ಕುಂಭಮೇಳದಲ್ಲಿ ಕಾಲ್ತುಳಿತ.! – ಅಮಾವಾಸ್ಯೆ ದಿನವೇ ದುರಂತ!   
1954 ರಿಂದ 2025, ಎಷ್ಟು ಬಲಿ ಗೊತ್ತಾ?

ಕುಂಭಮೇಳದಲ್ಲಿ ಕಾಲ್ತುಳಿತ.! – ಅಮಾವಾಸ್ಯೆ ದಿನವೇ ದುರಂತ!   1954 ರಿಂದ 2025, ಎಷ್ಟು ಬಲಿ ಗೊತ್ತಾ?

ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ 15 ಭಕ್ತರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರಯಾಗ್​ರಾಜ್​ನ ಸಂಗಮ್ ಪ್ರದೇಶದಲ್ಲಿ ಬೆಳಗ್ಗೆ 2 ಗಂಟೆ ಸುಮಾರಿಗೆ ಏಕಾಏಕಿ ಜನರು ನುಗ್ಗಿಕೊಂಡು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 15 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕುಂಭಮೇಳ ಶುರುವಾದಗಿನಿಂದ ಇರುವೆಯಂತೆ ಜನ ಹರಿದು ಪ್ರಯಾಗ್ ರಾಜ್‌ನತ್ತ ಬರುತ್ತಿದ್ದಾರೆ.. ದಿನಕ್ಕೆ 2-3 ಕೋಟಿ ಜನ ಸಂಗಮದಲ್ಲಿ ಸೇರುತ್ತಿದ್ದಾರೆ. ಆದ್ರೆ ಇವತ್ತು ಮೌನಿ ಅಮವಾಸ್ಯೆ ಆಗಿರೋದ್ರಿಂದ ಜನರ ದಂಡೇ ಹರಿದು ಬರ್ತಿದೆ. 10 ಕೋಟಿಗೂ ಹೆಚ್ಚು ಜನ ಪುಣ್ಯ ಸ್ನಾನ ಮಾಡಲಿದ್ದಾರೆ ಎನ್ನಲಾಗಿದೆ. ಈಗಗಾಲೇ 5 ಕೋಟಿಗೂ ಹೆಚ್ಚು ಜನ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದಾರೆ. ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದಿಢೀರನೆ ಆಗಮಿಸಿದ್ದಾರೆ. ಇದರಿಂದ, ಕಾಲ್ತುಳಿತ ಉಂಟಾಗಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ ಉತ್ತರ ಪ್ರದೇಶ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಬಗ್ಗೆ ವಿದೇಶಿ ಮಾಧ್ಯಮ ಕೂಡ ವರದಿ ಮಾಡುತ್ತಿದ್ದು, ಎಷ್ಟು ಜನ ಸತ್ತಿದ್ದಾರೆಂಬ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ.. ಬಿಬಿಸಿ ವರದಿ ಪ್ರಕಾರ 12 ಜನ ಸಾವನ್ನಪ್ಪಿದ್ದಾರೆಂದು ವರದಿ ಮಾಡಿದೆ.. ಇಂಡಿಯಾ ಟುಡೇ ಕನಿಷ್ಠ 10 ಜನ ಸತ್ತಿದ್ದಾರೆಂದು ವರದಿ ಮಾಡಿದೆ. ಆದ್ರೆ ಯುಪಿ ಸರ್ಕಾರದ ಯಾವ ಅಧಿಕಾರಿಗಳು ಕೂಡ ಸಾವನ್ನಪ್ಪಿರೋ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇಲ್ಲಿ ಜನರನ್ನ ಅಲ್ಲಿನ ಸಿಬ್ಬಂದಿಗೆ ಕಂಟ್ರೋಲ್ ಮಾಡೋದು ತುಂಬಾ ಕಷ್ಟ ಆಗುತ್ತಿದೆ. ಯಾಕಂದ್ರೆ ಕೋಟಿ ಕೋಟಿ ಜನ ಒಂದೇ ಕಡೆ ಬಂದು ನುಗ್ಗಿದ್ರೆ ಏನ್ ಆಗುತ್ತೆ ಹೇಳಿ. ಮ್ಯಾನೇಜ್ ಮಾಡೋದು ತುಂಬಾ ಕಷ್ಟ ಆಗುತ್ತೆ.  ಸರ್ಕಾರ ಎಷ್ಟೇ ಫ್ಲ್ಯಾನ್ ಮಾಡಿದ್ರೂ ಕೂಡ ಉಲ್ಟಾ ಆಗುತ್ತೆ.. ಜನ ಬ್ಯಾರಿಕೇಡ್‌ ನುಗ್ಗಿ, ಹತ್ತಿ ಹಾರಿ ಸಂಗಮದ ಕಡೆ ಹೋಗುತ್ತಿದ್ದಾರೆ. ಹೀಗಾಗಿ ಜನರನ್ನ ಕಂಟ್ರೋಲ್ ಮಾಡೋದು ಯೋಗಿ ಸರ್ಕಾರಕ್ಕೆ ತುಂಬಾ ಕಷ್ಟ ಆಗುತ್ತಿದೆ.

 ಸಂಗಮದ ಕಡೆ ಬರಬೇಡಿಯೆಂದ ಯೋಗಿ

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಪ್ರಾಣ ಹಾನಿಯಾದ  ಬೆನ್ನಲ್ಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಎಲ್ಲ ಭಕ್ತರೂ ಸಂಗಮ್ ಕಡೆಗೆ ಬರುವುದು ಬೇಡ. ಎಲ್ಲಾ ಕಡೆಗೂ ಗಂಗಾ ಮಾತಾ ಇದ್ದಾಳೆ ಎಂದು ಹೇಳಿದ್ದಾರೆ. ಪ್ರಯಾಗರಾಜ್​ನಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ಅವರು, ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾತ್ರಿವರೆಗೆ ಅಮೃತ ಸ್ನಾನಕ್ಕೆ ಶುಭ ಘಳಿಗೆ ಇದೆ. ಇಂದು ಬೆಳಗ್ಗೆಯಿಂದಲೇ 3 ಕೋಟಿಗೂ ಅಧಿಕ ಜನರು ಅಮೃತ ಸ್ನಾನ ಮಾಡಿದ್ದಾರೆ. ಸ್ನಾನ ಮಾಡಲು ಎಲ್ಲರೂ ಸಂಗಮ್ ಪ್ರದೇಶದ ಕಡೆ ಬರಬೇಡಿ. ಎಲ್ಲ ಕಡೆಯೂ ಗಂಗಾ ಮಾತೆ ಇದ್ದಾಳೆ. ನಿಮಗೆ ಸಮೀಪವಾಗುವ ನದಿಯ ಸೆಕ್ಟರ್ ಬಳಿಗೆ ಹೋಗಿ ಸ್ನಾನ ಮಾಡಿ ಎಂದು ಸಿಎಂ ಯೋಗಿ ಮನವಿ ಮಾಡಿದ್ದಾರೆ.

12 ರಿಂದ 15 ಕಿಲೋ ಮೀಟರ್ ವ್ಯಾಪ್ತಿವರೆಗೆ ಭಕ್ತರು ಇದ್ದಾರೆ. ಸ್ನಾನಕ್ಕೆ ಎಲ್ಲರಿಗೂ ಅನುವು ಮಾಡಿಕೊಡಬೇಕಿದೆ. ರಾತ್ರಿ ನಡೆದ ಘಟನೆಯಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಂಭದಲ್ಲಿ ಯಾವುದೇ ವಂದಂತಿ ಅಥವಾ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡಬೇಡಿ. ಭಕ್ತರು ಯಾವುದೇ ಸುದ್ದಿ ಇರಲಿ ಬೇಗ ನಂಬಲು ಹೋಗಬೇಡಿ ಎಂದು ಸಿಎಂ ಹೇಳದ್ದಾರೆ. ಹಾಗೇ  ಪ್ರಸ್ತುತ ಪ್ರಯಾಗರಾಜ್​ನಲ್ಲಿ 10 ಕೋಟಿಗೂ ಹೆಚ್ಚು ಭಕ್ತರು, ಜನರು ಇದ್ದಾರೆ. ಮಧ್ಯೆರಾತ್ರಿ 2 ಗಂಟೆಗೆ ಕಾಲ್ತುಳಿತದ ಘಟನೆ ನಡೆದಿದೆ. ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಆದ್ರೆ ಘಟನೆಯಲ್ಲಿ ನಡೆದ ಪ್ರಾಣ ಹಾನಿಯ ಕುರಿತು ಅಧಿಕೃತ ಮಾಹಿತಿ ಉತ್ತರ ಪ್ರದೇಶದ ಸರ್ಕಾರ ನೀಡಿಲ್ಲ.

