CT ಯಲ್ಲಿ ಭಾರತ ವೀಕ್ ಆಯ್ತಾ – IND Vs PAK.. ಯಾರು ಸ್ಟ್ರಾಂಗ್?
ಭಾರತ ವರ್ಸಸ್ ಪಾಕಿಸ್ತಾನ ನಡುವೆ ಕ್ರಿಕೆಟ್ ಇದೆ ಅಂದ್ರೆ ಇಡೀ ಜಗತ್ತೇ ಕ್ಯೂರಿಯಸ್ ಆಗಿ ನೋಡುತ್ತೆ. ಬಾಲ್ ಟು ಬಾಲ್ ಮಿಸ್ ಮಾಡ್ದೇ ಟಿವಿ, ಮೊಬೈಲ್ ಮುಂದೆ ಕೂತಿರ್ತಾರೆ. ಬಟ್ 2012ರ ಬಳಿಕ ಉಭಯ ರಾಷ್ಟ್ರಗಳ ನಡುವೆ ಐಸಿಸಿ ಟೂರ್ನಿಯ ಮ್ಯಾಚ್ಗಳನ್ನ ಬಿಟ್ರೆ ದ್ವಿಪಕ್ಷೀಯ ಸರಣಿ ನಡೀತಿಲ್ಲ. ಇದೀಗ ಮುಂದಿನ ತಿಂಗಳು ಆರಂಭ ಆಗಲಿರೋ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗೋಕೆ ಎರಡೂ ತಂಡಗಳು ರೆಡಿಯಾಗಿವೆ. ಟಿ-20 ವಿಶ್ವಕಪ್ ಗೆದ್ದಿರೋ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ನಿರೀಕ್ಷೆಯಲ್ಲಿದ್ರೆ ಹಾಲಿ ಚಾಂಪಿಯಲ್ ಪಾಕಿಸ್ತಾನ ಕೂಡ ಮತ್ತೊಮ್ಮೆ ಟೈಟಲ್ ಗೆಲ್ಲೋ ಜೋಶ್ನಲ್ಲಿದೆ.
ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆಯಾದಾಗಿನಿಂದಲೇ ಉಭಯ ತಂಡಗಳ ನಡುವೆ ವಿವಾದ ಶುರುವಾಗಿತ್ತು. ಕೊನೆಗೆ ಹೈಬ್ರಿಡ್ ಮಾದರಿಯಲ್ಲೇ ಟೂರ್ನಿ ಆಯೋಜನೆ ಮಾಡಲಾಗಿದೆ. ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಆಡಲು ಪಾಕ್‌ಗೆ ಪ್ರವಾಸ ಬೆಳೆಸದೇ ಇರುವುದರಿಂದ, ಟೀಮ್ ಇಂಡಿಯಾ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ. ಹೀಗಾಗಿ ಈ ಬಾರಿಯ ಭಾರತ ವರ್ಸಸ್ ಪಾಕ್ ಪಂದ್ಯ ಮತ್ತಷ್ಟು ಬಿಸಿ ಹೆಚ್ಚಿಸಿದೆ. ಏಳು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಆಗುತ್ತಿರೋದು ಎಲ್ಲರ ಗಮನ ಸೆಳೆದಿದೆ. ಐಸಿಸಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪಾಕ್ ವಿರುದ್ಧ ಮೇಲುಗೈ ಸಾಧಿಸಿದ್ರೂ ಚಾಂಪಿಯನ್ಸ್ ಟ್ರೋಫಿ ಲೆಕ್ಕಾಚಾರದಲ್ಲಿ ಎದುರಾಳಿ ಪಾಕ್ ತಂಡದ ಕೈ ಮೇಲಾಗಿದೆ.
