PAKನಲ್ಲಿ ಅದೇ ರಾಗ ಅದೇ ಹಾಡು – 3 ಮೈದಾನಗಳಲ್ಲಿ ಮುಗಿಯುತ್ತಿಲ್ಲ ಕಾಮಗಾರಿ
ಚಾಂಪಿಯನ್ಸ್ ಟ್ರೋಫಿಗೆ ಕ್ಲೈಮ್ಯಾಕ್ಸ್ ಟ್ವಿಸ್ಟ್
ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದ್ರೆ ಭಾರತದ ಪಂದ್ಯಗಳು ಮಾತ್ರ ದುಬೈನಲ್ಲಿ ನಡೆಯಲಿವೆ. ಸೋ ಪಾಕ್ನಲ್ಲಿ 3 ಸ್ಟೇಡಿಯಮ್ಗಳನ್ನ ಫೈನಲ್ ಮಾಡ್ಲಾಗಿದೆ. ಫೆಬ್ರವರಿ 19 ರಂದು ಚಾಂಪಿಯನ್ಸ್ ಟ್ರೋಫಿ ಆರಂಭವಾಗುವ ಮೊದಲು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಕಣಕ್ಕಿಳಿಯುವ ಸ್ಟೇಡಿಯಮ್ಗಳನ್ನ ಪರಿಶೀಲನೆ ಮಾಡಲಾಗ್ತಿದೆ. ಬಟ್ ರಿಪೇರಿ ಕೆಲ್ಸಗಳು ಇನ್ನೂ ನಡೆಯುತ್ತಿರೋದ್ರಿಂದ, ಕ್ರೀಡಾಂಗಣಗಳು ಟೂರ್ನಿ ಆರಂಭದ ವೇಳೆಗೆ ಕಂಪ್ಲೀಟ್ ರೆಡಿ ಆಗುತ್ತವಾ ಎಂಬ ಆತಂಕ ಶುರುವಾಗಿದೆ. ನವೀಕರಣ ಕೆಲಸಗಳು ಮುಂದುವರಿದಿದ್ದು, ನ್ಯಾಷನಲ್ ಸ್ಟೇಡಿಯಮ್ ಆಫ್ ಕರಾಚಿಯ ಜನರಲ್ ಮ್ಯಾನೇಜರ್ ಅರ್ಷದ್ ಖಾನ್, ಜನವರಿ ಅಂತ್ಯದ ವೇಳೆಗೆ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ ಮತ್ತು ಫೆಬ್ರವರಿ 5 ರಂದು PCB ಅಧಿಕೃತವಾಗಿ ನವೀಕರಿಸಿದ ಕ್ರೀಡಾಂಗಣಗಳನ್ನು ಕಂಟ್ರೋಲ್ಗೆ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಗಡಾಫಿ ಕ್ರೀಡಾಂಗಣ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳ ನವೀಕರಣಕ್ಕಾಗಿ ಪಿಸಿಬಿ ಸುಮಾರು 12 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ಖರ್ಷು ಮಾಡಿದೆ. ಕರಾಚಿ ಮತ್ತು ಲಾಹೋರ್ ಕ್ರೀಡಾಂಗಣಗಳು ಹೊಸ ಕಟ್ಟಡಗಳ ನಿರ್ಮಾಣ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನ ಒಳಗೊಂಡಿದೆ. ಎನ್ಎಸ್ಕೆಯಲ್ಲಿ, ರೀ ಕನ್ಸ್ಟ್ರಕ್ಟ್ ಮಾಡಲಾದ ಐದು ಅಂತಸ್ತಿನ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕಟ್ಟಡವು ಐಸಿಸಿ ಭ್ರಷ್ಟಾಚಾರ ವಿರೋಧಿ ಮತ್ತು ಡೋಪಿಂಗ್ ವಿರೋಧಿ ಘಟಕಗಳು, ಫಿಸಿಯೋ ಕೊಠಡಿಗಳು ಮತ್ತು ನೆಲ ಮಹಡಿಯಲ್ಲಿ ಪಂದ್ಯ ಅಧಿಕಾರಿಗಳ ಕೊಠಡಿಗಳಂತಹ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಎರಡನೇ ಮಹಡಿಯಲ್ಲಿ ಆಟಗಾರರಿಗಾಗಿ ಹೊಸ, ಅತ್ಯಾಧುನಿಕ ಡ್ರೆಸ್ಸಿಂಗ್ ಕೊಠಡಿಗಳು ಇರುತ್ತವೆ. ಹಾಗೇ ಕಾರ್ಪೊರೇಟ್ ಮತ್ತು ಆತಿಥ್ಯ ಸೌಲಭ್ಯಗಳನ್ನು ಸಹ ಹೆಚ್ಚಿಸಲಾಗಿದೆ. 