 ಕಾಲ್ ಮಾಡಿ ಮಾಹಿತಿ ಪಡೆದ ಮೋದಿ

ಪ್ರಯಾಗ್​ರಾಜ್​ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಭಾರಿ ಕಾಲ್ತುಳಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಗಾಯಾಳುಗಳ ನೆರವಿಗೆ ತಕ್ಷಣ ಧಾವಿಸುವಂತೆ ಹಾಗೂ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸೂಚಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್​ ಕಚೇರಿಯ ಮಾಹಿತಿ ಪ್ರಕಾರ, ಪ್ರಧಾನಿ ನಿರಂತರವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಎರಡು ಬಾರಿ ಸಿಎಂ​ಗೆ ಕರೆ ಮಾಡಿದ್ದಾರೆ. ಅಲ್ಲಿನ ಬೆಳವಣಿಗೆ ಮತ್ತು ಪರಿಹಾರ ಕ್ರಮದ ಕುರಿತು ವಿವರ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿರುವುದು ಅತ್ಯಂತ ದುಃಖಕರ. ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಕನ್ನಡಿಗರು ಕೂಡ ಕಣ್ಣೀರು ಹಾಕುವಂತಾಗಿದೆ. ಪುಣ್ಯಸ್ನಾನಕ್ಕೆ ಅಂತಾ ಹೋದವರ ಪಾಡು ಹೇಳತೀರದಾಗಿದೆ. ಬೆಳಗಾವಿಯಿಂದ ಖಾಸಗಿ ಬಸ್​ನಲ್ಲಿ ಮೂವತ್ತು ಜನರ ತಂಡ ಪ್ರಯಾಗರಾಜ್​ಗೆ ಹೋಗಿತ್ತು. ಈ ಪೈಕಿ ಕಾಲ್ತುಳಿತದ ಬಳಿಕ ಐವರು ನಾಪತ್ತೆ ಆಗಿದ್ದಾರೆ. ಬೆಳಗ್ಗೆಯಿಂದಲೂ ಸಂಪರ್ಕಕ್ಕೆ ಸಿಗದ ಕಾರಣ ಸಂಬಂಧಿಕರಲ್ಲಿ ಆತಂಕ ಮನೆ ಮಾಡಿದೆ. ಬೆಳಗಾವಿ ನಗರದ ಶೆಟ್ಟಿಗಲ್ಲಿಯ ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಚದುರಿ ಹೋಗಿದ್ದ ಇಬ್ಬರಿಗೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಬೆಳಗಾವಿಯಲ್ಲಿರುವ ದಂಪತಿಯ ಪುತ್ರ ಕಂಗಲಾಗಿಬಿಟ್ಟಿದ್ದಾರೆ. ಇನ್ನೂ ಇದೇ ಮೊದಲ ಬಾರಿ ಕುಂಭಮೇಳದಲ್ಲಿ ಇಂತಹ ದುರ್ಘಟನೆಗಳು ನಡೆದಿಲ್ಲ. 1954 ರಿಂದಲೂ ಇಂತಹ ದುರಂತಗಳಿಗೆ ಕುಂಭಮೇಳ ಸಾಕ್ಷಿಯಾಗುತ್ತಲೇ ಬಂದಿದೆ.  ಹಾಗಿದ್ರೆ ಯಾವಾಗ ಏನೆಲ್ಲಾ ಆಯ್ತು ಅನ್ನೋದನ್ನ ನೋಡೋಣ ಬನ್ನಿ..

