ಮೋದಿ ಹೊಗಳಿ ಗಲ್ಲಿಗೇರಿದ್ರಾ? – ಪಾಕ್ ಯೂಟ್ಯೂಬರ್ಸ್ ಕಣ್ಮರೆ!!
ನಾಪತ್ತೆ ಹಿಂದೆ ಇದ್ಯಾ ಶತ್ರುಸೇನೆ?
ಪಾಕಿಸ್ತಾನಿ ಯೂಟ್ಯೂಬರ್ ಶೋಯೆಬ್ ಚೌಧರಿ ಮತ್ತು ಸನಾ ಅಮ್ಜದ್ ಸೇರಿದಂತೆ ಭಾರತ ಮತ್ತು ಮೋದಿ ಪರವಾಗಿ ಮಾತನಾಡುವ 12 ಪಾಕಿಸ್ತಾನದ ಯೂಟ್ಯೂಬರ್ಸ್ ಪಾಕಿಸ್ತಾನದ ಸೇನೆ ಗಲ್ಲಿಗೆ ಏರಿಸಿದೆ ಎಂದು ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಖ್ಯವಾಗಿ ಶೇಯೆಬ್ ಮತ್ತು ಸನಾ ಅವರಿಗೆ ಇರುವ ಲಕ್ಷಾಂತರ ಅಭಿಮಾನಿಗಳ ಪೈಕಿ ಭಾರತೀಯರೇ ಹೆಚ್ಚು. ಇವರ ವಿಡಿಯೋಗಳು ಭಾರತದಲ್ಲಿಯೇ ಹೆಚ್ಚು ವೀವ್ಸ್ ಆಗುತ್ತೆ. ಪಾಕಿಸ್ತಾನವನ್ನು ಭಾರತದ ಜೊತೆ ಹೋಲಿಕೆ ಮಾಡುತ್ತಾ, ಪಾಕ್ನ ಇಂದಿನ ಸ್ಥಿತಿ, ಶಿಕ್ಷಣದ ಮಟ್ಟ, ಭಾರತದ ಸಾಧನೆ, ಆರ್ಥಿಕ ವ್ಯವಸ್ಥೆ, ಅದರಲ್ಲಿಯೂ ಹೆಚ್ಚಾಗಿ ಪ್ರಧಾನಿ ಮೋದಿ ಅವರ ಆಡಳಿತದ ವೈಖರಿಯನ್ನೇ ಈ ಇಬ್ಬರು ಯೂಟ್ಯೂಬರ್ಸ್ ಪ್ರತಿನಿತ್ಯವೂ ವಿವರಿಸುತ್ತಲೇ ಬಂದಿದ್ದಾರೆ. ಪಾಕಿಸ್ತಾನದ ಕೆಲವು ಜನರು ಕೂಡ, ಇವರಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಭಾರತದ ಗುಣಗಾನ ಮಾಡುವುದೂ ಇದೆ.
ಇವರಿಬ್ಬರನ್ನು ಅನುಸರಿಸಿ ಪಾಕ್ನ ಹಲವು ಯೂಟ್ಯೂಬರ್‌ಗಳು ಭಾರತದ ಗುಣಗಾನ ಮಾಡುತ್ತಲೇ, ತಮ್ಮ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಆದರೆ ಕಳೆದ 21 ದಿನಗಳಿಂದ ಈ 12 ಯೂಟ್ಯೂಬರ್‌ಗಳು ಏಕಾಏಕಿ ನಾಪತ್ತೆಯಾಗಿದ್ದಾರೆ. ಅವರ ಒಂದೂ ವಿಡಿಯೋಗಳೂ ಅಪ್‌ಲೋಡ್ ಆಗದೇ ಇರುವುದು ಹಲವು ಅನುಮಾಕ್ಕೆ ಕಾರಣವಾಗದೆ. ಕೊನೆಗೆ ಈ 12 ಮಂದಿಯನ್ನೂ ಪಾಕ್ ಸೇನೆ ಗಲ್ಲಿಗೆ ಏರಿಸಿದೆ ಎಂದು ಸುದ್ದಿಯಾಯಿತು. ಬಳಿಕ 12 ಮಂದಿಯನ್ನು ಅಲ್ಲ, ಬದಲಿಗೆ ಶೋಯೆಬ್ ಚೌಧರಿ ಮತ್ತು ಸನಾ ಅವರನ್ನು ಗಲ್ಲಿಗೆ ಏರಿಸಲಾಗಿದೆ ಎಂದೇ ಈಗಲೂ ಸುದ್ದಿಯಾಗುತ್ತಲೇ ಇದೆ.
