PCBಗೆ ತಲೆಯೇ ಇಲ್ವಾ? – ಕ್ರಿಕೆಟ್ ಆಡೋದಿಕ್ಕಾ.. ವಿಡಿಯೋ ಗೇಮ್ ಗಾ?
ಸೆಂಚುರಿ ಮಾನದಂಡ ಮುಳುವಾಗುತ್ತಾ?
ಚಾಂಪಿಯನ್ಸ್ ಟ್ರೋಫಿ ಫೈಟ್ಗೆ ಇನ್ನು ಎರಡೇ ವಾರ. ಎಂಟೂ ರಾಷ್ಟ್ರಗಳು ಈಗಾಗ್ಲೇ ತಂಡವನ್ನ ಪ್ರಕಟ ಮಾಡಿ ಸ್ಟ್ರಾಟಜಿಗಳನ್ನ ಮಾಡಿಕೊಳ್ತಿವೆ. ಆದ್ರೆ ಪಾಕಿಸ್ತಾನ ಅನೌನ್ಸ್ ಮಾಡಿರುವ 15 ಸದಸ್ಯರ ತಂಡದ ಆಯ್ಕೆಯ ಬಗ್ಗೆ ಪಾಕಿಸ್ತಾನದ ಆಟಗಾರರೇ ಪ್ರಶ್ನೆಗಳನ್ನ ಎತ್ತಿದ್ದಾರೆ. ಅದ್ರಲ್ಲೂ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ, ಅಬ್ದುರ್ ರೌಫ್ ಖಾನ್ ತಂಡ ಸ್ಟ್ರಾಂಗ್ ಇಲ್ಲ ಅಂತಾ ನೇರಾನೇರ ಹೇಳಿದ್ದಾರೆ. ಅದಕ್ಕೆ ಕೆಲ ಕಾರಣಗಳನ್ನೂ ನೀಡಿದ್ದಾರೆ.
ಇದನ್ನೂ ಓದಿ : ಬುಮ್ರಾ ಬದಲಿಗೆ ಹರ್ಷಿತ್ ರಾಣಾ? – ಶಿಷ್ಯನ ಮೇಲೆ ಗಂಭೀರ್ ಹುಚ್ಚು ಪ್ರೀತಿ?
ಚಾಂಪಿಯನ್ಸ್ ಟ್ರೋಫಿ ತಂಡದ ಬಗ್ಗೆ ಚಕಾರ ಎತ್ತಿರೋ ಪಾಕಿಸ್ತಾನದ ಲೆಜೆಂಡ್ ಕ್ರಿಕೆಟರ್ ಅಬ್ದುರ್ ರೌಫ್ ಖಾನ್, ಈ ತಂಡದಿಂದ ಟೂರ್ನಿ ಗೆಲ್ಲುವುದು ಅಸಾಧ್ಯ ಅಂತಾ ಹೇಳಿದ್ದಾರೆ. ಪಾಕ್ ಟಿವಿ ಚಾನೆಲ್ ಚರ್ಚೆಯಲ್ಲಿ ಭಾಗಿಯಾಗಿದ್ದ ರೌಫ್ ಖಾನ್, ತಂಡದಲ್ಲಿನ ಮೈನಸ್ ಆಗುವಂಥ ಅಂಶಗಳನ್ನ ಹೇಳಿದ್ದಾರೆ. ಅದ್ರಲ್ಲೂ ಪಾಕಿಸ್ತಾನ್ ತಂಡದಲ್ಲಿ 6 ಆಟಗಾರರನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಾರಣ ಈ ಆಟಗಾರರು ಏಕದಿನ ಟೂರ್ನಿ ಆಡಿ ವರ್ಷಗಳೇ ಕಳೆದಿವೆ. ಇನ್ನು ಕೆಲವರಿಗೆ ಅನುಭವದ ಕೊರತೆಯಿದೆ. ಹೀಗಾಗಿ ಯಾವುದೋ ಒಂದು ಆಟ, ಒಂದು ಸೆಂಚುರಿಯನ್ನ ಹೈಲೆಟ್ ಮಾಡಿ ಸೆಲೆಕ್ಟ್ ಮಾಡಿದ್ರೆ ಅವ್ರು ಹೇಗೆ ಕಪ್ ಗೆಲ್ತಾರೆ ಅಂತಾ ಟೀಕಿಸಿದ್ದಾರೆ.
