ಟ್ರಂಪ್ ಕಾರ್ಯಕ್ರಮಕ್ಕೆ ಕಟ್ಟೆಚ್ಚರ! – ಏನೆಲ್ಲಾ ಬ್ಯಾನ್? ಹೇಗಿದೆ ಸೆಕ್ಯೂರಿಟಿ?
ಅಧ್ಯಕ್ಷರಿಗೆ ಸಿಗೋ ಸವಲತ್ತುಗಳೇನು?
ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳು ಬರುತ್ತಿದ್ದಾರೆ. ಹೀಗೆ ಬರುವ ಗಣ್ಯರಿಗೆ ಸೂಕ್ತ ಭದ್ರತೆ ಒದಗಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಮೆರವಣಿಗೆ ಮೂಲಕ ವೈಟ್ಹೌಸ್ಗೆ ಹೋಗುವ ನಿರೀಕ್ಷೆ ಇದೆ. ಹೀಗಾಗಿ ಹಲವು ವಸ್ತುಗಳಿಗೆ ಇದೀಗ ನಿಷೇಧ ಹೇರಲಾಗಿದೆ. ಡೊನಾಲ್ಡ್ ಟ್ರಂಪ್ ಪದಗ್ರಹಣ ಕಾರ್ಯಕ್ರಮಕ್ಕೆ ಬರುವ ವ್ಯಕ್ತಿಗಳು ಯಾವುದೇ ರೀತಿ ಸ್ಫೋಟಕ ವಸ್ತು ಅಥವಾ ಗನ್ & ಬುಲೆಟ್ ತೆಗೆದುಕೊಂಡು ಬರುವಂತೆ ಇಲ್ಲ. ಇದರ ಜೊತೆಗೆ ಚಾಕು & ಮಚ್ಚಿನ ರೀತಿಯ ಮೊನಚಾದ ವಸ್ತುಗಳನ್ನು ಕೂಡ ತೆಗೆದುಕೊಂಡು ಬರುವಂತಿಲ್ಲ ಎಂಬ ನಿಯಮ ಹೇರಲಾಗಿದೆ. ಹಾಗೇ ದೊಡ್ಡ ಕ್ಯಾಮೆರಾಗಳಿಗೆ ಕೂಡ ನಿಷೇಧ ಹೇರಲಾಗಿದ್ದು, ಈ ಸಮಯದಲ್ಲಿ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ಎತ್ತಾಕ್ಕೊಂಡು ಹೋಗಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಗತ್ತಿನಾದ್ಯಂತ ಟ್ರಂಪ್ ಸುದ್ದಿಯೇ ಟ್ರೆಂಡ್!
ಅಮೆರಿಕದ ನೂತನ ಅಧ್ಯಕ್ಷರಾಗಿ, ಅಧಿಕಾರ ಸ್ವೀಕರಿಸುತ್ತಿರುವ ಟ್ರಂಪ್ ಅವರಿಗೆ ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು & ಗಣ್ಯರು ಶುಭ ಕೋರಿದ್ದಾರೆ. ಇದರ ಜೊತೆಗೆ ಟ್ರಂಪ್ ಅವರ ಎಂಟ್ರಿ ನಂತರ ದೊಡ್ಡ ಮಟ್ಟಿಗೆ ಬದಲಾವಣೆ ಆಗುವ ನಿರೀಕ್ಷೆ ಕೂಡ ಇದೆ. ಹೀಗಾಗಿ ಇಡೀ ಜಗತ್ತಿನ ಗಮನ ಇದೀಗ ಅಮೆರಿಕದ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿಯೇ, ಜಗತ್ತಿನಾದ್ಯಂತ ಟ್ರಂಪ್ ಅವರ ಸುದ್ದಿಯೇ ಟ್ರೆಂಡ್ ಆಗಿದೆ.