ಆದರೆ ಇದರ ನಡುವೆಯೇ, ಶೋಯೆಬ್ ಅವರು 21 ದಿನಗಳ ಬಳಿಕ ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದು, ಪಾಕ್ ಸೇನೆ ತಮಗೆ ನೀಡಿರುವ ಕಿರುಕುಳಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಉಳಿದವರು ಏನಾದರೂ ಎನ್ನುವ ಮಾಹಿತಿ ಇನ್ನೂ ಇಲ್ಲ. ಇದೀಗ ಶೋಯೆಬ್ ಅವರು, ತಮ್ಮ ಯೂಟ್ಯೂಬ್ ಚಾನೆಲ್ ದಿ ರಿಯಲ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೀವ್ರ ಕೋಪದಲ್ಲಿ ಇರುವ ಅವರು, ಕಳೆದ 21 ದಿನಗಳಲ್ಲಿ ತನಗೆ ಸಂಭವಿಸಿದ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ಪೊಲೀಸರು ರಾತ್ರಿ 2 ಗಂಟೆಗೆ ತಮ್ಮ ಮನೆಗೆ ನುಗ್ಗಿ ಕರೆದುಕೊಂಡು ಹೋದರು. ಅಂದು ಕರೆದುಕೊಂಡು ಹೋಗಿರುವ ರೀತಿ ನೋಡಿ, ಮತ್ತೆ ವಾಪಸ್ ಬರುವೆ ಎನ್ನುವ ಸೂಚನೆ ಕಾಣಿಸಲಿಲ್ಲ. ಅಂದೇ ನನ್ನ ಅಂತ್ಯವಾಗುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ನಾನು ವಾಪಸ್ ಬಂದಿದ್ದೇನೆ. ನನ್ನನ್ನು ಸಾಯಿಸಿದರು, ನನ್ನ ಶವ ಸಿಕ್ಕಿದೆ, ಗಲ್ಲಿಗೆ ಏರಿಸಿದರು ಎಂಬೆಲ್ಲಾ ಸುದ್ದಿ ಹರಿದಾಡುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಸದ್ಯದ ಸ್ಥಿತಿಯಲ್ಲಿ ಬದುಕಿದ್ದೇನೆ. ಹಾಗೆಂದು ನಾನು ಸುಮ್ಮನೇ ಕುಳಿತುಕೊಳ್ಳುವವನು ಅಲ್ಲ. ಪಾಕಿಸ್ತಾನಿ ಸೇನೆ ಮತ್ತು ಪೊಲೀಸ್ ಆಡಳಿತವನ್ನು ಖಂಡಿಸುವುದನ್ನು ಮುಂದುವರೆಸುತ್ತೇನೆ. ಪಾಕಿಸ್ತಾನಿ ಸೇನೆ ಏನಾದರೂ ತಪ್ಪು ಮಾಡಿದಾಗಲೆಲ್ಲಾ ಅದನ್ನು ಬಹಿರಂಗಪಡಿಸುತ್ತೇನೆ. ಪಾಕ್ನಲ್ಲಿ ಯಾವುದೇ ತಪ್ಪು ಸಂಭವಿಸುವುದನ್ನು ನಾನು ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ಅವರು ನನ್ನನ್ನು ಏನು ಬೇಕಾದರೂ ಮಾಡಿಕೊಳ್ಳಲಿ ಎಂದಿದ್ದಾರೆ. ನನಗೆ ಅತಿಹೆಚ್ಚು ಫಾಲೋವರ್ಸ್ ಇರುವುದನ್ನು ನೋಡಿ ಪಾಕ್ ಸೇನೆ ಸಹಿಸಿಕೊಳ್ಳುತ್ತಿಲ್ಲ. ಯುವಕ- ಯುವತಿಯನ್ನು ಒಟ್ಟುಗೂಡಿಸಿ ಎಲ್ಲಿ ಪಾಲಿಟಿಕಲ್ ಪಾರ್ಟಿ ಶುರು ಮಾಡಿಬಿಡುತ್ತೇನೋ ಎನ್ನುವ ಭಯ ಅವರಿಗೆ ಎಂದಿದ್ದಾರೆ ಶೋಯೆಬ್.
