂಗಲ್ ಡಿಜಿಟ್ಗೆ ಔಟ್ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಕೆಎಲ್ ರಾಹುಲ್ 9 ಬಾಲ್ಗೆ ಕೇವಲ ಎರಡು ರನ್ ಗಳಿಸಿದ್ದು, ಆದಿಲ್ ರಶೀದ್ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ನಂತ್ರ ಪಾಂಡ್ಯ ಮತ್ತು ಜಡೇಜಾ ಔಟ್ ಆಗದೇ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು.