ಸೋಮವಾರವೇ ಶಿವನನ್ನೇಕೆ ಪೂಜಿಸಲಾಗುತ್ತೆ ಗೊತ್ತೇ.?
ಈಶ್ವರನ ಪೂಜೆ ಕ್ರಮ ಹೇಗಿರಬೇಕು?
ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ. ಎಂಬುದು ಶಿವ ಭಕ್ತರ ಭಕ್ತಿಯ ಮಾತು. ಓಂ ನಮಃ ಶಿವಾಯ’ ಎಂದು ಭಕ್ತಿಯಿಂದ ಪಠಿಸುತ್ತಿದ್ದರೆನೇ ಮನಸ್ಸಿನಲ್ಲಿ ಉಲ್ಲಾಸ, ಸಮಾಧಾನದ ಭಾವ ಮೂಡುತ್ತದೆ.
ಹಿಂದೂ ಧರ್ಮದಲ್ಲಿ ವಾರದ ಪ್ರತಿದಿನವೂ ಒಂದೊಂದು ದೇವರಿಗೆ ಮೀಸಲು. ಹಾಗೆಯೇ ಸೋಮವಾರ ಪರಶಿವನ ಪೂಜೆಗೆ ಮಂಗಳಕರವಾದ ದಿನ. ಪರಮೇಶ್ವರನನ್ನು ಭಕ್ತಿಯಿಂದ ಧ್ಯಾನಿಸಲು ಸೋಮವಾರ ಸೂಕ್ತ. ಇದೇ ಕಾರಣದಿಂದ ಸೋಮವಾರ ಶಿವ ಭಕ್ತರು ಉಪವಾಸ ವ್ರತ ಕೈಗೊಂಡು ಏಕಭಕ್ತಿಯಿಂದ ಈಶ್ವರನನ್ನು ಪೂಜಿಸುತ್ತಾರೆ. ಶಿವ ದೇವಾಲಯಗಳಿಗೆ ಭೇಟಿ ನೀಡಿ ಬಗೆಬಗೆ ಪೂಜೆ, ಅರ್ಚನೆಗಳನ್ನು ಕೈಗೊಳ್ಳುತ್ತಾರೆ.
ಇದನ್ನೂ ಓದಿ : ಸ*ತ್ತ ದೇಹವೇ ಅಘೋರಿಗಳಿಗೆ ಶ್ರೇಷ್ಠ – ಸ್ಮಾಶನದಲ್ಲಿ ಹೆ*ಣ ತಿನ್ನೋದು ನಿಜನಾ?
ನಾವು ದೇವಾದಿ ದೇವನದ ಮಹಾದೇವನನ್ನು ಯಾವ ದಿನ ಬೇಕಾದರೂ ಪೂಜಿಸಬಹುದು ಅಥವಾ ನಿಯಮಿತವಾಗಿಯೂ ಆತನನ್ನು ಪೂಜಿಸಬಹುದು. ಆದರೆ, ಸೋಮವಾರದ ದಿನವನ್ನು ಶಿವನ ಪೂಜೆಗೆ ಅತ್ಯಂತ ಮಂಗಳಕರ ಹಾಗೂ ಸೂಕ್ತವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಾಡಿದ ಪೂಜೆ ಪುನಸ್ಕಾರಗಳು ನಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಅಷ್ಟು ಮಾತ್ರವಲ್ಲ, ನಾವು ಸೋಮವಾರದ ದಿನದಂದು ಮಾಡುವ ಪೂಜೆ ಪುನಸ್ಕಾರಗಳಿಂದ ಶಿವನು ಈಗ ಪ್ರಸನ್ನನಾಗುತ್ತಾನೆ ಎನ್ನುವ ನಂಬಿಕೆ ಇದೆ. ಸೋಮವಾರದ ದಿನದಂದೇ ನಾವು ಏಕೆ ಶುಭ ಪೂಜೆಯನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೆಚ್ಚಿನವರಲಿ ಸೋಮವಾರದ ದಿನದಂದು ಏಕೆ ಶಿವ ಪೂಜೆಯನ್ನು ಮಾಡಬೇಕು ಎನ್ನುವ ಪ್ರಶ್ನೆ ಸೃಷ್ಟಿ ಆಗಿರಬಹುದು. ಈ ಪ್ರಶ್ನೆಗೆ ಅಥವಾ ಗೊಂದಲಕ್ಕೆ ಉತ್ತರ ಆ ದಿನದ ಹೆಸರಿನಲ್ಲಿಯೇ ಇದೆ. ವಾಸ್ತವವಾಗಿ, ಸೋಮವಾರ ಎನ್ನುವ ಪದದ ಅರ್ಥವೇ ಸೋಮ. ಅಂದರೆ ಶಿವನ ಜಡೆ ಕೂದಲಿನಲ್ಲಿ ಅಲಂಕರಿಸಲ್ಪಟ್ಟ ಚಂದ್ರನೆಂದರ್ಥ. ಸೋಮ ಎನ್ನುವ ಪದವು ಇನ್ನೊಂದು ಅರ್ಥವನ್ನು ಕೂಡ ನೀಡುತ್ತದೆ. ಈ ಅರ್ಥದ ಪ್ರಕಾರ, ಸೋಮ ಎಂದರೆ ಶಾಂತ ಎಂಬುದಾಗಿದೆ. ಇದು ಶಿವನ ಶಾಂತ ಸ್ವಭಾವವನ್ನ ಸಂಕೇತಿಸುತ್ತದೆ. ಇನ್ನೊಂದು ಕಥೆಯ ಪ್ರಕಾರ, ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು, ತಾಯಿ ಪಾರ್ವತಿಯು 16 ಸೋಮವಾರಗಳ ಕಾಲ ಕಠಿಣ ತಪಸ್ಸು ಮಾಡಿದಳು, ಇದರಿಂದಾಗಿ ಭಗವಂತನು ಸಂತೋಷಪಟ್ಟನು ಮತ್ತು ಅವಳನ್ನು ತನ್ನ ಪತ್ನಿಯನ್ನಾಗಿ ಪಡೆದನು. ಅಂದಿನಿಂದ, ಸೋಮವಾರದ ಉಪವಾಸವನ್ನು ಆಚರಿಸುವ ಸಂಪ್ರದಾಯವು ಪ್ರಾರಂಭವಾಗಿದೆ ಎಂದು ಪರಿಗಣಿಸಲಾಗಿದೆ.
ದಂತಕತೆಯ ಪ್ರಕಾರ, ದಕ್ಷ ಮಹಾರಾಜನ ಶಾಪದಿಂದಾಗಿ ಚಂದ್ರ ಕ್ಷಯ ರೋಗಕ್ಕೆ ಗುರಿಯಾಗುತ್ತಾನೆ. ಆತ ಈ ರೋಗದಿಂದ ಮುಕ್ತನಾಗುವುದಕ್ಕಾಗಿ ಸೋಮವಾರದ ದಿನದಂದು ಪರಶಿವನನ್ನು ಆರಾಧಿಸುತ್ತಾನೆ. ಇದರ ಪರಿಣಾಮವಾಗಿ ಅವನು ಕ್ಷಯ ರೋಗದಿಂದ ಪಾರಾದನು. ಅಂದಿನಿಂದ ಸೋಮವಾರವನ್ನು ಶಿವನ ಆರಾಧನೆಗೆ ಸೂಕ್ತವಾದ ದಿನವೆಂದು ಪರಿಗಣಿಸಲಾಗಿದೆ.
