ಮಹಾಕುಂಭದ ಮಹಾ ರಹಸ್ಯ – ಕಾಲ್ತುಳಿತದ ಅಸಲಿ ವರದಿ ಎಲ್ಲಿ?
ಮಹಾಕುಂಭಮೇಳ.. ಕೇವಲ ಭಾರತ ಮಾತ್ರವಲ್ಲ ವಿಶ್ವದ ಗಮನ ಸೆಳೆದ ನಮ್ಮ ಭಾರತದ ದೊಡ್ಡ ಧಾರ್ಮಿಕ ಸಮಾಗಮ. ದೇಶ ವಿದೇಶದ ಭಕ್ತರ ಪ್ರಯಾಗ್ ರಾಜ್‌ನತ್ತ ಸಾಲುಗಟ್ಟಿ ಹೋಗಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ದಿನಕ್ಕ 3-4 ಕೋಟಿ ಜನ ಒಂದೇ ಕಡೆ ಸೆರುತ್ತಿದ್ದಾರೆ. ಅಂದ್ರೆ ನೀವು ಊಹಿಸಿ ಅಲ್ಲಿನ ಪರಿಸ್ಥಿತಿ ಹೇಗ್ ಇರುತ್ತೆ ಅನ್ನೋದನ್ನ. ಜನವರಿ 13 ರಿಂದ ಆರಂಭವಾದ ಕುಂಭಮೇಳದಲ್ಲಿ ಇಲ್ಲಿ ತನಕ 14 ಕೋಟಿಗೂ ಹೆಚ್ಚು ಜನ ಭಾಗವಹಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹೀಗೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ ಜನವರಿ 29 ರಂದು ಅಂದ್ರೆ ಮಹಾಕುಂಭಮೇಳದ ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ ಸಾವು ನೋವು ಸಂಭವಿಸಿತ್ತು. ಆದ್ರೆ ಈ ಘಟನೆ ಈಗ ರಾಜ್ಯಕೀಯ ಸ್ವರೂಪ ಪಡೆದುಕೊಂಡಿದ್ದು, ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.. ಯೋಗಿ ಸರ್ಕಾರ ಸತ್ತವರ ಲೆಕ್ಕ ಮುಚ್ಚಿಡ್ತಿದ್ಯಾ ಅನ್ನೋ ಪ್ರಶ್ನೆ ಎಳುವುದಕ್ಕೆ ಕಾರಣವಾಗಿದೆ. ನೂರಾರು ಸಂಖ್ಯೆಯಲ್ಲಿ ಜನ ಸತ್ತಿದ್ದಾರೆ, ಕೆಲವರ ದೇಹವನ್ನ ನದಿಗೆ ಎಸೆಯಲಾಗಿದೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.
ಜನವರಿ29ರಂದು ಮೌನಿ ಅಮಾವಾಸ್ಯೆ ದಿನ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಭಕ್ತರು ಸಾವನ್ನಪ್ಪಿದ ಪ್ರಕರಣ ಇದೀಗ ಬಿಜೆಪಿ -ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಕಾಲ್ತುಳಿತಕ್ಕೆ ಬಲಿಯಾದವರ ವಿಷಯದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ. ಸರ್ಕಾರ ಹೇಳಿದಂತೆ ಘಟನೆಯಲ್ಲಿ 30 ಜನರು ಸತ್ತಿಲ್ಲ. 300-2000 ಜನರು ಸಾವನ್ನಪ್ಪಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡುತ್ತಿದ್ದರೆ, ಇದೊಂದು ಪಿತೂರಿ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕಾಲ್ತುಳಿತದ ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲ ಜ್ಯೋತಿಷ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಕೂಡ ಆರೋಪಿಸಿದ್ದಾರೆ ಕಾಲ್ತುಳಿತ ಘಟನೆ ಬಗ್ಗೆ ಜ್ಯೋತಿಷ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಮಾತನಾಡಿರುವುದು ಈಗ ಸಾಕಷ್ಟು ಸುದ್ದಿಯಾಗುತ್ತಿದೆ. ಕಾಲ್ತುಳಿತದಲ್ಲಿ ಉಂಟಾದ ಸಾವು-ನೋವುಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ನಿಖರ ಮಾಹಿತಿಯನ್ನು ಹಲವು ಗಂಟೆಗಳ ಕಾಲ ಮುಚ್ಚಿಟ್ಟಿದ್ದರು ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಆರೋಪಿಸಿದ್ದಾರೆ. ಹಾಗಿದ್ರೆ ಅವರು ಏನ್ ಹೇಳಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ..
