ಸೈಫ್ ಕುಟುಂಬದ ಆಸ್ತಿ ಸರ್ಕಾರಕ್ಕೆ? 15000 ಕೋಟಿ ಆಸ್ತಿ ಕೈ ಬಿಡುತ್ತಾ?
ಬೀದಿಗೆ ಬೀಳ್ತಾರಾ ಸೈಫ್ ಅಲಿ ಖಾನ್?
ಚೇತರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಇವರ ಮನೆತನದ ಬರೋಬ್ಬರಿ 15,000 ಕೋ. ರೂ. ಮೌಲ್ಯದ ಆಸ್ತಿ ಈಗ ಕೇಂದ್ರ ಸರಕಾರದ ಪಾಲಾಗುವುದು ಬಹುತೇಕ ಫಿಕ್ಸ್ ಆಗಿದೆ. ಅಂದಹಾಗೇ ಸೈಫ್ ಅಲಿ ಖಾನ್ ತಂದೆ ಮಾಜಿ ಕ್ರಿಕೆಟಿಗ ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಮಧ್ಯಪ್ರದೇಶದ ಭೋಪಾಳದ ಪಟೌಡಿ ನವಾಬ ಮನೆತನದವರು.. ಈ ರಾಜ ಮನೆತನಕ್ಕೆ ಮಧ್ಯಪ್ರದೇಶದಲ್ಲಿ ಭವ್ಯ ಮಹಲುಗಳು ಸೇರಿ ಅನೇಕ ಸೊತ್ತುಗಳಿವೆ. ಇವುಗಳ ಹಕ್ಕುಸ್ವಾಮ್ಯದ ಮೇಲಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದು, ಈಗ ಈ ಎಲ್ಲ ಆಸ್ತಿ ಸರಕಾರದ ಖಜಾನೆ ಸೇರುವ ಸಾಧ್ಯತೆಯಿದೆ. ಆಸ್ತಿಯಲ್ಲಿ ಸೈಫ್ಗೂ ದೊಡ್ಡ ಪಾಲಿದೆ. ತಡೆಯಾಜ್ಞೆ ತೆರವಾಗಿರುವುದರಿಂದ ಸರ್ಕಾರ 1968ರ ಶತ್ರು ಆಸ್ತಿ ಕಾಯ್ದೆಯಡಿಯಲ್ಲಿ ಪಟೌಡಿ ಮನೆತನದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ PAK ಹೆಸರಿಲ್ಲ – BCCI ಏಟಿಗೆ ಕಂಗೆಟ್ಟ ಪಾಕಿಸ್ತಾನ
ಒಟ್ಟು 15,000 ಸಾವಿರ ಕೋಟಿ ಆಸ್ತಿ
2015ರಲ್ಲಿ ಮುಂಬೈಯ ಶತ್ರು ಆಸ್ತಿ ವಾರಸುದಾರ ಕಚೇರಿ ಭೋಪಾಳದ ನವಾಬರ ಆಸ್ತಿಗಳನ್ನು ಸರಕಾರದ ಸೊತ್ತು ಎಂದು ಘೋಷಿಸಿದ್ದು, ಇದರ ವಿರುದ್ಧ ಪಟೌಡಿ ಪರಿವಾರ ಕೋರ್ಟ್ ಮೆಟ್ಟಿಲೇರುವುದರೊಂದಿಗೆ ಕಾನೂನು ಸಮರ ಶುರುವಾಗಿತ್ತು. ಹೈಕೋರ್ಟ್ ನವಾಬ ಪರಿವಾರಕ್ಕೆ ಅವರ ವಾದವನ್ನು ದಾಖಲೆ ಸಮೇತ ಮಂಡಿಸಲು ಸೂಚಿಸಿತ್ತು. ಆದರೆ ಇಷ್ಟರ ತನಕ ಪಟೌಡಿ ಪರಿವಾರ ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಆಸ್ತಿ ವಶಪಡಿಸಿಕೊಳ್ಳಲು ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದರೆ ಕ್ರಮ ಪ್ರಾರಂಭಿಸುವುದಾಗಿ ಭೋಪಾಳ ಜಿಲ್ಲಾಧಿಕಾರಿ ಹೇಳಿದ್ದಾರೆ. ಭೋಪಾಳದಲ್ಲೇ ಪಟೌಡಿ ಪರಿವಾರದ ಬಹುತೇಕ ಆಸ್ತಿಗಳಿವೆ. ಇದಲ್ಲದೆ ಇತರ ಜಿಲ್ಲೆಗಳಲ್ಲೂ ಬಹಳಷ್ಟು ಆಸ್ತಿ ಇದ್ದು, 100ಕ್ಕೂ ಹೆಚ್ಚು ಭವ್ಯ ಮಹಲುಗಳು ಮತ್ತು ಕಟ್ಟಡಗಳಿವೆ. ಇದಲ್ಲದೆ ಎಕರೆಗಟ್ಟಲೆ ಭೂಮಿಯನ್ನು ಪಟೌಡಿ ಪರಿವಾರ ಹೊಂದಿತ್ತು. ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ 15,000 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಅಬಿದಾ ಸುಲ್ತಾನ್
ಭೋಪಾಲ್ನ ಕೊನೆಯ ನವಾಬ ಹಮೀದುಲ್ಲಾ ಖಾನ್ಗೆ ಮೂವರು ಹೆಣ್ಣು ಮಕ್ಕಳಿದ್ದರು. ಅವರ ಮಕ್ಕಳಲ್ಲಿ ಹಿರಿಯಳಾದ ಅಬಿದಾ ಸುಲ್ತಾನ್ 1950 ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದಳು. ಎರಡನೇ ಮಗಳು ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದು, ನವಾಬ್ ಇಫ್ತಿಕರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು ಮತ್ತು ಆಸ್ತಿಗೆ ಕಾನೂನುಬದ್ಧ ಉತ್ತರಾಧಿಕಾರಿಯಾದರು. ಸಾಜಿದಾ ಅವರ ಮೊಮ್ಮಗನಾದ ನಟ ಸೈಫ್ ಅಲಿ ಖಾನ್ ಆಸ್ತಿಯಲ್ಲಿ ಒಂದು ಪಾಲನ್ನು ಪಡೆದರು. ಆದರೂ, ಅಬಿದಾ ಸುಲ್ತಾನ್ ಅವರ ವಲಸೆಯಿಂದಾಗಿ ಸರ್ಕಾರವು ಆಸ್ತಿಗಳನ್ನು ಶತ್ರು ಆಸ್ತಿ ಎಂದು ಹೇಳಿಕೊಳ್ಳಲು ಕಾರಣವಾಯ್ತು. 2019 ರಲ್ಲಿ, ನ್ಯಾಯಾಲಯವು ಸಾಜಿದಾ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಿತು, ಆದರೆ ಇತ್ತೀಚಿನ ತೀರ್ಪು ಕುಟುಂಬದ ಆಸ್ತಿ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ.
: 1.5 ಲಕ್ಷ ಜನರಿಗೆ ಆಸ್ತಿ ಕೆಳದುಕೊಳ್ಳುವ ಭೀತಿ
ಭೋಪಾಲ್ ಕಲೆಕ್ಟರ್ ಕೌಶಲೇಂದ್ರ ವಿಕ್ರಮ್ ಸಿಂಗ್ ಅವರು ಈ ಆಸ್ತಿಗಳ ಕಳೆದ 72 ವರ್ಷಗಳ ಮಾಲೀಕತ್ವದ ದಾಖಲೆಗಳನ್ನು ಪರಿಶೀಲಿಸುವ ಯೋಜನೆಯನ್ನು ಪ್ರಕಟಿಸಿದರು. ಈ ಭೂಮಿಯಲ್ಲಿ ವಾಸಿಸುವ ವ್ಯಕ್ತಿಗಳನ್ನು ರಾಜ್ಯದ ಗುತ್ತಿಗೆ ಕಾನೂನುಗಳ ಅಡಿಯಲ್ಲಿ ಬಾಡಿಗೆದಾರರಾಗಿ ಪರಿಗಣಿಸಬಹುದು ಎಂದು ಅವರು ಹೇಳಿದ್ದರು. ಸರ್ಕಾರದ ಈ ಸಂಭಾವ್ಯ ಸ್ವಾಧೀನವು 1.5 ಲಕ್ಷ ನಿವಾಸಿಗಳನ್ನು ಆತಂಕದ ಸ್ಥಿತಿಯಲ್ಲಿರಿಸಿದೆ. ಸಮೀಕ್ಷೆಗಳನ್ನು ನಡೆಸಿ ಮಾಲೀಕತ್ವವನ್ನು ನಿರ್ಧರಿಸುವ ಯೋಜನೆಗಳೊಂದಿಗೆ ಸರ್ಕಾರ ಮುಂದುವರಿಯುತ್ತಿರುವುದರಿಂದ ಅನೇಕರು ತೆರವುಗೊಳ್ಳುವ ಭಯದಲ್ಲಿದ್ದಾರೆ.
