ಕಲಿಯುಗ ಆರಂಭವಾಗಿದ್ದು ಹೇಗೆ? ಈ ರಾಜನ ತಪ್ಪಿಂದ ಏನೆಲ್ಲಾ ಆಯ್ತು?
ಕಲಿಯಿಂದಲೇ ಹೆಚ್ಚುತ್ತಿದ್ಯಾ ಜೂಜು?
ಯಾರನ್ನೇ ಕೇಳಿದರೂ, ಎಲ್ಲೇ ಓದಿದರೂ ಕಲಿಯುಗವನ್ನು ಕೆಟ್ಟ ಯುಗವೆಂದೇ ಹೇಳುತ್ತಾರೆ. ಕಲಿಯುಗ ಇಂದು ಅಂತ್ಯವಾಗುತ್ತೆ, ನಾಳೆ ಅಂತ್ಯವಾಗುತ್ತೆ, ಕಲಿಯುಗ ಅಂತ್ಯವಾಗುವ ಏನೆಲ್ಲಾ ಆಗುತ್ತೆ ಎನ್ನುವುದರ ಬಗ್ಗೆ ಚರ್ಚಿಸುತ್ತಾರೆಯೇ ಹೊರತು ಕಲಿಯುಗ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ಇನ್ನೂ ಅನೇಕರಿಗೆ ತಿಳಿದೇ ಇಲ್ಲ. ಕಲಿಯುಗ ಆರಂಭವಾಗಿದ್ದುಹೇಗೆ ಅನ್ನೋದನ್ನ ನೋಡೋಣ..
ಮಹಾಭಾರತ ಕಥೆಯನ್ನು ತೆಗದುಕೊಂಡಾಗ ನಮಗೆ ಸಾವಿರಾರು ಮಹಾನ್ ಯೋಧರ ಹೆಸರುಗಳು ನೆನಪಿಗೆ ಬರುತ್ತವೆ. ಮಹಾಭಾರತ ಅಥವಾ ಕುರುಕ್ಷೇತ್ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ರಾಜ ಪರೀಕ್ಷಿತನು ಒಬ್ಬನಾಗಿದ್ದಾನೆ. ರಾಜ ಪರೀಕ್ಷಿತನು ದ್ವಾಪರ ಯುಗದೊಂದಿಗೆ ಸಂಬಂಧವನ್ನು ಹೊಂದಿದ ಮಹಾನ್ ರಾಜನಾಗಿದ್ದನು. ಈ ರಾಜ ಪರೀಕ್ಷಿತನು ಅತ್ಯಂತ ದಯಾಮಯಿಯಾಗಿದ್ದನು ಮತ್ತು ಬುದ್ಧಿವಂತ ರಾಜನಾಗಿದ್ದನು. ರಾಜ ಪರೀಕ್ಷಿತನು ಅಭಿಮನ್ಯು ಮತ್ತು ಉತ್ತರೆಯ ಮಗನಾಗಿದ್ದನು. ಪಾಂಡವರು ಸ್ವರ್ಗಕ್ಕೆ ಹೋದ ನಂತರ, ಹಸ್ತಿನಾಪುರದ ಸಿಂಹಾಸನವನ್ನು ರಾಜ ಪರೀಕ್ಷಿತನಿಗೆ ಹಸ್ತಾಂತರಿಸಲಾಯಿತು. ಮಹಾಭಾರತದ ಕಥೆಯ ಪ್ರಕಾರ, ರಾಜ ಪರೀಕ್ಷಿತನು ಮಾಡಿದ ಚಿಕ್ಕ ತಪ್ಪಿನಿಂದಾಗಿ ಸಂಪೂರ್ಣ ಯುಗವೇ ಬದಲಾಯಿತು. ಈ ತಪ್ಪಿನಿಂದಾಗಿಯೇ ಕಲಿಯುಗ ಆರಂಭವಾಯಿತು ಎಂದು ಕೂಡ ಹೇಳಲಾಗುತ್ತದೆ.
