ಕಳಪೆಯಿಂದ ಗ್ರೇಟ್ ಕಮ್ ಬ್ಯಾಕ್ ಮಾಡ್ತಾರಾ ಕೊಹ್ಲಿ – ಪ್ರೇಮಾನಂದ ಗುರೂಜಿ ಅಭಯವೇನು?
ವಿರಾಟ್ ಕೊಹ್ಲಿ ಅಂದ್ರೆ ಮೈದಾದನಲ್ಲಿ ಸಿಕ್ಸ್, ಫೋರ್ ಬಾರಿಸುತ್ತಾ ಎದುರಾಳಿಗಳನ್ನ ಬೆಂಡೆತ್ತುತ್ತಾ ಕಿರಿಕ್ ಮಾಡಿದವ್ರಿಗೆ ಠಕ್ಕರ್ ಕೊಡ್ತಾ ಓಡಾಡ್ತಿದ್ರೇನೆ ಚೆಂದ. ಬಟ್ 2024ರಲ್ಲಿ ಕೊಹ್ಲಿ ಐಪಿಎಲ್ ಬಿಟ್ರೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಸದ್ದು ಮಾಡ್ಲೇ ಇಲ್ಲ. ಆಸಿಸ್ ಸರಣಿಯಲ್ಲೂ ಕಳಪೆ ಫಾರ್ಮ್ ಬೆನ್ನು ಬಿಡ್ಲಿಲ್ಲ. ಬಟ್ ಸೋಲಿನ ಪರಾಮರ್ಶೆಗೆ ಮುಂದಾಗಿರೋ ಕೊಹ್ಲಿ ಸೀದಾ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಗುರುಗಳ ಮೊರೆ ಹೋಗಿದ್ದಾರೆ.
ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಯಲ್ಲಿ ಬಹಿಷ್ಕಾರ – ಪಾಕ್ ಜೊತೆಗೆ ಯಾರೆಲ್ಲಾ ಟಾರ್ಗೆಟ್?
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮುಗಿಸಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಾಸ್ಸಾಗಿರುವ ವಿರಾಟ್ ಕೊಹ್ಲಿ, ನೇರವಾಗಿ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿದ್ದಾರೆ. ಶುಕ್ರವಾರ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಮಕ್ಕಳಾದ ವಮಿಕಾ ಮತ್ತು ಅಕಾಯ್ ಜೊತೆ ತೆರಳಿ ಪ್ರೇಮಾನಂದ ಗುರೂಜಿಗಳ ಆಶೀರ್ವಾದ ಪಡೆದಿದ್ದಾರೆ. ವಿರುಷ್ಕಾ ದಂಪತಿ ತಮ್ಮ ಮಕ್ಕಳೊಂದಿಗೆ ಆಶ್ರಮಕ್ಕೆ ಭೇಟಿ ನೀಡಿರುವ ವಿಡಿಯೋವನ್ನು ಪ್ರೇಮಾನಂದ ಸ್ವಾಮೀಜಿಯವರು ತಮ್ಮ ಯೂಟ್ಯೂಬ್ ಚಾನೆಲ್ ಭಜನ್ ಮಾರ್ಗದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಪ್ರೇಮಾನಂದ ಸ್ವಾಮಿಯವರ ಬಳಿ ಪ್ರಶ್ನೆಗಳನ್ನು ಕೇಳುವುದು ಕಂಡು ಬಂದಿದೆ. ಇದಕ್ಕೆ ಪ್ರೇಮಾನಂದ ಸ್ವಾಮೀಜಿಯವರು ಶಾಂತಚಿತ್ತದಿಂದ ಉತ್ತರ ನೀಡಿದ್ದಾರೆ.
