ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಎಂಟ್ರಿ – ಅದಲಿ ಬದಲಿ ಆಟದಿಂದ ಗೆದ್ದಿತಾ ಭಾರತ?

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ಗೆಲುವು ಕಂಡಿದೆ. ಹಾಗೇ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 181 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 166 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಯ್ತು. ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಹಾಗೂ ಬೌಲಿಂಗ್ನಲ್ಲಿ ಮಿಂಚಿದ ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಮ್ಯಾಚ್ ವಿನ್ನರ್ಸ್ ಆದ್ರು.
ಇದನ್ನೂ ಓದಿ : ಅಬ್ಬಾ.. ದಿನಕ್ಕೆ ಬಾರತದಲ್ಲಿ ಇಷ್ಟೊಂದು ಮಕ್ಕಳು ಹುಟ್ಟುತ್ತಾರಾ!?
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಓಪನಿಂಗ್ನಲ್ಲೇ ಆಘಾತ ಎದುರಿಸಿತು. ಎರಡನೇ ಓವರ್‌ನಲ್ಲಿಯೇ ತಂಡದ ಮೂರು ವಿಕೆಟ್‌ಗಳು ಉರುಳಿದ್ವು. ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡುವ ಮೂಲಕ ಸಾಕಿಬ್ ಮಹಮೂದ್ ಶಾಕ್ ನೀಡಿದ್ರು. ಸಂಜು 1 ರನ್ ಗಳಿಸಿದ್ರೆ ತಿಲಕ್ ವರ್ಮಾ ಹಾಗೇ ಸೂರ್ಯ ಡಕ್ ಔಟ್ ಆದ್ರು. ಅಭಿಷೇಕ್ 29 ರನ್ ಕಲೆ ಹಾಕಿದ್ರು. 5ನೇ ಆಟಗಾರನಾಗಿ ಕಣಕ್ಕಿಳಿದ ರಿಂಕು ಸಿಂಗ್ 30 ರನ್ ಗಳಿಸಿ ತಂಡದ ಇನ್ನಿಂಗ್ಸ್ಗೆ ಚೇತರಿಕೆ ನೀಡಿದರು. ಬಟ್ ರಿಂಕು ಔಟಾದ ನಂತರ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ಇಬ್ಬರೂ ಕೂಡ ತಲಾ 53 ರನ್ ಕಲೆಹಾಕಿ ಟೀಂ ಇಂಡಿಯಾ ಸ್ಕೋರ್ನ 181 ರನ್‌ಗಳಿಗೆ ತಲುಪಿಸಿದ್ರು.
ಅಸಲಿಗೆ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ವೇಳೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಆಯ್ತು. ಶಿವಂ ದುಬೆ ಬ್ಯಾಟಿಂಗ್ ಮಾಡುವಾಗ ಕೊನೆಯ ಓವರ್‌ನಲ್ಲಿ ಗಾಯಗೊಂಡರು. ಹೀಗಾಗಿ ಟೀಂ ಇಂಡಿಯಾ ಮ್ಯಾಚ್ ರೆಫರಿಯಿಂದ ಬದಲಿ ಆಟಗಾರನಿಗೆ ಲಿಖಿತ ಅರ್ಜಿ ಸಲ್ಲಿಸಿತ್ತು. ಈ ಮೂಲಕ ಆಡುವ ಅವಕಾಶ ಪಡೆದ ಹರ್ಷಿತ್ ರಾಣಾ ಭಾರತದ ಪರ ಬೌಲಿಂಗ್ ಅಖಾಡಕ್ಕೆ ಇಳಿದ್ರು. 