ಆಂಗ್ಲರನ್ನು ಚೆಂಡಾಡಿದ ಅಭಿಷೇಕ್ & ಅರ್ಶದೀಪ್ ಸಿಂಗ್ – ಗೆದ್ದರೂ ಸೋತ ನಾಯಕ ಸೂರ್ಯಕುಮಾರ್  

 ಆಂಗ್ಲರನ್ನು ಚೆಂಡಾಡಿದ ಅಭಿಷೇಕ್ & ಅರ್ಶದೀಪ್ ಸಿಂಗ್ – ಗೆದ್ದರೂ ಸೋತ ನಾಯಕ ಸೂರ್ಯಕುಮಾರ್  

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಬುಧವಾರದಿಂದ ಶುರುವಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಬಂದ ಆಂಗ್ಲರು ಫುಲ್ ಜೋಶ್​ನಲ್ಲೇ ಇದ್ರು. ಬ್ಯಾಟಿಂಗ್​ನಲ್ಲಿ ರನ್ ಮಳೆ ಸುರಿಸೋ ಲೆಕ್ಕಾಚಾರದಲ್ಲಿದ್ರು. ಆದ್ರೆ ಇಂಗ್ಲೆಂಡ್ ಪಡೆ ಬ್ಯಾಟ್ ಬಿಚ್ಚೋಕೂ ಬಿಡದೆ ಕಾಡಿದ ಭಾರತದ ಬೌಲರ್ಸ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ 20 ಓವರ್​ಗಳಲ್ಲಿ 132 ರನ್​ಗಳಿಸುವಷ್ಟ್ರಲ್ಲೇ ಎಲ್ಲಾ ವಿಕೆಟ್​ಗಳು ಉರುಳಿಯಾಗಿತ್ತು. ಇಷ್ಟು ಕಡಿಮೆ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ 12.5 ಓವರ್​​ಗಳಲ್ಲೇ ಟಾರ್ಗೆಟ್​ ರೀಚ್ ಆಯ್ತು. ಈ ಮೂಲಕ ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿದೆ.

ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗೆ PAK ಹೆಸರಿಲ್ಲ – BCCI ಏಟಿಗೆ ಕಂಗೆಟ್ಟ ಪಾಕಿಸ್ತಾನ  

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಂಗ್ಲ ಪಡೆ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಪತನವಾಯ್ತು. ಅರ್ಷದೀಪ್ ಸಿಂಗ್ ಮೊದಲ ಓವರ್​ನಲ್ಲೇ ಫಿಲ್ ಸಾಲ್ಟ್​ರನ್ನ ಡಕ್ ಔಟ್ ಮಾಡಿದ್ರು. ಆ ಬಳಿಕ 3ನೇ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಬ್ಯಾಟರ್ ಬೆನ್​ ಡಕೆಟ್ ರನ್ನ 4 ರನ್​ಗಳಿಗೆ ಪೆವಿಲಿಯನ್​ಗೆ ಅಟ್ಟಿದ್ರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನಾಯಕ ಜೋಸ್ ಬಟ್ಲರ್ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. 44 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 68 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬಟ್ಲರ್ ಹಾಗೇ ಹ್ಯಾರಿ ಬ್ರೂಕ್ ಜೊತೆ ಸೇರಿ 3ನೇ ವಿಕೆಟ್​ಗೆ 48 ರನ್​ಗಳಿಸಿದರು. ಆದರೆ ಬ್ರೂಕ್ ಕೇವಲ 17 ರನ್​ಗಳಿಸಿ ವರುಣ್​ ಚಕ್ರವರ್ತಿ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಅದೇ ಓವರ್​ನಲ್ಲಿ 2 ಎಸೆತಗಳ ಡಕ್ ಆದರು. ಆರ್ಚರ್ 12 ರನ್ ಗಳಿಸಿದ್ರೆ ನಂತರ ಬಂದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಖಲಿಸಲಿಲ್ಲ. ಒಟ್ಟಾರೆ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 132ಕ್ಕೆ ಆಲೌಟ್ ಆಯಿತು. ಗೋಲ್ಡನ್ ಫಾರ್ಮ್​ನಲ್ಲಿರುವ ವರುಣ್ ಚಕ್ರವರ್ತಿ 4 ಓವರ್​ನಲ್ಲಿ 23 ರನ್​ ನೀಡಿ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 22 ರನ್​ಗಳಿಗೆ 2 ವಿಕೆಟ್ ಪಡೆದರು. ಅರ್ಶದೀಪ್ ಹಾಗೇ ಹಾರ್ದಿಕ್ ಪಾಂಡ್ಯ ಕೂಡ ತಲಾ ಎರಡು ವಿಕೆಟ್ ಬೇಟೆಯಾಡಿದ್ರು.