‘ಕಾಲ್ತುಳಿತದ ಬಗ್ಗೆ ಯೋಗಿ ಸುಳ್ಳು ಹೇಳಿದ್ದಾರೆ’
‘ ಘಟನೆಯ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸುಳ್ಳು ಹೇಳಿದ್ದಾರೆ. ನಾವು ಜ.29 ರಂದು ಬೆಳಿಗ್ಗೆ ಎದ್ದ ಕೂಡಲೇ ಕಾಲ್ತುಳಿತ ಉಂಟಾಗಿ 17 ಮಂದಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿತ್ತು. ನಾವು ತೆರಳಬೇಕಿದ್ದ ಅಮೃತ ಸ್ನಾನವನ್ನೂ ರದ್ದುಗೊಳಿಸಲಾಗಿತ್ತು. ಬೆಳಗ್ಗೆ 10:30 ರ ವೇಳೆಗೆ ಸಿಎಂ ಈ ಘಟನೆ ಬಗ್ಗೆ ಮಾತನಾಡಿ ಹಲವು ಭಕ್ತಾದಿಗಳಿಗೆ ಗಾಯಗಳಾಗಿವೆ, ಇತರ ಭಕ್ತಾದಿಗಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದರು. ಆದರೆ ಎಲ್ಲಿಯೂ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಮಾತನಾಡಲಿಲ್ಲ. ಹಾಗಾಗಿ ನಾನು ಇತರ ಶಂಕರಾಚಾರ್ಯರೊಂದಿಗೆ ಪವಿತ್ರ ಸ್ನಾನಕ್ಕೆ ಹೋದೆ. ಯೋಗಿ ಮೊದಲು ಸಾವು ಇಲ್ಲ ಎಂದು ಹೇಳಿದಾಗ ಅದು ನಮಗೆ ಸಿಎಂ ನೀಡಿದ ತಪ್ಪು ಮಾಹಿತಿಯಲ್ಲವೇ?’ ಸಂಜೆ ವೇಳೆಗೆ ಸಿಎಂ ಸಾವಿನ ಸಂಖ್ಯೆ ಬಗ್ಗೆ ಒಪ್ಪಿಕೊಂಡರು ಅದಕ್ಕಿಂತ ಮುಂಚೆ ಅವರಿಗೆ ಕಾಲ್ತುಳಿತದಿಂದ ಸಾವು ಸಂಭವಿಸಿರುವುದು ಗೊತ್ತಿರಲಿಲ್ಲವೇ? ಸಿಎಂ ಯೋಗಿ ಆದಿತ್ಯನಾಥ್ ಸುಳ್ಳುಗಾರ, ಸಿಎಂ ಪದವಿಯಲ್ಲಿರಲು ಅವರು ಯೋಗ್ಯರಲ್ಲ ರಾಜೀನಾಮೆ ಕೊಡಲಿ. ಹಾಗೇ ಸತ್ತಿದ್ದು 30 ಜನ ಅಂತ ಯುಪಿ ಸರ್ಕಾರ ಹೇಳಿದೆ, ಆದ್ರೆ ಶವಗಳ ಮೇಲೆ ಬೇರೆ ಬೇರೆ ನಂಬರ್ ಬರೆದಿದ್ದು ಯಾಕೆ? ಕೆಲ ಶವಗಳ ಮೇಲೆ 100 , 120 ಅನ್ನೋ ನಂಬರ್ ಇದೆ. ಸತ್ತಿದ್ದು 30 ಜನವಾದ್ರೆ, ಹೆಚ್ಚಿಗೆ ಯಾಕೆ ನಂಬರ್ ಹಾಕಿದ್ದಾರೆ. ಯೋಗಿ ಸಾವಿನ ಲೆಕ್ಕ ಮುಚ್ಚಿಟ್ಟಿದ್ದಾರೆ’ – ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ, ಜ್ಯೋತಿಷ್ ಪೀಠ
ಹೀಗೆ ಆರೋಪ ಮಾಡಿದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮತ್ತಷ್ಟು ಜನಕ್ಕೆ ತಿರುಗೇಟು ನೀಡಿದ್ದಾರೆ. ಕುಂಭಮೇಳದಲ್ಲಿ ಸತ್ತವರು ಪುಣ್ಯವಂತರು. ಅವರಿಗೆ ಮೋಕ್ಷ ಸಿಗುತ್ತೆ ಅನ್ನೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಹೇಳುತ್ತಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಸ್ವಾಮೀಜಿ.. ಕುಂಭಮೇಳದಲ್ಲಿ ಸತ್ತರೇ ಮೋಕ್ಷ ಸಿಗೋದಾದ್ರೆ, ನೀವು ಇಲ್ಲೇ ಬಂದು ಸಾಯಿರಿ. ನಾವು ನಿಮಗೆ ಮೋಕ್ಷ ಕೊಡಿಸುತ್ತೇವೆ ಅಂತ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ.
