ಕೆಂಪು ಬಣ್ಣದಲ್ಲಿ ಬಜೆಟ್ ತರೋದ್ಯಾಕೆ?- ದೇಶಕ್ಕೂ ಈ ಬಣ್ಣಕ್ಕೂ ಏನ್ ಸಂಬಂಧ?
ನಿರ್ಮಲಾ ಬಜೆಟ್ ಸೀರೆ ವಿಶೇಷತೆಯೇನು?
ಈ ಬಾರಿಯ ಬಜೆಟ್ ಮೇಲೆ ಸಾಕಷ್ಟು ಕುತೂಹಲವಂತ ಮನೆ ಮಾಡಿದೆ .ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಸತತ 8ನೇ ಬಜೆಟ್ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಬಜೆಟ್ ಮಂಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಇಂದಿಗೂ ಮುಂದುವರಿದಿದೆ. ಬಜೆಟ್ ದಾಖಲೆಗಳನ್ನು ಇಡಲು ಬಳಸುವ ಬ್ರೀಫ್ಕೇಸ್ನೊಂದಿಗೆ ಕಾಲಕಾಲಕ್ಕೆ ಅನೇಕ ಪ್ರಯೋಗಗಳನ್ನು ಮಾಡಲಾಗುತ್ತೆ. ಈಗ ಭಾರತದಲ್ಲಿ ಬಜೆಟ್ ರೂಪವು ಡಿಜಿಟಲ್ ಆಗಿ ಬದಲಾಗಿದೆ. ಮೊದಲಿನಂತೆ ಅದರಲ್ಲಿ ದಾಖಲೆಗಳನ್ನು ಇಡುವುದಿಲ್ಲ, ಆದರೆ ಬ್ರೀಫ್ಕೇಸ್ ಇರಿಸುವ ಸಂಪ್ರದಾಯವು ಇನ್ನೂ ಮುಂದುವರೆದಿದೆ. ಬಜೆಟ್ ಅಂತ ಇಂಗ್ಲಿಷ್ನಲ್ಲಿ ಕರೆಯಲಾಗುತ್ತೆ. ಈ ಪದದ ಅರ್ಥ ಆಡಳಿತದ ಆರ್ಥಿಕ ಸ್ಥಿತಿ. ಬಜೆಟ್ ಪದವು ಮೂಲತಃ ಫ್ರೆಂಚ್ ಪದವಾಗಿದ್ದು, ಇದರರ್ಥ ಚರ್ಮದ ಬ್ರೀಫ್ಕೇಸ್.
ಇದನ್ನೂ ಓದಿ: ದೆಹಲಿಯ ಅತೀ ದೊಡ್ಡ ಸಮೀಕ್ಷೆ- ಕೇಜ್ರಿವಾಲ್ಗೆ ಟಕ್ಕರ್ ಕೊಟ್ರಾ ಮೋದಿ?
ಬ್ರೀಫ್ಕೇಸ್ ತರುವ ಸಂಪ್ರದಾಯವನ್ನು ಬ್ರಿಟನ್ನಿಂದ ಭಾರತಕ್ಕೆ ತರಲಾಯಿತು. 1860 ರಲ್ಲಿ ಬ್ರಿಟಿಷ್ ಬಜೆಟ್ ಅನ್ನು ಮಂಡಿಸಿದ ಮುಖ್ಯಸ್ಥ ವಿಲಿಯಂ ಇ. ಗ್ಲಾಡ್ಸ್ಟೋನ್ ಅವರು ಮೊದಲು ಬ್ರೀಫ್ಕೇಸ್ ಅನ್ನು ಬಳಸಿದರು. ನಂತರ ಅದು ‘ಗ್ಲಾಡ್ಸ್ಟೋನ್ಸ್ ಬಾಕ್ಸ್’ ಎಂದು ಜನಪ್ರಿಯವಾಯಿತು.
ಬಜೆಟ್ ಬ್ಯಾಗ್ ಕೆಂಪು ಕಲರ್ ಇರೋದ್ಯಾಕೆ?