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ತಮ್ಮ ಸಾಮ್ರಾಜ್ಯವನ್ನು ರಾಜ ಪರೀಕ್ಷಿತನಿಗೆ ನೀಡಿ ಸ್ವರ್ಗದತ್ತ ಪ್ರಯಾಣ ನಡೆಸುತ್ತಾರೆ. ರಾಜ ಪರೀಕ್ಷಿತನು ಹಸ್ತಿನಾಪುರವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಪ್ರಜೆಗಳು ಸುಖವಾಗಿ ರಾಜನ ಆಡಳಿತದಲ್ಲಿ ವಾಸಿಸುತ್ತಿದ್ದರು. ಪರೀಕ್ಷಿತನ ದಯೆ, ನ್ಯಾಯ, ಲೋಕೋಪಕಾರ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಇತರೆ ರಾಜ್ಯದ ರಾಜರೂ ಹೊಗಳಿಕೆಯನ್ನು ವ್ಯಕ್ತಪಡಿಸಿದ್ದರು. ಒಮ್ಮೆ ರಾಜ ತನ್ನ ರಾಜ್ಯದ ಜನರನ್ನು ಭೇಟಿಯಾಗಲೆಂದು ಅರಮನೆಯಿಂದ ಹೊರಗಡೆ ಬಂದು ಬೀದಿ ಬೀದಿಗಳಲ್ಲಿ ಸಂಚರಿಸುತ್ತಾನೆ. ಈ ಸಮಯದಲ್ಲಿ ಅವನು ಕೆಲವೊಂದು ಸಾಮಾನ್ಯ ಜನರಿಗೆ ಅನ್ಯಾಯವಾಗುವುದನ್ನು, ಹಿಂಸೆಯಾಗುವುದನ್ನು ಹಾಗೂ ಇನ್ನು ಕೆಲವೊಂದು ಜನರು ಅಹಿತಕರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದನ್ನು ಗಮನಿಸುತ್ತಾನೆ. ಇದಕ್ಕೆ ಕಾರಣವೇನೆಂದು ಮಂತ್ರಿಯ ಬಳಿ ಕೇಳಿದಾಗ, ಕಲಿ ಎನ್ನುವ ಒಬ್ಬ ಅಗೋಚರ ರಾಕ್ಷಸ ರಾಜ್ಯಕ್ಕೆ ಕಾಲಿಟ್ಟಿರುವುದನ್ನು ಹೇಳುತ್ತಾನೆ. ಅದೇ ಸಮಯಕ್ಕೆ ಕಲಿಯೂ ಪರೀಕ್ಷಿತನ ಅರಮನೆಗೆ ಬಂದು ಕೈಗಳನ್ನು ಕಟ್ಟಿಕೊಂಡು ನಿಲ್ಲುತ್ತಾನೆ.
ಕಲಿ ಕೈಕಟ್ಟಿ ನಿಂತಿರುವುದನ್ನು ನೋಡಿ “ನೀನು ಇಲ್ಲಿಗೆ ಏಕೆ ಬಂದಿರುವೆ? ನಿಮಗೆ ಈ ರಾಜ್ಯದಲ್ಲಿ ಇರಲು ಯಾವುದೇ ಅನುಮತಿಯಿಲ್ಲ. ನೀವು ಈಗಲೇ ಇಲ್ಲಿಂದ ಹೊರಡಿ, ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧರಾಗಿ ಎಂದು ಹೇಳುತ್ತಾನೆ. ಆಗ ಕಲಿ ”ಓ ರಾಜ, ನಾನು ಒಂದು ಯುಗ. ನನ್ನ ಹೆಸರು ಕಲಿಯುಗ. ಬ್ರಹ್ಮ ದೇವರು ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಎಂಬ ನಾಲ್ಕು ಯುಗಗಳನ್ನು ಸೃಷ್ಟಿಸಿದ್ದಾರೆ. ಪ್ರತಿಯೊಂದು ಯುಗಕ್ಕೂ ಅದರದ್ದೇ ಆದ ನಿರ್ದಿಷ್ಟ ಸಮಯವಿದೆ. ದ್ವಾಪರಯುಗದ ನಂತರ, ಈಗ ನನ್ನ ಸಮಯ ಬಂದಿದೆ. ನಾನು ಕಲಿಯುಗ, ಕಲಿಯುಗದ ರಾಜ. ನೀವು ಬ್ರಹ್ಮ ದೇವನ ಈ ನಿಯಮವನ್ನು ಮುರಿಯಲು ಸಾಧ್ಯವಿಲ್ಲ. ನೀವು ನನಗೆ ಜಾಗ ನೀಡಬೇಕು. ಕಲಿಯ ಮಾತುಗಳನ್ನು ಒಪ್ಪಿಕೊಂಡ ರಾಜ ಪರೀಕ್ಷಿತನು ಕಲಿಗೆ ವಾಸಿಸಲು ಸೀಮಿತ ಜಾಗವನ್ನು ನೀಡಿದನು. ರಾಜ ಪರೀಕ್ಷಿತನು ಕಲಿಗೆ ಮದ್ಯದ ಮನೆ, ಜೂಜಾಟದ ಮನೆ, ಕಸಾಯಿಖಾನೆ ಮತ್ತು ವೇಶ್ಯಾಗೃಹಗಳಲ್ಲಿ ಜಾಗವನ್ನು ನೀಡಿದನು
ಆದರೆ ಕಲಿಯುಗನು- “ಓ ರಾಜ! ನನಗೂ ವಾಸಿಸಲು ಒಳ್ಳೆಯ ಸ್ಥಳಬೇಕು. ಈ ಎಲ್ಲಾ ಸ್ಥಳಗಳು ನನಗೆ ವಾಸಿಸಲು ಸೂಕ್ತವೆಂದು ಅನಿಸುತ್ತಿಲ್ಲವೆಂದು ಹೇಳುತ್ತಾನೆ. ದಯವಿಟ್ಟು ನನಗೆ ಬೇರೊಂದು ಸ್ಥಳವನ್ನು ನೀಡಿ ಎಂದು ಕೇಳುತ್ತಾನೆ”. ಕಲಿಯ ಮಾತುಗಳನ್ನು ಕೇಳಿದ ರಾಜ ಕಲಿಯುಗನಿಗೆ ಚಿನ್ನದಲ್ಲಿ ವಾಸಿಸಲು ಒಂದು ಸ್ಥಳವನ್ನು ಸಹ ನೀಡ್ತಾನೆ. ರಾಜ ಪರೀಕ್ಷಿತನು ಕಲಿಯುಗಕ್ಕೆ ಚಿನ್ನದಲ್ಲಿ ಸ್ಥಾನ ನೀಡಿದ ತಕ್ಷಣ, ಕಲಿಯುಗವು ತಕ್ಷಣವೇ ರಾಜನ ಚಿನ್ನದ ಕಿರೀಟದಲ್ಲಿ ಕುಳಿತುಕೊಂಡನು. ಕಲಿಯುಗವು ರಾಜನ ಬುದ್ಧಿಶಕ್ತಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದನು. ಕಲಿಯುಗದ ಪ್ರಭಾವದಿಂದಾಗಿ ರಾಜನ ನಡವಳಿಕೆಯು ಬದಲಾಗಲು ಪ್ರಾರಂಭಿಸಿತು. ಒಮ್ಮೆ, ಕಲಿಯ ಪ್ರಭಾವದಿಂದ, ರಾಜ ಪರೀಕ್ಷಿತನಿಗೆ ಬೇಟೆಯಾಡುವ ಬಯಕೆ ಉಂಟಾಯಿತು ಮತ್ತು ಅವನು ಜಿಂಕೆಯನ್ನು ಬೆನ್ನಟ್ಟುತ್ತಾ ಕಾಡಿನಲ್ಲಿ ಬಹಳ ದೂರ ತಲುಪಿದನು. ಇಂತಹ ಸಮಯದಲ್ಲಿ, ರಾಜ ಪರೀಕ್ಷಿತನಿಗೆ ಹಸಿವು ಮತ್ತು ಬಾಯಾರಿಕೆ ಪ್ರಾರಂಭವಾಯಿತು. ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿದ್ದ ರಾಜ ಪರೀಕ್ಷಿತನು ಕಾಡಿನಲ್ಲಿ ಒಂದು ಆಶ್ರಮವನ್ನು ನೋಡಿದನು. ಆ ಆಶ್ರಮದಲ್ಲಿ ಶ್ರಮಿಕ ಎನ್ನುವ ಋಷಿ ತಪಸ್ಸಿನಲ್ಲಿ ನಿರತನಾಗಿದ್ದನು. ರಾಜನು ಋಷಿಗೆ ನಮಸ್ಕರಿಸಿ, ಕುಡಿಯುವುದಕ್ಕಾಗಿ ನೀರನ್ನು ಕೇಳಿದನು ಆದರೆ ಋಷಿ ಧ್ಯಾನದಲ್ಲಿ ಮಗ್ನನಾಗಿ ಮೌನವಾಗಿದ್ದನು. ಇದನ್ನು ನೋಡಿದ ರಾಜನಿಗೆ ತುಂಬಾ ಕೋಪ ಬಂದು ಅಲ್ಲಿಂದ ಹೊರಡಲು ಎದ್ದು ನಿಲ್ಲುತ್ತಾನೆ. ಕೆಲವು ಹೆಜ್ಜೆ ನಡೆದ ನಂತರ, ರಾಜನು ನೆಲದ ಮೇಲೆ ಸತ್ತ ಹಾವನ್ನು ನೋಡಿದನು. ಕಲಿಯು ರಾಜನ ಹಸಿವು ಮತ್ತು ಬಾಯಾರಿಕೆಯನ್ನು ಹೆಚ್ಚಿಸಿದ್ದರಿಂದ, ರಾಜನು ಹಾವನ್ನು ದಾರಿಯಿಂದ ತೆಗೆದುಹಾಕಲು ತನ್ನ ಕತ್ತಿಯನ್ನು ಬಳಸಿ ಗಾಳಿಯಲ್ಲಿ ಹಿಂದಕ್ಕೆ ಎಸೆದನು. ಆ ಹಾವು ಗಾಳಿಯಲ್ಲಿ ಹಾರಿ ಋಷಿಯ ಕುತ್ತಿಗೆಯ ಮೇಲೆ ಹೋಗಿ ಬಿದ್ದಿತು. ಋಷಿಯ ಮಗ ಶೃಂಗಿ ಬಂದಾಗ, ಅವನು ತನ್ನ ದೈವತ್ವದ ಮೂಲಕ ರಾಜನ ಈ ಕೃತ್ಯವನ್ನು ಕಂಡುಹಿಡಿದನು. ಕೋಪಗೊಂಡ ಋಷಿ ಶೃಂಗಿ, ಈ ಅಸಭ್ಯ ವ್ಯಕ್ತಿ ಏಳು ದಿನಗಳಲ್ಲಿ ಶಾಪಗ್ರಸ್ತನಾಗುತ್ತಾನೆ ಎಂದು ರಾಜನಿಗೆ ಶಪಿಸಿದನು. ಈ ರೀತಿ ಹಲವು ಪ್ರಯತ್ನಗಳನ್ನು ಮಾಡಿದ ನಂತರವೂ ರಾಜ ಪರೀಕ್ಷಿತನಿಗೆ ಶಾಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು 7 ನೇ ದಿನ, ತಕ್ಷಕ ಸರ್ಪವು ರಾಜ ಪರೀಕ್ಷಿತನನ್ನು ಕಚ್ಚಿ ಸಾವನ್ನು ತಂದಿತು. ರಾಜನ ಕಿರೀಟದ ಮೇಲೆ ಕುಳಿತಿದ್ದ ಕಲಿಗೆ ರಾಜ ಮರಣ ಹೊಂದಿದ ನಂತರ ಜಾಗವಿಲ್ಲದೆ ಭೂಮಿ ಮೇಲೆ ವಾಸಿಸಲು ಪ್ರಾರಂಭ ಮಾಡಿತು. ಅಂದಿನಿಂದ ಭೂಮಿಯಲ್ಲಿ ಕಲಿಯುಗ ಪ್ರಾರಂಭವಾಯಿತು ಎನ್ನಲಾಗುತ್ತೆ ಕಲಿಯುಗಕ್ಕೆ ಸಂಬಂಧಿಸಿದ ಆಧುನಿಕ ಲೆಕ್ಕಾಚಾರವನ್ನು ನೋಡಿದರೆ, ಅದು ಕ್ರಿ.ಪೂ 3,120 ರಲ್ಲಿ ಐದು ಗ್ರಹಗಳಾದ ಮಂಗಳ, ಬುಧ, ಶುಕ್ರ, ಗುರು ಮತ್ತು ಶನಿ ಮೇಷ ರಾಶಿಯಲ್ಲಿ 0 ಡಿಗ್ರಿಯಲ್ಲಿದ್ದಾಗ ಕಲಿಯುಗವು ಪ್ರಾರಂಭವಾಯಿತು ಎಂದು ಹೇಳ ಲಾಗುತ್ತದೆ.
