ಚಾಂಪಿಯನ್ಸ್ ಟ್ರೋಫಿಗೂ ಕುಳ್ಳ ಕ್ಯಾಪ್ಟನ್ – ಬವುಮಾ ಬಂದ ಮೇಲೆ ಲಕ್ ಬದಲಾಯ್ತಾ?

ಚಾಂಪಿಯನ್ಸ್ ಟ್ರೋಫಿಗೂ ಕುಳ್ಳ ಕ್ಯಾಪ್ಟನ್ – ಬವುಮಾ ಬಂದ ಮೇಲೆ ಲಕ್ ಬದಲಾಯ್ತಾ?

ಸದ್ಯ ಕ್ರಿಕೆಟ್ ಲೋಕದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫುಲ್ ಟ್ರೆಂಡಿಂಗ್ ನಲ್ಲಿದೆ. ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ಟೀಂ ಅನೌನ್ಸ್ ಮಾಡಿವೆ. ಬಟ್ ಎಲ್ಲಾ ತಂಡಗಳಿಗಿಂತಲೂ ಸ್ಪೆಷಲ್ ಆಗಿ ಕಾಣ್ತಿರೋದು ದಕ್ಷಿಣಾ ಆಫ್ರಿಕಾ. ಕಳೆದ 2 ವರ್ಷಗಳಿಂದ ಟೆಸ್ಟ್ ತಂಡವನ್ನ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ ಟಿಕೆಟ್ ಕೊಡಿಸಿರುವ ಬವುಮಾ ಇದೀಗ ಚಾಂಪಿಯನ್ಸ್ ಟ್ರೋಫಿ ಮೇಲೂ ಕಣ್ಣಿಟ್ಟಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ದಕ್ಷಿಣ ಆಫ್ರಿಕಾ ಸೋಮವಾರ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡವನ್ನು ಟೆಂಬಾ ಬವುಮಾ ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ವೇಗಿಗಳಾದ ಆ್ಯನ್ರಿಚ್ ನೋಕಿಯಾ ಮತ್ತು ಲುಂಗಿ ಎನ್‌ಗಿಡಿ ಈ ಟೂರ್ನಿ ಮೂಲಕ ಮತ್ತೆ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ವಿಶೇಷ ಅಂದ್ರೆ 2023 ರ ODI ವಿಶ್ವಕಪ್‌ನಲ್ಲಿ ಆಡಿದ ತಂಡದ 10 ಸದಸ್ಯರನ್ನು ಈ ಪಂದ್ಯಾವಳಿಗೆ ಆಯ್ಕೆ ಮಾಡಲಾಗಿದೆ. ಹಾಗೇ ತಂಡದಲ್ಲಿ ಟೋನಿ ಡಿ ಜಾರ್ಜಿ, ರ್ಯಾನ್ ರಿಕಲ್ಟನ್, ಟ್ರಿಸ್ಟಾನ್ ಸ್ಟಬ್ಸ್ ಮತ್ತು ವಿಯಾನ್ ಮುಲ್ಡರ್ ಅವರಂತಹ ಹೊಸ ಆಟಗಾರರು ಐಸಿಸಿ ಟೂರ್ನಮೆಂಟ್ ಆಡಲು ರೆಡಿಯಾಗಿದ್ದಾರೆ. ಇವರಲ್ಲಿ ಮೂವರಿಗೆ ಇದು ಮೊದಲ 50 ಓವರ್‌ಗಳ ಐಸಿಸಿ ಟೂರ್ನಿಯಾಗಿದೆ.

ಇದನ್ನೂ ಓದಿ : ಮತ್ತೆ ಪಾಕಿಸ್ತಾನವಾಗುತ್ತಾ ಬಾಂಗ್ಲಾ ?ವೀಸಾ ರಿಲೀಫ್ ಹಿಂದಿದ್ಯಾ ನರಿ ಲೆಕ್ಕ?

8 ತಂಡಗಳ ಪೈಕಿ ನಾಲ್ಕು ನಾಲ್ಕು ತಂಡಗಳನ್ನ ವಿಂಗಡನೆ ಮಾಡಲಾಗಿದ್ದು ಎ ಮತ್ತು ಬಿ ಎಂದು ವಿಂಗಡನೆ ಮಾಡಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ‘ಬಿ’ ಗುಂಪಿನಲ್ಲಿದೆ. ಬಿ ಗುಂಪಿನಲ್ಲಿ ಬಲಿಷ್ಠ ತಂಡಗಳಾದ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೇರಿವೆ. ಫೆಬ್ರವರಿ 21 ರಂದು ದಕ್ಷಿಣ ಆಫ್ರಿಕಾ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಕರಾಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಹರಿಣಗಳ ತಂಡ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ನಂತರ ಫೆಬ್ರವರಿ 25 ರಂದು ರಾವಲ್ಪಿಂಡಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ನಂತರ ಮಾರ್ಚ್ 1 ರಂದು ಕರಾಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಮೊದ್ಲೆಲ್ಲ ದಕ್ಷಿಣ ಆಫ್ರಿಕಾ ಅಂದ್ರೆ ಹತ್ತರಲ್ಲಿ ಅದು ಒಂದು ಟೀಂ ಎನ್ನುವಂತಿತ್ತು. ಬಟ್ ಕಳೆದ ಮೂರು ವರ್ಷಗಳಿಂದ ಐಸಿಸಿ ಈವೆಂಟ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಸಫಾರಿ ತಂಡವು 2023 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ತಲುಪಿತ್ತು. ನಂತರ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರು ರನ್ನರ್ ಅಪ್ ಆಗಿತ್ತು. ಇದೀಗ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪ್ರವೇಶಿಸಿದೆ. ಈ ಮೂರು ಐಸಿಸಿ ಟೂರ್ನಿಗಳಲ್ಲಿ ತೋರಿದ ಪ್ರದರ್ಶನವನ್ನೇ ಚಾಂಪಿಯನ್ಸ್ ಟ್ರೋಫಿಯಲ್ಲೂ ಪುನರಾವರ್ತಿಸಲು ದಕ್ಷಿಣ ಆಫ್ರಿಕಾ ಎದುರು ನೋಡುತ್ತಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವಕಪ್ ಮರೀಚಿಕೆಯಾಗಿದ್ರೂ ಚಾಂಪಿಯನ್ಸ್ ಟ್ರೋಫಿ ಗೆದ್ದ ಅನುಭವ ಹೊಂದಿದೆ. 1998 ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿತ್ತು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಚೊಚ್ಚಲ ಚಾಂಪಿಯನ್ ಆಗಿತ್ತು.