ಭಾರತವೂ ಬ್ರಿಟಿಷ್ ಸಂಪ್ರದಾಯವನ್ನು ಅನುಸರಿಸಿತು. ಆದರೆ ಬ್ರಿಟನ್ನಂತಲ್ಲದೆ, ಭಾರತದಲ್ಲಿನ ವಿವಿಧ ಹಣಕಾಸು ಮಂತ್ರಿಗಳು ವಿಭಿನ್ನ ಬ್ರೀಫ್ಕೇಸ್ಗಳು ಅಥವಾ ವಿವಿಧ ಬಣ್ಣಗಳ ಬ್ಯಾಗ್ಗಳನ್ನು ಒಯ್ಯುತ್ತಿದ್ದರು. ಭಾರತದ ಮೊದಲ ಹಣಕಾಸು ಸಚಿವ ಆರ್ಕೆ ಷಣ್ಮುಖಂ ಚೆಟ್ಟಿ ಅವರು 26 ನವೆಂಬರ್ 1947 ರಂದು ಭಾರತದ ಮೊದಲ ಬಜೆಟ್ ಅನ್ನು ಮಂಡಿಸಲು ಕೆಂಪು ಚರ್ಮದ ಬ್ರೀಫ್ಕೇಸ್ ಅನ್ನು ಬಳಸಿದರು. 1958ರಲ್ಲಿ ದೇಶದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಬಜೆಟ್ ಅನ್ನು ಕೆಂಪು ಬಣ್ಣದ ಬ್ರೀಫ್ ಕೇಸ್ ಬದಲಿಗೆ ಕಪ್ಪು ಬಣ್ಣದ ಬ್ರೀಫ್ ಕೇಸ್ ನಲ್ಲಿ ಮಂಡಿಸಿದ್ದರು. ಕಾಲಕಾಲಕ್ಕೆ, ಬ್ಯಾಗ್ಗಳ ಬಣ್ಣ ಮತ್ತು ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಯಿತು. 2019 ರಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಬ್ರೀಫ್ಕೇಸ್ ಸಂಪ್ರದಾಯವನ್ನು ಕೈಬಿಟ್ಟರು. ಕೇಂದ್ರ ಬಜೆಟ್ ಪತ್ರಗಳನ್ನು ಸಾಗಿಸಲು ‘ಬಹಿ-ಖಾತಾ’ ಅನ್ನು ಆಯ್ಕೆ ಮಾಡಿದರು. 2021 ರಲ್ಲಿ, ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ‘ಬಹಿ-ಖಾತಾ’ ಬದಲಿಗೆ ‘ಟ್ಯಾಬ್’ ಅನ್ನು ಬಳಸಿದರು. ಬಜೆಟ್ ಮೊದಲ ಬಾರಿಗೆ ಸಂಪೂರ್ಣವಾಗಿ ಕಾಗದರಹಿತವಾಯಿತು. ಭಾರತದಲ್ಲಿ, ಹಣಕಾಸು ಸಚಿವರ ಬಜೆಟ್ ಬ್ಯಾಗ್ ಪ್ರತಿ ವರ್ಷವೂ ವಿವಿಧ ಬಣ್ಣಗಳು ಮತ್ತು ಆಕಾರಗಳಲ್ಲಿ ಗಮನ ಸೆಳೆಯುತ್ತದೆ. ಕೆಂಪು ಬಣ್ಣವು ಶಕ್ತಿಯುತ ಎಂದು ಪರಿಗಣಿಸಲಾಗಿದೆ. ಇದು ಶಕ್ತಿ ಮತ್ತು ಅಧಿಕಾರವನ್ನು ಸೂಚಿಸುತ್ತದೆ. ಸೂರ್ಯ, ಬೆಂಕಿ ಇವೆಲ್ಲವನ್ನು ಒಳಗೊಂಡಂತೆ ಕೆಂಪು ಬಣ್ಣದ ಸೂಟ್ಕೇಸ್ನಲ್ಲಿ ಬಜೆಟ್ ಅನ್ನು ತರಲಾಗುತ್ತದೆ. ಭಾರತ ಮಾತ್ರವಲ್ಲ ಹಲವು ದೇಶಗಳು ಬಜೆಟ್ ಅನ್ನು ಕೆಂಪು ಬಣ್ಣದ ಬಟ್ಟೆ ಅಥವಾ ಸೂಟ್ಕೇಸ್ನಲ್ಲಿ ತರುವ ಮೂಲಕ ಬಜೆಟ್ ಮಂಡಿಸುತ್ತಾರೆ. ಕೆಂಪು ಬೇಗ ಗಮನಸೆಳೆಯುವ ಬಣ್ಣವಾಗಿದೆ. ಇನ್ನು ಭಾರತದಲ್ಲಿ ಕೆಂಪು ಬಣ್ಣದ ಬಳಕೆ ಕೊಂಚ ಜಾಸ್ತಿ. ಅದರಲ್ಲೂ ಪೂಜಾ ವಿಧಿ ವಿಧಾನಗಳಲ್ಲಿ ಕೆಂಪು ಬಣ್ಣದ ಬಳಕೆ ಜಾಸ್ತಿ. ಹೀಗಾಗಿ ಕೆಂಪಿಗೂ ಭಾರತಕ್ಕೆ ಅವಿನಾಭಾವ ಸಂಬಂಧ.. ಬಜೆಟ್ ಬ್ಯಾಗ್ ನೋಡಿದ್ರಿ ಅಲ್ವಾ ನಿಮ್ಗೆ ನಿರ್ಮಲಾ ಸೀತಾರಾಮನ್ ಸೀರೆ ಬಗ್ಗೆ ಹೇಳ್ತಿನಿ. ಪ್ರತಿ ಬಜೆಟ್ ಮಂಡಿಸುವಾಗ ಭಾರತೀಯ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಸೀರೆಯುಟ್ಟಿದ್ದಾರೆ. ಒಂದೊಂದು ಸೀರೆಯೂ ಭಾರತದ ವಿವಿಧ ಪ್ರದೇಶಗಳ ಸಾಸ್ಕೃತಿಕ ಕಥಾನಕ ಪರಿಚಯಿಸಿದೆ.
2024
ಕಳೆದ ವರ್ಷ ಅಂದ್ರೆ 2024ರಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಕೆನ್ನೇರಳೆ ಬಾರ್ಡರ್ ಹೊಂದಿದ್ದ ಆಫ್ ವೈಟ್ ಬಣ್ಣದ ಮಂಗಳಗಿರಿ ಸೀರೆ ಧರಿಸಿದ್ದರು. ಗುಂಟೂರು ಜಿಲ್ಲೆಯಲ್ಲಿ ತಯಾರಾದ ಸೀರೆ ಆಂಧ್ರಪ್ರದೇಶದ ಸಂಸ್ಕೃತಿಯನ್ನು ಬಿಂಬಿಸಿದೆ. ಇದೇ ವೇಳೆ ಆಂಧ್ರಕ್ಕೆ ವಿಶೇಷ ಆರ್ಥಿಕ ನೆರವು ಘೋಷಣೆ ಮಾಡಿದ್ದು ವಿಶೇಷವಾಗಿತ್ತು.
2024ರ ಫೆ.1 ರಂದು ಮಂಡಿಸಿದ್ದ ಮಧ್ಯಂತರ ಬಜೆಟ್ ವೇಳೆ ನಿರ್ಮಲಾ ಅವರು ನೀಲಿ ಸೀರೆಯುಟ್ಟಿದ್ದರು. ಪಶ್ಚಿಮ ಬಂಗಾಳದ ಕಾಂತಾ ಸ್ಟಿಚ್ ಎಂದು ಹೆಸರಾಗಿದ್ದ ನೀಲಿ ಸೀರೆಯುಟ್ಟಿದ್ದ ಸೀತಾರಾಮನ್ ಅವರು, ನೀಲಿ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ, ಮೀನುಗಾರಿಕೆ ಅಭಿವೃದ್ಧಿ ಮೂಲಕ ಮತ್ಸ್ಯ ಕ್ರಾಂತಿಯ ಸಂದೇಶ ನೀಡಿದ್ದರು. ಈ ವೇಳೆ ಮೀನುಗಾರಿಕೆ ಕ್ಷೇತ್ರಕ್ಕೆ 2,584 ಕೋಟಿ ರೂ.ಗಳ ಅನುದಾನ ಘೋಷಿಸಿದ್ದರು.