ಆಂಗ್ಲರನ್ನ ಕಡಿಮೆ ಮೊತ್ತಕ್ಕೆ ಔಟ್ ಮಾಡಿದ್ದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ ಫಸ್ಟ್ ಓವರ್​ನಲ್ಲಿ ಒಂದೇ ರನ್ ಅಷ್ಟೇ ಬಂದಿದ್ದು. ಮೊದಲ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಎಲ್ಲಾ ಎಸೆತಗಳನ್ನು ಆಡಿ ಒಂದೇ ಒಂದು ರನ್ ಗಳಿಸಿದರು. ಆದರೆ ಎರಡನೇ ಓವರ್‌ನಲ್ಲಿ ಅವರ ಬ್ಯಾಟ್ ಸದ್ದು ಮಾಡಿತು. ಒಂದೇ ಓವರ್‌ನಲ್ಲಿ ಒಟ್ಟು 22 ರನ್ ಕಲೆಹಾಕಿದರು. ಹೀಗೆ ಉತ್ತಮ ಆರಂಭ ನೀಡಿದ್ರೂ ಕೂಡ 26 ರನ್ ಗಳಿಸಿ ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

ಟೀಂ ಇಂಡಿಯಾ ಕಡಿಮೆ ಓವರ್​ಗಳಲ್ಲೇ ಟಾರ್ಗೆಟ್ ರೀಚ್ ಆಗುವಲ್ಲಿ ಹೀರೋ ಆಗಿದ್ದು ಅಭಿಷೇಕ್ ಶರ್ಮಾ. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 255 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ 3 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ ತಮ್ಮ ಅರ್ಧಶತಕ ಕಂಪ್ಲೀಟ್ ಮಾಡಿದ್ರು. ಇದು ಭಾರತದಲ್ಲಿ ಭಾರತೀಯ ಆಟಗಾರನೊಬ್ಬ ಸಿಡಿಸಿದ ಮೂರನೇ ವೇಗದ ಅರ್ಧಶತಕವಾಗಿದೆ. ಒಟ್ಟಾರೆ 34 ಎಸೆತಗಳಲ್ಲಿ ಎದುರಿಸಿದ ಅಭಿ ಒಟ್ಟು 79 ರನ್ ಗಳಿಸಿದರು. 232.35 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು.  ಅಭಿಷೇಕ್ ಬ್ಯಾಟಿಂಗ್ ನೋಡೋದೇ ಅಭಿಮಾನಿಗಳಿಗೆ ಥ್ರಿಲ್ ಎನ್ನುವಂತಿತ್ತು.

ಈಡನ್ ಗಾರ್ಡನ್ಸ್​ನಲ್ಲಿ 2 ವಿಕೆಟ್ ಪಡೆದ ಅರ್ಷದೀಪ್ ಸಿಂಗ್ ಭಾರತದ ಪರ ಹೊಸ ದಾಖಲೆ ಬರೆದರು. ಟೀಮ್ ಇಂಡಿಯಾ ಪರ 61 ಟಿ20 ಪಂದ್ಯಗಳನ್ನಾಡಿರುವ ಅರ್ಷದೀಪ್ ಸಿಂಗ್ ಇದುವರೆಗೆ 210.4  ಓವರ್​ಗಳನ್ನು ಎಸೆದಿದ್ದಾರೆ. ಅಂದರೆ 1264 ಎಸೆತಗಳ ಮೂಲಕ ಬರೋಬ್ಬರಿ 97 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 95 ಕ್ಕಿಂತ ಅಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿತ್ತು. ಚಹಲ್ 96 ವಿಕೆಟ್ ಕಬಳಿಸಲು ಬರೋಬ್ಬರಿ 1764 ಎಸೆತಗಳನ್ನು ತೆಗೆದುಕೊಂಡಿದ್ದರು. ಅಂದರೆ 294 ಓವರ್​ಗಳ ಮೂಲಕ 96 ವಿಕೆಟ್ ಪಡೆದಿದ್ದರು. ಇನ್ನು ಎರಡನೇ ಪಂದ್ಯ ಜನವರಿ 25ರಂದು ಅಂದ್ರೆ ಶನಿವಾರ ಚೆನ್ನೈನ ಚಿದಂಬರಂ ಸ್ಟೇಡಿಯಮ್​ನಲ್ಲಿ ನಡೆಯಲಿದೆ.

Shantha Kumari

Leave a Reply

Your email address will not be published. Required fields are marked *