ಶಿವ ದೇವರ ಆಶೀರ್ವಾದವನ್ನು ಪಡೆಯಲು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ. ನಂತರ ದೇವಸ್ಥಾನಕ್ಕೆ ಹೋಗಿ ಅಥವಾ ಮನೆಯಲ್ಲಿ ಶಿವ ಚಾಲೀಸಾ ಅಥವಾ ಶಿವಾಷ್ಟಕವನ್ನು ಪಠಿಸಿ. ಸೋಮವಾರ ಶಿವ ದೇವರಿಗೆ ಹಾಲಿನ ಅಭಿಷೇಕ ಮಾಡಿ. ದೇವರಿಗೆ ಹಾಲನ್ನು ಅರ್ಪಿಸುವಾಗ ಓಂ ನಮಃ ಶಿವಾಯ’ ಎಂದು ಪಠಿಸಿ. ಶಿವ ದೇವರಿಗೆ ನೀರನ್ನು ಅರ್ಪಿಸುವಾಗ ತಾಮ್ರದ ಪಾತ್ರೆಯನ್ನು ಬಳಸಿದರೆ ಉತ್ತಮ. ಸೋಮವಾರ ಬಿಲ್ಪ ಪತ್ರೆಯ ಮೇಲೆ ಶ್ರೀಗಂಧವನ್ನು ಹಚ್ಚಿ ಅದನ್ನು ಶಿವಲಿಂಗಕ್ಕೆ ಅರ್ಪಿಸಿ. ಶಿವ ದೇವರ ಕೃಪಾಶೀರ್ವಾದವನ್ನು ಪಡೆಯಲು ದೇವಸ್ಥಾನದಲ್ಲಿ ಶಾಂತ ಸ್ಥಳದಲ್ಲಿ ಕುಳಿತು ‘ಓಂ ನಮೋ ದಂಡಾಯ ಸ್ವಾಹಾ’ ಎಂಬ ಮಂತ್ರವನ್ನು ಜಪಿಸಿ. ಹೀಗೆ ಮಾಡಿದರೆ ಶಿವನ ಒಲುಮೆಯನ್ನು ಪಡೆಯಬಹುದು ಎಂಬುದು ನಂಬಿಕೆ.
ನೀವು ಪ್ರತಿ ಸೋಮವಾರ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಪರಮೇಶ್ವರ ನನ್ನು ಸ್ಮರಿಸಿ ಪೂಜಿಸಿದರೆ, ಶಿವ ಪಂಚಾಕ್ಷರಿ ಮಂತ್ರವಾದ ‘ಓಂ ನಮಃ: ಶಿವಾಯ’ ವನ್ನು 21, 51 ಅಥವಾ 108 ಬಾರಿ ಪಠಣ ಮಾಡಬೇಕು. ಇದರಿಂದ ಶಿವನು ನಿಮ್ಮ ಮೇಲೆ ಹೆಚ್ಚು ಸಂತೋಷಪಡುತ್ತಾನೆ ಇದಲ್ಲದೆ ಇಲ್ಲಿ ನಾವು ಗಮನಿಸಬೇಕಾದ ಪ್ರಮುಖವಾದ ವಿಚಾರವೆಂದರೆ, ನಾವು ಸೋಮವಾರ ಎನ್ನುವ ಪದವನ್ನು ಉಚ್ಚರಿಸಿದಾಗ ಅಲ್ಲಿ ನಮಗೆ ಓಂ ಎನ್ನುವ ಶಬ್ದ ಸ್ವಯಂ ಚಾರಿತವಾಗಿ ಸೃಷ್ಟಿಯಾಗುತ್ತದೆ. ಓಂ ಎನ್ನುವ ಶಬ್ಧ ಕೂಡ ಶಿವನಿಗೆ ಸಂಬಂಧಿಸಿದ ಶಬ್ದವಾಗಿದೆ. ಅಂದರೆ ಸೋಮವಾರ ಎನ್ನುವ ಹೆಸರಿನಲ್ಲಿ ಸಾಕ್ಷಾತ್ ಪರಶಿವನೇ ಅಡುಗೆ ಕುಳಿತಿದ್ದಾನೆ ಎಂಬುದು ನಂಬಿಕೆ.