ಬೈಬಲ್ ಮೇಲೆ ಕೈ ಇಟ್ಟು ಪ್ರಮಾಣ ವಚನ
ಹಲವು ದಶಕಗಳ ನಂತರ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅಮೆರಿಕ ಸಂಸತ್ತಿನ ಒಳಗೆ ನಡೆಸುತ್ತಿರುವುದು ಇದೇ ಮೊದಲು. ಅಮೆರಿಕದಲ್ಲಿ ವಿಪರೀತ ಚಳಿ ಇರುವುದರಿಂದ ಸಂಸತ್ತಿನ ಒಳಗಡೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆಯೋಜಿಸಲಾಗುತ್ತಿದೆ. ಡೊನಾಲ್ಡ್ ಟ್ರಂಪ್ ಎರಡು ಬೈಬಲ್ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 1955 ರಲ್ಲಿ ಅವರ ತಾಯಿ ಅವರಿಗೆ ಬೈಬಲ್ ಅನ್ನು ನೀಡಿದ್ದರು, ಆ ಬೈಬಲ್ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಶ್ವದಾದ್ಯಂತದ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಇವರಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರಿಂದ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಕಾಲಮಾನ ರಾತ್ರಿ 10.30ರ ಸುಮಾರಿಗೆ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಮೆರಿಕಾ ಅಧ್ಯಕ್ಷರಿಗೆ ಸಿಗೋ ಸವಲತ್ತುಗಳೇನು?
ವರ್ಷಕ್ಕೆ 4 ಲಕ್ಷ ಡಾಲರ್ ಅಂದ್ರೆ 2 ಕೋಟಿ 70 ಲಕ್ಷ ರೂ. ಸಂಬಳ
ಸಿಗುವ ವೇತನದ ಜೊತೆಗೆ ಭತ್ಯೆ, ಸೌಲಭ್ಯಗಳು ಕೂಡ ಅಷ್ಟೇ ಪವರ್ಫುಲ್
ಪ್ರತ್ಯೇಕ ಬಂಗಲೆ, ಖಾಸಗಿ ವಿಮಾನ, ಹೆಲಿಕಾಪ್ಟರ್ನಂತಹ ಹಲವು ಸೌಲಭ್ಯ
ಅಮೆರಿಕದ ಅಧ್ಯಕ್ಷರಿಗೆ ಬೃಹತ್ ಬಂಗಲೆ ಶ್ವೇತಭವನ
ಅತ್ಯಾಧುನಿಕ ವಿಮಾನ ಏರ್ಫೋರ್ಸ್ ಒನ್
ಅಧಿಕೃತ ಹೆಲಿಕಾಪ್ಟರ್ ಮರೈನ್ ಒನ್
ದಾಳಿಯನ್ನು ತಡೆಯುವ ಶಕ್ತಿಯುಳ್ಳ ಲಿಮೋಸಿನ್ ಕಾರು
19 ಸಾವಿರ ಡಾಲರ್ ಮನರಂಜನಾ ಭತ್ಯೆ
50 ಸಾವಿರ ಡಾಲರ್ ವೆಚ್ಚ ಭತ್ಯೆ
1 ಲಕ್ಷ ಡಾಲರ್ ಸಾರಿಗೆ ಭತ್ಯೆ ದೊರೆಯುತ್ತದೆ
ನಿವೃತ್ತರಾದ ಬಳಿಕ ವಾರ್ಷಿಕ 2 ಲಕ್ಷ ಅಮೆರಿಕನ್ ಡಾಲರ್ ಪಿಂಚಣಿ
ಅಧ್ಯಕ್ಷರ ನಿಧನದ ಬಳಿಕ ಅವರ ಪತ್ನಿಗೆ 1 ಲಕ್ಷ ಡಾಲರ್ ಪಿಂಚಣಿ
ಲಿಮೋಸಿನ್ ಕಾರು ಸಹ ವಿಶೇಷ ವಿಮಾನದಲ್ಲಿ ಹೋಗುತ್ತದೆ
ಈ ಕಾರಿನಲ್ಲೇ ಅವರು ವಿದೇಶದಲ್ಲಿ ಪ್ರಯಾಣ ಮಾಡುತ್ತಾರೆ
ಟ್ರಂಪ್ನಿಂದ ಭಾರತಕ್ಕೇನು ಲಾಭ?