 1954 ರಲ್ಲಿ ಕಾಲ್ತುಳಿತದಿಂದ 800 ಸಾವು 

1954ರಲ್ಲಿ ಭಾರತದ ಸ್ವಾತಂತ್ರ್ಯಗೊಂಡ ಬಳಿಕ ಮೊದಲ ಬಾರಿ ಕುಂಭಮೇಳ ಆಯೋಜಿಸಲಾಗಿತ್ತು.  ಸ್ವಾತಂತ್ರ್ಯಾನಂತರ ನಡೆದ ಮೊದಲ ಕುಂಭಮೇಳದಲ್ಲಿಯೂ ಕೂಡ ದೊಡ್ಡ ದುರಂತವೊಂದು ನಡೆದು ಹೋಗಿತ್ತು. ಫೆಬ್ರವರಿ 3, 1954 ರಂದು ಅಂದಿನ ಅಲಹಾಬಾದ್​ನ ತ್ರಿವೇಣಿ ಸಂಗಮದಲ್ಲಿ ಭಕ್ತಾದಿದಗಳ ಸಂಖ್ಯೆ ಹೆಚ್ಚಾಗಿ ನೂಕುನುಗ್ಗಲಾಗಿ ಕಾಲ್ತುಳಿತ ಸಂಭವಿಸಿತ್ತು. ಅದು ಕೂಡ ಮೌನಿ ಅಮಾವಾಸ್ಯೆಯಂದೆ ನಡೆದು ಹೋಗಿತ್ತು. ಪವಿತ್ರ ಸ್ನಾನಕ್ಕೆ ನದಿಗಳಿದ ಜನರಲ್ಲಿ ನಡೆದ ಕಾಲ್ತುಳಿದಿಂದಾಗಿ 800 ಜನರು ಅಸು ನೀಗಿದರು.. ಕೆಲವರು ಕಾಲ್ತುಳಿತಕ್ಕೆ ಬಲಿಯಾದರೆ ಇನ್ನೂ ಕೆಲವರು ನದಿಯ ಹರಿವಿನಲ್ಲಿ ಕೊಚ್ಚಿ ಹೋದರು.

 1986 ರಲ್ಲಿ 200 ಜನ ಕಾಲ್ತುಳಿತಕ್ಕೆ ಬಲಿ

1986ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿಯೂ ಕೂಡ ದೊಡ್ಡದೊಂದು ದುರಂತ ಸಂಭವಿಸಿತ್ತು. ಸುಮಾರು 200 ಜನರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಅದಕ್ಕೆ ಕಾರಣವಾಗಿದ್ದ ಅಂದಿನ ಉತ್ತರಪ್ರದೇಶದ ಮುಖ್ಯಮಂತ್ರಿ ವೀರ ಬಹದ್ದೂರ್​​ ಸಿಂಗ್​. ವೀರ್ ಬಹದ್ದೂರ್​ ಸಿಂಗ್ ಹರಿದ್ವಾರಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಸದರೊಂದಿಗೆ ಹರಿದ್ವಾರಕ್ಕೆ ಪವಿತ್ರಸ್ನಾನಕ್ಕೆಂದು ಭೇಟಿ ನೀಡಿದ್ದರು. ಈ ವೇಳೆ ಭದ್ರತೆಯ ಕಾರಣದಿಂದಾಗಿ ಪೊಲೀಸರು ಭಕ್ತಾದಿಗಳನ್ನು ಮತ್ತೊಂದು ಬದಿಯ ನದಿಯ ದಂಡೆಯಲ್ಲಿ ಸ್ನಾನಕ್ಕೆ ಹೋಗುವಂತೆ ಸೂಚಿಸಿದರು. ಈ ವೇಳೆ ನಡೆದ ನೂಕುನುಗ್ಗುಲಲ್ಲಿ ಸುಮಾರು 200 ಜನರು ಪ್ರಾಣ ಕಳೆದುಕೊಂಡಿದ್ದರು.

