ಚಾಂಪಿಯನ್ಸ್ ಟ್ರೋಫಿಯಲ್ಲಿ ಬಹಿಷ್ಕಾರ – ಪಾಕ್ ಜೊತೆಗೆ ಯಾರೆಲ್ಲಾ ಟಾರ್ಗೆಟ್?
ಅಫ್ಘಾನಿಸ್ತಾನ ವರ್ಷದಿಂದ ವರ್ಷಕ್ಕೆ ಕ್ರಿಕೆಟ್‌ನಲ್ಲಿ ಹೆಮ್ಮರವಾಗಿ ಬೆಳೆಯುತ್ತಲೇ ಇದೆ. ಅದ್ರಲ್ಲೂ ಕಳೆದ ಎರಡು ವರ್ಷಗಳಿಂದ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿದೆ. ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್ನಲ್ಲೂ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ತಂಡಗಳನ್ನ ಬಗ್ಗುಬಡಿದು ಸೆಮಿಫೈನಲ್ಗೆ ಲಗ್ಗೆ ಇಟ್ಟಿತ್ತು. ಆದ್ರೆ ಅಫ್ಘಾನಿಸ್ತಾನ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 2 ದಶಕಗಳಾಗುತ್ತಿದ್ದರೂ ಭಾರತದ ವಿರುದ್ಧ ಮಾತ್ರ ಈವರೆಗೂ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದಿಲ್ಲ. ಆದರೆ ಏಷ್ಯಾಕಪ್ನಲ್ಲಿ ಭಾರತದ ವಿರುದ್ಧ ಟೈ ಸಾಧಿಸಿರುವುದೇ ಅತ್ಯುತ್ತಮ ಸಾಧನೆ. ಇದೀಗ ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆಗಿದೆ. ವಿಷ್ಯ ಏನಪ್ಪ ಅಂದ್ರೆ ಟೂರ್ನಿ ಆರಂಭಕ್ಕೂ ಮುನ್ನವೇ ಅಫ್ಘನ್ ತಂಡದ ವಿರುದ್ಧ ಆಡದಂತೆ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಅಲ್ಲಿನ ರಾಜಕೀಯ ನಾಯಕರು ಡಿಮ್ಯಾಂಡ್ ಮಾಡ್ತಿದ್ದಾರೆ.
ಇದನ್ನೂ ಓದಿ : ಸ್ಟಾರ್ ಡಂ ಬಿಟ್ಟು ಆಡುವ ಆಟಗಾರರಿಗೆ ಅವಕಾಶ ಕೊಡ್ತಾರಾ? -36 ಆಟಗಾರರ ಶಾರ್ಟ್ ಲಿಸ್ಟ್ ರೆಡಿ ಮಾಡಿದ ಬಿಸಿಸಿಐ!
ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಆಡಲು ಸಜ್ಜಾಗುತ್ತಿದೆ. ಆದ್ರೆ ಅಫ್ಘಾನಿಸ್ತಾನ ತಂಡದ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವಂತೆ ಇತರೆ ರಾಷ್ಟ್ರಗಳಲ್ಲಿ ಕೂಗು ಜೋರಾಗ್ತಿದೆ. ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಬಹಿಷ್ಕರಿಸುವಂತೆ ದಕ್ಷಿಣ ಆಫ್ರಿಕಾದ ಕ್ರೀಡಾ ಸಚಿವ ಗೇಟನ್ ಮೆಕೆಂಜಿ ತಮ್ಮ ತಂಡವನ್ನು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧ ಆಡದಂತೆ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೂ ಅಲ್ಲಿನ ರಾಜಕೀಯ ನಾಯಕರು ಸೂಚಿಸಿದ್ದಾರೆ. ಇದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಮುಖಭಂಗ ಎದುರಾಗ್ತಿದೆ. ಅಷ್ಟಕ್ಕೂ ಆಫ್ಘನ್ ವಿರುದ್ಧ ಇಂಥಾದ್ದೊಂದು ಟ್ರೆಂಡ್ ಶುರುವಾಗೋಕೆ ಕಾರಣ ಅಲ್ಲಿನ ಸರ್ಕಾರದ ನಿರ್ಧಾರಗಳು. ಇತ್ತೀಚೆಗಷ್ಟೇ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಮಹಿಳಾ ಕ್ರೀಡೆಗಳನ್ನು ನಿಷೇಧಿಸಿದೆ. ಇದು ಕ್ರೀಡೆಯಲ್ಲಿ ಸಮಾನತೆಯ ಐಸಿಸಿ ತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಗೇಟನ್ ಮೆಕೆಂಜಿ ತಮ್ಮ ತಂಡಕ್ಕೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕ್ರೀಡೆಯಲ್ಲಿ ಸಮಾನತೆಯ ತತ್ವವನ್ನು ಒಪ್ಪಿಕೊಂಡಿದೆ. ಐಸಿಸಿಯ ಸದಸ್ಯ ರಾಷ್ಟ್ರಗಳು ಪುರುಷ ಮತ್ತು ಮಹಿಳಾ ಆಟಗಾರರನ್ನು ಎನ್ಕರೇಜ್ ಮಾಡ್ಬೇಕು. ಆದ್ರೆ ಅಫ್ಘಾನಿಸ್ತಾನದ ವಿಷಯದಲ್ಲಿ ಇದು ಸಾಧ್ಯವಾಗ್ತಿಲ್ಲ. ಇದು ಕ್ರೀಡೆಯ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೌರವಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕ್ರೀಡಾ ಸಚಿವನಾಗಿ ನಾನು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಗೇಟನ್ ಮೆಕೆಂಜಿ ಹೇಳಿದ್ದಾರೆ. ಫೆಬ್ರವರಿ 21 ರಂದು ಪಾಕಿಸ್ತಾನದ ಕರಾಚಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗ್ರೂಪ್ ಬಿ ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾ ತನ್ನ ಚಾಂಪಿಯನ್ಸ್ ಟ್ರೋಫಿ 2025ರ ಅಭಿಯಾನವನ್ನು ಪ್ರಾರಂಭಿಸಲಿದೆ. ಉಭಯ ತಂಡಗಳು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದೊಂದಿಗೆ ಬಿ ಗುಂಪಿನಲ್ಲಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳಿವೆ.
ಇನ್ನು ಇಂಗ್ಲೆಂಡ್ ಕೂಡ ತಾಲಿಬಾನ್ ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳ ಮೇಲಿನ ತಾಲಿಬಾನ್ ಆಡಳಿತ ದೌರ್ಜನ್ಯವೆಸಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ 160ಕ್ಕೂ ಹೆಚ್ಚು ಬ್ರಿಟಿಷ್ ರಾಜಕೀಯ ನಾಯಕರು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಪತ್ರ ಬರೆಯುವ ಮೂಲಕ ಅಫ್ಘಾನಿಸ್ತಾನ ವಿರುದ್ಧ ಆಡದಂತೆ ಮನವಿ ಮಾಡಿದ್ದಾರೆ. ಆದರೆ, ಇಸಿಬಿ ಅಧ್ಯಕ್ಷರು ಈ ಮನವಿಯನ್ನು ತಿರಸ್ಕರಿಸಿದ್ದಾರೆ. ಇನ್ನು ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ಪಾಕಿಸ್ತಾನದಲ್ಲಿ ಪಂದ್ಯಗಳನ್ನ ಆಡೋದನ್ನ ಬಹಿಷ್ಕರಿಸಿತ್ತು. ಭದ್ರತೆಯ ಕಾರಣ ನೀಡಿ ಪಾಕಿಸ್ತಾನಕ್ಕೆ ತೆರಳಿ ಪಂದ್ಯಗಳನ್ನ ಆಡೋದಿಲ್ಲ ಎಂದು ಐಸಿಸಿ ಮುಂದೆ ತನ್ನ ನಿರ್ಧಾರ ತಿಳಿದಿತ್ತು. ಪಾಕಿಸ್ತಾನದೊಂದಿಗಿನ ವೈಮನಸ್ಸೇ ಇದಕ್ಕೆ ಕಾರಣ. ಅದಾದ ಬಳಿಕ ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಸೋಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ನೀಡಿತ್ತು. ಅದ್ರಂತೆ ಭಾರತದ ಪಂದ್ಯಗಳೆಲ್ಲಾ ಈಗ ದುಬೈನಲ್ಲಿ ನಡೆಯಲಿವೆ. ಅಲ್ದೇ ಭಾರತ ಫೈನಲ್ಗೆ ಲಗ್ಗೆ ಇಟ್ರೆ ಆ ಪಂದ್ಯವೂ ದುಬೈನಲ್ಲೇ ನಡೆಯಲಿದೆ. ಇಷ್ಟು ದಿನ ಭಾರತದ ಬಾಯ್ಕಾಟ್ ಬಿಸಿಯಿಂದ ತತ್ತರಿಸಿದ್ದ ಪಾಕಿಸ್ತಾನಕ್ಕೆ ಈಗ ಆಫ್ಘನ್ ವಿರುದ್ಧ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ನಿಂದ ಬಹಿಷ್ಕಾರ ಕೂಗು ಕೇಳಿ ಬರ್ತಿರೋದು ತಲೆಬಿಸಿ ತಂದಿಟ್ಟಿದೆ.
ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನವು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಂಟು ತಂಡಗಳ ಪಂದ್ಯಾವಳಿಯಲ್ಲಿ ಆಡಲಿದೆ. 8 ತಂಡಗಳ ಈ ಟೂರ್ನಿಯಲ್ಲಿ 15 ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನ ಮತ್ತು ದುಬೈನಲ್ಲಿ ಈ ಟೂರ್ನಿ ನಡೆಯಲಿದೆ. ಪಾಕಿಸ್ತಾನದ ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಮೂರು ಸ್ಥಳಗಳಲ್ಲಿ ಪಂದ್ಯಾವಳಿಯ ಪಂದ್ಯಗಳು ನಡೆಯಲಿವೆ. ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.