ಮೊದಲನೆಯದಾಗಿ ಫಖರ್ ಝಮಾನ್ ಅವ್ರ ಸೆಲೆಕ್ಷನ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. 2023ರ ವಿಶ್ವಕಪ್ನಲ್ಲಿ ಪಾಕಿಸ್ತಾನ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಅದಾದ ಬಳಿಕ ಒಡಿಐ ಫಾರ್ಮೆಟ್ನಲ್ಲಿ ಕಣಕ್ಕಿಳಿದಿಲ್ಲ. ಇನ್ನು ಉಸ್ಮಾನ್ ಖಾನ್ ಈವರೆಗೂ ಏಕದಿನ ಕ್ರಿಕೆಟ್ ಆಡಿಯೇ ಇಲ್ಲ. ಚಾಂಪಿಯನ್ಸ್ ಟ್ರೋಫಿಯ ಮೂಲಕ ಪಾಕಿಸ್ತಾನ್ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಹಾಗೇ ಫಹೀಮ್ ಅಶ್ರಫ್ ಕೂಡ 2023ರ ಏಷ್ಯಾಕಪ್ನಲ್ಲಿ ಕೊನೆಯ ಬಾರಿ ಪಾಕಿಸ್ತಾನ ಪರ ಕಾಣಿಸಿಕೊಂಡಿದ್ದರು. ಅಲ್ಲಿಂದ ನಂತರ ಪಾಕ್ ಪರ ಆಡಿಯೇ ಇರಲಿಲ್ಲ. ಇನ್ನು ಖುಶ್ದಿಲ್ ಶಾ ಕೂಡ ಅಕ್ಟೋಬರ್ 2023 ರಿಂದ ಪಾಕಿಸ್ತಾನ್ ಪರ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಜೊತೆಗೆ ಪಾಕಿಸ್ತಾನ್ ತಂಡಕ್ಕೆ ಸ್ಪಿನ್ನರ್ ಆಗಿ ಆಯ್ಕೆಯಾಗಿರುವ ಅಬ್ರಾರ್ ಅಹ್ಮದ್ ಅವರ ಅನುಭವ ಕೇವಲ 4 ಏಕದಿನ ಪಂದ್ಯಗಳು ಮಾತ್ರ. ಇಷ್ಟೇ ಅಲ್ದೇ ಪ್ರಮುಖ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿರುವ ತಯ್ಯಬ್ ತಾಹಿರ್ ಅವರ ಅನುಭವ ಕೇವಲ 3 ಏಕದಿನ ಪಂದ್ಯಗಳು ಮಾತ್ರ. ಹೀಗೆ ಅನಾನುಭವಿ ಹಾಗೂ ವರ್ಷಗಳ ಹಿಂದೆ ಕಣಕ್ಕಿಳಿದಿದ್ದ ಆಟಗಾರರನ್ನು ಆಯ್ಕೆ ಮಾಡಿ ಪಾಕಿಸ್ತಾನ್ ತಂಡವು ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಹೊರಟಿದೆ. ಆದರೆ ಈ ಟೂರ್ನಿಯಲ್ಲಿ ಎಲ್ಲರೂ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ. ಹೀಗಾಗಿ ಇಂತಹ ತಂಡದೊಂದಿಗೆ ಪಾಕ್ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಹೇಗೆ ಎಂದು ಅಬ್ದುರ್ ರೌಫ್ ಖಾನ್ ಪ್ರಶ್ನಿಸಿದ್ದಾರೆ.
ಪಾಕ್ ಆಟಗಾರ ವಾಸಿಂ ಅಕ್ರಂ ಕೂಡ ಪಾಕಿಸ್ತಾನ್ ತಂಡದ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಎಲ್ಲಾ ತಂಡಗಳು ಆಲ್ರೌಂಡರ್ಗಳ ಆಯ್ಕೆಗೆ ಹೆಚ್ಚಿನ ಒತ್ತು ನೀಡಿದೆ. ಬಟ್ ಪಾಕಿಸ್ತಾನ ತಂಡ ಹಾಗೆ ಮಾಡಿಲ್ಲ. ಎಲ್ಲಾ ಟೀಂ ಅನೌನ್ಸ್ ಆದ್ಮೇಲೆ ಪಾಕಿಸ್ತಾನ್ ತನ್ನ ತಂಡವನ್ನು ಪ್ರಕಟಿಸಿದೆ. ಬೇರೆ ತಂಡಗಳ ಸ್ಟ್ರಾಟಜಿಯನ್ನೂ ಕೂಡ ಗಮನಿಸದೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡಿದೆ ಎಂದು ವಾಸಿಂ ಅಕ್ರಂ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಇಂತಹ ತಂಡದೊಂದಿಗೆ ಐಸಿಸಿಯಂತಹ ಮಹತ್ವದ ಟೂರ್ನಿಗಳನ್ನು ಗೆಲ್ಲುವುದು ಕಷ್ಟಸಾಧ್ಯ ಎಂದು ವಾಸಿಂ ಅಕ್ರಂ ಹಾಗೂ ಅಬ್ದುರ್ ರೌಫ್ ಖಾನ್ ಟೀಕಿಸಿದ್ದಾರೆ. ಪಾಕ್ ತಂಡದ ಲೆಜೆಂಡ್ ಕ್ರಿಕೆಟಿಗರ ಈ ಹೇಳಿಕೆಗಳ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನ್ ತಂಡ ಸೋಲೊಪ್ಪಿಕೊಂಡಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.