182 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಪರ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಉತ್ತಮ ಓಪನಿಂಗ್ ನೀಡಿದ್ರು. ಹಾಗೇ ಹ್ಯಾರಿ ಬ್ರೂಕ್ ಕೂಡ ಹೊಡಿಬಡಿ ಆಟದ ಮೂಲಕ ಭಾರತದ ಬೌಲರ್ಗಳ ಬೆವರಿಸಿಳಿಸಿದ್ರು. ಹ್ಯಾರಿ ಬ್ರೂಕ್ ಕೇವಲ 26 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಹಾದಿಗೆ ತಂದರು. ಆದರೆ ವರುಣ್ ಚಕ್ರವರ್ತಿ ಒಂದೇ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಮತ್ತು ಬ್ರೇಡನ್ ಕಾರ್ಸ್ ಅವರನ್ನು ಔಟ್ ಮಾಡುವ ಮೂಲಕ ಭಾರತದ ಕಡೆಗೆ ಪಂದ್ಯದ ದಿಕ್ಕನ್ನು ಬದಲಾಯಿಸಿದರು. ಹರ್ಷಿತ್ ರಾಣಾ 4 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕನ್ಕಶನ್ ಸಬ್ ಆಯ್ಕೆಯ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದು, ಭಾರತ ತಂಡವು ಮೋಸದಿಂದ ಗೆಲುವು ದಾಖಲಿಸಿದೆ ಎಂದು ಇಂಗ್ಲೆಂಡ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾಲ್ಕನೇ ಪಂದ್ಯದಲ್ಲಿ ಭಾರತ ಗೆದ್ದಿದ್ದದ್ರೂ ವಿವಾದವೊಂದು ಹುಟ್ಕೊಂಡಿದೆ. ಹೀಗೆ ವಿವಾದ ಹುಟ್ಟಿಕೊಳ್ಳಲು ಮುಖ್ಯ ಕಾರಣ ಕಂಕಶನ್ ಸಬ್ ಆಯ್ಕೆ. ಈ ಪಂದ್ಯದ ಮೊದಲ ಇನಿಂಗ್ಸ್ನ ಕೊನೆಯ ಓವರ್‌ನಲ್ಲಿ ಶಿವಂ ದುಬೆ ಅವರ ಹೆಲ್ಮೆಟ್ಗೆ ಚೆಂಡು ಬಡಿದಿತ್ತು. ಇದಾಗ್ಯೂ ದುಬೆ 20ನೇ ಓವರ್ನ ಕೊನೆಯ ಎಸೆತವನ್ನು ಎದುರಿಸಿದ್ದರು. ಆದರೆ ಹೆಲ್ಮೆಟ್ಗೆ ಚೆಂಡು ಬಡಿದ ಕಾರಣ ಅವರು ಫೀಲ್ಡಿಂಗ್ಗೆ ಇಳಿದಿರಲಿಲ್ಲ. ದುಬೆ ಗಾಯಕ್ಕೆ ತುತ್ತಾಗಿದ್ದರಿಂದ ಟೀಮ್ ಇಂಡಿಯಾ ಕನ್ಕಶನ್ ಸಬ್ ಆಯ್ಕೆಯ ಮೊರೆ ಹೋಗಲಾಯ್ತು. ಇಲ್ಲಿ ಕಂಕಶನ್ ಸಬ್ ಆಯ್ಕೆ ಎಂದರೆ ಗಾಯಗೊಂಡ ಅಥವಾ ಇತರೆ ಕಾರಣಗಳಿಂದ ತಂಡದಿಂದ ಹೊರಗುಳಿದಿರುವ ಆಟಗಾರನ ಬದಲಿ ಪ್ಲೇಯರ್ನನ್ನು ಕಣಕ್ಕಿಳಿಸುವುದು. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನಮ್ಮ ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಥರ. 2019 ರಲ್ಲಿ ಐಸಿಸಿ ಪರಿಚಯಿಸಿದ ಈ ನಿಯಮದ ಪ್ರಕಾರ, ಟೀಮ್ ಇಂಡಿಯಾ ಶಿವಂ ದುಬೆ ಅವರ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿತು.
