ಕ್ರೀಡಾಂಗಣಗಳು ಸಿದ್ಧವಾಗದೆ ಇರುವುದೇ ತಲೆನೋವು – ಪಾಕ್ ನಲ್ಲಿ ನಡೆಯಲ್ವಾ ಉದ್ಘಾಟನಾ ಪಂದ್ಯ?
ಪಾಕಿಸ್ತಾನದಲ್ಲಿ ದಶಕಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಾಗ್ತಿವೆ. ಪಿಸಿಬಿ ಕೂಡ ಬಿಲ್ಡಪ್ ಕೊಟ್ಟು ಕುಣಿದಾಡಿತ್ತು. ಆದ್ರೆ ಅಂದುಕೊಂಡಂಗೆ ಯಾವುದೂ ನಡೀತಿಲ್ಲ ಅಷ್ಟೇ. ಅಲ್ಲಿನ ಮೈದಾನಗಳ ರಿಪೇರಿ ಕೆಲ್ಸ ಕಂಪ್ಲೀಟ್ ಆಗೇ ಇಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೆಲ ನಿರ್ಧಾರಗಳನ್ನ ಕೈಗೊಂಡಿದೆ. ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭವನ್ನೇ ರದ್ದುಗೊಳಿಸೋ ತೀರ್ಮಾನ ಮಾಡಿದೆ.
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು 3 ವಾರಗಳೂ ಬಾಕಿ ಇಲ್ಲ. ಆದ್ರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಲಾಹೋರ್ ಮತ್ತು ಕರಾಚಿಯ ಕ್ರೀಡಾಂಗಣಗಳನ್ನು ಈವರೆಗೂ ನವೀಕರಣಗೊಳಿಸಿಲ್ಲ. ಇದೇ ಕಾರಣಕ್ಕೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲು ಪಿಸಿಬಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಟೂರ್ನಿಗೂ ಮುನ್ನ ಯಾವುದೇ ಪತ್ರಿಕಾಗೋಷ್ಠಿ ಹಾಗೂ ನಾಯಕರ ಅಧಿಕೃತ ಫೋಟೋಶೂಟ್ ಇರುವುದಿಲ್ಲ ಎಂತಲೂ ವರದಿಯಾಗಿದೆ.
ಇದನ್ನೂ ಓದಿ : ವಾಹನ ಸವಾರರಿಗೆ ಶಾಕ್ ಕೊಟ್ಟ ಪೊಲೀಸರು! – ಇನ್ನುಮುಂದೆ ಈ ತಪ್ಪು ಮಾಡಿದ್ರೆ ಡಿಎಲ್ ಅಮಾನತು!
ಇನ್ನು ಉದ್ಘಾಟನಾ ಸಮಾರಂಭ ಮಾತ್ರವಲ್ಲ, ಪ್ರತಿ ಐಸಿಸಿ ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ತಂಡಗಳ ನಾಯಕರ ಪತ್ರಿಕಾಗೋಷ್ಠಿಯೂ ಇರುತ್ತದೆ. ನಂತರ ನಾಯಕರು ಪಂದ್ಯಾವಳಿಯ ಟ್ರೋಫಿಯೊಂದಿಗೆ ಫೋಟೋಶೂಟ್ ಕೂಡ ಮಾಡುತ್ತಾರೆ. ಆದರೆ ಈಗ ಈ ಎಲ್ಲಾ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆಗಳಿವೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ವಾಸ್ತವವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಗಾಗಿ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈಗ ಈವೆಂಟ್ ಅನ್ನು ರದ್ದುಗೊಳಿಸುವ ಸಾಧ್ಯತೆಗಳಿದ್ದು, ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೊಣೆಯನ್ನ ಹೊತ್ತಿರೋ ಪಾಕಿಸ್ತಾನಕ್ಕೆ ಕ್ರೀಡಾಂಗಣಗಳು ಸಿದ್ಧವಾಗದೆ ಇರುವುದು ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಗಾಗಿಯೇ ಪಾಕ್ ಕ್ರಿಕೆಟ್ ಮಂಡಳಿ, ದೇಶದ ಪ್ರಮುಖ ಕ್ರೀಡಾಂಗಣಳಾದ ಲಾಹೋರ್ ಮತ್ತು ಕರಾಚಿಯ ಕ್ರೀಡಾಂಗಣಗಳ ನವೀಕರಣ ಕೆಲಸವನ್ನು ತಿಂಗಳುಗಳ ಹಿಂದೆಯೇ ಆರಂಭಿಸಿತ್ತು. ಆದರೆ ಐಸಿಸಿ ನೀಡಿರುವ ಗಡುವು ಮುಗಿದರೂ ಈ ಎರಡು ಕ್ರೀಡಾಂಗಣಗಳು ಟೂರ್ನಿಗೆ ಸಿದ್ಧವಾಗಿಲ್ಲ. ಇನ್ನು ಭಾರತ ತನ್ನ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಫೈನಲ್ ತಲುಪಿದ್ರೆ, ಪ್ರಶಸ್ತಿ ಪಂದ್ಯ ಮಾರ್ಚ್ 9 ರಂದು ಯುಎಇ ನಗರದಲ್ಲಿ ನಡೆಯಲಿದೆ.
ಈಗಾಗ್ಲೇ ಫೆಬ್ರವರಿ 19 ರಿಂದ ಪ್ರಾರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಫೆಬ್ರವರಿ 20 ರಿಂದ ಐಸಿಸಿ ಮೆಗಾ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಹೈವೋಲ್ಟೇಜ್ ಭಾರತ ಮತ್ತು ಪಾಕ್ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. ಗುಂಪಿನ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಬಾರಿ ಎದುರಿಸಲಿದೆ. ಟೀಮ್ ಇಂಡಿಯಾ ಸೆಮಿಫೈನಲ್ ಅಥವಾ ಫೈನಲ್ಗೆ ಅರ್ಹತೆ ಪಡೆದರೆ, ಈ ಪಂದ್ಯಗಳು ದುಬೈನಲ್ಲಿ ಮಾತ್ರ ನಡೆಯಲಿವೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಫೆಬ್ರವರಿ 12 ರಂದು ಮುಗಿಯಲಿದೆ. ಇದಾದ ನಂತರ ಫೆಬ್ರವರಿ 15 ರಂದು ಟೀಮ್ ಇಂಡಿಯಾ ದುಬೈಗೆ ಹೊರಡುವ ಸಾಧ್ಯತೆಯಿದೆ.