  2003ರಲ್ಲಿ ಕಾಲ್ತುಳಿತದಲ್ಲಿ 39 ಜನ ಬಲಿ

ಮಹಾರಾಷ್ಟ್ರದ ನಾಶಿಕ್​ನಲ್ಲಿ ನಡೆದ ಕುಂಭಮೇಳದಲ್ಲಿಯೂ ಕೂಡ ಒಂದು ದುರಂತ ಸಂಭವಿಸಿತ್ತು. ಗೋದಾವರಿ ತಟದಲ್ಲಿ ಮಿಂದೇಳಲು ಬಂದ ಲಕ್ಷಾಂತರ ಭಕ್ತಾದಿಗಳ ನಡುವೆ ನೂಕುನುಗ್ಗಲು ಸಂಭವಿಸಿ ದೊಡ್ಡ ಕಾಲ್ತುಳಿತವುಂಟಾಗಿತ್ತು. ಈ ದುರಂತದಲ್ಲಿ ಹೆಣ್ಣು ಮಕ್ಕಳು ಹಾಗೂ ಪುಟ್ಟ ಮಕ್ಕಳು ಸೇರಿ ಒಟ್ಟು 39 ಜನರು ಅಸುನೀಗಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2013ರಲ್ಲಿ 12 ವರ್ಷಗಳ ಹಿಂದೆ ನಡೆದ ಮಹಾಕುಂಭಮೇಳದಲ್ಲಿ ಪ್ರಯಾಗರಾಜ್​ ರೈಲ್ವೆ ಸ್ಟೇಷನ್​ನಲ್ಲಿ ಪಾದಚಾರಿ ಸೇತುವೆ ಕುಸಿದ ಪರಿಣಾಮ ಸುಮಾರು 42 ಜನರು ಉಸಿರು ಚೆಲ್ಲಿದ್ದರು. 45 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ, ಅಂದ್ರೆ 12 ವರ್ಷಗಳ ಬಳಿಕ ಈಗ ಪ್ರಯಾಗರಾಜ್​ನಲ್ಲಿ ಮಹಾಕುಂಭಮೇಳ ಆಯೋಜನೆ ಮಾಡಲಾಗಿದೆ.  ಈ ಬಾರಿಯೂ ಕೂಡ ಪ್ರಯಾಗರಾಜ್​ನಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 15 ಜನರು ದುರ್ಮರಣಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ.

 ಇನ್ನು ಪ್ರಯಾಗರಾಜ್​ನ ಕುಂಭಮೇಳದಲ್ಲಿ ಕಾಲ್ತುಳಿತದ ಪ್ರಕರಣದಲ್ಲಿ ಬೆಳಗಾವಿಯ ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯಗಳಗಾಗಿವೆ. ಬೆಳಗಾವಿ ವಡಗಾವಿಯ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪರ್ಡೆಗೆ ಗಾಯಗಳಾಗಿವೆ. ಬಾಲಕಿಯರಾದ ಮೇಘಾ, ಜ್ಯೋತಿ ಕೂಡ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಮೂರು ದಿನಗಳ ಹಿಂದೆ ಪ್ರಯಾಗರಾಜ್​​ಗೆ ಈ ನಾಲ್ವರು ತೆರಳಿದ್ದರು. ಸ್ಥಳೀಯ ವೈದ್ಯರಿಂದ ನಾಲ್ವರಿಗು ಚಿಕಿತ್ಸೆ ನೀಡಲಾಗಿದ್ದು ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಬಂದಿದೆ. ಬೆಳಗಾವಿಯಿಂದ ಸುಮಾರು 500ಕ್ಕೂ ಅಧಿಕ ಯಾತ್ರಾರ್ಥಿಗಳು ಪ್ರಯಾಗರಾಜ್​ಗೆ ಪ್ರಯಾಣ ಮಾಡಿದ್ದಾರೆ.

 

Kishor KV

Leave a Reply

Your email address will not be published. Required fields are marked *