ಸಾವಿನ ಲೆಕ್ಕ ಕೊಡಿ ಎಂದ ಮಲ್ಲಿಕಾರ್ಜುನ ಖರ್ಗೆ
ಮಹಾ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ 1,000 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ಹೇಳಿದ್ದೇನೆ. ಒಂದು ವೇಳೆ ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ಸಾವಿನ ಸಂಖ್ಯೆಯ ನಿಖರವಾದ ವರದಿಯನ್ನು ಬಿಡುಗಡೆ ಮಾಡಲಿ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ ಕುಂಭಮೇಳದಲ್ಲಿ ತುಂಬಾ ಜನರು ಅಲ್ಲಿ ಪ್ರಾಣ ಕಳೆದುಕೊಂಡರು. ನಾನು ಅಲ್ಲಿ 1 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ನಾನು ಹೇಳಿದ್ದೇನೆ. ನಾನು ಹೇಳಿದ್ದು ತಪ್ಪು ಎನ್ನುವುದಾದರೆ ಕನಿಷ್ಠ ಅಲ್ಲಿ ಆಗಿರುವ ಸಾವುಗಳ ಸಂಖ್ಯೆಯ ನಿಖರವಾದ ವರದಿ ಕೊಡಿ ಎಂದು ಆಗ್ರಹಿಸಿದ್ರು.
ಕಾಲ್ತುಳಿತದಲ್ಲಿ ಸತ್ತವರ ಶವ ನದಿಗೆ ಎಸೆದ್ರಾ?
ಮಹಾ ಕುಂಭಮೇಳದಲ್ಲಿ ಕಾಲ್ತುಳಿತದ ನಂತರ ಶವಗಳನ್ನು ನದಿಗೆ ಎಸೆಯಲಾಗಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಹೇಳಿಕೆ ನೀಡಿದ್ದಾರೆ.
‘ಮಹಾ ಕುಂಭ ಮೇಳದ ಬಗ್ಗೆ ಸರ್ಕಾರ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಸಾಮಾನ್ಯ ಜನರಿಗೆ ಯಾವುದೇ ಸೌಲಭ್ಯಗಳಿಲ್ಲ. ಆದರೆ ವಿಐಪಿ ಜನರು ಕುಂಭಕ್ಕೆ ಹೋಗುತ್ತಾರೆ, ಸ್ನಾನ ಮಾಡುತ್ತಾರೆ ಮತ್ತು ಅವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಘಟನೆಯ ನಂತರ ಮಹಾ ಕುಂಭಮೇಳದಲ್ಲಿ ಜಲ ಮಾಲಿನ್ಯವಾಗಿದೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ನೀರಿಗೆ ಎಸೆಯಲಾಗಿದ್ದು, ಇದರಿಂದ ನೀರು ಕಲುಷಿತಗೊಂಡಿದೆ’ –
– ಜಯಾ ಬಚ್ಚನ್, ರಾಜ್ಯಸಭಾ ಸದಸ್ಯರು
‘ಇಲ್ಲಿ ಯಾವುದೇ ಪಿತೂರಿ ನಡೆದಿಲ್ಲ’
ಉತ್ತರ ಪ್ರದೇಶ ಸರಕಾರವು ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದನ್ನ ತಪ್ಪಿಸಲು ಮಹಾ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಸಾವುಗಳ ನಿಖರವಾದ ಸಂಖ್ಯೆಯನ್ನು ಬಚ್ಚಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಕೂಡ ಆರೋಪಿಸಿದ್ದಾರೆ.