ಇದನ್ನೂ ಓದಿ : 790 ದಿನ.. ಶಮಿ ಈಸ್ ಬ್ಯಾಕ್ – ಭಾರತಕ್ಕೆ ಸ್ವಿಂಗ್ ಬೌಲಿಂಗ್ ಬ್ರಹ್ಮಾಸ್ತ್ರ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಈಗಾಗಲೇ 5 ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾದಾಟ ನಡೆಸಿವೆ. ಈ ವೇಳೆ ಭಾರತ ಎರಡು ಪಂದ್ಯಗಳನ್ನು ಗೆದ್ದಿದ್ರೆ ಪಾಕ್ ಮೂರು ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್‌ನಲ್ಲಿ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು 2017ರಲ್ಲಿ ಆಯೋಜಿಸಲಾಗಿತ್ತು. ಆಗ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಪಾಕಿಸ್ತಾನ ಜಯಭೇರಿ ಬಾರಿಸಿ ಟ್ರೋಫಿಗೆ ಮುತ್ತಿಟ್ಟಿತು. ಉಭಯ ದೇಶಗಳ ನಡುವಿನ ಚಾಂಪಿಯನ್ಸ್ ಟ್ರೋಫಿ ಮೊದಲ ಫೈಟ್ 2004ರಲ್ಲಿ ನಡೆದಿತ್ತು. ಈ ಪಂದ್ಯವನ್ನು ಪಾಕಿಸ್ತಾನ 3 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಆ ಬಳಿಕ 2009ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿತು. ಈ ವೇಳೆ ಸಹ ಪಾಕಿಸ್ತಾನವೇ ಟೀಮ್ ಇಂಡಿಯಾವನ್ನ ಸೋಲಿಸಿತ್ತು. ಪಾಕಿಸ್ತಾನ 54 ರನ್ಗಳಿಂದ ಜಯಬೇರಿ ಬಾರಿಸಿತ್ತು. ಇನ್ನು 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯ ವಹಿಸಿದ್ದವು. ಆಗ ಭಾರತ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಪಾಕ್ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಆಗ ನಡೆದ ಪಂದ್ಯಕ್ಕೆ ಮಳೆ ಕಾಟದಿಂದಾಗಿ ಓವರ್ ಗಳಿಗೆ ಕತ್ತರಿ ಬಿದ್ದಿತು. ಮೊದಲು ಬ್ಯಾಟ್ ಮಾಡಿದ ಪಾಕ್ 39.4 ಓವರ್‍ಗಳಲ್ಲಿ 165 ರನ್ ಸೇರಿಸಿತು. ಇನ್ನು ಡಕ್ವರ್ತ್ ಲೂಯಿಸ್ ನಿಯಮದಂತೆ ಭಾರತ ಎಂಟು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಅದೇ ವರ್ಷ ಇಂಗ್ಲೆಂಡ್ ತಂಡವನ್ನ ಮಣಿಸಿ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.
ಇನ್ನು 2017ರಲ್ಲಿ ನಡೆದ ಟೂರ್ನಿಯಲ್ಲಿ ಗ್ರೂಪ್ ಬಿಯಲ್ಲಿದ್ದ ಭಾರತ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನವನ್ನ ಎದುರಿಸಿತ್ತು. ಈ ವೇಳೆ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ರೆ ಸರ್ಫರಾಜ್ ಅಹ್ಮದ್ ಪಾಕ್ ಟೀಂ ಲೀಡ್ ಮಾಡ್ತಿದ್ರು. ಈ ಪಂದ್ಯವನ್ನ ಭಾರತ 124 ರನ್ಗಳಿಂದ ಗೆದ್ದು ಕೊಂಡಿತ್ತು. ಆದ್ರೆ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ಮುಗ್ಗರಿಸಿತ್ತು. 50 ಓವರ್‍ಗಳಲ್ಲಿ ಪಾಕಿಸ್ತಾ 4 ವಿಕೆಟ್ ನಷ್ಟಕ್ಕೆ 338 ರನ್ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ಗೆ ಬಂದ ಭಾರತ 30.3 ಓವರ್ಗಳಲ್ಲೇ 158 ರನ್ಗಳಿಗೆ ಆಲ್ಔಟ್ ಆಗಿತ್ತು. ಹೀಗಾಗಿ 180 ರನ್ಗಳಿಂದ ಸೋತ ಭಾರತ ಚಾಂಪಿಯನ್ಸ್ ಟ್ರೋಫಿಯನ್ನೂ ಕಳೆದುಕೊಂಡಿತ್ತು. 8 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಪಿ ಆಯೋಜನೆ ಆಗ್ತಿದ್ದು, ಪಾಕಿಸ್ತಾನ ಆತಿಥ್ಯ ವಹಿಸ್ತಾ ಇದೆ. 8 ರಾಷ್ಟ್ರಗಳ ಪೈಕಿ 6 ರಾಷ್ಟ್ರಗಳು ತಮ್ಮ ತಂಡಗಳನ್ನ ಘೋಷಣೆ ಮಾಡಿವೆ. ಆದ್ರೆ ಪಾಕಿಸ್ತಾನ ಮತ್ತು ಭಾರತ ಈವರೆಗೂ ಟೀಂ ಅನೌನ್ಸ್ ಮಾಡಿಲ್ಲ. ಫೆಬ್ರವರಿ 19ರಿಂದ ಟೂರ್ನಿ ಆರಂಭವಾಗಲಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವ ಫೆಬ್ರವರಿ 23ರಂದು ಫೈಟ್ ನಡೆಯಲಿದೆ. ಮೆಗಾ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಅದೇ ರೀತಿಯಲ್ಲಿ ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿವೆ.