ಆಂಗ್ಲರ ಚೆಂಡಾಡಲು SKY ತಂತ್ರ.. 2ನೇ ಪಂದ್ಯದಲ್ಲೂ ಧೂಳೀಪಟ – ಚೆನ್ನೈನಲ್ಲಿ ಯಾರ ಅಬ್ಬರ?
2025ರ ಮೊದಲ ಸರಣಿಯಾಗಿ ಟೀಂ ಇಂಡಿಯಾ ಈಗಾಗ್ಲೇ ಇಂಗ್ಲೆಂಡ್ ವಿರುದ್ಧ ಟಿ-20 ಫೈಟ್ ಶುರು ಮಾಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇನ್ನೂ 43 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದು ಟಿ20 ಫಾರ್ಮೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಬಾಲ್ಗಳ ಅಂತರದಲ್ಲಿ ಅತಿ ದೊಡ್ಡ ಗೆಲುವಾಗಿದೆ. ಇದೀಗ ಇದೇ ಹುಮ್ಮಸ್ಸಿನಲ್ಲೇ ಎರಡನೇ ಪಂದ್ಯದಲ್ಲೂ ಗೆದ್ದು ಬೀಗೋಕೆ ಸೂರ್ಯಕುಮಾರ್ ಯಾದವ್ ನೇತೃತ್ವದ ಸೇನೆ ರೆಡಿಯಾಗಿದೆ.
ಇದನ್ನೂ ಓದಿ : ರಣಜಿಯಲ್ಲೂ ಸ್ಟಾರ್ ಬ್ಯಾಟರ್ಸ್ 1, 3, 4, 4, 11 ರನ್ – ಚಾಂಪಿಯನ್ಸ್ ಟ್ರೋಫಿ ಕಥೆನೂ ಅಷ್ಟೇನಾ?
ಟೀಂ ಇಂಡಿಯಾ ಪರ ಓಪನರ್ಸ್ ಆಗಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಬಿರುಗಾಳಿ ಎಬ್ಬಿಸಿದ್ರು. ಸೋ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಚೇಂಜಸ್ ಆಗೋ ಸಾಧ್ಯತೆ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕಂಟಿನ್ಯೂ ಆಗ್ತಾರೆ. ಸೋ ಬೌಲಿಂಗ್ ನಲ್ಲಿ ಬದಲಾವಣೆ ಆಗಬಹುದು. ಯಾಕಂದ್ರೆ ಮೊದಲ ಟಿ20ಯಲ್ಲಿ ಟೀಂ ಇಂಡಿಯಾ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿದಿತ್ತು. ವರುಣ್ ಚಕ್ರವರ್ತಿ ಮೂರು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಪತನಕ್ಕೆ ಕಾರಣವಾಗಿದ್ದರು. ಬಟ್ ರವಿ ಬಿಷ್ಣೋಯ್ ರನ್ ಕೊಡದೇ ಇದ್ರೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಹೀಗಾಗಿ ರವಿ ಬಿಷ್ಣೋಯ್ರನ್ನ ಕೈಬಿಟ್ಟು ಮೊಹಮ್ಮದ್ ಶಮಿ ಅವರನ್ನು ಅಂತಿಮ ತಂಡಕ್ಕೆ ಸೇರಿಸುವ ಅವಕಾಶವಿದೆ. ಫಸ್ಟ್ ಮ್ಯಾಚ್ನಲ್ಲಿ ಅರ್ಷದೀಪ್ ಸಿಂಗ್ ಮಾತ್ರ ಸ್ಪೆಷಲಿಸ್ಟ್ ಪೇಸರ್ ಆಗಿ ಆಡಿದ್ದರು. ಹಾರ್ದಿಕ್ ಪಾಂಡ್ಯ ಅವರೊಂದಿಗೆ ಹೊಸ ಚೆಂಡನ್ನು ಶೇರ್ ಮಾಡಿದ್ರು. ಬಟ್ ಹಾರ್ದಿಕ್ ಪಾಂಡ್ಯ ಪವರ್ ಪ್ಲೇನಲ್ಲಿ ತುಂಬಾನೇ ದುಬಾರಿಯಾಗಿದ್ರು. 2 ವಿಕೆಟ್ ಪಡೆದರೂ ಅವರು ನಾಲ್ಕು ಓವರ್ ಬೌಲ್ ಮಾಡಿ 42 ರನ್ ಬಿಟ್ಟುಕೊಟ್ಟಿದ್ದರು.