‘ಉ.ಪ್ರದೇಶ ಸರಕಾರ ಮತ್ತು ಮುಖ್ಯಮಂತ್ರಿ ನೈತಿಕವಾಗಿ ಮತ್ತು ರಾಜಕೀಯವಾಗಿಯೂ ವಿಫಲಗೊಂಡಿದ್ದಾರೆ. ಪರಿಹಾರವನ್ನು ಪಾವತಿಸುವುದರಿಂದ ನುಣುಚಿಕೊಳ್ಳಲು ಸರ್ಕಾರವು ಸಾವುಗಳ ಸಂಖ್ಯೆಯನ್ನು ಬಚ್ಚಿಟ್ಟಿದೆ. ಕಾಲ್ತುಳಿತಕ್ಕೆ ಬಲಿಯಾದವರ ಶವಗಳನ್ನು ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ಸರ್ಕಾರ ತೆರವು ಮಾಡಿದೆ. ದೇವರ ಆಶೀರ್ವಾದ ಪಡೆಯಲು ಬಂದವರು ತಮ್ಮ ಬಂಧುಮಿತ್ರರು ಜೀವಕಳೆದುಕೊಂಡಿದ್ದನ್ನು ನೋಡಿಕೊಂಡು ತೆರಳುವಂತಾಯಿತು. ಇಲ್ಲಿ ಯಾವುದೇ ಪಿತೂರಿ ನಡೆದಿಲ್ಲ. ದುರಂತ ಸಂಭವಿಸಿದ್ದಕ್ಕೆ ಸರಕಾರದ ವೈಫಲ್ಯ ಕಾರಣವಾಗಿದೆ. ಸಂತರು ಸಹ ಯೋಗಿ ಆದಿತ್ಯನಾಥ ಸುಳ್ಳುಗಾರ ಎಂದು ಹೇಳುತ್ತಿದ್ದಾರೆ’ – ಅಖಿಲೇಶ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
‘2 ಸಾವಿರ ಜನರು ಸತ್ತಿದ್ದಾರೆ’
ಇನ್ನೊಂದೆಡೆ ರಾಜ್ಯಸಭೆಯಲ್ಲಿ ಮಾತನಾಡಿದ ಶಿವಸೇನೆಯ ಉದ್ದವ್ ಬಣದ ಸದಸ್ಯ ಸಂಜಯ್ ರಾವುತ್, ‘4-5 ದಿನಗಳ ಹಿಂದೆ ಕಾಲ್ತುಳಿತ ಸಂಭವಿಸಿದಾಗ ಅದು ವದಂತಿ ಎನ್ನಲಾಗಿತ್ತು. ಇದರಲ್ಲಿ 30 ಜನರು ಸತ್ತರು. ಈ ಅಂಕಿ ಅಂಶ ನಿಜವೇ? ಅದನ್ನು ಮರೆಮಾಡಬೇಡಿ. ಒಬ್ಬ ವ್ಯಕ್ತಿ ಸತ್ತರೂ ನಾವು ಜವಾಬ್ದಾರರು. ನಾವು ನಮ್ಮ ಕಣ್ಣಾರೆ ನೋಡಿದ ಅಂಕಿ ಅಂಶಗಳ ಪ್ರಕಾರ 2 ಸಾವಿರ ಜನರು ಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ನಂತ್ರ 15 ಸಾವಿರ ಜನ ಮಿಸ್ಸಿಂಗ್
ಹಾಗೇ ಕುಂಭಮೇಳದ ಕಾಲ್ತುಳಿತದ ನಂತ್ರ 15 ಸಾವಿರ ಜನ ಮಿಸ್ಸಿಂಗ್ ಆಗಿದ್ದಾರೆಂದು ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಕೆಲವರು ಗಂಗಾ ನದಿಯಲ್ಲಿ ಕೊಚ್ಚಿ ಹೋಗಿದ್ದು ಇತರರು ಸಮಾಧಿಯಾಗುದ್ದಾರೆ ಎಂದು ಹೇಳಿದ್ದಾರೆ. ಮೃತರ ಸಂಬಂಧಿಕರಿಗೆ 15 ರಿಂದ 20 ಸಾವಿರ ರೂಪಾಯಿಗಳನ್ನು ನೀಡಿ ಶವಗಳನ್ನು ತೆಗೆದುಕೊಂಡು ಹೋಗುವಂತೆ ಒತ್ತಡ ಹೇರಲಾಗಿದೆ. ಯಾವುದೇ ಅಧಿಕಾರಿಯ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ. ನಾವು ಈ ವಿಷಯದ ಕುರಿತು ನಾವು ಸದನದಲ್ಲಿ ಧ್ವನಿ ಎತ್ತಿದರೆ ಅದನ್ನು ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿಪಕ್ಷಗಳ ನಾಯಕರು ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಸತ್ತವರು ನೂರಾರು ಜನ ಅದ್ರ ಲೆಕ್ಕವನ್ನ ಬಿಜೆಪಿ ಮುಚ್ಚಿಟ್ಟಿದೆ ಅಂದ್ರೆ, ಯುಪಿ ಸರ್ಕಾರ ಮತ್ತು ಬಿಜೆಪಿ ನಾಯಕರು ಇದೊಂದು ಪಿತೂರಿ ಅಂತ ಆರೋಪಿಸುತ್ತಿದೆ.
