ಮಧ್ಯಮ ವರ್ಗದವರಿಗಾಗಿ ಸರ್ಕಾರ ಕೆಲಸ ಮಾಡಿದೆ – ಉಭಯ ಸದನಗಳೆದುರು ರಾಷ್ಟ್ರಪತಿ ಭಾಷಣ
2025ನೇ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶ ಆರಂಭವಾಗಿದೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ರಾಷ್ಟ್ರಪತಿ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಉಭಯ ಸದನಗಳೆದುರು ಮಂಡಿಸಿದರು.
ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಧಿವೇಶನ ಜನವರಿ 31 ರಿಂದ ಏಪ್ರಿಲ್ 4 ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಅಧಿವೇಶನದ ಮೊದಲ ಭಾಗ ಫೆ.13ಕ್ಕೆ ಕೊನೆಗೊಳ್ಳಲಿದ್ದು, ಎರಡನೇ ಭಾಗ ಮಾರ್ಚ್ 10ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 24 ರಂದು ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರಪತಿಗಳು ತಮ್ಮ ಭಾಷಣವನ್ನು ಪ್ರಾರಂಭಿಸಿದರು.
ಇದನ್ನೂ ಓದಿ: PAK ಬಣ್ಣ ಬಯಲಿಗೆಳೆದ ಪತ್ರಿಕೆ – ಗಬ್ಬೆದ್ದ ಮೈದಾನಗಳಲ್ಲೇ ICC ಟೂರ್ನಿ
ನಂತರ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು. ಎನ್ ಡಿಎ ಸರ್ಕಾರದ ಮೂರನೇ ಅವಧಿಯು ಹಿಂದಿನ ಆಡಳಿತಗಳಿಗಿಂತ ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ರಾಷ್ಟ್ರದ 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಲಖ್ಪತಿ ದೀದಿಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ ಎಂದು ಮುರ್ಮು ಹೇಳಿದರು. ಕೆಲ ತಿಂಗಳ ಹಿಂದೆ ಬಿಮಾ ಸಖಿ ಅಭಿಯಾನವೂ ಆರಂಭವಾಗಿದೆ.
ನಮ್ಮ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಸಖಿಗಳು ದೂರದ ಪ್ರದೇಶಗಳಲ್ಲಿ ಡಿಜಿಟಲ್ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಡ್ರೋನ್ ದೀದಿ ಯೋಜನೆಯು ಮಹಿಳೆಯರ ಆರ್ಥಿಕ ಮತ್ತು ತಾಂತ್ರಿಕ ಸಬಲೀಕರಣದ ಮಾಧ್ಯಮವಾಗಿದೆ. ಇಂದು ಮಹಿಳೆಯರು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ ಮತ್ತು ಕಾರ್ಪೊರೇಟ್ ವಲಯದಲ್ಲಿಯೂ ಮುಂದಾಳತ್ವ ವಹಿಸುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಕೂಡ ಒಲಿಂಪಿಕ್ಸ್ನಲ್ಲಿ ಪದಕ ತಂದು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹೇಳಿದರು.
ಇಂದು ನಮ್ಮ ಯುವಕರು ಸ್ಟಾರ್ಟ್ಅಪ್ನಿಂದ ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ಕಳೆದ ದಶಕದಲ್ಲಿ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳ ಮೂಲಕ ಯುವಕರಿಗೆ ಹಲವು ಅವಕಾಶಗಳನ್ನು ಒದಗಿಸಲಾಗಿದೆ. ಇಂಟರ್ನ್ಶಿಪ್ ಯೋಜನೆಯ ಮೂಲಕ ಯುವಕರಿಗೆ ಹೊಸ ಅನುಭವ ನೀಡಲಾಗುತ್ತಿದೆ. ದೇಶದಲ್ಲಿ ಲಕ್ಷಾಂತರ ಸ್ಟಾರ್ಟಪ್ಗಳು ಕೆಲಸ ಮಾಡುತ್ತಿವೆ. ಎಐ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಜಗತ್ತಿಗೆ ದಾರಿ ತೋರಿಸುತ್ತಿದೆ. ನನ್ನ ಸರ್ಕಾರವು ವಿದ್ಯಾರ್ಥಿಗಳಿಗೆ ಆಧುನಿಕ ಪಠ್ಯಕ್ರಮವನ್ನು ಸಿದ್ಧಪಡಿಸುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಸೌಲಭ್ಯ ನೀಡಲಾಗುತ್ತಿದೆ. ಹತ್ತು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಅಟಲ್ ಲ್ಯಾಬ್ ತೆರೆಯಲಾಗಿದೆ. ಸಂಶೋಧನೆ ಮಾಡುವ ಉದ್ದೇಶದಿಂದ ಅನೇಕ ಕೆಲಸಗಳನ್ನು ಮಾಡಲಾಗಿದೆ ಎಂದರು.
ನಮ್ಮ ಸರ್ಕಾರ ಇತ್ತೀಚೆಗೆ ಎಂಟನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಿದೆ. ಏಕೀಕೃತ ಪಿಂಚಣಿ ಯೋಜನೆಯಡಿ ನೌಕರರಿಗೆ ಶೇ.50ರಷ್ಟು ಪಿಂಚಣಿ ನೀಡಲು ನಿರ್ಧರಿಸಲಾಗಿದೆ. ಮಧ್ಯಮ ವರ್ಗದವರ ಸ್ವಂತ ಮನೆ ಕನಸನ್ನು ನನಸು ಮಾಡಲು ಸರ್ಕಾರ ಬದ್ಧವಾಗಿದೆ. ರೇರಾ ಕಾನೂನನ್ನು ಮಾಡಿ ಜನರಿಗೆ ಮನೆಗಳ ಮೇಲೆ ಸಬ್ಸಿಡಿ ನೀಡಲಾಗುತ್ತಿದೆ. ಉಡಾನ್ ಯೋಜನೆ ಮೂಲಕ ಜನರ ವಿಮಾನ ಪ್ರಯಾಣದ ಕನಸು ನನಸಾಗಿದೆ. ಪ್ರತಿಯೊಂದು ವಿಷಯದ ಅಧ್ಯಯನಕ್ಕೆ ಸೀಟುಗಳ ಸಂಖ್ಯೆಯಲ್ಲಿ ಬಹುಪಟ್ಟು ಹೆಚ್ಚಳದ ಲಾಭ ಮಧ್ಯಮ ವರ್ಗದವರಿಗೂ ಸಿಕ್ಕಿದೆ ಎಂದು ಹೇಳಿದರು.