ಟೀಂ ಇಂಡಿಯಾದಲ್ಲಿ 14 ತಿಂಗಳ ನಂತ್ರ ಮೊಹಮ್ಮದ್ ಶಮಿ ಚಾನ್ಸ್ ಪಡ್ಕೊಂಡಿದ್ರು. ಬಟ್ ಮೊದಲ ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಶಮಿ ಮತ್ತೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರಾ? ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಹೆಚ್ಚುವರಿ ಸ್ಪಿನ್ನರ್ ಆಡಲು ಶಮಿ ಅವರನ್ನು ಕಣಕ್ಕಿಳಿಸಿಲ್ಲ ಎಂದು ಸೂರ್ಯಕುಮಾರ್ ಯಾದವ್ ಪಂದ್ಯದ ನಂತರ ಸ್ಪಷ್ಟಪಡಿಸಿದ್ರು. ಬಟ್ ಈಗಿರೋ ಮಾಹಿತಿ ಪ್ರಕಾರ ಶಮಿಗೆ 2ನೇ ಪಂದ್ಯದಲ್ಲೂ ಚಾನ್ಸ್ ಸಿಗೋದು ಕಷ್ಟ ಎನ್ನಲಾಗ್ತಿದೆ. ಶಮಿ ಫಿಟ್ ಆಗಿದ್ದಾರೆ ಎಂದಿರುವ ಅಭಿಷೇಕ್ ಶರ್ಮಾ ಪ್ಲೇಯಿಂಗ್-11ನಿಂದ ಹೊರಗಿಡುವ ನಿರ್ಧಾರ ಮ್ಯಾನೇಜ್ಮೆಂಟ್ ನದ್ದು ಎಂದಿದ್ದಾರೆ. ಹೀಗಾಗಿ ಶಮಿ ಎರಡನೇ ಟಿ20 ಪಂದ್ಯದಿಂದಲೂ ಹೊರಗುಳಿಯೋ ಚಾನ್ಸಸ್ ಇದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ವಿಶ್ರಾಂತಿ ನೀಡಿರೋ ಮಾಹಿತಿ ಹೊರ ಬಿದ್ದಿದೆ.
ಚೆನ್ನೈನಲ್ಲಿ ಸುಮಾರು ಆರು ವರ್ಷಗಳ ಬಳಿಕ ಈ ಮೈದಾನದಲ್ಲಿ ಟಿ20ಐ ಪಂದ್ಯ ನಡೆಯಲಿದೆ. ಚೆನ್ನೈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತೆ. ಅಲ್ಲದೆ ಬ್ಯಾಟರ್ಸ್ ಫ್ರೆಂಡ್ಲಿಯಾಗಿಯೂ ಇದೆ. 2018ರಲ್ಲಿ ಇದೇ ಅಂಗಳದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪಂದ್ಯವನ್ನು ಆಡಿತ್ತು. ಆಗ ಭಾರತ ತಂಡದಲ್ಲಿದ್ದ ಯಾವುದೇ ಪ್ಲೇಯರ್ ಸದ್ಯದ ತಂಡದಲ್ಲಿ ಇಲ್ಲ. ಆದರೆ ಮೊದಲ ಪಂದ್ಯ ಆಡದ ವಾಶಿಂಗ್ಟನ್ ಸುಂದರ್, 2018ರಲ್ಲಿ ಆಡಿದ್ದರು. ಹೀಗಾಗಿ ಇವರೊಬ್ಬರೇ ಸದ್ಯದ ತಂಡದಲ್ಲಿರುವ ಆಗ ಆಡಿದ ಪ್ಲೇಯರ್ ಆಗಿದ್ದಾರೆ. ಈ ಪಿಚ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳು ನಡೆದಿದ್ದು ಮೊದಲು ಬ್ಯಾಟ್ ಮಾಡಿದ ತಂಡ ಒಂದು ಸಲ ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡ ಇನ್ನೊಮ್ಮೆ ಪಂದ್ಯ ಗೆದ್ದಿದೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶಿಖರ್ ಧವನ್ 92 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿದೆ.
ಕೊಲ್ಕತ್ತಾದಲ್ಲೇ ಆಂಗ್ಲರಿಗೆ ಬಿಸಿ ಮುಟ್ಟುಸಿರೋ ಸೂರ್ಯಕುಮಾರ್ ಯಾದವ್ ಚೆನ್ನೈನಲ್ಲೂ ಬೆಂಡೆತ್ತೋಕೆ ತಂತ್ರಗಳನ್ನ ರೆಡಿ ಮಾಡಿದ್ದಾರೆ. ವಿಷ್ಯ ಏನಂದ್ರೆ ಕೊಲ್ಕತ್ತಾದಲ್ಲಿ ಸೂರ್ಯಕುಮಾರ್ ಕ್ಯಾಪ್ಟನ್ ಆಗಿ ಗೆದ್ರೂ ಆಟಗಾರನಾಗಿ ಸೋತಿದ್ರು. ಡಕ್ ಔಟ್ ಆಗೋ ಮೂಲಕ ನಿರಾಸೆ ಮೂಡಿಸಿದ್ರು. ಮೊದ್ಲೇ ಸೂರ್ಯ ಅಂದ್ರೆ ಟಿ-20 ಸ್ಪೆಷಲಿಸ್ಟ್ ಅನ್ನೋ ಹೆಸ್ರಿದೆ. ಸೋ ಎರಡನೇ ಪಂದ್ಯದಲ್ಲಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಅಲ್ದೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡದಲ್ಲೂ ಇಂಗ್ಲೆಂಡ್ ಬಳಗವನ್ನ ಕಟ್ಟಿಹಾಕೋಕೆ ತಯಾರಿ ನಡೆಸಿಕೊಂಡಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ಕ್ಯಾಪ್ಟನ್ ಜೋಸ್ ಬಟ್ಲರ್ ಕೂಡ ಮೊದಲ ಸೋಲಿನಿಂದ ಹತಾಶೆಗೊಂಡಿದ್ದಾರೆ. ಚೆನ್ನೈನಲ್ಲಿ ಸೇಡು ತೀರಿಸಿಕೊಳ್ಳೋಕೆ ಪ್ಲ್ಯಾನ್ಗಳನ್ನ ಮಾಡಿದ್ದಾರೆ.