ಅಳೆದು ತೂಗಿ ಪಾಕ್ ಟೀಂ ಅನೌನ್ಸ್ – ಹಾಲಿ ಚಾಂಪಿಯನ್ ಸ್ಟ್ರೆಂಥ್ ಏನು?

ಅಳೆದು ತೂಗಿ ಪಾಕ್ ಟೀಂ ಅನೌನ್ಸ್ – ಹಾಲಿ ಚಾಂಪಿಯನ್ ಸ್ಟ್ರೆಂಥ್ ಏನು?

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಪಾಕಿಸ್ತಾನ ಮತ್ತು ದುಬೈನಲ್ಲಿ ಪಂದ್ಯಗಳು ಜರುಗಲಿವೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. ಈಗಾಗಲೇ ಈ ಟ್ರೋಫಿಗೆ ಎಂಟು ತಂಡಗಳು ಆಯ್ಕೆ ಆಗಿದ್ದು, ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. “ಎ” ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನ್ಯೂಜಿಲೆಂಡ್‌ ತಂಡಗಳು ಇದ್ದು, “ಬಿ” ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ನಡೆಯಲಿರುವ ಮಹಾ ಕದನಕ್ಕೆ ಇನ್ನು ಮೂರು ವಾರಗಳೂ ಬಾಕಿ ಇಲ್ಲ.  ಮೊದಲನೆಯದಾಗಿ ಪಾಕ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಅನ್ನೋದನ್ನ ಮೊದಲು ನೋಡೋಣ. ಬಾಬ‌ರ್ ಅಜಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಷಿಲ್ ಶಾ, ಸಲ್ಮಾನ್ ಅಲಿ ಆಘಾ, ಮೊಹಮ್ಮದ್ ರಿಜ್ವಾನ್, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ಹಸ್ನೈನ್ ಸೆಲೆಕ್ಟ್ ಆಗಿದ್ದಾರೆ.

ಇದನ್ನೂ ಓದಿ : ಬಜೆಟ್‌ನಲ್ಲಿ ಕೃಷಿಗೆ ಬಂಪರ್  – ಕಿಸಾನ್ ಕ್ರೆಡಿಟ್‌ ಕಾರ್ಡ್‌ ಮಿತಿ ಹೆಚ್ಚಳ

ಫೆಬ್ರವರಿ 19ರಿಂದ ನಡೆಯಲಿರುವ ಮೆಗಾ ಫೈಟ್​ನಲ್ಲಿ ಒಟ್ಟು 8 ರಾಷ್ಟ್ರಗಳು ಭಾಗಿಯಾಗಲಿವೆ. ಬೇರೆಲ್ಲಾ ತಂಡಗಳು ಅನೌನ್ಸ್ ಆಗಿ ವಾರಗಳೇ ಕಳೆದ ಮೇಲೆ ಪಾಕಿಸ್ತಾನ ಟೀಂ ಪ್ರಕಟವಾಗಿದೆ. ಈ ಟೂರ್ನಿಗೆ ನಾಲ್ವರು ಆಟಗಾರರು ಕಂ ಬ್ಯಾಕ್‌ ಮಾಡಿದ್ದಾರೆ. ಕ್ಲಾಸಿಕ್ ಬ್ಯಾಟರ್‌ ಫಖರ್‌ ಜಮಾನ್‌ ಸೇರಿದಂತೆ ಸ್ಟಾರ್ ಆಟಗಾರರು ತಂಡಕ್ಕೆ ಎಂಟ್ರಿ ನೀಡಿದ್ದಾರೆ. ಇವರು ಕಳೆದ ಬಾರಿ ಚಾಂಪಿಯನ್ಸ್‌ ಟ್ರೋಫಿ ನಡೆದಾಗ ಭಾರತದ ವಿರುದ್ಧ ಶತಕ ಬಾರಿಸಿ ಮಿಂಚಿದ್ದರು. ಹಾಗೇ ಫಹೀಮ್ ಅಶ್ರಫ್, ಖುಷ್ದಿಲ್ ಶಾ ಮತ್ತು ಸೌದ್ ಶಕೀಲ್ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ಕಳೆದ ಬಾರಿ ಚಾಂಪಿಯನ್ಸ್‌ ಟ್ರೋಫಿ ಆಡಿದ್ದ ಮೂವರು ಆಟಗಾರರು ಈ ಬಾರಿ ಮತ್ತೆ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಷ್ಟಕ್ಕೂ ಪಾಕಿಸ್ತಾನ ಇಷ್ಟು ಡಿಲೇ ಮಾಡ್ಕೊಂಡು ತಂಡವನ್ನ ಪ್ರಕಟ ಮಾಡೋಕೆ ಕಾರಣವೇ ಸೈಮ್ ಅಯೂಬ್. ಪಾಕಿಸ್ತಾನ ವಿರುದ್ಧದ ಕೇಪ್‌ಟೌನ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಸೈಮ್ ಅಯೂಬ್, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.  ಗಾಯದ ಕಾರಣದಿಂದಾಗಿ ಚಿಕಿತ್ಸೆ ಪಡೀತಿದ್ರು. ಅವ್ರ ಫಿಟ್​ನೆಸ್ ರಿಪೋರ್ಟ್ ಬಂದ ಮೇಲೆ ಅಂತಿಮವಾಗಿ ತಂಡ ಪ್ರಕಟ ಮಾಡೋಕೆ ಪಿಸಿಬಿ ಕೂಡ ಕಾಯ್ತಿತ್ತು. ಆದ್ರೆ ಕಂಪ್ಲೀಟ್ ಫಿಟ್ ಆಗದ ಸೈಮ್ ಆಯೂಬ್‌ ಚಾಂಪಿಯನ್ಸ್‌ ಟ್ರೋಫಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬಾಬರ್ ಅಜಮ್‌ ಹಾಗೂ ಸೌದ್ ಶಕೀಲ್‌, ಫಖಾರ್ ಜಮಾನ್‌ ನಡುವೆ ಇನಿಂಗ್ಸ್‌ ಆರಂಭಿಸುವುದು ಯಾರು ಎಂಬ ಬಗ್ಗೆ ಚರ್ಚೆಗಳೂ ನಡೀತಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಫಖ‌ರ್ ಜಮಾನ್ ಅವರೊಂದಿಗೆ ಬಾಬರ್ ಅಜಮ್ ಪಾಕಿಸ್ತಾನ ಪರ ಇನ್ನಿಂಗ್ಸ್ ಆರಂಭಿಸಬಹುದು ಎಂದು ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯ ಅಸಾದ್ ಶಫೀಕ್ ಬಹಿರಂಗಪಡಿಸಿದ್ದಾರೆ.