ಅಷ್ಟಕ್ಕೂ ಹೀಗೆ ಬದಲಿ ಪ್ಲೇಯರ್ ಬರುವಾಗ ನಿಯಮದ ಪ್ರಕಾರ ಲೈಕ್ ಟು ಲೈಕ್ ಆಟಗಾರ ಕಣಕ್ಕಿಳಿಯಬೇಕು. ಅಂದರೆ ಬ್ಯಾಟರ್ ಗಾಯಗೊಂಡು ಹೊರಗುಳಿದರೆ ಬ್ಯಾಟರ್ನನ್ನೇ ಕಣಕ್ಕಿಳಿಸಬೇಕು. ಅಥವಾ ಬೌಲರ್ ಗಾಯಗೊಂಡರೆ, ಬದಲಿಯಾಗಿ ಬರುವವರು ಬೌಲರ್ ಆಗಿರಬೇಕು. ಇನ್ನು ಆಲ್ರೌಂಡರ್ಗೆ ಬದಲಿಯಾಗಿ ಆಲ್ರೌಂಡರ್ ಆಡಬೇಕೆಂದು ನಿಯಮವಿದೆ. ಆದರೆ ಟೀಮ್ ಇಂಡಿಯಾ ಆಲ್ರೌಂಡರ್ ಶಿವಂ ದುಬೆ ಬದಲಿಗೆ ಬೌಲರ್ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿರುವುದೇ ಈಗ ವಿವಾದಕ್ಕೆ ಕಾರಣವಾಗಿದೆ. ಶಿವಂ ದುಬೆ ಬೌಲಿಂಗ್ ಕೂಡ ಮಾಡ್ತಾರೆ ನಿಜ. ಬಟ್ ಹರ್ಷಿತ್ ರಾಣಾ ಮಟ್ಟಿಗೆ ಇಂಪ್ಯಾಕ್ಟ್ ಮಾಡ್ತಿರಲಿಲ್ಲ.
ದುಬೆ ಬದಲಿಗೆ ರಾಣಾನನ್ನ ಇಳಿಸಿದ್ದಕ್ಕೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದು ಲೈಕ್ ಟು ಲೈಕ್ ಆಟಗಾರನ ಪಟ್ಟಿಗೆ ಬರುವುದಿಲ್ಲ. ದುಬೆ ಆಲ್ರೌಂಡರ್ ಆಗಿದ್ದರೂ, ಟೀಮ್ ಇಂಡಿಯಾ ಪರಿಪೂರ್ಣ ಬೌಲರ್ನನ್ನು ಬದಲಿಯಾಗಿ ಕಣಕ್ಕಿಳಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಬಟ್ಲರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕನ್ಕಶನ್ ಸಬ್ ಅನ್ನು ಅನುಮತಿಸುವ ಮುನ್ನ ಮ್ಯಾಚ್ ರೆಫರಿಗೆ ಹೆಚ್ಚಿನ ಸ್ಪಷ್ಟತೆ ಇರಬೇಕು ಎಂದು ಜೋಸ್ ಬಟ್ಲರ್ ಹೇಳಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಕೂಡ ಈ ಬಗ್ಗೆ ಧ್ವನಿಯೆತ್ತಿದ್ದಾರೆ. ಶಿವಂ ದುಬೆ ಬದಲಿಗೆ ಆಲ್ರೌಂಡರ್ ಒಬ್ಬರನ್ನು ಕಣಕ್ಕಿಳಿಸಬೇಕಿತ್ತು. ಅದರ ಬದಲು ಬೌಲರ್ಗೆ ಚಾನ್ಸ್ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಪೀಟರ್ಸನ್ ಹೇಳಿದ್ದಾರೆ. ಹಾಗೇ ಅರೆಕಾಲಿಕ ಬೌಲರ್ ಬದಲಿಗೆ ಪರಿಪೂರ್ಣ ಬೌಲರ್ನನ್ನು ಹೇಗೆ ಬದಲಿಯಾಗಿ ಕಣಕ್ಕಿಳಿಸಿದ್ದೀರಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರಶ್ನಿಸಿದ್ದಾರೆ.