13 ಸಿಕ್ಸ್.. 7 ಬೌಂಡರಿ.. ಅಭಿ ಸುನಾಮಿ – ಮೋಸವೆಂದಿದ್ದ ಆಂಗ್ಲರು ಫುಲ್ ರೋಸ್ಟ್

13 ಸಿಕ್ಸ್.. 7 ಬೌಂಡರಿ.. ಅಭಿ ಸುನಾಮಿ – ಮೋಸವೆಂದಿದ್ದ ಆಂಗ್ಲರು ಫುಲ್ ರೋಸ್ಟ್

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಮುಕ್ತಾಯಗೊಂಡಿದೆ. ನಾಲ್ಕನೇ ಪಂದ್ಯದಲ್ಲೇ ಸರಣಿ ಕೈವಶವಾದ್ರೂ ಕೊನೇ ಪಂದ್ಯ ಅಸಲಿ ಕಿಕ್ ಕೊಟ್ಟಿತ್ತು. ಅದ್ರಲ್ಲೂ ಅಭಿಷೇಕ್ ಶರ್ಮಾ ಬ್ಯಾಟಿಂಗ್ ನೋಡಿಯೇ ಟೀಂ ಇಂಡಿಯಾ ಪ್ಯಾನ್ಸ್ ಕುಣಿದು ಕುಪ್ಪಳಿಸಿದ್ರು. ಮುಂಬೈನ ವಾಂಖೇಡೆ ಸ್ಟೇಡಿಯಮ್​ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತದ ನಡುವಿನ 5ನೇ ಪಂದ್ಯದಲ್ಲಿ ಭಾರತ ಬರೋಬ್ಬರಿ 150 ರನ್​ಗಳ ಅಂತರದಿಂದ ಗೆದ್ದು ಬೀಗಿದೆ. ಇದ್ರ ಜೊತೆಗೆ 4-1ರ ಅಂತರದಲ್ಲಿ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಭಾರತದ ಪರ ಅಭಿಷೇಕ್ ಶರ್ಮಾ ಸೆಂಚುರಿ ಸುನಾಮಿ ಎಬ್ಬಿಸಿದ್ರೆ ಇಂಗ್ಲೆಂಡ್ ಪರ ಫಿಲ್ ಸಾಲ್ಟ್​ರನ್ನ ಬಿಟ್ರೆ ಉಳಿದವ್ರೆಲ್ಲಾ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆಯೇ ಇದ್ರು.

ಇದನ್ನೂ ಓದಿ : ಕೊಹ್ಲಿ ಆಡ್ತಿಲ್ಲ.. ಸಾಲ್ಟ್ ಸಿಡೀತಿಲ್ಲ.. ಹ್ಯಾಜಲ್ ವುಡ್ ಇಂಜುರಿ  – ಐಪಿಎಲ್ ಗೂ ಮುನ್ನವೇ ಆರ್ ಸಿಬಿಗೆ ಶಾಕ್

ಸದ್ಯ ಭಾರತ ಮಾತ್ರವಲ್ಲದೆ ಕ್ರಿಕೆಟ್ ಲೋಕದಲ್ಲೇ ಅಭಿಷೇಕ್ ಶರ್ಮಾ ಬಗ್ಗೆ ಟಾಕ್ ಜೋರಾಗಿದೆ. ಅದಕ್ಕೆ ಕಾರಣವೇ ಅವ್ರ ಬ್ಯಾಟಿಂಗ್ ಸ್ಟೈಲ್. ಭಾನುವಾರದ ಪಂದ್ಯದಲ್ಲೂ ಸಂಜು ಜೊತೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಮೊದಲ ಎಸೆತದಿಂದಲೂ ಹೊಡಿಬಡಿ ಆಟ ಪ್ರದರ್ಶಿಸಿ ಕೇವಲ 37 ಎಸೆತಗಳಲ್ಲಿ ಅಂತರಾಷ್ಟ್ರೀಯ ಟಿ20 ವೃತ್ತಿಜೀವನದ ಎರಡನೇ ಶತಕವನ್ನು ಸಿಡಿಸಿದ್ರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಭಾರತೀಯ ಕ್ರಿಕೆಟಿಗನೊಬ್ಬ ಸಿಡಿಸಿದ ಎರಡನೇ ಅತಿ ವೇಗದ ಶತಕ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಕೇವಲ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್​ಗಳ ಸಹಿತ ಶತಕ ಪೂರೈಸಿದರು. ಅಂದರೆ ಕೇವಲ 15 ಎಸೆತಗಳಲ್ಲೇ ಬೌಂಡರಿ ಹಾಗೂ ಸಿಕ್ಸರ್​ಗಳ ಸಹಾಯದಿಂದ 80 ರನ್​ ಕಲೆಹಾಕಿದರು.

ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಅವರು ಟೀಂ ಇಂಡಿಯಾದ ಪರ ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದಾರೆ. 13 ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವೊಂದ್ರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.  ಈ ಮೊದಲು ಟೀಂ ಇಂಡಿಯಾದ ಪರ ಸಂಜು ಸ್ಯಾಮ್ಸನ್, ರೋಹಿತ್ ಶರ್ಮಾ ಹಾಗೂ ತಿಲಕ್ ವರ್ಮಾ 10 ಸಿಕ್ಸರ್ ಸಿಡಿಸಿದ್ದ ದಾಖಲೆ ಮಾಡಿದ್ದರು. 13 ಸಿಕ್ಸರ್, 7 ಬೌಂಡರಿಗಳ ಮೂಲಕ ಒಟ್ಟಾರೆ 135 ರನ್​ ಕಲೆ ಹಾಕಿದ್ರು. ಈ ಮೂಲಕ ಆಂಗ್ಲರ ವಿರುದ್ಧದ ಪಂದ್ಯದಲ್ಲಿ 135 ರನ್​​ಗಳಿಸಿ ಭಾರತದ ಪರ ಟಿ20ಯಲ್ಲಿ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಶುಭ್​ಮನ್ ಗಿಲ್ ನ್ಯೂಜಿಲ್ಯಾಂಡ್​ ವಿರುದ್ಧ​ 126 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿ ಕೂಡ ಕಮಾಲ್ ಮಾಡಿದ ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದುಕೊಂಡರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇನ್ನು ಅಭಿಷೇಕ್ ಶರ್ಮಾ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ಟೀಂ ಇಂಡಿಯಾ 20 ಓವರ್​ಗಳಲ್ಲಿ 247 ರನ್ ಕಲೆ ಹಾಕಿತ್ತು. 248 ರನ್ ​​ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ತಂಡದ ಪರ ಫಿಲ್ ಸಾಲ್ಟ್​ರನ್ನ ಬಿಟ್ರೆ ಉಳಿದವರ್ಯಾರು ಆಡ್ಲಿಲ್ಲ. ಸಾಲ್ಟ್ 55 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್​ಗಳೆಲ್ಲಾ ಸೋಲೊಪ್ಪಿಕೊಂಡಂತೆಯೇ ಬಂದು ಹೋದ್ರು. ಪರಿಣಾಮ ಇಂಗ್ಲೆಂಡ್ ತಂಡವು 10.3 ಓವರ್​ಗಳಲ್ಲಿ 97 ರನ್ ಬಾರಿಸಿ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 150 ರನ್​ಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಇನ್ನು ಮೊದಲ ಓವರ್​ನಲ್ಲೇ ಹೆಚ್ಚು ರನ್​ಗಳನ್ನ ಕೊಟ್ಟಿದ್ದ ಮೊಹಮ್ಮದ್ ಶಮಿ ಮೂರು ವಿಕೆಟ್​ಗಳನ್ನ ಪಡೆದ್ರು. ಹಾಗೇ ಅಭಿಷೇಕ್ ಶರ್ಮಾ ಮತ್ತು ದುಬೆ 2 ವಿಕೆಟ್ ಬೇಟೆಯಾಡಿದ್ರು. ರವಿ ಬಿಷ್ಣೋಯ್​ಗೆ 1 ವಿಕೆಟ್ ಕಿತ್ರು. ವರುಣ್ ಚಕ್ರವರ್ತಿಗೆ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಸಿಕ್ರೆ ಅಭಿಷೇಕ್ ಶರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಮಿಂಚಿದ್ರು.

Shantha Kumari

Leave a Reply

Your email address will not be published. Required fields are marked *