ತಡೆಯಾಜ್ಞೆಯನ್ನು ತೆಗೆದುಹಾಕಲಾಗಿದ್ದರೂ ಈ ಆಸ್ತಿಗಳನ್ನು ಶತ್ರು ಆಸ್ತಿ ಕಾಯ್ದೆಯಡಿ ವಿಲೀನಗೊಳಿಸುವುದು ಸುಲಭವಲ್ಲ. ಪಟೌಡಿ ಕುಟುಂಬಕ್ಕೆ ಮೇಲ್ಮನವಿ ಸಲ್ಲಿಸಲು ಇನ್ನೂ ಅವಕಾಶವಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಹಾಗೇ ನಾವು ತೆರಿಗೆ ಪಾವತಿಸುತ್ತೇವೆ, ಆದರೆ ನಮ್ಮ ಮನೆಗಳಿಗೆ ಯಾವುದೇ ನೋಂದಣಿ ಇಲ್ಲ. ನವಾಬನ ಗುತ್ತಿಗೆಗಳು ಇನ್ನೂ ಹಾಗೆಯೇ ಇರಬೇಕು ಎಂದು ಮತ್ತೊಬ್ಬ ನಿವಾಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸರ್ಕಾರ ಈ ಆಸ್ತಿಗಳ ಮೇಲೆ ಹಕ್ಕು ಸಾಧಿಸುತ್ತಿದೆ, ಆದರೆ ಹಲವು ವರ್ಷಗಳಿಂದ ಈ ಆಸ್ತಿ ಮಾರಾಟವಾಗಿದೆ ಅಥವಾ ಗುತ್ತಿಗೆಗೆ ನೀಡಲಾಗಿದೆ. ಈ ವಿಷಯವು ಸರಳವಾಗಿಲ್ಲ ಎಂದು ಈ ಪ್ರದೇಶದಲ್ಲಿ ವಾಸಿಸುವ ನಸೀಮ್ ಖಾನ್ ಹೇಳಿದ್ದಾರೆ. ಪರಿಸ್ಥಿತಿ ಜಟಿಲವಾಗಿದ್ದು, ಕುಟುಂಬಕ್ಕೆ ಕಾನೂನು ಮಾರ್ಗಗಳು ಇನ್ನೂ ತೆರೆದಿರುವುದರಿಂದ, ಈ ಐತಿಹಾಸಿಕ ಆಸ್ತಿಗಳ ಭವಿಷ್ಯವು ತೂಗುಗತ್ತಿಯಲ್ಲಿದೆ. ಒಟ್ನಲ್ಲಿ ಸೈಫ್ ಅಲಿಖಾನ್ಗೆ ಒಂದರ ಹಿಂದೆ ಒಂದು ಸಂಕಷ್ಟು ಬೆನ್ನು ಬಿಡದೆ ಕಾಡುತ್ತಿದ್ದು, ಇದ್ರಿಂದ ಹೇಗೆ ಪಾರಾಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.. ನಮಸ್ಕಾರ..