1,000 ಜನರಿಗೆ ಅವಕಾಶ ಕಲ್ಪಿಸಲು 24 ಹೊಸ ಕಾರ್ಪೊರೇಟ್ ಕೊಠಡಿಗಳನ್ನೂ ಕಟ್ಟಲಾಗಿದೆ. ಕಟ್ಟಡದ ಐದನೇ ಮಹಡಿಯಲ್ಲಿ ಅಧ್ಯಕ್ಷರ ಛೇಂಬರ್ ಇರಲಿದೆ. ಪ್ರೇಕ್ಷಕರಿಗೆ ಫೋಲ್ಡೇಬಲ್ ಚೇರ್ಸ್, ಹೆಚ್ಚಿದ ಕುರ್ಚಿಗಳ ಸಾಮರ್ಥ್ಯ ಮತ್ತು ಹೊಸ ಶೌಚಾಲಯ ಸೌಲಭ್ಯಗಳು ಸೇರಿದಂತೆ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಕ್ರೀಡಾಂಗಣಕ್ಕೆ ಪ್ರವೇಶಿಸುವ ಅಭಿಮಾನಿಗಳಿಗೆ ಸುಲಭ ಪ್ರವೇಶವನ್ನು ಸುಲಭಗೊಳಿಸಲು ಪಾದಚಾರಿ ಸೇತುವೆಯನ್ನು ಸಹ ನಿರ್ಮಾಣ ಹಂತದಲ್ಲಿದೆ. ಹೆಚ್ಚುವರಿಯಾಗಿ, ಎರಡು ಹೊಸ ಡಿಜಿಟಲ್ ಸ್ಕೋರ್ಬೋರ್ಡ್ಗಳನ್ನು ಸ್ಥಾಪಿಸಲಾಗ್ತಿದೆ. ಆರು ಹೊಸ ಕಂಬಗಳು ಆಧುನಿಕ LED ಫ್ಲಡ್ಲೈಟ್ಗಳನ್ನು ಹೊಂದಿದೆ. ಹಾಗೇ ನೆಟ್ ಪ್ರಾಕ್ಟೀಸ್ಗೆಂದು ಫ್ಲಡ್ಲೈಟ್ಗಳೊಂದಿಗೆ ಅಳವಡಿಸಲಾಗಿದೆ. ಲಾಹೋರ್ನಲ್ಲಿರುವ ಗಡಾಫಿ ಕ್ರೀಡಾಂಗಣ ಕೂಡ ಹೊಸ ಕಟ್ಟಡ ಮತ್ತು ಅಂತಹುದೇ ಆಧುನಿಕ ಸೌಲಭ್ಯಗಳ ಸ್ಥಾಪನೆ ಸೇರಿದಂತೆ ಒಂದಷ್ಟು ರಿಪೇರಿ ಕೆಲ್ಸಗಳು ನಡೆದಿವೆ. ಆದ್ರೆ ಟೂರ್ನಿ ಆರಂಭದ ವೇಳೆಗೆ ಕಂಪ್ಲೀಟ್ ಆಗ್ತಾವಾ ಅನ್ನೋದೇ ಈಗಿರೋ ಪ್ರಶ್ನೆ.
ಫೆಬ್ರವರಿ 19ರಂದು ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ಡೆಡ್ ಲೈನ್ ಪ್ರಕಾರ 2024ರ ಡಿಸೆಂಬರ್ 31ರೊಳಗೆ ಎಲ್ಲಾ ನವೀಕರಣ ಕಾಮಗಾರಿಗಳೂ ಮುಗಿದು ಜನವರಿ 12ರಂದು ಪಿಸಿಬಿಯು ಕ್ರೀಡಾಂಗಣಗಳನ್ನು ಐಸಿಸಿಗೆ ಹಸ್ತಾಂತರಿಸಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಈಗ ನಡೆಯುತ್ತಿರುವ ಕಾಮಗಾರಿಯನ್ನು ಗಮನಿಸಿದರೆ ಪಂದ್ಯಾವಳಿ ಶುರು ಆಗುವ ವೇಳೆಗೂ ಮುಗಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಅಲ್ದೇ ಟೂರ್ನಿ ವೇಳೆಗೆ ತನಗೆ ಏನೆಲ್ಲಾ ಕಂಪ್ಲೀಟ್ ಆಗಿರಬೇಕು ಅಂತಾ ಐಸಿಸಿಯು ಈಗಾಗಲೇ ಪಟ್ಟಿಯನ್ನು ಕೊಟ್ಟಿದೆ. ಅದರಂತೆ ಯಾವೂದೂ ಇಲ್ಲ ಎನ್ನಲಾಗಿದೆ.