ಕಾಲ್ತುಳಿತ ‘ದೊಡ್ಡ ಘಟನೆಯೇನಲ್ಲ’
ಇನ್ನು ಘಟನೆ ಬಗ್ಗೆ ವಿಪಕ್ಷಗಳು ಆರೋಪ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಘಟನೆಯಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ದೊಡ್ಡ ಘಟನೆಯೇನಲ್ಲ. ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.
‘ನಾವು ಕುಂಭಕ್ಕೆ ಹೋಗಿ, ನಾವು ಚೆನ್ನಾಗಿ ಸ್ನಾನ ಮಾಡಿದ್ದೇವು. ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿತ್ತು. ಇದರ ಹೊರತಾಗಿಯೂ ಕಾಲ್ತುಳಿತ ನಡೆದಿದೆ. ಅದು ದೊಡ್ಡ ಘಟನೆಯೇನಲ್ಲ. ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಕುಂಭ ಮೇಳವನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ. ತುಂಬಾ ಜನರು ಬರುತ್ತಿದ್ದಾರೆ, ಅದನ್ನು ನಿರ್ವಹಿಸುವುದು ತುಂಬಾ ಕಷ್ಟ. ಆದರೆ ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ.’ –
ಹೇಮಾ ಮಾಲಿನಿ, ಸಂಸದೆ
ಸಾವಿನ ವಿಷಯದಲ್ಲಿ ವಿಪಕ್ಷ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ
ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸನಾತನ ಧರ್ಮವನ್ನು ವಿರೋಧಿಸುವ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಮೊದಲಾದವರು ಕುಂಭಮೇಳದಲ್ಲಿ ಇನ್ನಷ್ಟು ದೊಡ್ಡ ದುರಂತ ಬಯಸಿದ್ದರು. ಸಾವಿನ ವಿಷಯದಲ್ಲಿ ವಿಪಕ್ಷ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಒಟ್ನಲ್ಲಿ ವಿಪಕ್ಷಗಳು ಕಾಲ್ತುಳಿತದಲ್ಲಿ ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ, ಯುಪಿ ಸರ್ಕಾರ ಲೆಕ್ಕವನ್ನ ಮುಚ್ಚಿಟ್ಟಿದೆ ಅಂತ ಆರೋಪಿಸುತ್ತಿವೆ. ಆದ್ರೆ ಯೋಗಿ ಸರ್ಕಾರ ಮತ್ತು ಬಿಜೆಪಿ ನಾಯಕರು ಇದು ಯಾರೋ ಬೇಕಂತಲೇ ಮಾಡಿದ ಪಿತೂರಿ ಅಂತ ಹೇಳುತ್ತಿದ್ದಾರೆ. ಇಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಅನ್ನೋದು ಆ ದೇವರಿಗೆ ಗೊತ್ತು..