ಇನ್ನು ಪದಗ್ರಹಣದ ಬಳಿಕ ಅವರು ತೆಗೆದುಕೊಳ್ಳಲಿರುವ ನಿರ್ಣಯಗಳ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಟ್ರಂಪ್ ನಿರ್ಣಯಗಳು ಹಲವು ದೇಶಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಟ್ರಂಪ್ 2 ನೇ ಬಾರಿಗೆ ಅಧ್ಯಕ್ಷರಾಗುತ್ತಿರುವ ವೇಳೆಯಲ್ಲೇ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಮೇಲೂ ಪ್ರಭಾವ ಉಂಟಾಗಲಿದೆ. ಭಾರತದ ಮುಂದೆ ಅವಕಾಶಗಳು ಮತ್ತು ಸವಾಲುಗಳೂ ಇದ್ದು, ಇದರ ಸಮರ್ಥ ನಿರ್ವಹಣೆಯ ಆಧಾರದಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯ ವೃದ್ಧಿಯಾಗಲಿದೆ. ಭಾರತ ಇತ್ತೀಚಿನ ವರ್ಷಗಳಲ್ಲಿ ತನ್ನ ರಕ್ಷಣಾ ಅಗತ್ಯಗಳಿಗೆ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಅಮೆರಿಕದೊಂದಿಗೆ ಹೆಚ್ಚಿನ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿದೆ. ಜೋ ಬೈಡನ್ ಅವಧಿಯಲ್ಲೂ ಹಲವು ರಕ್ಷಣಾ ಒಪ್ಪಂದಗಳು ಏರ್ಪಟ್ಟಿದ್ದವು. ಟ್ರಂಪ್ ನ್ಯಾಟೋ ಕಡೆಗೆ ಹೆಚ್ಚು ಒಲವು ಹೊಂದಿದ್ದರೂ ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಭಾವವನ್ನು ಕಡಿಮೆ ಮಾಡಲು ಭಾರತದೊಂದಿಗೆ ರಕ್ಷಣಾ ಒಪ್ಪಂದಗಳನ್ನು ಮುಂದುವರಿಸುವ ನಿರೀಕ್ಷೆ ಇದೆ. ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಹಲವು ದೇಶಗಳ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಕುರಿತು ಮಾತನಾಡಿದ್ದರು. ಟ್ರಂಪ್ ತೆರಿಗೆ ನೀತಿಯಲ್ಲಿ ಬದಲಾವಣೆ ತಂದರೆ ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ಭಾರತದ ಮಾಹಿತಿ ತಂತ್ರಜ್ಞಾನ, ಔಷಧ ಮತ್ತು ಜವಳಿ ವಲಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಟ್ರಂಪ್ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬಯಸಿದರೆ, ಉತ್ಪಾದನಾ ಕ್ಷೇತ್ರದಲ್ಲಿ ಭಾರತಕ್ಕೆ ಲಾಭ ಉಂಟಾಗುವ ನಿರೀಕ್ಷೆ ಇದೆ. ಭಾರತ ಮತ್ತು ಅಮೆರಿಕ ನಡುವೆ 2022ರಲ್ಲಿ ಒಟ್ಟು 191 ಬಿಲಿಯನ್ ಡಾಲರ್ ವಹಿವಾಟು ನಡೆದಿತ್ತು. ಇದರಲ್ಲಿ ಭಾರತ 73 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದ್ದರೆ, 118.9 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು. ಈ ಮೂಲಕ ಭಾರತ, ಅಮೆರಿಕದ 9ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿತ್ತು..ಒಟ್ನಲ್ಲಿ ಟ್ರಂಪ್ ತೆಗೆದುಕೊಳ್ಳುವ ನಿರ್ಧಾರದಿಂದ ಸಾಕಷ್ಟು ದೇಶದ ಭವಿಷ್ಯ ನಿರ್ಧಾರ ಆಗಲಿದೆ..