ಬುಮ್ರಾ REAL ‘ದಿ ಡಾನ್’ – ಬ್ರಾಡ್ಮನ್ ದಾಖಲೆ ಮಾಡ್ತಿರಲಿಲ್ವಾ?
ಟೀಂ ಇಂಡಿಯಾ ಪರ ಪ್ರತೀ ಪಂದ್ಯವನ್ನ ಆಡುವಾಗ್ಲೂ ಜಸ್ಪ್ರೀತ್ ಬುಮ್ರಾ ಮಾಡೋ ಜಾದೂ ಇದು. ಎಷ್ಟೋ ಪಂದ್ಯದಳನ್ನ ಸಿಂಗಲ್ ಸಿಂಹದಂತೆ ನಿಂತು ಗೆಲ್ಲಿಸಿಕೊಟ್ಟಿರೋ ಉದಾಹರಣೆಗಳೂ ಇವೆ. ಜಗತ್ತಿನ ಸರ್ವಶ್ರೇಷ್ಠ ಬ್ಯಾಟ್ಸ್ಮನ್ಸ್ ಅಂತಾ ಕರೆಸಿಕೊಳ್ಳೋರೂ ಕೂಡ ಬುಮ್ರಾ ಬೌಲಿಂಗ್ಗೆ ಪತರಗುಟ್ಟಿ ಹೋಗಿದ್ದಾರೆ. ಹೀಗೆ ಕ್ರಿಕೆಟ್ ಲೋಕವನ್ನೇ ಆವರಿಸಿಕೊಂಡಿರೋ ಬುಮ್ರಾರನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಂ ಗಿಲ್ಕ್ರಿಸ್ಟ್ ಗುಣಗಾನ ಮಾಡಿದ್ದಾರೆ. ಅದೂ ಕೂಡ ಸರ್ ಡಾನ್ ಬ್ರಾಡ್ ಮನ್ ಅವ್ರ ಬ್ಯಾಟಿಂಗ್ ಆವರೇಜ್ ಮುಂದಿಟ್ಟು ಬುಮ್ರಾರನ್ನ ಕೊಂಡಾಡಿದ್ದಾರೆ.
ಇದನ್ನೂ ಓದಿ : 4ನೇ ಪಂದ್ಯಕ್ಕೆ ಟೀಂ ಚೇಂಜ್ – ಪಾಂಡ್ಯ, ಬಿಷ್ಣೋಯ್ ಔಟ್.. ದುಬೆ ಇನ್
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆಡಂ ಗಿಲ್ಕ್ರಿಸ್ಟ್ ಭಾರತದ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ಗೆ ಫಿದಾ ಆಗಿದ್ದಾರೆ. ಮೆಚ್ಚುಗೆಯ ಮಹಾಪೂರವನ್ನೇ ಸುರಿಸಿದ್ದಾರೆ. ಇತ್ತೀಚೆಗಷ್ಟೇ ಮುಗಿದ 2024-25ನೇ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಅವರ ಬೌಲಿಂಗ್ ಬಗ್ಗೆ ರೇಟ್ ನೀಡುವಂತೆ ಸಂದರ್ಶನವೊಂದ್ರಲ್ಲಿ ಗಿಲ್ಕ್ರಿಸ್ಟ್ ಅವರನ್ನು ಕೇಳಲಾಗಿತ್ತು. ಈ ವೇಳೆ ಗಿಲ್ ಕ್ರಿಸ್ಟ್ ಅಚ್ಚರಿಯ ಉತ್ತರ ನೀಡಿದ್ದಾರೆ. ವಿಶ್ವ ಟೆಸ್ಟ್ ಕ್ರಿಕೆಟ್ನ ದಂತಕಥೆಯಾಗಿರೋ ಬ್ಯಾಟ್ಸ್ಮನ್ ಸರ್ ಡಾನ್ ಬ್ರಾಡ್ಮನ್ ಯುಗದಲ್ಲಿ ಬುಮ್ರಾ ಆಡಿದ್ದರೆ ಬ್ರಾಡ್ಮನ್ ಅವ್ರು 99.94 ಸರಾಸರಿಯನ್ನು ಹೊಂದಿರೋಕೆ ಚಾನ್ಸೇ ಇರಲಿಲ್ಲ ಎಂದಿದ್ದಾರೆ. ನಾನು ಬುಮ್ರಾ ಆಟಕ್ಕೆ ರೇಟಿಂಗ್ ನೀಡೋದಿಲ್ಲ. ಯಾಕಂದ್ರೆ ವಿಶ್ವಕ್ರಿಕೆಟ್ನಲ್ಲಿ ಅವ್ರಿಗೆ ಯಾವ ನಂಬರ್ ಕೂಡ ಸರಿ ಹೊಂದಲ್ಲ. ಬೌಲಿಂಗ್ ವಿಚಾರದಲ್ಲಿ ಬ್ಯಾಟರ್ ಬ್ರಾಡ್ಮನ್ ಅವರ ಶಿಖರವನ್ನು ಬ್ರೇಕ್ ಮಾಡ್ತಿದ್ರು. ಬುಮ್ರಾ ಇದ್ದಿದ್ರೆ ಬ್ರಾಡ್ಮನ್ ಅವರ ಬ್ಯಾಟಿಂಗ್ ಸರಾಸರಿ ಇಷ್ಟೊಂದು ಇರ್ತಾನೇ ಇರಲಿಲ್ಲ. ನನ್ನ ಪ್ರಕಾರ ಬ್ರಾಡ್ಮನ್ ಅವ್ರು ಬುಮ್ರಾರ ಬೌಲಿಂಗ್ನ ಎದುರಿಸಿದ್ರೆ ಬಹುಶಃ ಅವ್ರ ಬ್ಯಾಟಿಂಗ್ ಆವರೇಜ್ 35 ಇರ್ತಿತ್ತು ಎಂದಿದ್ದಾರೆ. ಈ ಮೂಲಕ ದಿ ಡಾನ್ ಅಂತಾನೇ ಕರೆಸಿಕೊಳ್ತಿದ್ದ ಬ್ರಾಡ್ಮನ್ರನ್ನ ಪಕ್ಕಕ್ಕಿಟ್ಟು ಬುಮ್ರಾರನ್ನು ಅಪ್ರಿಶಿಯೇಟ್ ಮಾಡಿದ್ದಾರೆ. ಅಷ್ಟಕ್ಕೂ ಕ್ರಿಕೆಟ್ ಅಂಗಳದಲ್ಲಿ ದಿ ಡಾನ್ ಅಂತಾನೇ ಕರೆಸಿಕೊಳ್ತಿದ್ದ ಬ್ರಾಡ್ಮನ್ ಬಗ್ಗೆ ನೀವು ತಿಳ್ಕೊಳ್ಳೇಬೇಕು.