ಆದರೆ ಉಳಿದವರ ಸ್ಥಿತಿ ಏನಾಗಿದೆ ಎನ್ನುವುದು ತಿಳಿದಿಲ್ಲ. ಆದರೆ, ಈ ನಡುವೆಯೇ, ಗಲ್ಲಿಗೇರಿಸಿರುವ ಸುದ್ದಿಯನ್ನು ಪಾಕಿಸ್ತಾನಿ ಪತ್ರಕರ್ತೆ ಅರ್ಜೂ ಕಾಜ್ಮಿ ನಿರಾಕರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಇದು ಸುಳ್ಳು ಸುದ್ದಿ. ಯೂಟ್ಯೂಬರ್ಗಳನ್ನು ಗಲ್ಲಿಗೆ ಏರಿಸಿಲ್ಲ, ಬದಲಿಗೆ ಕಠಿಣ ಕ್ರಮ ಕೈಗೊಂಡಿದೆ ಅಷ್ಟೇ ಎಂದಿದ್ದಾರೆ. ತಮಗೂ ಹೀಗೆಯೇ ಕರೆ ಬಂದಿತ್ತು. ಜನವರಿ 1ರಂದು ಪಾಕಿಸ್ತಾನಿ ತನಿಖಾ ಸಂಸ್ಥೆ ಎಫ್‌ಐಎ ನನಗೆ ಕರೆ ಕೊಟ್ಟಿತ್ತು. ನನ್ನ ಮೇಲೆ ಅವರು ಭಯಂಕರ ಸಿಟ್ಟಾಗಿದ್ದಾರೆ ಎಂದು ತಿಳಿದಿತ್ತು. ಆದರೆ ವಿಷಯ ಮಾತ್ರ ಗೊತ್ತಿರಲಿಲ್ಲ. ನಾನೋರ್ವ ಪತ್ರಕರ್ತೆ. ಇರುವ ವಿಷಯವನ್ನು ಇದ್ದ ಹಾಗೆಯೇ ಹೇಳುತ್ತೇನೆ, ನಾನು ಸುದ್ದಿ ಆಧರಿತ ಕಾರ್ಯಕ್ರಮಗಳನ್ನು ಮಾತ್ರ ಮಾಡುವವಳು. ಆದರೆ ಪಾಕಿಸ್ತಾನ ಸರ್ಕಾರಕ್ಕೆ ನಮ್ಮ ಸತ್ಯ ಕಹಿ ಆಗುತ್ತಿದೆ ಎಂದಿದ್ದಾರೆ.
ಶೋಯೆಬ್ ಚೌಧರಿ ಯಾರು?
ಶೋಯೆಬ್ ಚೌಧರಿ ಪಾಕಿಸ್ತಾನದ ಖ್ಯಾತ ಯೂಟ್ಯೂಬರ್ಸ್ ಆಗಿದ್ದಾರೆ. ರಿಯಲ್ ಎಂಟರ್‌ಟೈನ್‌ಮೆಂಟ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಪಾಕಿಸ್ತಾನ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ಅಪಾರ ಸಂಖ್ಯೆಯ ಫಾಲೋವರ್ಸ್, ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಸ್ಟ್ರೀಟ್ ಇಂಟರ್‌ವ್ಯೂ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶೋಯೆಬ್ ಚೌಧರಿ ತೋರಿಸುತ್ತಾ ಇದ್ದರು.
ಸನಾ ಅಮ್ಜದ್ ಯಾರು?
ಇವರೂ ಕೂಡ ಪಾಕಿಸ್ತಾನದ ಖ್ಯಾತ ಯೂಟ್ಯೂಬರ್. ಸನಾ ಅಮ್ಜದ್ ಹೆಸರಿನಲ್ಲೇ ಯೂಟ್ಯೂಬ್ ಚಾನೆಲ್ ಹೊಂದಿರುವ ಸನಾ ಕೂಡ, ಪಾಕಿಸ್ತಾನ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ಅಪಾರ ಸಂಖ್ಯೆಯ ಫಾಲೋವರ್ಸ್, ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಪಾಕಿಸ್ತಾನದ ಪ್ರಚಲಿತ ವಿದ್ಯಮಾನಗಳು ಮತ್ತು ಸಾರ್ವಜನಿಕ ಅಭಿಪ್ರಾಯದ ವರದಿಗಳನ್ನು ಸನಾ ತಮ್ಮ ಚಾನೆಲ್‌ನಲ್ಲಿ ಪ್ರಸಾರ ಮಾಡುತ್ತಿದ್ದರು.