2023
2023ರಲ್ಲಿ ಸೀತಾರಾಮನ್ ಅವರು ಕೆಂಪು ಬಣ್ಣದ ಟೆಂಪಲ್ ಬಾರ್ಡರ್ ಸೀರೆ ಉಟ್ಟಿದ್ದರು. ಕರ್ನಾಟಕದ ಇಳಕಲ್ನ ಕೈಮಗ್ಗದಲ್ಲಿ ನೇಯ್ದ ಸೀರೆಯ ಮೂಲಕ ಕಸೂತಿ ಕಲೆಗೆ ಪ್ರೋತ್ಸಾಹ ನೀಡುವ ಸುಳಿವು ನೀಡಿದ್ದರು. ಸೀರೆಯಲ್ಲಿ ರಥ, ನವಿಲು, ಕಮಲಗಳ ಚಿತ್ರಗಳಿದ್ದವು.
2022
2022ರಲ್ಲಿ ಮಂಡಿಸಿದ ಬಜೆಟ್ ವೇಳೆ ನಿರ್ಮಲಾ ಅವರು, ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ತಯಾರಾಗುವ ಕಂದು ಬಣ್ಣದ ಸೀರೆಯುಟ್ಟಿದ್ದರು.
2021
2021ರಲ್ಲಿ ತೆಲಂಗಾಣದ ಪೋಚಂಪಲ್ಲಿ ಗ್ರಾಮದಲ್ಲಿ ಸಿದ್ಧಪಡಿಸಿದ್ದ ಬಿಳಿ ಬಣ್ಣದ ಪೋಚಂಪಲ್ಲಿ ಸೀರೆ ಧರಿಸಿದ್ದರು.
2020
2020ರಲ್ಲಿ ಸಮೃದ್ಧಿಯ ಸಂಕೇತವಾಗಿದ್ದ ಹಳದಿ ಬಣ್ಣದ ಸೀರೆಯುಟ್ಟ ಸೀತಾರಾಮನ್ ಬಜೆಟ್ ಮಂಡಿಸಿದ್ದರು. ಹಳದಿ ಬಣ್ಣದ ಸೀರೆಯ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದರು.
2019
2019ರಲ್ಲಿ ಬಂಗಾರದ ಅಂಚು ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು. ಬಜೆಟ್ ಕಾಪಿ ಹೊತ್ತು ತಂದ ಸೂಟ್ಕೇಸ್ ಮೇಲೆ ಬಂಗಾರ ಬಣ್ಣದ ದಾರದಲ್ಲಿ ರೂಪಿಸಿದ ರಾಷ್ಟ್ರೀಯ ಲಾಂಛನ ಚಿತ್ರಿಸಲಾಗಿತ್ತು.
ನಿರ್ಮಲಾ ಧರಿಸಿದ್ದ ಒಂದೊಂದು ಸೀರೆಗಳು ಪ್ರತಿ ರಾಜ್ಯದ ಹಾಗೂ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದರು. ಏಳು ಬಜೆಟ್ಗಳಲ್ಲಿತೊಟ್ಟ ಏಳು ಸೀರೆಗಳು ಭಾರತದ ವೈವಿಧ್ಯತೆಯ ಸಂಕೇತವಾಗಿವೆ. ಸೀರೆಗಳ ಮೂಲಕ ಸರಕಾರದ ಯೋಜನೆಗಳು ಮತ್ತು ರಾಜ್ಯಗಳಿಗೆ ಒತ್ತು ನೀಡುವ ಬಗ್ಗೆ ಸಾಂಕೇತಿಕ ಸುಳಿವು ನೀಡಿದ್ದರು. ಈ ಬಾರಿ ಯಾವ ಸೀರೆ ಉಡುತ್ತಾರೆ ಅನ್ನೋ ಕುತೂಹಲ ಕೂಡ ಮನೆ ಮಾಡಿದೆ.