ಟೆಸ್ಟ್ ಮ್ಯಾಚ್​ಗಳಲ್ಲಿ ಗ್ರೇಟ್ ಪರ್ಫಾಮೆನ್ಸ್ ನೀಡ್ತಿರೋ ಟೆಂಬಾ ಬವುಮಾ ಸಾರಥ್ಯದ ಸೌತ್ ಆಫ್ರಿಕಾ ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ದಕ್ಷಿಣ ಆಫ್ರಿಕಾ ಎಲ್ಲಾ ವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಈ ಸರಣಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಈ ಸರಣಿಯ ಮೊದಲ ಟೆಸ್ಟ್ ಪಂದ್ಯದ ನಂತರ, ದಕ್ಷಿಣ ಆಫ್ರಿಕಾ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಸದ್ಯ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ, WTC ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸೌತ್ ಆಫ್ರಿಕಾ ಇತ್ತೀಚಿನ ದಿನಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡ್ತಿರೋದ್ರ ಹಿಂದೆ 5 ಅಡಿ ಎತ್ತರದ ಕುಳ್ಳ ಕ್ಯಾಪ್ಟನ್ ಅಂತಾನೇ ಕರೆಸಿಕೊಳ್ಳೋ ಟೆಂಬಾ ಬವುಮಾ ಅವ್ರ ಪ್ರದರ್ಶನವೇ ಕಾರಣ. ನಾಯಕತ್ವದ ಜೊತೆಗೂ ಉತ್ತರ ಪ್ರದರ್ಶನ ನೀಡ್ತಿದ್ದಾರೆ. ಕಳೆದ ತಿಂಗಳಷ್ಟೇ 147 ವರ್ಷಗಳ ಕ್ರಿಕೆಟ್ ಟೆಸ್ಟ್​​​ ಇತಿಹಾಸದಲ್ಲಿ  ಹೊಸ ದಾಖಲೆ ಬರೆದ್ರು. 2 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕು ಇನಿಂಗ್ಸ್​ಗಳಲ್ಲಿ ಅರ್ಧಶತಕಕ್ಕಿಂತ ಹೆಚ್ಚಿನ ರನ್​ ಕಲೆಹಾಕಿದ ವಿಶ್ವದ ಮೊದಲ ನಾಯಕನೆಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ರು. ಟೆಸ್ಟ್ ಕ್ರಿಕೆಟ್​ನಲ್ಲಿ ಜಗತ್ತೇ ತಿರುಗಿ ನೋಡುವಂತೆ ಸೌತ್ ಆಫ್ರಿಕಾ ಪರ್ಫಾಮ್ ಮಾಡ್ತಿದೆ. ಹೀಗಾಗೇ ಐಸಿಸಿ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾ ಬಹಳ ದಿನಗಳ ನಂತರ ಎರಡನೇ ಸ್ಥಾನಕ್ಕೆ ತಲುಪಿದೆ. ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಇದೇ ಕಾರಣದಿಂದ ಕ್ರಿಕೆಟ್​ ಅಭಿಮಾನಿಗಳು ಬವುಮಾ ಅವರ ನಾಯಕತ್ವವನ್ನ ಕೊಂಡಾಡುತ್ತಿದ್ದಾರೆ. ಕುಳ್ಳ ಕ್ಯಾಪ್ಟನ್ ಗ್ರೇಟ್ ಕ್ಯಾಪ್ಟನ್ ಅಂತಿದ್ದಾರೆ. ಒಟ್ನಲ್ಲಿ ಟೆಂಬಾ ಬವುಮಾ ಸಾರಥ್ಯದಲ್ಲಿ ದಕ್ಷಿಣಾ ಆಫ್ರಿಕಾ ಅಬ್ಬರಿಸುತ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡೋ ನಿರೀಕ್ಷೆಯಲ್ಲಿದೆ.

Shantha Kumari

Leave a Reply

Your email address will not be published. Required fields are marked *