ಕ್ರಿಕೆಟ್ ಇತಿಹಾಸ ಕಂಡಂತಹ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಡಾನ್ ಬ್ರಾಡ್ಮನ್. ಆಸ್ಟ್ರೇಲಿಯಾದ ಮಾಜಿ ದಂತಕಥೆ ಸರ್ ಡಾನ್ ಬ್ರಾಡ್ಮನ್ ತಮ್ಮ ಅದ್ಭುತ ಬ್ಯಾಟಿಂಗ್ಗೆ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 99.94 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಸರ್ ಡಾನ್ ಬ್ರಾಡ್ಮನ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 80 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿರುವ ಅವರು 99.94 ಸರಾಸರಿಯಲ್ಲಿ 6996 ರನ್ ಗಳಿಸಿದ್ದಾರೆ. 2 ತ್ರಿಶತಕ, 12 ದ್ವಿಶತಕ, 29 ಶತಕಗಳು ಮತ್ತು 13 ಅರ್ಧ ಶತಕಗಳು ಅವರ ಹೆಸರಿನಲ್ಲಿವೆ. ಅವರ ಗರಿಷ್ಠ ಸ್ಕೋರ್ 334 ರನ್. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಡಾನ್ ಬ್ರಾಡ್ಮನ್ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕೇವಲ 6 ಸಿಕ್ಸರ್ಗಳನ್ನಷ್ಟೇ ಬಾರಿಸಿದ್ದರು. ಕೇವಲ ಎರಡು ಇನ್ನಿಂಗ್ಸ್ನಲ್ಲಿ ಸಿಕ್ಸರ್ ಬಾರಿಸಿದ್ದರು. ಒಮ್ಮೆ ಇಂಗ್ಲೆಂಡ್ ವಿರುದ್ಧ ಆಡುವಾಗ, ಮತ್ತೊಮ್ಮೆ ಭಾರತದ ವಿರುದ್ಧ 1 ಸಿಕ್ಸರ್ ಬಾರಿಸಿದ್ದರು. ಅಂತರಾಷ್ಟ್ರೀಯ ವೃತ್ತಿಜೀವನದ ಹೊರತಾಗಿ, ಪ್ರಥಮ ದರ್ಜೆಯ ಕ್ರಿಕೆಟ್ ಕರಿಯರ್ ಕೂಡ ಅದ್ಭುತವಾಗಿತ್ತು. ಒಟ್ಟು 234 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 338 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ ಬ್ರಾಡ್ಮನ್ 95.14 ಸರಾಸರಿಯಲ್ಲಿ 28067 ರನ್ ಗಳಿಸಿದ್ದರು. ಸುಮಾರು 20 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನ ಬಳಿಕ 1948ರಲ್ಲಿ ನಿವೃತ್ತಿ ಘೋಷಿಸಿದ್ರು. ಕ್ರಿಕೆಟ್ ಅಂಗಳದಲ್ಲಿ “ದಿ ಡಾನ್” ಎಂದಏ ಕರೆಸಿಕೊಂಡಿದ್ದ ಬ್ರಾಡ್ಮನ್ ಅವರು 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಆದರೆ 20 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್ನಲ್ಲಿ ನಿರ್ಮಿಸಿದ ದಾಖಲೆಗಳು ಇನ್ನೂ ಸಹ ಅವರನ್ನು ಅಜರಾಮರರನ್ನಾಗಿರಿಸಿದೆ. ಇನ್ನು ಬ್ರಾಡ್ಮನ್ ಅವರ ಸಾಧನೆಗಾಗಿ 2009ರಲ್ಲಿ ಐಸಿಸಿಯಿಂದ ಹಾಲ್ ಆಫ್ ಫೇಮ್ ಪ್ರಶಸ್ತಿ ಲಭಿಸಿತು. ಬ್ರಾಡ್ಮನ್ಗೆ ಗೌರವಾರ್ಥವಾಗಿ ಆಸ್ಟ್ರೇಲಿಯಾ ಸರ್ಕಾರ ಪೋಸ್ಟಲ್ ಸ್ಟ್ಯಾಂಪ್ ಕೂಡ ಹೊರ ತಂದಿತ್ತು. ಇನ್ನು 1947-48ರ ಭಾರತ ವಿರುದ್ಧದ ಸರಣಿಯಲ್ಲಿ ಧರಿಸಿದ್ದ ಪ್ರಸಿದ್ಧ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಕಳೆದ ಡಿಸೆಂಬರ್ನಲ್ಲಿ ಹರಾಜಿಗಿಡಲಾಗಿತ್ತು. ಈ ವೇಳೆ ಜಸ್ಟ್ ಹತ್ತೇ ಹತ್ತು ನಿಮಿಷಗಳಲ್ಲಿ ಬರೋಬ್ಬರಿ 2.63 ಕೋಟಿ ರೂಪಾಯಿಗೆ ಹರಾಜಾಗಿತ್ತು. ಇದು ಕ್ರಿಕೆಟ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಹರಾಜಾದ ಕ್ರಿಕೆಟಿಗನ ವಸ್ತು ಎನಿಸಿಕೊಂಡಿದೆ.