ಕಲಿಯುಗ ಹೇಗಿರುತ್ತದೆ..?
ಧರ್ಮದ ಅಳಿವು, ದುಶ್ಚಟಗಳು ಮತ್ತು ದುಷ್ಕೃತ್ಯಗಳ ಹೆಚ್ಚಳ ಇತ್ಯಾದಿ ವಿಷಯಗಳನ್ನು ಕಲಿಯುಗದಲ್ಲಿ ನಾವು ಹೆಚ್ಚಾಗಿ ನೋಡುವಂತಾಗುತ್ತದೆ. ಈ ಯುಗದಲ್ಲಿ, ಭೂಮಿಯ ಮೇಲಿನ ಎಲ್ಲಾ ಜೀವಿಗಳಲ್ಲಿ ಮನುಷ್ಯನನ್ನು ಹೊರತುಪಡಿಸಿ ದೇವರುಗಳು, ರಾಕ್ಷಸರು, ಯಕ್ಷರು ಅಥವಾ ಗಂಧರ್ವರು ಇವರಾರು ಕೂಡ ಶ್ರೇಷ್ಠರಾಗಿರುವುದಿಲ್ಲ. ಈ ಕಾಲದಲ್ಲಿ ಸತ್ಕರ್ಮ ಮಾಡುವವರನ್ನು ದೇವತೆಗಳೆಂದೂ, ದುಷ್ಕೃತ್ಯ ಮತ್ತು ಪಾಪಗಳನ್ನು ಮಾಡುವವರನ್ನು ರಾಕ್ಷಸರೆಂದು ಪರಿಗಣಿಸಲಾಗುತ್ತದೆ. ಜನರು ಕೂಡ ಮದುವೆಗೆ ಗೋತ್ರ, ಜಾತಿ ಮತ್ತು ಧರ್ಮವನ್ನು ಪರಿಗಣಿಸುವುದಿಲ್ಲ. ಶಿಷ್ಯ ಗುರುವಿನ ಅಡಿಯಲ್ಲಿ ಇರುವುದಿಲ್ಲ. ಕಲಿಯುಗದಲ್ಲಿ ಕಾಲಗಳು ಕಳೆದಂತೆ ಭಯಾನಕ ದಿನಗಳು ಬರುತ್ತವೆ ಎನ್ನಲಾಗಿದೆ. ಕಲಿಯುಗದಲ್ಲಿ ಪಾಪದ ಭೀಕರತೆ ಉತ್ತುಂಗಕ್ಕೇರಿದಾಗ ಭಗವಾನ್ ವಿಷ್ಣು ಕಲ್ಕಿಯ ರೂಪ ತೆಗೆದುಕೊಳ್ಳುತ್ತಾನೆ. ಕಲ್ಕಿಯ ಅವತಾರದಲ್ಲಿ ಭಗವಾನ್ ವಿಷ್ಣು ಶ್ರಾವಣ ಮಾಸದ ಶುಕ್ಲಪಕ್ಷದ ಐದನೇ ದಿನದಂದು ಸಂಭಾಲ ಎಂಬ ಸ್ಥಳದಲ್ಲಿ ಮತ್ತು ವಿಷ್ಣುಯಾಶ ಎಂಬ ವ್ಯಕ್ತಿಯ ಮನೆಯಲ್ಲಿ ಜನಿಸುತ್ತಾನೆ ಎನ್ನಲಾಗಿದೆ. ಈ ಅವತಾರದಲ್ಲಿ ದೇವದತ್ತ ಕುದುರೆಯ ಮೇಲೆ ಸವಾರಿ ಮಾಡುವ ಮೂಲಕ ಪಾಪಿಗಳನ್ನು ನಾಶಪಡಿಸಿ ಮತ್ತೊಮ್ಮೆ ಜಗತ್ತಿನಲ್ಲಿ ಭಯ ಮತ್ತು ಹೇಯ ಕೃತ್ಯವು ಕೊನೆಗೊಳ್ಳುವಂತೆ ಮಾಡುತ್ತಾನೆ ಮತ್ತು ಅಂದಿನಿಂದ ಸುವರ್ಣಯುಗವು ಸ್ಥಾಪನೆಯಾಗುತ್ತದೆ ಅನ್ನೋ ನಂಬಿಕೆಯಿದೆ.