ಎಲ್ಲಾ ತಂಡಗಳು ಈ ಹಿಂದೆಯೇ ತಮ್ಮ ತಮ್ಮ ತಂಡಗಳನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಪ್ರಕಟಿಸಿದ್ದವು. ಆದರೆ ಪಾಕಿಸ್ತಾನ ಮಾತ್ರ ಪಂದ್ಯಾವಳಿಗೆ ಕೆಲವೇ ದಿನ ಬಾಕಿ ಉಳಿದಿರುವಾಗ ತಂಡವನ್ನು ಘೋಷಿಸಿದೆ. ಶುಕ್ರವಾರ 15 ಸದಸ್ಯರ ತಂಡವನ್ನು ಪಿಸಿಬಿ ಪ್ರಕಟಿಸಿದ್ದು, ಮೊಹಮ್ಮದ್ ರಿಜ್ವಾನ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ ಸಲ್ಮಾನ್ ಅಲಿ ಆಘಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. 2017ರಲ್ಲಿ ಓವಲ್‌ನಲ್ಲಿ ಕೊನೆಯ ಪ್ರಶಸ್ತಿ ಗೆದ್ದ ತಂಡದಿಂದ ಬಾಬರ್‌ ಅಜಮ್, ಫಹೀಮ್ ಅಶ್ರಫ್ ಮತ್ತು ಫಖರ್ ಜಮಾನ್ ಮಾತ್ರ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿ ಆಡಿದ 15 ಆಟಗಾರರ ತಂಡದಲ್ಲಿ ಪಿಸಿಬಿ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಅಬ್ದುಲ್ಲಾ ಶಫೀಕ್, ಮುಹಮ್ಮದ್ ಇರ್ಫಾನ್ ಖಾನ್, ಸೈಮ್ ಅಯೂಬ್ ಮತ್ತು ಸುಫ್ಯಾನ್ ಮೊಕಿಮ್ ಬದಲಿಗೆ ಫಹೀಮ್ ಅಶ್ರಫ್, ಫಖರ್ ಜಮಾನ್, ಖುಷಿಲ್ ಶಾ ಮತ್ತು ಸೌದ್ ಶಕೀಲ್ ಸ್ಥಾನ ಪಡೆದಿದ್ದಾರೆ. ಹ್ಯಾರಿಸ್ ರೌಫ್, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ಹಸ್ಮನ್ ಮತ್ತು ನಸೀಮ್ ಶಾ ಹೀಗೆ ನಾಲ್ವರು ವೇಗಿಗಳಿಗೆ ಮಣೆ ಹಾಕಿದೆ. ಅಬ್ರಾರ್ ಅಹ್ಮದ್ ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ.

Shantha Kumari