ಪ್ರೇಮಾನಂದ ಸ್ವಾಮೀಜಿಯವರ ಬಳಿ ಅನುಷ್ಕಾ ಶರ್ಮಾ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ. ನಾವು ಕಳೆದ ಬಾರಿ ಇಲ್ಲಿಗೆ ಭೇಟಿ ನೀಡಿದಾಗ ನಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿದ್ದವು. ನಾನು ಆ ಪ್ರಶ್ನೆಗಳನ್ನು ಕೇಳಬೇಕು ಅಂದುಕೊಂಡಿದ್ದೆ. ಆದರೆ ನಮಗಿಂತ ಮುಂದಿದ್ದವರು ಆ ಪ್ರಶ್ನೆಗಳನ್ನು ನಿಮ್ಮ ಬಳಿ ಕೇಳಿದರು ಎಂದು ಹೇಳಿದ್ದಾರೆ. ಈ ವೇಳೆ ಪ್ರೇಮಾನಂದ ಸ್ವಾಮೀಜಿಯವರು, ಈಶ್ವರ ಒಂದಲ್ಲಾ ಒಂದು ವ್ಯವಸ್ಥೆ ಮಾಡುತ್ತಾರೆ ಎಂದು ಉತ್ತರ ನೀಡಿದ್ದಾರೆ. ಮತ್ತೆ ಮಾತು ಮುಂದುವರಿಸಿದ ಅನುಷ್ಕಾ, ತಾವು ನಿರಂತರವಾಗಿ ಪ್ರೇಮಾನಂದ ಸ್ವಾಮೀಜಿಯವರನ್ನು ಫಾಲೋ ಮಾಡುವುದಾಗಿಯೂ ಹೇಳಿದ್ದಾರೆ. ಪ್ರತಿನಿತ್ಯ ಸ್ವಾಮೀಜಿಯವರು ನಡೆಸಿಕೊಡುವ ಸತ್ಸಂಗ, ಪ್ರಶ್ನೋತ್ತರ ಕಾರ್ಯಕ್ರಮವನ್ನು ಕೇಳುವುದಾಗಿ ಹೇಳಿದ್ದಾರೆ.
ಇನ್ನು ಇದೇ ವೇಳೆ ವಿರಾಟ್ ಕೊಹ್ಲಿಯವ್ರ ಕಳಪೆ ಫಾರ್ಮ್ ಹಾಗೂ ಅದರಿಂದ ಹೊರಬರುವ ಬಗ್ಗೆ ಪ್ರೇಮಾನಂದ ಗುರೂಜಿ ಸಲಹೆಗಳನ್ನ ನೀಡಿದ್ದಾರೆ. ಕ್ರಿಕೆಟ್ ಆಟವಾದ್ರೂ ಕೂಡ ಅದೊಂದು ಆಧ್ಯಾತ್ಮಿಕ ಸಾಧನೆ. ಅಭ್ಯಾಸ ಮಾಡುವುದು ಒಳ್ಳೆಯದ್ದು, ಅಭ್ಯಾಸ ಮಾಡಿದ ಹೊರತಾಗಿಯೂ ಸೋಲು ಎದುರಾಗುತ್ತಿದೆ ಎಂದರೆ ನಮ್ಮ ಹಣೆಯಲ್ಲಿ ಏನು ಬರೆದಿದೆಯೋ ಅದನ್ನು ಅನುಭವಿಸಲೇಬೇಕಾಗುತ್ತದೆ ಎಂದು ಪ್ರೇಮಾನಂದ ಸ್ವಾಮೀಜಿಯವರು ಹಿತವಚನ ನೀಡಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ರೂ ಕೂಡ ಆಧ್ಯಾತ್ಮಿಕತೆಯನ್ನ ಹೆಚ್ಚು ನಂಬುತ್ತಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಕಳಪೆ ಫಾರ್ಮ್ನಿಂದ ಒದ್ದಾಡುವಾಗ ನೀಮ್ ಕರೋಲಿ ಬಾಬಾರನ್ನೂ ಭೇಟಿಯಾಗಿ ಸಲಹೆ ಪಡೆದಿದ್ದರು. ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ ಕೇವಲ 190 ರನ್ ಮಾತ್ರ ಕಲೆಹಾಕಿದ್ದರು. ಅದೂ ಕೂಡ ಒಂದು ಪಂದ್ಯದಲ್ಲಿ ಶತಕ ಬಾರಿಸಿ. ಈ ಕಳಪೆಯಾಟದ ಬೆನ್ನಲ್ಲೇ ಕಿಂಗ್ ಕೊಹ್ಲಿ ಆಧ್ಯಾತ್ಮಿಕ ಗುರೂಜಿಯನ್ನು ಭೇಟಿಯಾಗಿದ್ದಾರೆ. 2023 ರಲ್ಲಿ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿಯಾದ ಬಳಿಕ ಕೊಹ್ಲಿ ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ್ದರು. ಹೀಗಾಗಿ 2025 ರಲ್ಲಿ ಕೊಹ್ಲಿ ಮತ್ತೆ ಫಾರ್ಮ್ ಕಂಡುಕೊಳ್ಳುವ ನಿರೀಕ್ಷೆಯಿದೆ.