ಭಾರತದ ಬಗ್ಗೆ ವಿಡಿಯೋ ಹಾಕುತ್ತಿದ್ದ ಶೋಯೆಬ್
ಶೋಯೆಬ್ ಚೌಧರಿ ತಮ್ಮ ಚಾನೆಲ್‌ನಲ್ಲಿ ಆಗಾಗ್ಗೆ ಭಾರತಕ್ಕೆ ಸಂಬಂಧಿಸಿದ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದರು. ಪಾಕಿಸ್ತಾನದ ಸಾರ್ವಜನಿಕರನ್ನು ಸಂದರ್ಶಿಸಿ, ಭಾರತದ ಬಗ್ಗೆ ಒಳ್ಳೆ ಅಭಿಪ್ರಾಯ ಇರುವ ವಿಡಿಯೋಗಳನ್ನೂ ಕೂಡ ಪ್ರಸಾರ ಮಾಡುತ್ತಿದ್ದರು. ಇವರ ವಿಡಿಯೋಗಳು ಭಾರತದಲ್ಲೂ ಕೂಡ ಜನಪ್ರಿಯವಾಗಿತ್ತು.
ಮೋದಿ ಸದಾ ಶೇರ್ ಹೇ ಎಂದಿದ್ದ ಸನಾ ಅಮ್ಜದ್!
ಸನಾ ಅಮ್ಜದ್ ಕೂಡ ಭಾರತದ ಬಗ್ಗೆ ಸಕಾರಾತ್ಮಕವಾದ ವಿಡಿಯೋ ಮಾಡುತ್ತಿದ್ದರು. ಇತ್ತೀಚಿಗಷ್ಟೇ ಭಾರತದ ಪ್ರಧಾನಿ ಮೋದಿ ಅವರನ್ನು ‘ಮೋದಿ ಸದಾ ಶೇರ್ ಹೈ’ ಅಂದ್ರೆ ಮೋದಿ ಸಿಂಹ ಎಂದು ಹೊಗಳುತ್ತಾ ಸನಾ ವಿಡಿಯೋ ಮಾಡಿದ್ದರಂತೆ. ಅದರಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ಧು ಪಡಿಸಿದ ಮೋದಿ ಸರ್ಕಾರದ ಕ್ರಮವನ್ನು ಸನಾ ಹೊಗಳಿ, ವಿಡಿಯೋ ಅಪ್‌ಲೋಡ್ ಮಾಡಿದ್ದರು ಎನ್ನಲಾಗಿದೆ.
ಈ ಘಟನೆಯು ಇತರ ಪಾಕಿಸ್ತಾನಿ ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್‌ಗಳಿಗೆ ಒಂದು ಕಟು ಎಚ್ಚರಿಕೆಯಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಈ ಯೂಟ್ಯೂಬರ್‌ಗಳು ಪಾಕಿಸ್ತಾನದ ಬಗ್ಗೆ ನೆಗೆಟಿವ್ ಆಗಿ ಚಿತ್ರಿಸಿ, ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಯೂಟ್ಯೂಬ್‌ನಿಂದ ಹೆಚ್ಚಿನ ಆದಾಯವನ್ನು ಗಳಿಸಲು ಭಾರತವನ್ನು ಹೊಗಳಿದ್ದಾರೆ ಎಂದು ಪಾಕ್ ನೆಟ್ಟಿಗರು ಆರೋಪಿಸಿದ್ದಾರೆ. ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ, ನಿರುದ್ಯೋಗ ಮತ್ತು ವ್ಯಾಪಕ ಬಡತನ ದೇಶವನ್ನು ಬಾಧಿಸುತ್ತಿರುವುದರಿಂದ, ಪಾಕಿಸ್ತಾನಿ ಯೂಟ್ಯೂಬರ್ಸ್ ಅಲ್ಲಿನ ಸರ್ಕಾರದ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಲು ಭಾರತದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಶೋಯೆಬ್ ಚೌಧರಿ ತಮ್ಮ ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದು, ಉಳಿದವರು ಎಲ್ಲಿದ್ದಾರೆ ಅನ್ನೋ ಬಗ್ಗೆ ಯಾವುದೇ ಮಾಹಿತಿ ಇಲ್ಲ.